ವಿಜಯಪುರ: ಜೂನ್ ಕಳೆದು ಜುಲೈ (July) ಆರಂಭವಾದರೂ ಜಿಲ್ಲೆಯಲ್ಲಿ ವಾಡಿಕೆ ಪ್ರಮಾಣದ ಮಳೆಯಾಗಿಲ್ಲ (Rain). ಅಲ್ಲಲ್ಲಿ ಮಳೆಯಾಗಿ ಬಿತ್ತನೆ ಕಾರ್ಯ ಮಾಡಿದ ನಂತರವೂ ಮಳೆಯ ಕೊರತೆ ಎದುರಾಗಿದೆ. ಇದು ಮುಂಗಾರು ಬೆಳೆಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ. ಈ ಹಿನ್ನೆಲೆ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ನರಸಲಗಿ ಗ್ರಾಮದಲ್ಲಿ ಮಳೆಯಾಗಿ ವಿಶೇಷ ಪೂಜೆ ಪುನಸ್ಕಾರ ಮಾಡಲಾಗಿದೆ. ಇನ್ನು ವರುಣನ ಕೃಪೆಗಾಗಿ ಗ್ರಾಮದ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಸಪ್ತಾಹ ಆಚರಣೆ ಮಾಡಲಾಗಿದೆ. ಸಪ್ತಾಹ ಅಂದರೆ ದಿನದ 24 ಗಂಟೆಗಳ ಕಾಲ ನಿರಂತರವಾಗಿ ಭಜನೆ ಮಾಡುವುದು.
ಕಳೆದ ಐದು ದಿನಗಳಿಂದ ನರಸಲಗಿ ಗ್ರಾಮದ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ನಿರಂತರ ಭಜನೆ ಮಾಡುವ ಮೂಲಕ ಸಪ್ತಾಹ ಮಾಡಲಾಗಿದೆ. ಗ್ರಾಮದ ಯುವಕರು ಸರದಿಯ ಪ್ರಕಾರ ನಿರಂತರವಾಗಿ ಭಜನೆ ಮಾಡುವ ಮೂಲಕ ಮಳೆರಾಯನನ್ನು ಆಹ್ವಾನಿಸಿದ್ದಾರೆ. ಜುಲೈ 2 ಕೊನೆಯ ದಿನವಾಗಿದ್ದು, ವಿಶೇಷ ಪೂಜೆ ಸಲ್ಲಿಸಲಾಗಿದೆ.
ಇದನ್ನೂ ಓದಿ: ಜ್ಞಾನವಾಪಿ ಮಸೀದಿ ವಿವಾದ: ಹಿಂದೂಗಳು ಸಲ್ಲಿಸಿದ್ದ ಅರ್ಜಿಯ ಸಿಂಧುತ್ವದ ಬಗ್ಗೆ ಇಂದು ವಿಚಾರಣೆ
ಸಪ್ತಾಹ ಆಚರಣೆ ಮಾಡಿದರೆ ಮಳೆಯಾಗುತ್ತದೆ ಎಂಬ ನಂಬಿಕೆ ಇದೆ. ಗ್ರಾಮದ ಮುಖಂಡರು ಹಿರಿಯರು ಹಾಗೂ ಯುವಕರು ಸಪ್ತಾಹದಲ್ಲಿ ಭಾಗಿಯಾಗಿದ್ದರು. ಐದು ದಿನಗಳ ಸಪ್ತಾಹ ಕಾರ್ಯಕ್ಕೆ ಗ್ರಾಮದ ಜನರು ಸಹಾಯ ಮಾಡಿದ್ದಾರೆ.
ಕಲುಷಿತ ನೀರು ಸೇವಿಸಿ ಜನರಿಗೆ ವಾಂತಿ-ಭೇದಿ:
ಜಿಲ್ಲೆಯ ಇಂಡಿ ತಾಲೂಕಿನ ಸಾತಪುರದಲ್ಲಿ ಕಲುಷಿತ ನೀರು ಸೇವಿಸಿ ಜನರಿಗೆ ವಾಂತಿ-ಭೇದಿ ಶುರುವಾಗಿದೆ. ಅಸ್ವಸ್ಥರಿಗೆ ಸದ್ಯ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ. ಇಂಡಿ ತಾಲೂಕು ಆಸ್ಪತ್ರೆಯಲ್ಲಿ 42 ಜನರಿಗೆ, ಇತರೆ ಖಾಸಗಿ ಆಸ್ಪತ್ರೆಗಳಲ್ಲಿ 30-40 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ತಾಯವ್ವ ಪೂಜಾರಿ ಎಂಬುವರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಜು.2ರಂದು ಸಾತಪುರ ಗ್ರಾಮದ ಜನರಿಗೆ ವಾಂತಿ-ಭೇದಿ ಶುರುವಾಗಿತ್ತು. ನಿನ್ನೆ ವಾಂತಿ-ಭೇದಿ ಹೆಚ್ಚಾದ ಹಿನ್ನೆಲೆ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಇಂದು ಬಹುತೇಕ ಜನರ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದಿದೆ.
Published On - 9:37 am, Mon, 4 July 22