ಕಳ್ಳತನ ಮಾಡಿ ಖಾರದಪುಡಿ ಮನೆ ತುಂಬಾ ಚೆಲ್ಲುತ್ತಿದ್ದ ಅಸಲಿ ಕಾರಣ ಬಯಲು; ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

| Updated By: preethi shettigar

Updated on: Jun 09, 2021 | 5:08 PM

ಕಳ್ಳತನ ಮಾಡಿದ ದಿನ ಕಳ್ಳರು ಓಡಾಡುತ್ತಿದ್ದ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿತ್ತು. ಅದನ್ನೇ ಆಧಾರವಾಗಿಟ್ಟುಕೊಂಡು ಶಿವಮೊಗ್ಗ ನಗರದ ಶಾಬಾಜ್ (19) ಮತ್ತು ಆದಿಲ್ (20)  ಎಂಬ ಇಬ್ಬರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

ಕಳ್ಳತನ ಮಾಡಿ ಖಾರದಪುಡಿ ಮನೆ ತುಂಬಾ ಚೆಲ್ಲುತ್ತಿದ್ದ ಅಸಲಿ ಕಾರಣ ಬಯಲು; ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ
ಸಿಸಿ ಕ್ಯಾಮರಾದಲ್ಲಿ ಕಳ್ಳತನದ ದೃಶ್ಯ ಸೆರೆ
Follow us on

ಶಿವಮೊಗ್ಗ: ಕೊರೊನಾ ಎರಡನೇ ಅಲೆ ತೀವ್ರತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಲಾಕ್​ಡೌನ್ ಜಾರಿಗೆ ತರಲಾಗಿದೆ. ಆದರೆ ಇದನ್ನೇ ಬಂಡವಾಳವಾಗಿಸಿಕೊಂಡ ಕೆಲವು ಕಿಡಿಗೇಡುಗಳು ಕಳ್ಳತನಕ್ಕೆ ಮುಂದಾಗಿದ್ದಾರೆ. ಲಾಕ್​ಡೌನ್ ಆರಂಭವಾದ ದಿನದಿಂದ ಶಿವಮೊಗ್ಗ ನಗರದಲ್ಲಿ ಮನೆಗಳ್ಳರ ಕಾಟ ಹೆಚ್ಚಾಗಿತ್ತು. ಮನೆಗಳ್ಳತನ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚುತ್ತಿದ್ದ ಕಳ್ಳರು. ಕಳ್ಳತನ ಮಾಡಿದ ಮನೆಯಲ್ಲಿ ಖಾರದಪುಡಿಯನ್ನು ಚೆಲ್ಲಿ ಹೋಗುತಿದ್ದರು. ಆದರೆ ಈ ರೀತಿಯ ನಡೆದುಕೊಳ್ಳಲು ಕಾರಣ ತಿಳಿದಿರಲಿಲ್ಲ. ಸದ್ಯ ಶಿವಮೊಗ್ಗ ನಗರ ಪೊಲೀಸರು ಕಳ್ಳರನ್ನು ಬಂಧಿಸಿದ್ದು, ಖಾರದಪುಡಿ ಚೆಲ್ಲುವ ಹಿಂದಿನ ಸತ್ಯ ಬೆಳಕಿಗೆ ಬಂದಿದೆ.

ಶಿವಮೊಗ್ಗದ ಸೋಮಯ್ಯ ಲೇಔಟ್​ನಲ್ಲಿ ಮೇ 25 ರಂದು ಶಿಕ್ಷಕ ಪ್ರಭಾಕರ್ ಮನೆ ಬಾಗಿಲು ಮುರಿದು ಒಳಗೆ ನುಗ್ಗಿದ ಕಳ್ಳರು. ಟಿಜೋರಿ ಮುರಿದು ಅದರಲ್ಲಿದ್ದ 196 ಗ್ರಾಂ ಚಿನ್ನಾಭಾರಣ, ಬೆಳ್ಳಿ ಹಾಗೂ 80 ಸಾವಿರ ರೂಪಾಯಿ ನಗದು ದೋಚಿಕೊಂಡು ಹೋಗಿದ್ದರು. ಹೀಗೆ ಹೋಗುವಾಗ ಮನೆಯ ತುಂಬಾ ಖಾರದ ಪುಡಿ ಚೆಲ್ಲಿ ಹೋಗಿದ್ದಾರೆ. ಅದರಂತೆ ಮೇ ತಿಂಗಳ ಕೊನೆಯ ವಾರದಲ್ಲಿ ಶಿವಮೊಗ್ಗ ನಗರದಲ್ಲಿ ಐದು ಮನೆಗಳ್ಳತವಾಗಿತ್ತು.

ಕೋಟೆ ಪೊಲೀಸರು ಈ ಕಳ್ಳತನ ಪ್ರಕರಣಗಳನ್ನು ದಾಖಲಸಿಕೊಂಡು ಕಳ್ಳರ ಪತ್ತೆಗೆ ಜಾಲಬೀಸಿದ್ದರು. ಕೊನೆಗೂ ಖಾರದ ಪುಡಿ ಚೆಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕಳ್ಳತನ ಮಾಡಿದ ದಿನ ಕಳ್ಳರು ಓಡಾಡುತ್ತಿದ್ದ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿತ್ತು. ಅದನ್ನೇ ಆಧಾರವಾಗಿಟ್ಟುಕೊಂಡು ಶಿವಮೊಗ್ಗ ನಗರದ ಶಾಬಾಜ್ (19) ಮತ್ತು ಆದಿಲ್ (20)  ಎಂಬ ಇಬ್ಬರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

ಕಳ್ಳತನ ನಡೆದ ದಿನ ಇವರು ಸಂಜೆ ಬಂದು ಮೊದಲು ಮನೆ ನೋಡಿ ಹೋಗಿದ್ದಾರೆ. ಮನೆಯಲ್ಲಿ ಯಾರು ಇಲ್ಲದಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ. ಬಳಿಕ ಅದೇ ದಿನ ಬೆಳಗಿನಜಾವ ಈ ಇಬ್ಬರು ಕಳ್ಳರು ಮನೆಗೆ ನುಗ್ಗಿ ಕಳ್ಳತನ ಮಾಡಿದ್ದಾರೆ. ಇನ್ನು ತನಿಖೆ ವೇಳೆ ಖಾರದ ಪುಡಿ ಚೆಲ್ಲಿ ಹೋಗುತ್ತಿದ್ದ ಬಗ್ಗೆ ತಿಳಿಸಿದ್ದು, ಪೊಲೀಸರಿಗಾಗಲಿ, ಶ್ವಾನಗಳಿಗಾಗಲಿ ಹೆಜ್ಜೆ ಗುರುತು ಸಿಗಬಾರದು ಎಂಬ ಕಾರಣಕ್ಕೆ ಈ ರೀತಿ ಮಾಡಿರುವುದನ್ನು ತಿಳಿಸಿದ್ದಾರೆ ಎಂದು ಶಿವಮೊಗ್ಗ ಎಸ್ಪಿ ಲಕ್ಷ್ಮಿಪ್ರಸಾದ್ ಮಾಹಿತಿ ನೀಡಿದ್ದಾರೆ.

ಖಾರದಪುಡಿ ಕಳ್ಳರಿಂದ 112 ಗ್ರಾಂ ಚಿನ್ನಾಭಾರಣ, 24 ಸಾವಿರ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಈ ಇಬ್ಬರು ಈಗಾಗಲೇ ಅನೇಕ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಸದ್ಯ ಈಗ ಇಬ್ಬರು ಪೊಲೀಸರ ವಶದಲ್ಲಿದ್ದು, ಇನ್ನಿತರ ಕಳ್ಳತನದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ:

ಕೊರೊನಾ ಕಾಲದಲ್ಲಿಯೂ ಕಳ್ಳರ ಭಂಡತನ: ನಾಗಲಿಂಗೇಶ್ವರ ದೇಗುಲ ಹುಂಡಿ ಕಳ್ಳತನ

ಕಳ್ಳರಿಗೆ ಸಹಾಯ ಮಾಡಲು ಹೋಗಿ ಕಳ್ಳತನಕ್ಕೆ ಇಳಿದ ಪೊಲೀಸ್ ಅಧಿಕಾರಿಗಳು; ಎಸ್‌ಪಿ ತನಿಖೆಯಲ್ಲಿ ಬಯಲಾಯ್ತು ಸತ್ಯ