ಬೆಂಗಳೂರು, ಡಿ.14: ಕೋಲಾರ, ಮೈಸೂರು, ಚಾಮರಾಜನಗರ, ಉತ್ತರ ಕನ್ನಡ ಜಿಲ್ಲೆಗಳ ವಿವಿಧ ತಾಲೂಕುಗಳಲ್ಲಿ ಇಂದು ವಿಕಸಿತ ಭಾರತ ಸಂಕಲ್ಪ ಯಾತ್ರೆ (Viksit Bharat Sankalp Yatra) ನಡೆಯಿತು. ಈ ವೇಳೆ, ಪ್ರಧಾನಮಂತ್ರಿ ಮಹಿಳಾ ಸಮ್ಮಾನ್ ಯೋಜನೆ ಬಗ್ಗೆ ಗ್ರಾಮವಾಸಿಗಳಿಗೆ ಮಾಹಿತಿ ನೀಡಲಾಯಿತು. ಕೇಂದ್ರ ಸರ್ಕಾರದ ವತಿಯಿಂದ ಸಾರ್ವಜನಿಕರಿಗೆ ಮುದ್ರಿಸಲಾಗಿರುವ ಸರ್ಕಾರದ ಯೋಜನೆಗಳ ಮಾಹಿತಿಯುಳ್ಳ ಕಿರುಪುಸ್ತಕ, 2024 ರ ಕ್ಯಾಲೆಂಡರ್ ವಿತರಣೆ ಮಾಡಲಾಯಿತು.
ಗ್ರಾಮದಲ್ಲಿ ಕಿರು ಮಳಿಗೆ ತೆರೆದು ಉಜ್ವಲ ಉಚಿತ ಗ್ಯಾಸ್ ನೋಂದಣಿಯನ್ನು ಮಾಡಿಸಲಾಯಿತು. ಕೃಷಿಗಾಗಿ ರೈತರಿಗೆ ಡ್ರೋನ್ ಮೂಲಕ ಪರಿವೀಕ್ಷಣೆ ನಡೆಸಲಾಯಿತು, ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಗ್ರಾಮಸ್ಥರಿಗೆ ವಿಡಿಯೋ ಮೂಲಕ ಜಾಗೃತಿ ಮೂಡಿಸಲಾಯಿತು. ಹಾಗಾದರೆ, ಇಂದು ಎಲ್ಲೆಲ್ಲಿ ಯಾತ್ರೆ ನಡೆಯಿತು? ಇಲ್ಲಿದೆ ಮಾಹಿತಿ.
ಕೋಲಾರ ಜಿಲ್ಲೆಯಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಮುಂದುವರಿದಿದ್ದು, ಇಂದು ಮುಳಬಾಗಿಲು ತಾಲೂಕು ಕಪ್ಪಲಮಡಗು ಗ್ರಾಮದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಪಂಚಾಯತಿ ಅಧ್ಯಕ್ಷೆ ಪಾರ್ವತಮ್ಮ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕರಾದ ಶ್ರೀಕಾಂತ್ ನಾಯಕ್ ಅವರು ಪ್ರಧಾನ ಮಂತ್ರಿ ಜೀವನ್ ಭೀಮಾ ಸುರಕ್ಷಾ ಯೋಜನೆ, ಮುದ್ರ, ಕಿಸಾನ್ ಕ್ರಿಡಿಟ್ ಕಾರ್ಡ್ ಸೇರಿದಂತೆ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಕುಕನೂರು ತಾಲೂಕಿನ ಬಾನಾಪುರ ಗ್ರಾಮದಲ್ಲಿ ಇಂದಿನಿಂದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಆರಂಭವಾಗಿದೆ. ಗ್ರಾಮ ಪಂಚಾಯತಿ ಉಪಾಧ್ಯಕ್ಷ ಪವಿತ್ರಾ ಪ್ರಕಾಶ ಬಂಗೇರ ಅವರು ಗ್ರಾಮ ಪಂಚಾಯತಿ ಆವರಣದಲ್ಲಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯ ರಾಮಪ್ಪ ಕೋಮಲಾಪುರ, ನೀಲಕಂಠ ಯ್ಯ ಸಸಿಮಠ, ರೇಣುಕಾ ವೈ. ತಳವಾರ, ತಾಲೂಕಾ ಆರ್ಥಿಕ ಸಾಕ್ಷರತೆಯ ಸಲಹೆಗಾರ ಪಂಪನಗೌಡ ಮತ್ತು ಎಸ್ಬಿಐ ವ್ಯವಸ್ಥಾಪಕರು, ಗ್ರಾಮದ ಆರೋಗ್ಯ ಕೇಂದ್ರದ ಸಿಬ್ಬಂದಿ ಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಸ್ವಸಹಾಯ ಗುಂಪಿನ ಮಹಿಳೆಯರು ಉಪಸ್ಥಿತರಿದ್ದರು.
ಇದನ್ನೂ ಓದಿ: ವಿಕಸಿತ ಭಾರತ ಸಂಕಲ್ಪ ಯಾತ್ರೆ: ಪ್ರಲ್ಹಾದ್ ಜೋಶಿ ಭಾಷಣದ ವೇಳೆ ರಾಜ್ಯ ಸರ್ಕಾರದ ವಿರುದ್ಧ ರೈತನ ಆಕ್ರೋಶ
ಮೈಸೂರು ಜಿಲ್ಲೆಯ ಹೆಚ್ಡಿ ಕೋಟೆ ತಾಲೂಕಿನ ಹೊಮ್ಮರಗಳ್ಳಿ ಹಾಗೂ ಮಾದಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ನಡೆಯಿತು. ನೆರೆದಿದ್ದ ಗ್ರಾಮದ ಜನರಿಗೆ ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ಸೌಲಭ್ಯಗಳ ಮಾಹಿತಿ ನೀಡಲಾಯಿತು. ಜನರು ಹೆಚ್ಚಿನ ಆಸಕ್ತಿಯಿಂದ ಕೇಂದ್ರ ಸರ್ಕಾರ ನೀಡುತ್ತಿರುವ ಸವಲತ್ತುಗಳ ಮಾಹಿತಿಯನ್ನು ಪಡೆದುಕೊಂಡರು. ಈ ವೇಳೆ ಯೋಜನೆಗಳ ಮಾಹಿತಿ ಬಿತ್ತರಿಸುವ ವೀಡಿಯೋ ಪ್ರಸಾರ ಮಾಡಲಾಯಿತು.
ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಮತ್ತೊಂದು ವಾಹನ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ದೊಡ್ಡಬೈಲಾಳು ಹಾಗೂ ಮೈಸೂರು ತಾಲೂಕಿನ ಆನಂದೂರು ಗ್ರಾಮಪಂಚಾಯತಿಗೆ ತೆರಳಿ ಕಾರ್ಯಕ್ರಮ ನಡೆಸಿತು. ಕೆಲವು ಫಲಾನುಭವಿಗಳು ತಮ್ಮ ಅನುಭವ ಹಂಚಿಕೊಂಡರು.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಇಟಗಿ ಪಂಚಾಯಿತ್ನಲ್ಲಿ ಇಂದು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಪಂಚಾಯತ್ ಮಟ್ಟದಲ್ಲಿ ತಿಳಿಪಡಿಸಲು ಹಮ್ಮಿಕೊಂಡಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆ ನಡೆಯಿತು. ಪಂಚಾಯಿತಿ ಅಧ್ಯಕ್ಷೆ ಗಿರಿಜಾ ನಾಯ್ಕ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಿಳಗಿ ಕೆನರಾ ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ಪ್ರವೀಣ್ ಅವರು ವಿಮಾ ಯೋಜನೆಗಳ ಬಗ್ಗೆ ತಿಳಿಸಿದರು. ವಾಲ್ಮೀಕಿ ಗ್ಯಾಸ್ ಮಾಲಿಕ ಮಂಜುನಾಥ ಅವರು ಉಜ್ವಲ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಆರೋಗ್ಯ ಸಹಾಯಕಿ ಕಾವ್ಯ ನಾಯ್ಕ ಅವರು ಇಲಾಖೆಯ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹೊರೆಯಾಳ ಹಾಗೂ ಕೋಟೆಕೆರೆ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ನಡೆಯಿತು. ಕೇಂದ್ರ ಸರ್ಕಾರದ ಯೋಜನೆಗಳು ಗ್ರಾಮಸ್ಥರಿಗೆ ಯಾವ ರೀತಿ ಪ್ರಯೋಜನಕಾರಿ ಎಂದು ತಿಳಿಸಲಾಯ್ತು. ಒಟ್ಟು 3 ವಾಹನಗಳು ಜಿಲ್ಲೆಯ ಹಲವು ಗ್ರಾಮಪಂಚಾಯಿತಿಗಳಲ್ಲಿ ಪ್ರತಿನಿತ್ಯ ಸಂಚರಿಸುತ್ತಿವೆ.
ಗುಂಡ್ಲುಪೇಟೆ ತಾಲೂಕಿನ ಮೂಕಹಳ್ಳಿ ಹಾಗೂ ನೆನೆಕಟ್ಟೆ ಗ್ರಾಮ ಪಂಚಾಯತಿಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಯಿತು. ನೆರೆದಿದ್ದ ಜನರು ಪ್ರಧಾನಮಂತ್ರಿಗಳು ನೀಡಿರುವ ವೀಡಿಯೋದ ಸಂದೇಶ ವೀಕ್ಷಿಸಿದರು. ಫಲಾನುಭವಿಗಳು ಆಗಮಿಸಿ ಕೇಂದ್ರ ಸರ್ಕಾರದಿಂದ ಪಡೆದ ಯೋಜನೆಗಳ ಕುರಿತು ಅಭಿಪ್ರಾಯ ಹಂಚಿಕೊಂಡರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ