ವಿಕಸಿತ ಭಾರತದ ಸಂಕಲ್ಪ ಯಾತ್ರೆ, ವಿಕಾಸ ಶೀಲ ಭಾರತದ ಪರಿಕಲ್ಪನೆಗೆ ಇಂಬು ನೀಡಲಿದೆ: ಜ್ಯೋತಿರಾದಿತ್ಯ ಸಿಂಧಿಯಾ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಆವತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಮತ್ತು ಉಕ್ಕು ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಭಾಗಿಯಾಗಿದ್ದರು.
ದೇವನಹಳ್ಳಿ, ಡಿಸೆಂಬರ್ 09: ಸಮೃದ್ಧ ಭಾರತದ ಸಂಕಲ್ಪ ಈ ವಿಕಸಿತ ಭಾರತದ (Viksit Bharat Sankalp Yatra) ಸಂಕಲ್ಪವಾಗಿದೆ. ಈ ಹೊಸ ಯಾತ್ರೆಯು ವಿಕಾಸ ಶೀಲ ಭಾರತದ ಪರಿಕಲ್ಪನೆಗೆ ಇಂಬು ನೀಡಲಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಮತ್ತು ಉಕ್ಕು ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia) ಹೇಳಿದರು. ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೇವನಹಳ್ಳಿ (Devanahalli) ತಾಲ್ಲೂಕಿನ ಆವತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾರತ ಬಡತನ ಮುಕ್ತವಾಗಬೇಕು. ಸ್ವಚ್ಛ ಭಾರತವಾಗಬೇಕು, ಆರೋಗ್ಯಯುಕ್ತ ಭಾರತವಾಗಬೇಕು ಎಂದರು.
ಬಡವರ ಸಶಸ್ತೀಕರಣವಾಗಬೇಕು ಎಂಬುವ ಸಂಕಲ್ಪಗಳನ್ನು ಹೊಂದಿದೆ. ಪ್ರಧಾನಿಯವರ ಕನಸನ್ನು ನನಸು ಮಾಡಬೇಕಾಗಿರುವುದು ನಮ್ಮೆಲ್ಲರ ಹೊಣೆಯಾಗಿದ್ದು, ಕೇಂದ್ರದ ಜನಪರ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಮುನ್ನಡೆಯಾಗಬೇಕಿದೆ. ಜಿ-20 ಶೃಂಗ ಸಭೆಯ ಅಧ್ಯಕ್ಷತೆ ವಹಿಸಿರುವ ಭಾರತ ವಿಶ್ವಗುರುವಾಗುವತ್ತ ದಿಟ್ಟ ಹೆಜ್ಜೆ ಇಟ್ಟಿದೆ. ಜಗತ್ತಿನಲ್ಲಿ ಮೂರನೇ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮುವ ಸಾಮರ್ಥ್ಯ ಭಾರತ ಹೊಂದಿದೆ. ಭಾರತದ ಸಂತುಷ್ಟೀಕರಣ ನೀತಿ, 9 ವರ್ಷಗಳಿಂದ ಪ್ರಧಾನಿ ಮೋದಿಯವರ ನಿರಂತರ ಪರಿಶ್ರಮ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ತಿಳಿಸಿದರು.
ಉಜ್ವಲ ಯೋಜನೆ, ವಸತಿ ಯೋಜನೆಗಳು ಬಡವರಿಗೆ ನೆರವಾಗಿವೆ. ಡಿಜಿಟಲೀಕರಣ, ಯುಪಿಐ ಪಾವತಿ, ನೇರ ನಗದು ವರ್ಗಾವಣೆಯಿಂದ ಭ್ರಷ್ಟಾಚಾರಕ್ಕೆ ಆಸ್ಪದ ಇಲ್ಲದಂತಾಗಿದೆ. ಪಿಎಂ ಆವಾಸ್ ಯೋಜನೆಯಿಂದ ಲಕ್ಷಾಂತರ ಜನರಿಗೆ ವಸತಿ ಸೌಲಭ್ಯ ನೀಡಲಾಗಿದೆ. ಗ್ರಾಮೀಣ ಜನರಿಗೆ ಜಲಜೀವನ್ ಮಿಷನ್ನಿಂದ ಶುದ್ಧ ಕುಡಿಯುವ ನೀರು ನೀಡಲಾಗುತ್ತಿದೆ. ಜನರ ಆರೋಗ್ಯಕ್ಕಾಗಿ ಆಯುಷ್ಮಾನ್ ಯೋಜನೆ ನೆರವಾಗಿದೆ. ಪಿಎಂ ಸ್ವಾಯತ್ತ ಯೋಜನೆಯಲ್ಲಿ ಡ್ರೋನ್ ಮೂಲಕ ನ್ಯಾನೋ ಯೂರಿಯಾ ಸಿಂಪಡನೆ, ಕಿಸಾನ್ ಸಮ್ಮಾನ್ನಿಂದ ಕೃಷಿಕರಿಗೆ ನೆರವು, ಜನಧನ ಯೋಜನೆ, ವಿಶ್ವಕರ್ಮ ಯೋಜನೆಗಳು ದೇಶದ ಜನರ ಸ್ವಾವಲಂಭನೆ ಬದುಕಿಗೆ ಆಸರೆಯಾಗಿದ್ದು, ಈ ಯೋಜನೆಗಳ ಯಶಸ್ವಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ 1 ಕೋಟಿಗೂ ಅಧಿಕ ಜನರು ಭಾಗಿ
ಬಿಜೆಪಿ ರಾಜ್ಯಾಧ್ಯಕ್ಷ ಶಾಸಕ ಬಿ.ವೈ.ವಿಜಯೇಂದ್ರ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೇರಬೇಕೆಂದು ನಡೆಸುತ್ತಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ಕೇಂದ್ರದ ಯೋಜನೆಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಕಿಸಾನ್ ಸಮ್ಮಾನ್ 50 ಲಕ್ಷ, ಗರೀಬ್ ಕಲ್ಯಾಣ ಯೋಜನೆಯಲ್ಲಿ 1.5 ಕೋಟಿ ಹಾಗೂ ಆಯುಷ್ಮಾನ್ ಭಾರತ್ ಯೋಜನೆಯಲ್ಲಿ 45 ಲಕ್ಷ ಫಲಾನುಭವಿಗಳು ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಆವತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನಿರತ್ನಮ್ಮ, ಕೆನರಾ ಬ್ಯಾಂಕ್ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಮಧುಕರ್ ಮತ್ತಿತರರು ಭಾಗವಹಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:13 pm, Sat, 9 December 23