ವಿಜಯಪುರ, ಆ.27: ದಿನದಿಂದ ದಿನಕ್ಕೆ ಕುಸಿಯುತ್ತಿದೆ ಒಣದ್ರಾಕ್ಷಿ ಬೆಲೆ. ಕಳೆದ ಮಾರ್ಚ್ನಿಂದಲೇ ಒಣದ್ರಾಕ್ಷಿಯನ್ನು ಕೋಲ್ಡ್ ಸ್ಟೋರೇಜ್ನಲ್ಲಿ ಇಟ್ಟುಕೊಂಡು ಕೂತಿರುವ ದ್ರಾಕ್ಷಿ ಬೆಳೆಗಾರರಿಗೆ ಬೆಲೆ ಕುಸಿತದ ಬರೆ ಬಿದ್ದಿದೆ. ಹೌದು, ದ್ರಾಕ್ಷಿಯ (Grapes) ತವರೂರು ವಿಜಯಪುರ (Vijayapura) ಜಿಲ್ಲೆಯಲ್ಲಿ ದ್ರಾಕ್ಷಿ ಬೆಳೆಗಾರರ ಪಾಲಿಗೆ ದ್ರಾಕ್ಷಿ ಕಹಿಯಾಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಲಕ್ಷಾಂತರ ರೂಪಾಯಿ ಆದಾಯದ ಮೂಲವಾಗಿದ್ದ ದ್ರಾಕ್ಷಿ, ಈ ವರ್ಷ ಕೇವಲ ಖರ್ಚಿನ ಮೂಲವಾಗಿದೆ.
ದ್ರಾಕ್ಷಿ ಬೆಳೆದು ಅದನ್ನು ಒಣ ದ್ರಾಕ್ಷಿ ಮಾಡಿ ಲಕ್ಷಾಂತರ ಲಾಭ ಗಳಿಸುತ್ತಿದ್ದ ಬೆಳೆಗಾರರಿಗೆ ಇದೀಗ ಮಾಡಿದ ಖರ್ಚು ಸಹ ಕೈಗೆ ಬಾರದಂತಾಗಿದೆ. ಒಂದು ಎಕರೆ ದ್ರಾಕ್ಷಿ ಬೆಳೆದು ಒಣದ್ರಾಕ್ಷಿ ಮಾಡಲು ಕನಿಷ್ಟವೆಂದರೂ 3 ಲಕ್ಷ ರೂಪಾಯಿ ಖರ್ಚಿದೆ. ಮೂರರಿಂದ ನಾಲ್ಕು ಕೆಜಿ ಹಸಿ ದ್ರಾಕ್ಷಿಯನ್ನು ವಿವಿಧ ರಾಸಾಯನಿಕಗಳನ್ನು ಬಳಸಿ ನೆರಳಲ್ಲಿ ವಿವಿಧ ಪದ್ದತಿಗಳ ಮೂಲಕ ಒಣಗಿಸಿದಾಗ ಒಂದು ಕೆಜಿ ಒಣ ದ್ರಾಕ್ಷಿ ಸಿಗುತ್ತದೆ. ಹೀಗೆ ತಯಾರಾದ ಒಣದ್ರಾಕ್ಷಿಗೆ ಬೆಲೆ ಇಲ್ಲವಾಗಿದೆ. ಆನ್ ಲೈನ್ ಮಾರುಕಟ್ಟೆಯಲ್ಲಿ ಹಾಗೂ ಮುಕ್ತ ಮಾರುಕಟ್ಟೆಯಲ್ಲಿ ಕಳೆದ ಏಪ್ರಿಲ್ನಿಂದ ಸರಾಸರಿ ಕನಿಷ್ಟ 30 ರಿಂದ ಗರಿಷ್ಟ 160 ರೂಪಾಯಿಗೆ ಮಾರಾಟವಾಗಿತ್ತು. ಆದರೆ, ಈಗ ಸರಾಸರಿ 60 ರಿಂದ 80 ರೂಪಾಯಿಗೆ ಕೆಜಿಯಂತೆ ದ್ರಾಕ್ಷಿ ಮಾರಾಟವಾಗುತ್ತಿದೆ. ಇಷ್ಟು ಕಡಿಮೆ ಬೆಲೆಗೆ ಒಣದ್ರಾಕ್ಷಿ ಮಾರಾಟವಾಗುತ್ತಿರುವುದು ಬೆಳೆಗಾರರಿಗೆ ಲಾಭವಿರಲಿ ಮಾಡಿದ ಖರ್ಚೂ ಕೂಡ ಬಾರದಂತಾಗಿದೆ.
ಇದನ್ನೂ ಓದಿ:Onion, Tomato Price: ಈರುಳ್ಳಿ, ಟೊಮೆಟೊ ಬೆಲೆ ಕುಸಿತ; ಕರ್ನಾಟಕದ ರೈತರು ಕಂಗಾಲು
ದೇಶದಲ್ಲಿ ಮಹಾರಾಷ್ಟ್ರ ಹೊರತು ಪಡಿಸಿ ಹೆಚ್ಚು ದ್ರಾಕ್ಷಿ ಬೆಳೆಯೋ ಪ್ರದೇಶ ಕರ್ನಾಟಕವಾಗಿದೆ. ಕರ್ನಾಟದಲ್ಲೇ ಅತೀಹೆಚ್ಚು ದ್ರಾಕ್ಷಿಯನ್ನು ವಿಜಯಪುರ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿದೆ. ರಾಜ್ಯದಲ್ಲಿ 36.371 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದ್ದು, ಅದರಲ್ಲಿ ವಿಜಯಪುರ ಜಿಲ್ಲೆಯಲ್ಲಿಯೇ 25.575 ಹೆಕ್ಟರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ದ್ರಾಕ್ಷಿ ಕ್ಷೇತ್ರವೂ ಹೆಚ್ಚಾಗುತ್ತಿದೆ. 2020 ರಲ್ಲಿ 17000 ಹೆಕ್ಟೇರ್, 2021 ರಲ್ಲಿ 21000 ಹೆಕ್ಟೇರ್, 2022 ರಲ್ಲಿ 25000 ಕ್ಕೂ ಆಧಿಕ ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಒಣದ್ರಾಕ್ಷಿಯ ಉತ್ಪಾದನೆ ಹೆಚ್ಚಾಗಿದೆ. ದ್ರಾಕ್ಷಿ ಬೆಳೆಯು ಕ್ಷೇತ್ರ ಹೆಚ್ಚಾದಂತೆ ಒಣದ್ರಾಕ್ಷಿಯ ಉತ್ಪಾದನೆ ಸಹಜವಾಗಿ ಹೆಚ್ಚಾಗಿದೆ ಎಂದು ತೊಟಗಾರಿಕಾ ಇಲಾಖೆ ಆಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಸಿದ್ರಾಕ್ಷಿಯನ್ನು ಒಣದ್ರಾಕ್ಷಿಯನ್ನಾಗಿ ಮಾಡಿ ಕಳೆದ ಮಾರ್ಚ್ ಕೊನೆಯ ವಾರದಲ್ಲೇ ರೈತರು ಕೋಲ್ಡ್ ಸ್ಟೋರೇಜ್ ಗಳಲ್ಲಿ ಇಟ್ಟಿದ್ದಾರೆ. ಏಪ್ರೀಲ್ ನಿಂದ ಆಗಸ್ಟ್ ಕೊನೆಯವರೆಗೂ ಒಣದ್ರಾಕ್ಷಿಗೆ ಬೆಲೆ ಸಿಗುತ್ತಿಲ್ಲ. ವಿಜಯಪುರ ಹಾಗೂ ಮಹಾರಾಷ್ಟ್ರದ ಮಾರುಕಟ್ಟೆಗಳಲ್ಲಿ ಒಣ ದ್ರಾಕ್ಷಿ ಸರಾಸರಿ 60 ರಿಂದ 70 ರೂಪಾಯಿಗೆ ಮಾತ್ರ ಮಾರಾಟವಾಗುತ್ತಿದೆ. ಉತ್ತಮ ಗುಣಮಟ್ಟದ ಒಣದ್ರಾಕ್ಷಿ ಕೆಜಿಗೆ 160 ಕ್ಕೆ ಮಾರಾಟವಾದರೆ, ಕಡಿಮೆ ಗುಣಮಟ್ಟ ಕೆಜಿಗೆ 30 ರೂಪಾಯಿಗೆ ಮಾರಾಟವಾಗಿದೆ. ಒಂದು ಟನ್ ಒಣದ್ರಾಕ್ಷಿಯನ್ನು ಕೋಲ್ಡ್ ಸ್ಟೋರೇಜ್ ನಲ್ಲಿಡಲು ತಿಂಗಳಿಗೆ 1000 ರೂಪಾಯಿ ಪಾವತಿ ಮಾಡಬೇಕಿದೆ. ಮೊದಲೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿಸಿಕೊಂಡಿರೋ ಒಣದ್ರಾಕ್ಷಿಯನ್ನು ಕೋಲ್ಡ್ ಸ್ಟೋರೇಜ್ ನಲ್ಲಿಡಲು ಸಹ ರೈತರಿಗೆ ಕಷ್ಟವಾಗುತ್ತಿದೆ. ಸಾಲ ಸೋಲ ಮಾಡಿದ್ದು ಅದರ ಬಡ್ಡಿಯ ಗಂಟು ಬೆಳೆಯುತ್ತಿದೆ. ಇತ್ತ ದ್ರಾಕ್ಷಿ ಮಾರಲೂ ಆಗದೇ ಅದನ್ನು ಇಟ್ಟುಕೊಳ್ಳಲೂ ಆಗದೇ ಪರದಾಡುತ್ತಿದ್ದಾರೆ. ಹಾಗಾಗಿ ಒಣದ್ರಾಕ್ಷಿಗೆ ಬೆಂಬಲ ಬೆಲೆ ನಿಗದಿ ಮಾಡಬೇಕೆಂದು ಸರ್ಕಾರಕ್ಕೆ ಹಲವಾರು ಮಠಾಧೀಶರು ರೈತರು ರೈತ ಸಂಘಟನೆಗಳು ಮನವಿ ಮಾಡಿದರೂ ಯಾವುದೇ ಉಪಯೋಗವಾಗಿಲ್ಲ.
ಇದನ್ನೂ ಓದಿ:Onion, Tomato Price: ಈರುಳ್ಳಿ, ಟೊಮೆಟೊ ಬೆಲೆ ಕುಸಿತ; ಕರ್ನಾಟಕದ ರೈತರು ಕಂಗಾಲು
ಇನ್ನು ರೈತರು ಜಿಲ್ಲೆಯ ಸಚಿವರು, ಶಾಸಕರು ನಮ್ಮ ಸಹಾಯಕ್ಕೆ ಧಾವಿಸಬೇಕೆಂದು ಒತ್ತಾಯ ಮಾಡಿದ್ದಾರೆ. ಸರ್ಕಾರದ ಗಮನ ಸೆಳೆಯಲು ಇದೇ ಮುಂದಿನ ಸಪ್ಟೆಂಬರ್ 7 ರಂದು ದ್ರಾಕ್ಷಿ ಬೆಳೆಯುವ ಈ ಭಾಗದ ಹಲವಾರು ಜಿಲ್ಲೆಯ ರೈತರು, ಮಠಾಧೀಶರು, ರೈತ ಪರ ಹೋರಾಟಗಾರರು, ರೈತಸಂಘಟನೆಗಳ ನೇತೃತ್ವದಲ್ಲಿ ಬಾಗಕೋಟೆಯ ಚಿಕ್ಕಪಡಸಲಗಿ ಗ್ರಾಮದ ಬಳಿ ದ್ರಾಕ್ಷಿ ಬೆಳೆಗಾರರ ಬೃಹತ್ ಸಮಾವೇಶ ನಡೆಸಿ ಹೋರಾಟ ಮಾಡಲು ಮುಂದಾಗಿದ್ದಾರೆ. ಮುಂದಿನ ಹೋರಾಟವನ್ನು ಸಮಾವೇಶದ ಮೂಲಕ ಆರಂಭಿಸಲಾಗುತ್ತದೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ