ಕಳ್ಳರಿಗೆ ಸಹಾಯ ಮಾಡಲು ಹೋಗಿ ಕಳ್ಳತನಕ್ಕೆ ಇಳಿದ ಪೊಲೀಸ್ ಅಧಿಕಾರಿಗಳು; ಎಸ್‌ಪಿ ತನಿಖೆಯಲ್ಲಿ ಬಯಲಾಯ್ತು ಸತ್ಯ

ಕಾರು ಕೊಡಿಸಲು ಮುಂದಾಗಿದ್ದ ಡೀಲರ್ ಕಿರಣ್‌ಗೆ ಕಾರಿನ ಏರ್‌ ಬಲೂನ್‌ ಇರುವ ಜಾಗದಲ್ಲಿ ಎರಡೂವರೆ ಕೋಟಿ ರೂಪಾಯಿ ಮೌಲ್ಯದ 4ಕೆಜಿ 900 ಗ್ರಾಂ ಚಿನ್ನ ಅಡಗಿಸಿಟ್ಟಿರುವ ಬಗ್ಗೆ ಗೊತ್ತಾಗಿದೆ. ಆಗ ಕಿರಣ್, ಗೋಕಾಕ್ ಡಿವೈಎಸ್‌ಪಿ ಜಾವೇದ್ ಇಬ್ಬರು ಸೇರಿ ಚಿನ್ನ ಎಗರಿಸಿದ್ದಾರೆ. ಬಳಿಕ ಹುಬ್ಬಳ್ಳಿಯಲ್ಲಿರುವ ಚಿನ್ನದ ವ್ಯಾಪಾರಿಗೆ ಮಾರಿದ್ದಾರೆ.

ಕಳ್ಳರಿಗೆ ಸಹಾಯ ಮಾಡಲು ಹೋಗಿ ಕಳ್ಳತನಕ್ಕೆ ಇಳಿದ ಪೊಲೀಸ್ ಅಧಿಕಾರಿಗಳು; ಎಸ್‌ಪಿ ತನಿಖೆಯಲ್ಲಿ ಬಯಲಾಯ್ತು ಸತ್ಯ
ಚಿನ್ನ ಸಾಗಿಸುತ್ತಿದ್ದ ಕಾರು
Follow us
|

Updated on: May 21, 2021 | 11:46 AM

ಬೆಳಗಾವಿ: ಚಿನ್ನ ಕಳ್ಳ ಸಾಗಣಿಕೆಗೆ ಸಹಾಯ ಮಾಡಿದ ಮೂವರು ಪೊಲೀಸ್ ಅಧಿಕಾರಿಗಳನ್ನು ಬೇರೆಕಡೆಗೆ ವರ್ಗಾಯಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಕಳ್ಳರನ್ನ ಹಿಡಿಯಬೇಕಾದವರೇ ಕಳ್ಳಾಟಕ್ಕೆ ಇಳಿದಿದ್ದು, ರಕ್ಷಣೆ ಕೊಡಬೇಕಾದವರೇ ಇಲ್ಲಿ ಭಕ್ಷಕರಾಗಿದ್ದಾರೆ. ಚಿನ್ನವನ್ನು ಹೊತ್ತೋಯ್ಯುತ್ತಿದ್ದ ಕಳ್ಳರನ್ನು ಜೈಲಿಗೆ ಅಟ್ಟಬೇಕಾದ ಅಧಿಕಾರಿಗಳು ಕಳ್ಳರ ಜತೆಗೆ ಸೇರಿ ಕಾನೂನುಬಾಹಿರ ಚುವಟಿಕೆಯಲ್ಲಿ ತೊಡಗಿದ್ದರು. ಸದ್ಯ ಈ ವಿಷಯ ಬೆಳಕಿಗೆ ಬಂದಿದ್ದು, ಅಧಿಕಾರಿಗಳ ಕಳ್ಳಾಟ ಬಯಲಾಗಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದಲ್ಲಿರುವ ಪೊಲೀಸ್ ಠಾಣೆಯಲ್ಲಿ ನಡೆದ ಅದೊಂದು ಘಟನೆಗೆ ಇದೀಗ ಮೂವರ ತಲೆ ದಂಡವಾಗಿದೆ. ಗೋಕಾಕ್ ಡಿವೈಎಸ್‌ಪಿ ಜಾವೇದ್ ಇನಾಮದಾರ್, ಸಿಪಿಐ ಕಲ್ಯಾಣ್ ಶೆಟ್ಟಿ, ಪಿಎಸ್ಐ ರಮೇಶ್ ಪಾಟೀಲ್‌ಗೆ ಸರ್ಕಾರ ವರ್ಗಾವಣೆ ಮಾಡಿದ್ದು, ಮೂವರನ್ನೂ ಮೂರು ದಿಕ್ಕಿಗೆ ಕಳುಹಿಸಿದೆ. 2021 ಜನವರಿ 9 ರಂದು ಮಂಗಳೂರಿನಿಂದ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಮೇಲೆ ಎರ್ಟಿಗಾ ಕಾರ್ ಒಂದು ಮುಂಬೈನತ್ತ ಹೋಗುತ್ತಿತ್ತು, ಈ ಕಾರಿನಲ್ಲಿ ಅಕ್ರಮವಾಗಿ ಚಿನ್ನ ಸಾಗಿಸಲಾಗುತ್ತಿದೆ‌ ಎಂದು ಐಜಿಪಿ ರಾಘವೇಂದ್ರ ಸುಹಾಸ್​ಗೆ ಮಾಹಿತಿ ಬರುತ್ತದೆ. ಇದೇ ಮಾಹಿತಿ ಇಟ್ಟುಕೊಂಡು ಐಜಿಪಿ ಯಮಕನಮರಡಿ ಪೊಲೀಸ್ ಸಿಪಿಐ ಹಾಗೂ ಪಿಎಸ್ಐಗೆ ಕರೆ ಮಾಡಿ ತಪಾಸಣೆ ಮಾಡುವಂತೆ ಸೂಚಿಸುತ್ತಾರೆ.‌

ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ನೀಡಿದ ಮಾಹಿತಿ ಮೇರೆಗೆ ಕಾರು ತಪಾಸಣೆ ಮಾಡುತ್ತಾರೆ. ಕಾರಿನಲ್ಲಿ ಚಿನ್ನ ಸಿಗಲಿಲ್ಲ. ಆದರೆ ಕಾರ್ ಒಳಭಾಗದಲ್ಲಿ ಮಾಡಿಫೈ ಮಾಡಿರುವ ಕಾರಣಕ್ಕೆ 96kp ಆಕ್ಟ್​ನಲ್ಲಿ ಕೇಸ್ ಹಾಕಲಾಯಿತು. ಯಮಕನಮರಡಿ ಪೊಲೀಸರು ಪ್ರಕರಣ ದಾಖಲಿಸಿ ಕೋರ್ಟ್​ನಿಂದ ಕಾರು ಬಿಡಿಸಿಕೊಳ್ಳುವಂತೆ ಕಾರಿನ ಮಾಲೀಕರಿಗೆ ಸೂಚಿಸಿದ್ದಾರೆ. ಆದರೆ ಕಾರಿನಲ್ಲಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಚಿನ್ನ ಇರುವ ಕಾರಣಕ್ಕೆ ಹೇಗಾದರೂ ಮಾಡಿ ಕಾರು ಬಿಡಿಸಿಕೊಳ್ಳಬೇಕು ಎಂದುಕೊಂಡ ಕಾರಿನ ಮಾಲೀಕ ತಿಲಕ್ ಪೂಜಾರಿ ಕಾರು ಬಿಡಿಸುವಂತೆ ಮಂಗಳೂರಿನಲ್ಲಿದ್ದ ಮೀಡಿಯೆಟ‌ರ್‌ಗೆ ಕರೆ ಮಾಡುತ್ತಾರೆ.

ಮಂಗಳೂರಿನ ಮೀಡಿಯೆಟರ್ ಕಿರಣ್ ವೀರಣಗೌಡರ್​ಗೆ ಕರೆ ಮಾಡಿದ ಕಾರ್​ ಮಾಲಿಕ ತಿಲಕ್ ಪೂಜಾರಿ ಕಾರು ಬಿಡಿಸಿಕೊಡುವಂತೆ ಹೇಳುತ್ತಾರೆ. ಇನ್ನೂ ಜನವರಿ 10 ರಂದು ಕಾರು ಬಿಡಿಸಿಕೊಡಲು ಒಪ್ಪಿದ ಕಿರಣ್ 60 ಲಕ್ಷಕ್ಕೆ ಬೇಡಿಕೆ ಇಡುತ್ತಾನೆ. ಇದಕ್ಕೆ ಒಪ್ಪದ ತಿಲಕ್ ಪೂಜಾರಿ ಕಡೆಗೂ 30 ಲಕ್ಷಕ್ಕೆ ಓಕೆ ಎನ್ನುತಾನೆ. ಜತೆಗೆ ಅಡ್ವಾನ್ಸ್ ಆಗಿ ಕಿರಣ್‌ಗೆ 25 ಲಕ್ಷ ಕೊಟ್ಟಿರುತ್ತಾನೆ. ನಂತರ ಹಿರಿಯ ಅಧಿಕಾರಿಯೊಬ್ಬರಿಗೆ ಕರೆ ಮಾಡಿ ಕಾರು ಬಿಡಿಸುವಂತೆ ಕಿರಣ್ ಹೇಳುತ್ತಾನೆ.

ಇದಾದ ಬಳಿಕ ಯಮಕನಮರಡಿ ಪೊಲೀಸ್ ಠಾಣೆ ಪಿಎಸ್ಐ ರಮೇಶ್ ಪಾಟೀಲ್​ಗೆ ಕರೆ ಮಾಡಿ ಕಾರು ಬಿಡುವಂತೆ ಹೇಳಿ ಹಿರಿಯ ಅಧಿಕಾರಿ ಒತ್ತಡ ಹೇರಿದ್ದಾರೆ. ಕೇಸ್ ಆಗಿದ್ದು ನಾವೇನೂ ಮಾಡಲು ಆಗಲ್ಲಾ ಎಂದು ಪಿಎಸ್ಐ ಆ ಹಿರಿಯ ಅಧಿಕಾರಿಗೆ ಹೇಳುತ್ತಾರೆ. ಇನ್ನೂ ಕೋರ್ಟ್​ನಲ್ಲಿ ಈ ಪ್ರಕರಣಕ್ಕೆ ಎರಡು ತಿಂಗಳ ನಂತರ ದಿನಾಂಕ ನೀಡುತ್ತಾರೆ. ಇದಾದ ಬಳಿಕ ಪಿಎಸ್ಐ ಮೂಲಕ ಕೆಲವು ಬಾರಿ ಒತ್ತಡ ಹೇರಿ ಕಾರು ಬಿಡಿಸಲು ಯತ್ನ ಕೂಡ ಹಿರಿಯ ಅಧಿಕಾರಿ ಮಾಡುತ್ತಾರೆ. ಆದರೆ ಯಾವುದೇ ಪ್ರಯೋಜನವಾಗುವುದಿಲ್ಲ.

ಹೀಗಾಗಿ ಗೋಕಾಕ್ ಡಿವೈಎಸ್‌ಪಿ ಜಾವೇದ್ ಇನಾಮ್‌ದಾರ್ ಜೊತೆಗೂಡಿ ಕಾರು ಮಾಲೀಕ ತಿಲಕ್ ಮತ್ತು ಮೀಡಿಯೇಟರ್ ಕಿರಣ್ ಫೆಬ್ರವರಿ 28ರ ಮಧ್ಯರಾತ್ರಿ ಕಾರು ಕದಿಯೋಕೆ ಮುಂದಾಗಿದ್ದಾರೆ. ಆಗ ಕಾರಿನಿಂದ ಜೋರಾಗಿ ಶಬ್ಧವಾಗಿದ್ದು, ಕಾರು ಕದಿಯಲು ಸಾಧ್ಯವಾಗಲಿಲ್ಲ. ಈ ವೇಳೆ ಕಾರು ಕೊಡಿಸಲು ಮುಂದಾಗಿದ್ದ ಡೀಲರ್ ಕಿರಣ್‌ಗೆ ಕಾರಿನ ಏರ್‌ ಬಲೂನ್‌ ಇರುವ ಜಾಗದಲ್ಲಿ ಎರಡೂವರೆ ಕೋಟಿ ರೂಪಾಯಿ ಮೌಲ್ಯದ 4 ಕೆಜಿ 900 ಗ್ರಾಂ ಚಿನ್ನ ಅಡಗಿಸಿಟ್ಟಿರುವ ಬಗ್ಗೆ ಗೊತ್ತಾಗಿದೆ. ಆಗ ಕಿರಣ್, ಗೋಕಾಕ್ ಡಿವೈಎಸ್‌ಪಿ ಜಾವೇದ್ ಇಬ್ಬರು ಸೇರಿ ಚಿನ್ನ ಎಗರಿಸಿದ್ದಾರೆ. ಬಳಿಕ ಹುಬ್ಬಳ್ಳಿಯಲ್ಲಿರುವ ಚಿನ್ನದ ವ್ಯಾಪಾರಿಗೆ ಮಾರಿದ್ದಾರೆ.

ಬಳಿಕ ಕಾರು ಮಾಲೀಕ ತಿಲಕ್ ಪೂಜಾರಿ ಕೋರ್ಟ್‌ನಲ್ಲಿ ಫೈನ್ ಕಟ್ಟಿ, ಠಾಣೆಯಿಂದ ಕಾರು ಬಿಡಿಸಿಕೊಂಡಿದ್ದಾರೆ. ಆದರೆ ಕಾರಿನಲ್ಲಿದ್ದ ಚಿನ್ನ ನಾಪತ್ತೆಯಾಗಿರುವುದನ್ನು ಕಂಡು ಶಾಕ್ ಆಗಿದ್ದಾನೆ. ಕೂಡಲೇ ತಿಲಕ್ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್‌ಗೆ ದೂರು ನೀಡಿದ್ದಾನೆ. ಬಳಿಕ ಕೇಸ್ ಉಸ್ತುವಾರಿ ಬೆಳಗಾವಿ ಎಸ್‌ಪಿ ಲಕ್ಷ್ಮಣ್ ನಿಂಬರಗಿ ಹೆಗಲಿದೆ ಬಿದ್ದಿದ್ದೆ.

ಎಸ್‌ಪಿ ತನಿಖೆಯಲ್ಲಿ ಬಯಲಾಯ್ತು ಸತ್ಯ ಎಸ್‌ಪಿ ನಡೆಸಿದ ತನಿಖೆಯಲ್ಲಿ  ಡೀಲರ್ ಕಿರಣ್, ಗೋಕಾಕ್ ಡಿವೈಎಸ್‌ಪಿ ಜಾವೇದ್ ಇನಾಮ್‌ದಾರ್, ಯಮಕನಮರಡಿ ಠಾಣೆ ಪಿಎಸ್‌ಐ ರಮೇಶ್ ಪಾಟೀಲ್, ಓರ್ವ ಪೇದೆ ಸೇರಿದಂತೆ ಹಿರಿಯ ಅಧಿಕಾರಿಯೊಬ್ಬರ ಕೈವಾಡವಿರುವುದು ಪತ್ತೆಯಾಗಿದೆ. ಆರೋಪಿ ಕಿರಣ್ ಹಾಗೂ ಹಿರಿಯ ಅಧಿಕಾರಿಯೊಬ್ಬರು ನಡೆಸಿರುವ ಸಂಭಾಷಣೆಯೂ ಸಿಕ್ಕಿದೆ. ಇದೀಗ ಚಿನ್ನದ ಕೇಸ್ ಸಿಐಡಿಗೆ ಹಸ್ತಾಂತರವಾಗಿದ್ದು, ತನಿಖೆ ಚುರುಕುಗೊಂಡಿದೆ. ಸದ್ಯದಲ್ಲೇ ಚಿನ್ನ ಕದ್ದ ಖಾಕಿ ಮುಖಗಳು ಬಯಲಾಗಲಿದೆ.

ಸದ್ಯ ಗೋಕಾಕ್ ಡಿವೈಎಸ್‌ಪಿ ಇನಾಮದಾರ್​ನನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿದ್ರೇ, ಇತ್ತ ಸಿಪಿಐ ಕಲ್ಯಾಣ್ ಶೆಟ್ಟಿಗೆ ಧಾರವಾಡಕ್ಕೆ ವರ್ಗಾವಣೆ, ಪಿಎಸ್ಐ ರಮೇಶ್ ಪಾಟೀಲ್​ಗೆ ಸಿಇಎನ್ ಹುಬ್ಬಳ್ಳಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಒಟ್ಟಾರೆ ಪೊಲೀಸ್ ಇಲಾಖೆಯಲ್ಲೇ ಇದ್ದುಕೊಂಡು ಕಳ್ಳತನ ಮಾಡಿದ ಆರೋಪಿಗಳಿಗೆ ಶಿಕ್ಷೆಯಾಗಬೇಕು.

ಇದನ್ನೂ ಓದಿ:

ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣ: ಜಾರಿ ನಿರ್ದೇಶನಾಲಯದ ವಿರುದ್ಧ ಪೊಲೀಸ್ ತನಿಖೆಗೆ ತಡೆಯಾಜ್ಞೆ ನೀಡಲು ಕೇರಳ ಹೈಕೋರ್ಟ್ ನಕಾರ