ವಿಜಯಪುರ: ನಡೆದಾಡುವ ದೇವರು ಎಂದು ಕರೆಯಲ್ಪಡುವ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ (Siddheshwar Swamiji) ಅನಾರೋಗ್ಯ ವಿಚಾರವಾಗಿ ಕೆಲ ದಿನಗಳ ಹಿಂದೆ ವದಂತಿಗಳು ಕೇಳಿಬಂದಿದ್ದವು. ಬಳಿಕ ಅವರು ಆರೋಗ್ಯವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಸಿದ್ದೇಶ್ವರ ಸ್ವಾಮೀಜಿ ಅವರಿಗೆ ಅನಾರೋಗ್ಯ ಎಂಬ ಮಾತು ಕೇಳಿಬರುತ್ತಿದ್ದಂತೆ ಸಾವಿರಾರು ಭಕ್ತರಲ್ಲಿ ಆತಂಕ ಉಂಟಾಗಿತ್ತು. ಹೀಗಾಗಿ ಸ್ವಾಮೀಜಿಯವರನ್ನು ನೋಡಲು ಬೇರೆ ಬೇರೆ ರಾಜ್ಯಗಳಿಂದ, ಜಿಲ್ಲೆಗಳಿಂದ ಶ್ರೀಗಳ ದರ್ಶನಕ್ಕೆ ಅಪಾರ ಪ್ರಮಾಣದ ಜನರು ಹರಿದು ಬರುತ್ತಿದ್ದಾರೆ. ಜೊತೆಗೆ ಹಾಲಿ, ಮಾಜಿ ಶಾಸಕರು ಹಾಗೂ ಸಚಿವರುಗಳು ಸಹ ಶ್ರೀಗಳನ್ನು ಭೇಟಿ ಮಾಡಿ ಅವರ ಆರೋಗ್ಯ ಕುಶಲೋಪಾರಿ ವಿಚಾರಿಸಿದ್ದಾರೆ.
ಅನಾರೋಗ್ಯ ಹಿನ್ನೆಲೆ ಜಿಲ್ಲೆಯ ಜ್ಞಾನ ಯೋಗಾಶ್ರಮದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿ ಸಾರ್ಮಜನಿಕವಾಗಿ ಅವರು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಮತ್ತು ಪ್ರಚನವನ್ನು ಸಹ ನೀಡಿರಲಿಲ್ಲ. ಆದರೆ ಇಂದು(ಡಿ. 30) ಮೊದಲ ಮಹಡಿಯಿಂದಲೇ ಸಾವಿರಾರು ಭಕ್ತರಿಗೆ ದರ್ಶನ ನೀಡಿದ್ದಾರೆ. ಮೊದಲ ಮಹಡಿಯ ಗೋಡೆ ತೆರವು ಮಾಡಿ ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೊದಲ ಮಹಡಿಯಲ್ಲಿ ವೀಲ್ ಚೇರ್ನಲ್ಲಿ ಕುಳಿತು ಭಕ್ತರಿಗೆ ದರ್ಶನ ನೀಡಿದರು.
ಇದನ್ನೂ ಓದಿ: Siddheshwar Swamiji: ನಾನು ಆರೋಗ್ಯವಾಗಿದ್ದೇನೆ; ವದಂತಿಗಳಿಗೆ ತೆರೆ ಎಳೆದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ
ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ದರ್ಶನ ಪಡೆದ ಸಾವಿರಾರು ಭಕ್ತರು ಸಂತಸಗೊಂಡರು. ಬಿಸಿಲು ಇರುವ ಕಾರಣ ಭಕ್ತರ ಅನುಕೂಲಕ್ಕಾಗಿ ಟೆಂಟ್ ನಿರ್ಮಿಸಲಾಗಿದೆ. ಸುಮಾರು 20ನಿಮಿಷಕ್ಕೂ ಹೆಚ್ಚು ಕಾಲ ಶ್ರೀಗಳು ಭಕ್ತರೊಂದಿಗಿದ್ದು, ಬಳಿಕ ಮತ್ತೆ ವಿಶ್ರಾಂತಿ ಕೋಣೆಗೆ ತೆರಳಿದರು. ಇನ್ನು ವೈದ್ಯರ ಸೂಚನೆ ಮೇರೆಗೆ ದರ್ಶನ ನಿಲ್ಲಿಸಲಾಗುತ್ತಿದ್ದು, ನಾಳೆಯಿಂದ ಸ್ವಾಮೀಜಿಗಳ ದರ್ಶನಕ್ಕೆ ಭಕ್ತರು ಆಗಮಿಸಬಾರದು ಎಂದು ಕಿರಿಯ ಸ್ವಾಮೀಜಿಗಳು ಮೈಕ್ನಲ್ಲಿ ಅನೌನ್ಸ್ ಮಾಡಿದ್ದಾರೆ. ಆದರೆ ಶ್ರೀಗಳನ್ನು ಫೇಸ್ ಬುಕ್ ಲೈವ್ ಮಾಡಬೇಕೆಂದು ಸಾವಿರಾರು ಭಕ್ತರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಭಾವಿಪತಿಯ ಎದುರೇ ಗೋಲಗುಮ್ಮಟದಿಂದ ಹಾರಿ ಯುವತಿ ಸಾವಿಗೆ ಶರಣು: ಮಾರ್ದನಿಸುತ್ತಿದೆ ‘ಬಲವಂತ ಮಾಡಬೇಡಿ’ ಎಂಬ ಆರ್ತನಾದ
ಇನ್ನು ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಆಶ್ರಮಕ್ಕೆ ಸಚಿವ ಮುರುಗೇಶ್ ನಿರಾಣಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಬಳಿಕ ಮಾತನಾಡಿ, ಸಿದ್ದೇಶ್ವರ ಸ್ವಾಮೀಜಿ ಕೇವಲ ವಿಜಯಪುರಕ್ಕೆ ಸೀಮಿತವಾಗಿಲ್ಲ. ಮುಂದಿನ ಭವಿಷ್ಯ ಬದಲಾವಣೆ ಮಾಡುವ ಶಕ್ತಿ ಹೊಂದಿದ್ದವರು. ಅನಾರೋಗ್ಯದಿಂದ ಬಹಳಷ್ಟು ಕಷ್ಟಕಾಲದಲ್ಲಿ ಇದ್ದಾರೆ. ನಾನು ಭೇಟಿ ನೀಡಿದಾಗ ನಿರಾಣಿ ಬಂದಿದ್ದಾರೆ ಅಂದ ಕೂಡಲೇ ಕಣ್ಣು ತೆರೆದು, ಕೈ ಮಾಡಿ ಊಟ ಮಾಡಿ ಅಂದ್ರೂ. ಆ ರೀತಿ ಹೇಳುವಾಗ ಕರುಳು ಕಿತ್ತು ಬಂದಂತಾಯಿತು. ವೈಭವೋಪೇತ ಜೀವನ ಬೇಕು ಅಂತಾ ಕೇಳಿದವರು ಅಲ್ಲಾ. ಬೇಗನೇ ಗುಣಮುಖರಾಗಿ ಈ ನಾಡಿನ ಜನರಿಗೆ ಆಶೀರ್ವಾದ ಕೊಡಲು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು.
ಅವರಿಗೆ ಹೋಲಿಕೆ ಮಾಡಿ ಮತ್ತೊಬ್ಬ ವ್ಯಕ್ತಿ ಯಾರು ಇಲ್ಲಾ. ತಮಗೆ ಆದಂತ ಮಾರ್ಗದರ್ಶನವನ್ನ ನಮಗೆ ಮಾಡುತ್ತಿದ್ದರು. ನಮ್ಮ ಕುಟುಂಬಕ್ಕೂ ಬಹಳಷ್ಟು ಹತ್ತಿರವಾಗಿದ್ದರು. ಅವರು ಒಂದು ಕಷ್ಟದಲ್ಲಿದ್ದಾರೆ ಆದರೆ ಗುರುತು ಹಿಡಿಯುತ್ತಿದ್ದಾರೆ. ಅವರ ಭಕ್ತರು, ಅಭಿಮಾನಿಗಳು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.