Vijayapura DDPI: ಕುರ್ಚಿ ಕಿತ್ತಾಟದಲ್ಲಿ ನಿರತರಾದ ಹಿರಿಯ ಅಧಿಕಾರಿಗಳು, ನಿಂತ ನೀರಾದ ಶಿಕ್ಷಣ ಇಲಾಖೆ ಕೆಲಸಕಾರ್ಯಗಳು!
ವಿಜಯಪುರ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಹುದ್ದೆಗೆ ಇಬ್ಬರು ಆಧಿಕಾರಿಗಳ ನಡುವೆ ಹಗ್ಗಜಗ್ಗಾಟ ನಡೆದಿದೆ. ಇಲಾಖೆಯ ಆಧಿಕಾರಿಗಳು ಸಿಬ್ಬಂದಿ ಕುರ್ಚಿ ಕಿತ್ತಾಟದಲ್ಲಿ ನಿರತರಾಗಿದ್ದಾರೆ. ಇಲಾಖೆಯ ಕೆಲಸ ಕಾರ್ಯಗಳು ನಿಂತನೀರಾಗಿದೆ.
ವಿಜಯಪುರ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ( education department) ಉಪ ನಿರ್ದೇಶಕರ ಹುದ್ದೆಗೆ (Vijayapura DDPI ) ಇಬ್ಬರು ಆಧಿಕಾರಿಗಳ ನಡುವೆ ಹಗ್ಗಜಗ್ಗಾಟ (fight) ನಡೆದಿದೆ. ಎನ್ ಎಚ್ ನಾಗೂರು ಹಾಗೂ ಉಮಾದೇವಿ ಸೊನ್ನವರ ಮಧ್ಯೆ ಡಿಡಿಪಿಐ ಕುರ್ಚಿಗಾಗಿ ಈ ಜಗ್ಗಾಟ ನಡೆದಿದೆ. 2009-10, 2011-12ನೇ ಸಾಲಿನಲ್ಲಿ ಸರ್ಕಾರದ ಐಇಡಿಎಸ್ಎಸ್ ಯೋಜನೆ ಅನುಷ್ಠಾನದ ಸಂದರ್ಭದಲ್ಲಿ ಈ ಅಧಿಕಾರಿಗಳು ಅಸ್ತಿತ್ವದಲ್ಲೇ ಇಲ್ಲದ 18 ಸರ್ಕಾರೇತರ ಸಂಸ್ಥೆಗಳಿಗೆ ಶಿಫಾರಸು ಮಾಡಿರುವ ಹಾಗೂ ಅನುದಾನ ಬಿಡುಗಡೆ ಮಾಡಿ, ಸರ್ಕಾರದ ಅನುದಾನ ದುರ್ಬಳಕೆ ಮಾಡಿಕೊಂಡ ಆರೋಪವಿದೆ.
ಅದರಂತೆ, ವಿಜಯಪುರ ಜಿಲ್ಲೆಯ ಉಪ ನಿರ್ದೇಶಕರಾಗಿದ್ದ ಬಸವನಬಾಗೇವಾಡಿ ಹಿಂದಿನ ಬಿಇಒ ಆಗಿದ್ದ ಎನ್ ಎಚ್ ನಾಗೂರ, ಇಂಡಿ ಬಿಇಒ ಆಗಿದ್ದ ಹಾಲಿ ವಿಜಯಪುರ ಡೈಟ್ ಹಿರಿಯ ಉಪನ್ಯಾಸಕ ಎ ಎಚ್ ಹತ್ತಳ್ಳಿ, ಸಿಂದಗಿ ಬಿಇಒ ಆಗಿದ್ದ ವಿಜಯಪುರ ಡೈಟ್ ಹಾಲಿ ಉಪನ್ಯಾಸಕ ಎಸ್ ಎ ಮುಜಾವರ ಎಂಬ ಮೂವರು ಆಧಿಕಾರಿಗಳನ್ನು ಕಳೆದ ಜನವರಿ 30 ರಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪ ಇಲಾಖೆ ಹಿರಿಯ ಅಧಿಕಾರಿಗಳ ಶಿಫಾರಸು ಆಧರಿಸಿ ಅಮಾನತ್ತು ಮಾಡಿ ಆದೇಶ ಜಾರಿ ಮಾಡಿದ್ದರು.
ಬಳಿಕ ಫೆಬ್ರವರಿ 2 ರಂದು ವಿಜಯಪುರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೈಟ್ ಪ್ರಾಚಾರ್ಯೆ ಉಮಾದೇವಿ ಸೊನ್ನವರ ಅವರನ್ನು ಪ್ರಭಾರಿ ಉಪ ನಿರ್ದೇಶಕರಾಗಿ ನಿಯೋಜಿಸಿ ಆದೇಶ ಮಾಡಿದ್ದರು. ಇಷ್ಟರ ಮದ್ಯೆ ತಮ್ಮ ಅಮಾನತ್ತು ಆದೇಶ ಪ್ರಶ್ನೆ ಮಾಡಿ ಎನ್ ಎಚ್ ನಾಗೂರು ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ ಕಲಬುರಗಿ ಪೀಠದ ಮೋರೆ ಹೋಗಿದ್ದರು. ಕೆಎಟಿ ಕಲಬುರಗಿ ಪೀಠ ಎನ್ ಎಚ್ ನಾಗೂರು ಅಮಾನತ್ತು ಆದೇಶಕ್ಕೆ ಕಳೆದ ಫೆಬ್ರವರಿ 7 ರಂದು ತಡೆಯಾಜ್ಞೆ ನೀಡಿದೆ. ಅಮಾನತ್ತಿಗೆ ತಡೆಯಾಜ್ಞೆ ಕೆಎಟಿಯಿಂದ ಸಿಕ್ಕ ಕಾರಣ ಇಂದು ಎನ್ ಎಚ್ ನಾಗೂರು ನಾನೇ ಆಧಿಕೃತ ಡಿಡಿಪಿಐ ಎಂದು ಕಚೇರಿಗೆ ಆಗಮಿಸಿ ಡಿಡಿಪಿಐ ಕುರ್ಚಿಯಲ್ಲಿ ಅಸೀನರಾಗಿದ್ದಾರೆ.
Also Read: ಮೈಸೂರು ನಗರಸಭೆ ಕಮಿಷನರ್ ಖುರ್ಚಿಗೆ ಇಬ್ಬರು ಅಧಿಕಾರಿಗಳ ಜಟಾಪಟಿ; ಠಾಣೆ ಮೆಟ್ಟಿಲೇರಿದ ಗಲಾಟೆ
ಇತ್ತ ಉಮಾದೇವಿ ಅವರೂ ಕಚೇರಿಗೆ ಆಗಮಿಸಿ ಕುಳಿತಿದ್ದಾರೆ. ಇಲಾಖೆಯ ಆಧಿಕಾರಿಗಳು ನನ್ನ ಬಳಿಯೇ ಕಡತಗಳಿಗೆ ಸಹಿ ಹಾಕಿಸಿಕೊಳ್ಳಬೇಕೆಂದು ಉಭಯ ಆಧಿಕಾರಿಗಳು ಸೂಚನೆ ನೀಡಿದ್ದಾರೆ. ಇದರಿಂದ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಗೊಂದಲಕ್ಕೆ ಈಡಾಗಿದ್ದಾರೆ. ನಾವು ಯಾರ ಬಳಿ ಕಡತಗಳಿಗೆ ಸಹಿ ಹಾಕಿಸಿಕೊಳ್ಳಬೇಕೆಂದು ಗೊಂದಲಕ್ಕೆ ಬಿದ್ದಿದ್ದಾರೆ. ಈ ಕುರಿತು ಎನ್ ಎಚ್ ನಾಗೂರು ನಾನೇ ಅಧಿಕೃತ ಡಿಡಿಪಿಐ ಎಂದಿದ್ದಾರೆ. ನಾನು ಅಮಾನತ್ತು ಅದೇಶಕ್ಕೆ ತಡೆ ತಂದಿದ್ದೇನೆ. ನಾನು ಮೊದಲಿದ್ದ ಜಾಗದಲ್ಲೇ ಮುಂದುವರೆಯುತ್ತೇನೆ. ಸರ್ಕಾರ ನನಗೆ ಬದಲಿ ಸ್ಥಾನ ಬದಲಿ ಸ್ಥಳ ನಿಯೋಜನೆ ಮಾಡಿದರೆ ನಾನು ಹೋಗುತ್ತೇನೆ. ಈಗಾ ನಾನು ನನ್ನ ಅಮಾನತ್ತು ಆದೇಶಕ್ಕೆ ಕೆಎಟಿ ಕಲಬುರಗಿ ಪೀಠದಿಂದ ತಡೆ ತಂದಿದ್ದೇನೆ, ನಾನೇ ಆಧಿಕೃತ ಡಿಡಿಪಿಐ ಎಂದಿದ್ಧಾರೆ.
ಇತ್ತ ಪ್ರಭಾರಿ ಡಿಡಿಪಿಐ ಉಮಾದೇವಿ ಅವರು ಜಿಪಂ ಸಿಇಓ ಅವರ ಆದೇಶದಂತೆ ನಾನು ಡಿಡಿಪಿಐ ಆಗಿ ಸೇವೆ ಹಾಜರಾಗಿದ್ದೇನೆ. ಇಲ್ಲಿಂದ ಜಿಪಂ ಸಿಇಓ ಅವರು ಬಿಡುಗಡೆ ಮಾಡಿದರೆ ನಾನೂ ಹೋಗುತ್ತೇನೆ. ಅಲ್ಲಿಯವರೆಗೆ ನಾನೇ ಡಿಡಿಪಿಐ ಎಂದಿದ್ದಾರೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಆಧಿಕಾರಿಗಳು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೋ ಕಾಯ್ದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ