ವಕ್ಫ್​ ವಿವಾದ: ಬಿಜೆಪಿ ಅವಧಿಯಲ್ಲೂ ರೈತರಿಗೆ ನೋಟಿಸ್​, ದಾಖಲೆ ಸಮೇತ ಗುಡುಗಿದ ಎಂಬಿ ಪಾಟೀಲ್​

| Updated By: ವಿವೇಕ ಬಿರಾದಾರ

Updated on: Oct 29, 2024 | 10:24 AM

Vijayapura Waqf Raw: ವಿಜಯಪುರ ಜಿಲ್ಲೆಯಲ್ಲಿ ರೈತರ ಜಮೀನುಗಳನ್ನು ವಕ್ಫ್ ಬೋರ್ಡ್‌ಗೆ ಸೇರಿಸುವ ವಿಚಾರ ತೀವ್ರ ಚರ್ಚೆಗೆ ಕಾರಣವಾಗಿದೆ. ವಕ್ಫ್​ ಆಸ್ತಿ ವಿಚಾರವಾಗಿ ಜಿಲ್ಲೆಯ ಹಲವು ರೈತರಿಗೆ ತಹಶೀಲ್ದಾರ್​ ಕಚೇರಿಯಿಂದ​ ನೋಟಿಸ್​​ ನೀಡಿದ್ದನ್ನು ಬಿಜೆಪಿ ವಿರೋಧಿಸುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲೂ ರೈತರಿಗೆ ನೋಟಿಸ್​ ನೀಡಲಾಗಿದೆ ಎಂದು ಸಚಿವ ಎಂಬಿ ಪಾಟೀಲ್​ ದಾಖಲೆ ಸಮೇತ ಗುಡುಗಿದ್ದಾರೆ.

ವಕ್ಫ್​ ವಿವಾದ: ಬಿಜೆಪಿ ಅವಧಿಯಲ್ಲೂ ರೈತರಿಗೆ ನೋಟಿಸ್​, ದಾಖಲೆ ಸಮೇತ ಗುಡುಗಿದ ಎಂಬಿ ಪಾಟೀಲ್​
ಎಂಬಿ ಪಾಟೀಲ್​, ದಾಖಲೆ
Follow us on

ವಿಜಯಪುರ, ಅಕ್ಟೋಬರ್​ 29: ವಿಜಯಪುರ (Vijayapuara) ಜಿಲ್ಲೆಯಲ್ಲಿ ವಕ್ಫ್ (Waqf)​ ಆಸ್ತಿ ವಿವಾದ ಜೋರಾಗಿದೆ. ವಕ್ಫ್​ ಆಸ್ತಿ ವಿಚಾರವಾಗಿ ಜಿಲ್ಲೆಯ ಹಲವು ರೈತರಿಗೆ ತಹಶೀಲ್ದಾರ್​ ಕಚೇರಿಯಿಂದ​ ನೋಟಿಸ್​​ ನೀಡಲಾಗಿದೆ. ರೈತರಿಗೆ ನೋಟಿಸ್​ ನೀಡಿದ್ದಕ್ಕೆ ವಿಪಕ್ಷ ಬಿಜೆಪಿ (BJP) ರಾಜ್ಯ ಕಾಂಗ್ರೆಸ್​ ಸರ್ಕಾರದ (Congress Government) ವಿರುದ್ಧ ಹರಿಹಾಯುತ್ತಿದೆ. ಇದೀಗ, ಬಿಜೆಪಿ ಸರ್ಕಾರದ ಅವಧಿಯಲ್ಲೂ ರೈತರಿಗೆ ವಕ್ಫ್​ನಿಂದ ನೋಟಿಸ್​ ನೀಡಲಾಗಿದೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್ (MB Patil)​ ದಾಖಲೆ ಸಮೇತ ಟಾಂಗ್​ ಕೊಟ್ಟಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಟ್ವೀಟ್​ ಮಾಡಿದ ಸಚಿವ ಎಂ.ಬಿ ಪಾಟೀಲ್​ “2019ರಿಂದ 2022ರವರೆಗೆ ರಾಜ್ಯದಲ್ಲಿ ಆಡಳಿತ ನಡೆಸಿದ ಆಪರೇಷನ್ ಕಮಲದ ಸರ್ಕಾರದ ಅವಧಿಯಲ್ಲಿ ವಕ್ಫ್ ಬೋರ್ಡ್ ವಿಜಯಪುರದ ರೈತರಿಗೆ ನೀಡಿದ ನೋಟೀಸುಗಳಿವು! ಆಗ ಇರದ ಹಿಂದೂ ಪ್ರೇಮ ಈಗ ಕಪೋಲ ಕಲ್ಪಿತ ಸುಳ್ಳುಗಳ ಆಧಾರದ ಮೇಲೆ ಚಿಗುರೊಡೆದಿದ್ದು ಹೇಗೆ?” ಎಂದು ವಾಗ್ದಾಳಿ ಮಾಡಿದ್ದಾರೆ.

“ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ಸತ್ಯ ಶೋಧನಾ ಸಮಿತಿ (ಅತ್ತು ಕರೆದು ಗೋಗರೆದು ರಚನೆಗೊಂಡ ಪರಿಷ್ಕೃತ ಸತ್ಯ ಶೋಧನಾ ಸಮಿತಿ) ಬಿಜೆಪಿ ಸರ್ಕಾರದ ಅವಧಿಯಲ್ಲಿ ವಕ್ಫ್ ಬೋರ್ಡ್ ನಿಂದ ರೈತರಿಗೆ ನೋಟಿಸ್ ಕೊಟ್ಟಿರೋದಕ್ಕೆ ಉತ್ತರ ಕೊಡಲಿ” ಎಂದು ಸವಾಲು ಹಾಕಿದ್ದಾರೆ.

ಇದನ್ನೂ ಓದಿ: ಧಾರವಾಡ ರೈತರಿಗೂ ಶುರುವಾಯ್ತು ವಕ್ಫ್‌ ನಡುಕ: ಪಹಣಿಯಲ್ಲಿ ವಕ್ಫ್‌ ಬೋರ್ಡ್‌ ಹೆಸರು ಉಲ್ಲೇಖ

ದಾಖಲೆಯಲ್ಲಿ ಏನಿದೆ?

ಸಚಿವ ಎಂ.ಬಿ ಪಾಟೀಲ್​ ಬಿಡುಗಡೆ ಮಾಡಿದ ದಾಖಲೆಗಳ ಪ್ರಕಾರ, “ಕರ್ನಾಟಕ ಸರ್ಕಾರ ನೀಡಿರುವ ನಿರ್ದೇಶನ ಮೇರೆಗೆ ಕರ್ನಾಟಕ ವಕ್ಫ್​ ಬೋರ್ಡ್ 2022ರ ಅಕ್ಟೋಬರ್​ 17 ರಂದು ವಿಜಯಪುರದ ಜಿಲ್ಲೆಯ ರೈತರಿಗೆ ನೋಟಿಸ್​ ನೀಡಿದೆ. ರೈತರು ತಮ್ಮ ಜಮೀನಿನ ದಾಖಲೆಗಳ ಸಮೇತ​ ಅಕ್ಟೋಬರ್​ 30 ರಂದು ಕರ್ನಾಟಕ ರಾಜ್ಯ ವಕ್ಫ್​ ಮಂಡಳಿ ಮುಂದೆ ಹಾಜರಾಗಬೇಕು. ಗೈರು ಹಾಜರಾದರೂ ವಿಚಾರಣೆ ಮುಂದುವರೆಯಲಿದ್ದು ಮತ್ತು ಆದೇಶ ಹೊರಡಿಸಲಾಗುತ್ತದೆ” ಎಂದು ನೋಟಿಸ್​ನಲ್ಲಿ ಉಲ್ಲೇಖಿಸಲಾಗಿದೆ.

ವಿಜಯಪುರ ಜಿಲ್ಲೆಯ, ವಿಜಯಪುರ ತಾಲೂಕಿನ ಮೇಲ್ಭಾಗಾಯತ್ ಹಳ್ಳಿಯ ಅಶೋಕ್​, ಗೋವಿಂದ, ಬಿಡನಾಳ ಜಹಮನ್​ ಲಹೋರಿ, ಬಸವರಾಜ, ಉಮಾ, ದಯಾನಂದ್​ ರೋವತ್ತಪ್ಪ ಎಂಬುವರಿಗೆ ಪ್ರತ್ಯೇಕವಾಗಿ ನೋಟಿಸ್​ ನೀಡಲಾಗಿದೆ. ​

ಟ್ವಿಟರ್​ ಪೋಸ್ಟ್​​

ವಕ್ಫ್ ಆಸ್ತಿ ಬಗ್ಗೆ ಅಧ್ಯಯನ ನಡೆಸಲು ಮಾಜಿ ಡಿಸಿಎಂ ಗೋವಿಂದ ಕಾರಜೋಳ ನೇತೃತ್ವದಲ್ಲಿ ಬಿಜೆಪಿ ತಂಡ ವಿಜಯಪುರಕ್ಕೆ ಇಂದು (ಅ.29) ತೆರಳಲಿದೆ. ಬಿಜೆಪಿ ತಂಡ ಆಗಮಿಸುವ ವೇಳೆ ಬಿಜೆಪಿ ಸರ್ಕಾರದ ಅವಧಿಯಲ್ಲಿನ ದಾಖಲೆಗಳ ಬಿಡುಗಡೆ ಮಾಡಿ ಸಚಿವ ಎಂಬಿ ಪಾಟೀಲ್​ ವಾಗ್ದಾಳಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:17 am, Tue, 29 October 24