
ವಿಜಯಪುರ, ಸೆ.1: ಮಹಾಭಾರತದ ಗಾಂಧಾರಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಜೀವನ ನಡೆಸಿದ್ದು ಇತಿಹಾಸ. ಆದರೆ ಇಂದಿನ ಆಧುನಿಕ ಯುಗದಲ್ಲೂ ಅದೇ ಕಲ್ಪನೆಯ ‘ಗಾಂಧಾರಿ ವಿದ್ಯೆ’ ಕಲಿತ ಪುಟ್ಟ ಮಕ್ಕಳು, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಗರದಲ್ಲಿ ಬರೋಬ್ಬರಿ 5.2 ಕಿಲೋಮೀಟರ್ ಸೈಕಲ್ ಸವಾರಿ ಮಾಡುವ ಮೂಲಕ ವಿಶ್ವದಾಖಲೆ ಬರೆಯುವ ಸಾಹಸಕ್ಕೆ ಮುಂದಾಗಿದ್ದಾರೆ. ವಿಜಯಪುರ ನಗರದ ‘ಲರ್ನರ್ಸ್ ಝೋನ್’ ಸಂಸ್ಥೆಯಲ್ಲಿ ಗಾಂಧಾರಿ ವಿದ್ಯೆ ಕಲಿಯುತ್ತಿರುವ 6 ರಿಂದ 14 ವರ್ಷದೊಳಗಿನ 17 ಬಾಲಕ-ಬಾಲಕಿಯರು ಈ ಅಭೂತಪೂರ್ವ ಸಾಧನೆ ಮಾಡಿದ್ದಾರೆ.
ಬೆಳ್ಳಂಬೆಳಿಗ್ಗೆ ನಗರದ ಸೈನಿಕ್ ಶಾಲೆಯ ಮುಖ್ಯದ್ವಾರದಿಂದ ಆರಂಭವಾದ ಈ ವಿಶೇಷ ಸೈಕಲ್ ಸವಾರಿಗೆ ಲೋಕಾಯುಕ್ತ ಡಿವೈಎಸ್‌ಪಿ ಬಸವರಾಜ ಯಲಿಗಾರ, ವಿಜಯಪುರ ಸೈಕ್ಲಿಂಗ್ ಗ್ರೂಪ್ ಸದಸ್ಯರು ಹಾಗೂ ರಾಜ್ಯ ಅಮೇಚೂರ್ ಸೈಕ್ಲಿಂಗ್ ಸಂಸ್ಥೆಯ ರಾಜು ಬಿರಾದಾರ ಚಾಲನೆ ನೀಡಿದರು. ಸೈನಿಕ್ ಸ್ಕೂಲ್‌ನಿಂದ ಹೊರಟ ೧೭ ವಿದ್ಯಾರ್ಥಿಗಳ ತಂಡವು ಗೋದಾವರಿ ಸರ್ಕಲ್, ಶಿವಾಜಿ ಸರ್ಕಲ್, ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್ ಸರ್ಕಲ್ ಹಾಗೂ ಸ್ಟೇಡಿಯಂ ಮಾರ್ಗವಾಗಿ ವಿಶ್ವಪ್ರಸಿದ್ಧ ಗೋಲಗುಂಬಜ್ ವರೆಗೆ ಸಾಗಿತು.
ವಾಹನಗಳ ಸಾಲು ಸಾಲು ಸಂಚಾರವಿರುವ ರಸ್ತೆಯಲ್ಲೇ ಮಕ್ಕಳು ಯಾವುದೇ ಆತಂಕವಿಲ್ಲದೆ, ಕಣ್ಣಿಗೆ ಸಂಪೂರ್ಣವಾಗಿ ಬಟ್ಟೆ ಕಟ್ಟಿಕೊಂಡು ಅತ್ಯಂತ ಸುರಕ್ಷಿತವಾಗಿ 5.2 ಕಿ.ಮೀ ಸೈಕಲ್ ಚಲಾಯಿಸಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ಭಾರತೀಯ ಪುರಾತನ 64 ಕಲೆಗಳ ತತ್ವವನ್ನಾಧರಿಸಿದ ಈ ‘ಗಾಂಧಾರಿ ವಿದ್ಯೆ’ಯನ್ನು ಸಾಮಾನ್ಯವಾಗಿ 5 ರಿಂದ 15 ವರ್ಷದ ಮಕ್ಕಳಿಗೆ ಕಲಿಸಲಾಗುತ್ತದೆ. ಕಣ್ಣುಗಳನ್ನು ಮುಚ್ಚಿ ಏಕಾಗ್ರತೆ, ಧ್ಯಾನ, ಸ್ಪರ್ಶ ಮತ್ತು ಆತ್ಮವಿಶ್ವಾಸದ ಮೂಲಕ ವಸ್ತುಗಳು, ಬಣ್ಣಗಳು, ಸಂಖ್ಯೆಗಳು ಮತ್ತು ಅಕ್ಷರಗಳನ್ನು ಗುರುತಿಸುವುದು, ಓದುವುದು-ಬರೆಯುವುದು ಹಾಗೂ ಸೈಕಲ್ ಸವಾರಿ ಮಾಡುವುದನ್ನು ಇಲ್ಲಿ ಅಭ್ಯಾಸ ಮಾಡಿಸಲಾಗುತ್ತದೆ. “ಈ ವಿದ್ಯೆಯಿಂದ ಮಕ್ಕಳಲ್ಲಿ ಏಕಾಗ್ರತೆ ಮತ್ತು ಸುಪ್ತಪ್ರತಿಭೆ ಹೆಚ್ಚುತ್ತದೆ. ಪ್ರಸ್ತುತ ದಿನಗಳಲ್ಲಿ ಮಕ್ಕಳು ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಿಂದ ದೂರವಿರಲು ಈ ತರಬೇತಿ ತುಂಬಾ ಸಹಕಾರಿಯಾಗಿದೆ” ಎಂದು ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಹಾವೇರಿ ರೈತನ ಮಗಳಿಗೆ ‘ವೀಸಾ’ ಕಂಪನಿಯಲ್ಲಿ 46.33 ಲಕ್ಷ ರೂ. ಬಂಪರ್ ಉದ್ಯೋಗ: ಆಳ್ವಾಸ್ ಕಾಲೇಜಿಗೆ ಹಿರಿಮೆ
ವಿಶ್ವದಾಖಲೆಯ ನಿಯಮಾವಳಿಗಳ ಪ್ರಕಾರ ಸಂಸ್ಥೆಯು ಈ ಸಂಪೂರ್ಣ ಸೈಕಲ್ ಸವಾರಿಯ ವಿಡಿಯೋ ದಾಖಲೆಗಳು ಹಾಗೂ ಅಗತ್ಯ ಮಾಹಿತಿಯನ್ನು ವಿಶ್ವದಾಖಲೆಗೆ ಸಂಬಂಧಿಸಿದ ಸಂಸ್ಥೆಗೆ ಸಲ್ಲಿಸಿದೆ. ಪರಿಶೀಲನೆಯ ನಂತರ ಅಧಿಕೃತ ಘೋಷಣೆ ಹೊರಬರಲಿದ್ದು, ಪುಟ್ಟ ಮಕ್ಕಳ ಈ ಅಪರೂಪದ ಸಾಧನೆ ವಿಶ್ವದಾಖಲೆಯ ಪುಟ ಸೇರಲಿ ಎಂದು ಜಿಲ್ಲೆಯ ಜನತೆ ಶುಭ ಹಾರೈಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:01 pm, Tue, 1 September 26