ಜೋಳದ ರಾಶಿಯಲ್ಲಿ ಆ ದೃಶ್ಯ ಕಂಡು ಗ್ರಾಮಸ್ಥರು ಭಯಗೊಂಡಿದ್ದೇಕೆ? ಮುಂದೇನಾಯ್ತು..
ಚಿರತೆಯ ಬಣ್ಣದ ಹೋಲಿಕೆ ಇದ್ದಿದ್ದರಿಂದ ಚಿರತೆ ಮರಿಗಳು ಕಾಣಿಸಿಕೊಂಡಿವೆ. ಚಿರತೆ ಇಲ್ಲೆಲ್ಲೋ ವಾಸವಾಗಿರಬಹುದೆಂದು ಗ್ರಾಮದ ಕೆಲವರು ಮಾತನಾಡಿಕೊಳ್ಳುತ್ತಿದ್ದರು. ಮರಿಗಳ ಕಣ್ಣು, ಬಣ್ಣ, ಕಾಲಿನ ಉಗುರು ನೋಡಿ ಬಹುತೇಕರು ಗಾಬರಿಗೊಂಡಿದ್ದರು.
ಹಾವೇರಿ: ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಜಿಲ್ಲೆಯ ಹಾನಗಲ್ ತಾಲೂಕಿನ ಕೂಸನೂರು ಗ್ರಾಮದ ಜನರು ಬೆಚ್ಚಿ ಬಿದ್ದಿದ್ದರು. ಗ್ರಾಮದ ಜನರನ್ನು ಎಲ್ಲಿಲ್ಲದ ಭಯ ಕಾಡುವುದಕ್ಕೆ ಶುರುವಾಗಿತ್ತು. ಯಾಕೆಂದರೆ ಗ್ರಾಮದ ಬಳಿ ಇರುವ ರೈತರೊಬ್ಬರ ಮೆಕ್ಕೆ ಜೋಳದ ರಾಶಿಯಲ್ಲಿ ಎರಡು ಮರಿಗಳು ಕಾಣಿಸಿಕೊಂಡಿದ್ದವು. ಜೋಳದ ರಾಶಿಯಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದ ಮರಿಗಳನ್ನು ಕಂಡು ಜಮೀನಿನ ರೈತರು ಮಾತ್ರವಲ್ಲ ಗ್ರಾಮದ ಜನರೆಲ್ಲರು ಭಯಗೊಂಡಿದ್ದರು.
ಚಿರತೆ ಬಂತು ಚಿರತೆ ಜಮೀನಿನಲ್ಲಿ ಕಾಣಿಸಿಕೊಂಡಿದ್ದ ಎರಡು ಮರಿಗಳು ಚಿರತೆಯ ಬಣ್ಣವನ್ನು ಹೋಲುತ್ತಿದ್ದವು. ಮರಿಗಳು ಅಷ್ಟೇನೂ ದೊಡ್ಡದಾಗಿ ಇಲ್ಲದಿದ್ದರೂ ಗ್ರಾಮದಲ್ಲಿನ ಕೆಲವರು ಮಾತ್ರ ಅವುಗಳನ್ನು ಚಿರತೆ ಮರಿಗಳೆಂದು ತಿಳಿದುಕೊಂಡಿದ್ದರು. ಗ್ರಾಮದ ಬಳಿಯ ಜಮೀನಿನಲ್ಲಿ ಎರಡು ಚಿರತೆ ಮರಿಗಳು ಕಾಣಿಸಿಕೊಂಡಿವೆ. ಹೀಗಾಗಿ ಚಿರತೆಗಳು ಊರ ಸಮೀಪಕ್ಕೆ ಬಂದಿವೆ ಎಂದು ಹೆದರಿದ್ದರು.
ಚಿರತೆಯ ಬಣ್ಣದ ಹೋಲಿಕೆ ಇದ್ದಿದ್ದರಿಂದ ಚಿರತೆ ಮರಿಗಳು ಕಾಣಿಸಿಕೊಂಡಿವೆ. ಚಿರತೆ ಇಲ್ಲೆಲ್ಲೋ ವಾಸವಾಗಿರಬಹುದೆಂದು ಗ್ರಾಮದ ಕೆಲವರು ಮಾತನಾಡಿಕೊಂಡರು. ಮರಿಗಳ ಕಣ್ಣು, ಬಣ್ಣ, ಕಾಲಿನ ಉಗುರು ನೋಡಿ ಬಹುತೇಕರು ಗಾಬರಿಗೊಂಡಿದ್ದರು. ಆದರೂ ಕೆಲವರು ಧೈರ್ಯದಿಂದ ಮರಿಗಳನ್ನು ಹಿಡಿದುಕೊಂಡು ಪರೀಕ್ಷೆಗೆ ಮುಂದಾದರು. ಎರಡು ಮರಿಗಳು ಕಾಣಿಸಿಕೊಂಡಿವೆ ಎಂಬ ಸುದ್ದಿ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಸಹ ಸ್ಥಳಕ್ಕೆ ಧಾವಿಸಿದರು.
ದೂರವಾದ ಗ್ರಾಮಸ್ಥರ ಆತಂಕ ಕಾಲಿನ ಉಗುರು, ಕಣ್ಣು, ಬಣ್ಣ ನೋಡಿ ಚಿರತೆ ಮರಿಗಳು ಕಾಣಿಸಿಕೊಂಡಿವೆ ಎಂದು ಭಯದಿಂದ ಓಡಾಡುತ್ತಿದ್ದ ಜನರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದರು. ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಧಾವಿಸಿದ ಹಾನಗಲ್ ವಲಯ ಅರಣ್ಯಾಧಿಕಾರಿ ಪರಮೇಶಪ್ಪ ಪೇಲನವರ ಹಾಗೂ ಇಲಾಖೆ ಸಿಬ್ಬಂದಿ ಮರಿಗಳನ್ನು ನೋಡಿದರು. ನೋಡಿದ ತಕ್ಷಣವೆ ಕ್ಷಣಕಾಲ ಸುಮ್ಮನಾಗಿ ನಕ್ಕುಬಿಟ್ಟರು. ನಂತರ ಮರಿಗಳು ಚಿರತೆ ಮರಿಗಳಲ್ಲ, ಅವು ಪುನುಗು ಬೆಕ್ಕಿನ ಮರಿಗಳೆಂದು ತಿಳಿಸಿ ಎರಡೂ ಮರಿಗಳನ್ನು ಅರಣ್ಯ ಪ್ರದೇಶಕ್ಕೆ ಬಿಟ್ಟು ಗ್ರಾಮಸ್ಥರಲ್ಲಿ ಮನೆ ಮಾಡಿದ್ದ ಆತಂಕವನ್ನು ದೂರ ಮಾಡಿದರು.
ಕೂಸನೂರು ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಎರಡೂ ಮರಿಗಳು ಪುನುಗು ಬೆಕ್ಕಿನ ಮರಿಗಳಾಗಿವೆ. ನಮ್ಮ ಇಲಾಖೆಯ ಸಿಬ್ಬಂದಿ ಸಮೇತರಾಗಿ ನಾವು ಸ್ಥಳಕ್ಕೆ ಭೇಟಿ ನೀಡಿ, ಪುನುಗು ಬೆಕ್ಕಿನ ಮರಿಗಳನ್ನು ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದೇವೆ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಹಾನಗಲ್ ವಲಯ ಅರಣ್ಯಾಧಿಕಾರಿಯಾದ ಪರಮೇಶಪ್ಪ ಪೇಲನವರ ತಿಳಿಸಿದ್ದಾರೆ.
Published On - 11:22 am, Mon, 28 December 20