iPhone ಕಾರ್ಖಾನೆ ಹಿಂಸಾಚಾರ: ಕರ್ನಾಟಕದ ಮಾನ ಉಳಿಸಲು ಸರಕಾರದ ಹರಸಾಹಸ
ಕೋಲಾರ ತಾಲೂಕಿನ ನರಸಾಪುರದಲ್ಲಿ ನಾಲ್ಕು ತಿಂಗಳ ಹಿಂದೆ ಪ್ರಾರಂಭವಾದ ವಿಸ್ಟ್ರಾನ್ ಇನ್ಫೋಕಾಮ್ ಕಾರ್ಖಾನೆ ಮೇಲೆ ನಡೆದ ದಾಳಿ ಬರೀ ಆ ಕಾರ್ಖಾನೆ ಮೇಲಿನ ದಾಳಿ ಅಲ್ಲ, ಇದು ಕರ್ನಾಟಕದ ಪ್ರತಿಷ್ಠೆಗೆ ಕುತ್ತು ತಂದ ಘಟನೆ. ಇದನ್ನು ಸರಿಪಡಿಸಲು ಕರ್ನಾಟಕ ಸರಕಾರ ಕೆಲಸ ಮಾಡುತ್ತಿದೆ.
ಬೆಂಗಳೂರು: ಕೋಲಾರ ತಾಲೂಕಿನ ನರಸಾಪುರದಲ್ಲಿ ನಾಲ್ಕು ತಿಂಗಳ ಹಿಂದೆ ಪ್ರಾರಂಭವಾದ ವಿಸ್ಟ್ರಾನ್ ಇನ್ಫೋಕಾಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ iPhone ಕಾರ್ಖಾನೆಯಲ್ಲಿ ನಡೆದ ಗಲಾಟೆಯಿಂದ ಆ ಕಾರ್ಖಾನೆಗೆ ಮಾತ್ರ ಹಾನಿ ಆಗಿಲ್ಲ. ಇಡೀ ಕರ್ನಾಟಕದ ಪ್ರತಿಷ್ಠೆಗೆ ಹಾನಿ ಉಂಟಾಯಿತು. ಇದು ನಾವು ಹೇಳುತ್ತಿಲ್ಲ. ಸರಕಾರದಲ್ಲಿರುವವರು ಖಾಸಗಿಯಾಗಿ ಹೇಳುವ ಮಾತು.
ಕಾರ್ಮಿಕರು ನಡೆಸಿದ ದಾಳಿಯಲ್ಲಿ ಕಂಪನಿಗೆ ₹ 437.70 ಕೋಟಿ ನಷ್ಟವಾಗಿದ್ದ ಈ ಸಂಬಂಧ, 300ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಹೇಳಿದೆ.
ಕರ್ನಾಟಕದ ರಾಜಕೀಯ ದೊಂಬರಾಟ ಏನೇ ಇರಲಿ, ಕೈಗಾರಿಕೆಗಳಿಗೆ ಉತ್ತೇಜನ ಕೊಡುವ ವಿಚಾರ ಬಂದಾಗ ಎಲ್ಲಾ ಪಕ್ಷದ ಸರಕಾರಗಳು ಶಕ್ತಿಮೀರಿ ಪ್ರಯತ್ನಿಸಿವೆ. ಮೊನ್ನೆ ನಡೆದ ಗಲಾಟೆಯಿಂದ ಕಾರ್ಖಾನೆಗೆ ಹಾನಿಯಾಗಿದ್ದು ಅಷ್ಟೇ ಅಲ್ಲ, ಅಲ್ಲಿ ಇದ್ದ iPhoneಗಳನ್ನು ಕದ್ದುಕೊಂಡು ಹೋದ ಕಾರ್ಮಿಕರ ಕ್ರಿಯೆಯಿಂದಾಗಿ ಕರ್ನಾಟಕದ ಬಗ್ಗೆ ಹೊರ ಜಗತ್ತಿಗೆ ಇದ್ದ ಅಭಿಪ್ರಾಯ ಕೂಡ ಪರೀಕ್ಷೆಗೆ ಒಳಪಡುವಂತಾಯ್ತು.
ಈ ಕಾರ್ಖಾನೆ ಯಾವ ಕಾರಣಕ್ಕೂ ಮುಚ್ಚಬಾರದು. ಅದೇ ಉದ್ದೇಶದಿಂದ ನಾವು ಈಗಾಗಲೇ ಈ ಕಾರ್ಖಾನೆಯ ಮೂಲ ಪಿತೃಗಳು ಇರುವ ಕ್ಯಾಲಿಫೋರ್ನಿಯಾ ಮತ್ತು ತೈಪೇ ಯಲ್ಲಿ ಇರುವ ಮುಖ್ಯಸ್ಥರ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಏನು ಮಾತನಾಡುತ್ತಿದ್ದೇವೆ ಎಂದು ಈಗ ಹೇಳಲಾಗದು. ಆದರೆ ನಮ್ಮ ಉದ್ದೇಶ ಇಷ್ಟೇ: ಯಾವ ಕಾರಣಕ್ಕೂ ಕಾರ್ಖಾನೆ ಮುಚ್ಚಬಾರದು ಅಂತ.
ಸರಕಾರ ಈ ಹಂತದಲ್ಲಿ ಕಾರ್ಖಾನೆ ಮತ್ತು ಕಾರ್ಮಿಕರ ನಡುವೆ ಮಧ್ಯ ಪ್ರವೇಶಿಸುವುದಿಲ್ಲ. ಮೊದಲು ಅಲ್ಲಿ ಎಷ್ಟು ಹಾನಿ ಆಗಿದೆ ಎಂಬ ಲೆಕ್ಕಾಚಾರವಾಗಿ ಕಾರ್ಖಾನೆಯ ಸ್ಥಳೀಯ ಮಾಲೀಕರಿಗೆ ವಿಮೆ ಹಣ ಪಾವತಿಯಾಗಬೇಕು. ಅಷ್ಟೇ ಅಲ್ಲ, ಆದಷ್ಟು ಬೇಗ ಕಾರ್ಖಾನೆ ಪುನರಾರಂಭಗೊಳ್ಳಬೇಕು. ಎರಡನೆಯದಾಗಿ ನೌಕರರಿಗೆ ಬಾಕಿ ವೇತನ ಹಣ ಮತ್ತು ಇನ್ನಿತರೆ ಸೌಲಭ್ಯ ನೀಡಬೇಕು. ಅದಾದ ಮೇಲೆ ಈ ಇಬ್ಬರ ನಡುವೆ ಒಂದು ಮಾತುಕತೆಯ ವಾತಾವರಣ ನಿರ್ಮಾಣ ಆಗಬೇಕು. ಆಗ ಸರಕಾರ ಮಧ್ಯೆಪ್ರವೇಶಿಸಿದರೆ ಅದಕ್ಕೊಂದು ಅರ್ಥವಿರುತ್ತದೆ. ಇವೆಲ್ಲವನ್ನೂ ಮಾಡಲು ಏನೇನು ಕ್ರಮ ತೆಗೆದುಕೊಳ್ಳಬೇಕೋ, ಅದನ್ನು ಸರಕಾರ ಮಾಡುತ್ತಿದೆ ಎಂದು ಈ ಕುರಿತು ಮಾಹಿತಿ ಇರುವ ಅಧಿಕಾರಿ ಹೇಳಿದ್ದಾರೆ.
ಯಾಕೆ ಸರಕಾರ ಇಂಥ ತಂತ್ರಗಾರಿಕೆಗೆ ಒಪ್ಪಿಕೊಂಡಿದೆ ಎಂದು ಕೇಳಿದಾಗ, ಹೀಗೆ ಮಾಡುವ ಮೂಲಕ ಕರ್ನಾಟಕದಲ್ಲಿ ಹೂಡಿಕೆ ಮಾಡಲು ಬರುವ ಉದ್ಯಮಿಗಳಿಗೆ ಒಂದು ಸಕಾರಾತ್ಮಕ ಸೂಚನೆ ಹೋಗುತ್ತೆ. ಇಲ್ಲಾಂದ್ರೆ ಈ ಘಟನೆ ಒಂದು ಕಪ್ಪು ಚುಕ್ಕೆಯಾಗಿ ನಮಗೆ ಮುಂದಿನ ದಿನಗಳಲ್ಲಿ ಬಂಡವಾಳ ಹೂಡಿಕೆಗೆ ಸಮಸ್ಯೆಯಾಗಬಹುದು, ಎಂದು ಈ ಕುರಿತು ಮಾಹಿತಿ ಇರುವ ಅಧಿಕಾರಿರ್ಯೋರು ಹೇಳಿದರು.
Published On - 2:02 pm, Mon, 14 December 20