ವಿಜಯಪುರ ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್ ಹೆಸರು: ಕಂಗಾಲಾದ ಅನ್ನದಾತ
Vijayapura Waqf Raw: ವಿಜಯಪುರ ಜಿಲ್ಲೆಯಲ್ಲಿ ರೈತರ ಜಮೀನುಗಳನ್ನು ವಕ್ಫ್ ಬೋರ್ಡ್‌ಗೆ ಸೇರಿಸುವ ವಿಚಾರ ತೀವ್ರ ಚರ್ಚೆಗೆ ಕಾರಣವಾಗಿದೆ. ತಮ್ಮ ಜಮೀನುಗಳ ಪಹಣಿ ಪತ್ರಗಳಲ್ಲಿ ವಕ್ಫ್ ಬೋರ್ಡ್ ಹೆಸರನ್ನು ಸೇರಿಸಿರುವುದನ್ನು ರೈತರು ಪ್ರಶ್ನಿಸುತ್ತಿದ್ದಾರೆ ಮತ್ತು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿಗಳು ರೈತರು ಭಯಪಡಬಾರದು ಎಂದು ಮನವಿ ಮಾಡಿದ್ದಾರೆ.
ವಿಜಯಪುರ, ಅಕ್ಟೋಬರ್ 26: ರೈತರು ಜಮೀನುಗಳನ್ನು (Farmers Land) ವಕ್ಫ್ ಬೋರ್ಡ್‌ಗೆ (Waqf Board) ಸೇರಿಸುವ ವಿಚಾರ ವಿಜಯಪುರ (Vijayapura) ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಚರ್ಚೆ ನಡುವೆಯೇ ರೈತರ ಜಮೀನುಗಳಲ್ಲಿನ ಪಹಣಿ ಪತ್ರದಲ್ಲಿನ ಕಾಲಂ ನಂಬರ್ 11ರ ಋಣಗಳು ಕಾಲಂನಲ್ಲಿ “ಕರ್ನಾಟಕ ವಕ್ಫ್ ಬೋರ್ಡ್ ಬೆಂಗಳೂರು ಮಸಜಿತ್ (ಸುನ್ನಿ) ವಕ್ಫ್” ಎಂದು ನಮೂದಿಸಲಾಗಿದೆ. ರೈತರ ಜಮೀನಿನ ಮೇಲೆ ವಕ್ಫ್ ಬೋರ್ಡ್ ಸಾಲ ಪಡೆದು ಭೋಜ ಹಾಕಿಸಿದೆ. ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಬೋರ್ಡ್ ಭೋಜ ಇರುವ ಕಾರಣ ಸಾಲ ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇಂಡಿ ತಾಲೂಕಿನ ತೆನ್ನಿಹಳ್ಳಿ ಗ್ರಾಮದ ಯಮನಪ್ಪ ಕೆಂಗನಾಳ ಅವರ ಜಮೀನಿನ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ಸೇರ್ಪಡೆಯಾಗಿದೆ. ರೈತ ಯಮನಪ್ಪ ಕೆಂಗನಾಳ ಅವರಿಗೆ ಯಾವುದೇ ತಿಳವಳಿಕೆ ಪತ್ರ ನೀಡದೆ, ತಹಶೀಲ್ದಾರ್ ಏಕಾಏಕಿ ಪಹಣಿ ಪತ್ರದಲ್ಲಿ ವಕ್ಫ್ ಬೋರ್ಡ್ ಎಂದು ಹೆಸರು ಸೇರಿಸಿದ್ದಾರೆ. ನೋಟಿಸ್ ನೀಡದೆ ಏಕಾಏಕಿ ತಮ್ಮ ಜಮೀನುಗಳ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ಸೇರಿಸಿದ್ದಕ್ಕೆ ರೈತ ಯಮನಪ್ಪ ಕೆಂಗನಾಳ ಕಂಗಾಲಾಗಿದ್ದಾರೆ. ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
13 ತಾಲೂಕಿನ ರೈತರಿಗೆ ನೊಟೀಸ್
13 ತಾಲೂಕು ರೈತರಿಗೆ “ನಿಮ್ಮ ಜಮೀನುಗಳು ವಕ್ಫ್ ಬೋರ್ಡ್ ಆಸ್ತಿಯೆಂದು” ಆಯಾ ತಹಶೀಲ್ದಾರ್ ಕಚೇರಿಯಿಂದ ತಿಳವಳಿಕೆ ಪತ್ರ ನೀಡಲಾಗಿದೆ. ಇದಲ್ಲದೇ, ಇನ್ನೂ ನೂರಾರು ರೈತರಿಗೆ ನೊಟೀಸ್ ಜಾರಿ ಮಾಡಲು ಮಾಡಲು ತಹಶೀಲ್ದಾರರು ಸಿದ್ದತೆ ನಡೆಸಿದ್ದಾರೆ ಎಂದು ಟಿವಿ9ಗೆ ಮೂಲಗಳಿಂದ ಮಾಹಿತಿ ದೊರೆತಿದೆ. ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿನ 1200 ಎಕರೆ ಜಮೀನು ಶಾ ಅಮೀನುದ್ದೀನ್ ದರ್ಗಾಕ್ಕೆ ಸೇರಿದ್ದು ಎಂದು ತಹಶೀಲ್ದಾರ್ ರೈತರಿಗೆ ನೋಟಿಸ್ ನೀಡಿದ್ದಾರೆ. ಆದರೆ ನಮ್ಮ ಗ್ರಾಮದಲ್ಲಿ ಶಾ ಅಮೀನುದ್ದೀನ್ ದರ್ಗಾ ಇಲ್ಲ ಎಂದು ರೈತರು ಹೇಳುತ್ತಿದ್ದಾರೆ.
ಹಿಂದೂಗಳ ಜಮೀನುಗಳ ಮೇಲೆ ಈ ರೀತಿ ವಕ್ಫ್ ಎಂದು ನಮೂದಾಗಬಾರದು. ಹೀಗಾಗಿ ಜಮೀನುಗಳ ಮಾಲೀಕರು, ರೈತ ಮುಖಂಡ ತುಕಾರಾಮ್ ನಲವಡೆ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ಜಮೀನು ಉಳಿಸಿಕೊಳ್ಳಲು ಹೋರಾಟ ಮಾಡಲು ಸಿದ್ಧ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ವಿಜಯಪುರ ರೈತರ ಭೂಮಿ ವಕ್ಫ್ಗೆ?: ಸಿದ್ದರಾಮಯ್ಯನವರೇ ರಾಜ್ಯವನ್ನು ಪಾಕಿಸ್ತಾನ ಮಾಡಲು ಹೊರಟಿದ್ದೀರಾ; ತೇಜಸ್ವಿ ಸೂರ್ಯ ಕಿಡಿ
ವಿಜಯಪುರ ಜಿಲ್ಲಾ ವಕ್ಫ್ ಬೋರ್ಡ್ ನೀಡಿರುವ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ 14,201 ಎಕರೆ ಜಮೀನು ವಕ್ಫ್ಗೆ ಸೇರಿದೆ. ಈ ಪೈಕಿ 1354 ಎಕರೆ ಒತ್ತುವರಿಯಾಗಿದೆ. ಉಳಿದ ಜಮೀನು ವಕ್ಫ್ ಇನ್ಟಿಟ್ಯೂಶನ್ಸ್, ಇನಾಮ್ ಆಬ್ಲಿಷನ್ಸ್, ಲ್ಯಾಂಡ್ ರಿಫಾರ್ಮ್ ಹಾಗೂ ವಕ್ಪ್ ಆ್ಯಕ್ಟ್ ವಶದಲ್ಲಿದೆ ಎಂದು ತಿಳಿಸಿದೆ.
ನೊಟೀಸ್ಗೆ ರೈತರು ಭಯ ಪಡಬಾರದು: ಡಿಸಿ ಮನವಿ
ತಹಶೀಲ್ದಾರ್ ಕಚೇರಿಯಿಂದ ಬರುವ ನೊಟೀಸ್ಗೆ ರೈತರು ಭಯ ಪಡಬಾರದು. ಗೆಜೆಟ್ ನೊಟೀಫೀಕೇಶನ್ನಲ್ಲಿ ವಕ್ಫ್ ಆಸ್ತಿ ಎಂದು ಬಂದಿವೆ. ನಿಯಮಾನುಸಾರ ರೈತರಿಗೆ ನೊಟೀಸ್ ಜಾರಿ ಮಾಡಬೇಕಾಗುತ್ತದೆ. ನೊಟೀಸ್ ನೀಡಿದ ಜಮೀನು ವಕ್ಫ್ ಆಸ್ತಿನಾ ಅಥವಾ ಇಲ್ಲವಾ ಅಂತ ನಾವು ಪರಿಶೀಲನೆ ಮಾಡಬೇಕಾಗುತ್ತದೆ. ತಮ್ಮ ಜಮೀನು ಪಿತ್ರಾರ್ಜಿತ ಆಸ್ತಿನಾ ಅಥವಾ ದಾನ ಪಡೆದಿದ್ದಾ ಅಥವಾ ಖರೀದಿ ಮಾಡಿದ್ದಾ ಎಂಬುವುದನ್ನು ತಿಳಿದುಕೊಳ್ಳಲು ರೈತರಿಗೆ ನೋಟಿಸ್ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಟಿ ಭೂಬಾಲನ್ ಹೇಳಿದರು.
ದಾಖಲೆಗಳನ್ನು ಪರಿಶೀಲನೆ ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ. ನೊಟೀಸ್ ನೀಡಿದ್ದಕ್ಕೆ ರೈತರು ಗಾಬರಿಯಾಗಬಾರದು. ನೊಟೀಸ್ ಬಂದ ತಕ್ಷಣ ರೈತರ ಜಮೀನುಗಳು ವಕ್ಫ್ಗೆ ಹೋಗಲ್ಲ. ರೈತರು ನೀಡುವ ಸೂಕ್ತ ದಾಖಲೆಗಳನ್ನು ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ