ದಕ್ಷಿಣ ಕನ್ನಡ, ವಿಜಯಪುರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಯಶಸ್ವಿ ವಿಕಸಿತ ಭಾರತ ಸಂಕಲ್ಪ ಯಾತ್ರೆ
Viksit Bharat Sankalp Yatra: ಕೇಂದ್ರ ಸರ್ಕಾರದ ಯೋಜನೆಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ಉದ್ದೇಶ ಹೊಂದಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆ ಪ್ರತಿ ಗ್ರಾಮ ಪಂಚಾಯಿತಿಗೂ ತೆರಳುತ್ತಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ವಿಜಯಪುರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಯಶಸ್ವಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕೈಗೊಳ್ಳಲಾಗಿದೆ.
ದಕ್ಷಿಣ ಕನ್ನಡ, ಡಿಸೆಂಬರ್ 11: ಕೇಂದ್ರ ಸರ್ಕಾರದ ಯೋಜನೆಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ಉದ್ದೇಶ ಹೊಂದಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆ (Viksit Bharat Sankalp Yatra) ಪ್ರತಿ ಗ್ರಾಮ ಪಂಚಾಯಿತಿಗೂ ಆಗಮಿಸುತ್ತಿದ್ದು ಕೇಂದ್ರ ಸರ್ಕಾರದ ಯೋಜನೆಗಳನ್ನು ಇನ್ನೂ ತಲುಪದೇ ಇರುವ ಫಲಾನುಭವಿಗಳಿಗೆ ತಲುಪಿಸಬೇಕಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಹೇಳಿದ್ದಾರೆ. ಕಳ್ಳಿಗೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಲಾಯಿತು. ಬ್ಯಾಂಕಿನ ಮೂಲಕ ಅನುಷ್ಠಾನಗೊಳ್ಳುತ್ತಿರುವ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಫಲಾನುಭವಿಗಳಿಗೆ ಆದೇಶ ಪತ್ರಗಳನ್ನು ವಿತರಿಸಲಾಯಿತು. ಬಳಿಕ ಫಲಾನುಭವಿಗಳು ತಮ್ಮ ಅನುಭವನ್ನು ಹಂಚಿಕೊಂಡರು.
18 ರಿಂದ 70 ವರ್ಷದೊಳಗಿನ ಜನರಿಗೆ ವಿಮಾ ಸೌಲಭ್ಯ
ಬಳ್ಳಾರಿ: ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಭಾರತ ಸರ್ಕಾರ ಪ್ರಧಾನ ಮಂತ್ರಿ ಜೀವನ ಸುರಕ್ಷಾ ಭೀಮಾ ಯೋಜನೆ ಜಾರಿಗೆ ತಂದಿದೆ. ಬ್ಯಾಂಕ್ನಲ್ಲಿ ಉಳಿತಾಯ ಖಾತೆ ಹೊಂದಿದವರು ವರ್ಷಕ್ಕೆ 20 ರೂ. ವಿಮೆ ಪಾವತಿಸಿದರೆ ಅಪಘಾತವಾಗಿ ಸಾವನ್ನಪ್ಪಿದರೆ, ವಿಮೆದಾರ ವ್ಯಕ್ತಿಯ ಅವಲಂಬಿತರಿಗೆ 2 ಲಕ್ಷ ರೂ. ದೊರೆಯಲಿದೆ ಎಂದು ಕೆನರಾ ಬ್ಯಾಂಕ್ ಅಧಿಕಾರಿ ದಿನೇಶ್ ತಿಳಿಸಿದ್ದಾರೆ.
ಇದನ್ನೂ ಓದಿ: ವಿಕಸಿತ ಭಾರತದ ಸಂಕಲ್ಪ ಯಾತ್ರೆ, ವಿಕಾಸ ಶೀಲ ಭಾರತದ ಪರಿಕಲ್ಪನೆಗೆ ಇಂಬು ನೀಡಲಿದೆ: ಜ್ಯೋತಿರಾದಿತ್ಯ ಸಿಂಧಿಯಾ
ಕೊಳಗಲ್ಲು ಗ್ರಾಮದಲ್ಲಿ ಜರುಗಿದ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಯೋಜನೆಯಡಿ 18 ರಿಂದ 70 ವರ್ಷದೊಳಗಿನ ಜನರು ವಿಮಾ ಸೌಲಭ್ಯ ಪಡೆಯಬಹುದು ಎಂದಿದ್ದಾರೆ. ಭಾರತ ಸರ್ಕಾರದ ಮುದ್ರಾ, ವಿಶ್ವ ಕರ್ಮ, ಕೃಷಿ ಸಾಲ, ಉಜ್ವಲ, ಆಯುಷ್ಮಾನ್ ಕಾರ್ಡ್ ಸೌಲಭ್ಯ, ಜಲ ಜೀವನ್ ಮೊದಲಾದವುಗಳ ಬಗ್ಗೆ ಮಾಹಿತಿ ನೀಡಲಾಗಿದೆ.
ಕೇಂದ್ರ ಮಹತ್ವದ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ
ವಿಜಯಪುರ: ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಚಿಕ್ಕರೂಗಿ ಹಾಗೂ ಹಿಟ್ನಲ್ಲಿ ಮತ್ತು ಕೊಲ್ಹಾರ್ ತಾಲೂಕಿನ ಮಲಘಾನ ಹಾಗೂ ಹನುಮಾಪುರ ಗ್ರಾಮಗಳಲ್ಲಿ ಕೂಡ ವಿಕಸಿತ ಭಾರತ ಸಂಕಲ್ಪ ಯಾತ್ರೆ ಜರುಗಿತು. ಮಟ್ಟಿಹಾಳ ಕೆನರಾ ಬ್ಯಾಂಕಿನ ಮ್ಯಾನೇಜರ್ ಶಿವಾನಂದ ಕುಂಬಾರ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ, ಪ್ರಮಾಣ ವಿಧಿ ಬೋಧಿಸಿದರು.
ಕೇಂದ್ರ ಸರಕಾರದ ಮಹತ್ವದ ಯೋಜನೆಗಳಾದ ಪಿಎಮ್ ಉಜ್ವಾಲಾ ಯೋಜನೆ, ಪಿಎಮ್ ಕಿಸಾನ್ ಯೋಜನೆ, ಮುದ್ರಾ ಯೋಜನೆ, ಕಿಸಾನ್ ಭೀಮಾ ಯೋಜನೆ ಸೇರಿದಂತೆ ಹಲವಾರು ಯೋಜನೆಗಳ ಕುರಿತು ಸಾರ್ವಜನಿಕರಿಗೆ ವಿವರಿಸಿದರು. ಕೇಂದ್ರ ಸರ್ಕಾರದ ಯೋಜನೆಗಳ ವಿಡಿಯೋ ಪ್ರದರ್ಶನ ಮಾಡುವುದರ ಜೊತೆಗೆ ವಿವಿಧ ಯೋಜನೆಗಳ ಮಾಹಿತಿ ಒಳಗೊಂಡ ಕರಪತ್ರಗಳನ್ನು ಬ್ಯಾಂಕ್ ಸಿಬ್ಬಂದಿಗಳು ವಿತರಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.