ಕನಕಪುರ, (ಜುಲೈ 06): “ದೇಶದಲ್ಲಿ ಓಬಿಸಿಗಳ ಸಂಖ್ಯೆ ವ್ಯಾಪಕವಾಗಿದೆ. ಒಕ್ಕಲಿಗರು (Vokkaliga) ಹಾಗೂ ಲಿಂಗಾಯತರು (Lingayat) ರಾಷ್ಟ್ರಮಟ್ಟದಲ್ಲಿ ಓಬಿಸಿಗಳೇ. ಸಮಾಜದಲ್ಲಿ ಹಿಂದುಳಿದ ವರ್ಗಗಳ ಜನರನ್ನು ಮುನ್ನೆಲೆಗೆ ತರಬೇಕು ಎಂದು ಓಬಿಸಿ ಸಲಹಾ ಸಮಿತಿ ಸಭೆ ನಡೆಸಲಾಗುತ್ತಿದೆ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಹೇಳಿದರು.
ಕನಕಪುರದ ಬಿಜ್ಜಹಳ್ಳಿಯಲ್ಲಿ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಭಾನುವಾರ ಉತ್ತರಿಸಿದ ಅವರು, ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ ಅವರನ್ನು ಕಳುಹಿಸಲು ಅವರಿಗೆ ಪಕ್ಷದ ಓಬಿಸಿ ಸಲಹಾ ಮಂಡಳಿ ಜವಾಬ್ದಾರಿ ನೀಡಿದ್ದಾರೆ ಎನ್ನುವ ಬಿಜೆಪಿ ಟೀಕೆಯ ಬಗ್ಗೆ ಕೇಳಿದಾಗ, “ಪಕ್ಷದಲ್ಲಿ ಅಲ್ಪಸಂಖ್ಯಾತ, ಪರಿಶಿಷ್ಟ ಸೇರಿದಂತೆ ಇದೇ ರೀತಿ ಅನೇಕ ಘಟಕಗಳಿವೆ. ಅಲ್ಪಸಂಖ್ಯಾತರಲ್ಲಿ ಜೈನ, ಸಿಖ್ ಧರ್ಮದವರೂ ಸೇರುತ್ತಾರೆ. ಇದನ್ನೆಲ್ಲಾ ಟೀಕೆ ಮಾಡಲಿಲ್ಲ ಎಂದರೆ ಬಿಜೆಪಿಯವರಿಗೆ ಸಮಾಧಾನವಾಗಬೇಕಲ್ಲ. ಟೀಕೆಗಳು ಸಾಯುತ್ತವೆ. ಕೆಲಸಗಳು ಉಳಿಯುತ್ತವೆ” ಎಂದರು.
“ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿ ಇರುವ ಕಾರಣಕ್ಕೆ ಪಕ್ಷದ ಓಬಿಸಿ ಸಲಹಾ ಮಂಡಳಿಯ ಸಭೆ ಕೆಪಿಸಿಸಿ ಕಚೇರಿಯಲ್ಲಿಯೇ ನಡೆಯಲಿ ಎಂದು ಸಲಹೆ ನೀಡಿದ್ದೆ. ಅದರಂತೆ ಇಲ್ಲಿ ಸಭೆ ಏರ್ಪಡಿಸಲಾಗಿದೆ. ರಾಷ್ಟ್ರಮಟ್ಟದ ಸುಮಾರು 40 ಕ್ಕೂ ಹೆಚ್ಚು ನಾಯಕರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ” ಎಂದು ತಿಳಿಸಿದರು.
ಇನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಕೋಡಿಹಳ್ಳಿ ಹೋಬಳಿಯ ಸಿದ್ದೇಶ್ವರಸ್ವಾಮಿ ಬೆಟ್ಟದಲ್ಲಿ ಮೆಟ್ಟಿಲುಗಳ ಉದ್ಘಾಟನೆ ಹಾಗೂ ಧರ್ಮಜಾಗೃತಿ ಸಮಾರಂಭದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಶ್ರೀಮದ್ರಂಭಾಪುರಿ ವೀರಗಂಗಾಧರಜ್ಜಯ್ಯನವರು ‘ಧರ್ಮದಿಂದಲೇ ಶಾಂತಿ ವಿಶ್ವಕ್ಕೆ ಧರ್ಮಕ್ಕೆ ಜಯವಾಗಲಿ. ನಾಡು ಧರ್ಮ ಸಾಮ್ರಾಜ್ಯವಾಗಲಿ. ಭಕ್ತಿಯುತ ಬೀಡಾಗಲಿ. ಧರ್ಮಕ್ಕಾಗಿ ಏಳಿರಿ, ಧರ್ಮಕ್ಕಾಗಿ ಬಾಳಿರಿ, ಧರ್ಮಕ್ಕಾಗಿ ತಾಳಿರಿ’ ಎಂಬ ಅದ್ಭುತ ಸಂದೇಶ ಸಾರಿದ್ದಾರೆ ಎಂದರು.
ಧರ್ಮ- ದೇವರನ್ನು ನಾವು ಎಂದಿಗೂ ಮರೆಯಬಾರದು. ಹಿರಿಯರು ‘ಮನೆ ಹುಷಾರು, ಮಠ ಹುಷಾರು’ ಎಂದಿದ್ದಾರೆ. ತಾಯಿ- ತಂದೆ- ಗುರು ಸಮಾಜದ ಮೂರು ಕಣ್ಣುಗಳು. ಹುಟ್ಟುವಾಗ ಯಾರೂ ಇದೇ ಧರ್ಮದಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕಿಕೊಂಡು ಹುಟ್ಟುವುದಿಲ್ಲ. ‘ಧರ್ಮ ಯಾವುದಾದರೂ ತತ್ವ ಒಂದೇ, ನಾಮ ನೂರಾದರೂ ದೈವ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ, ಕರ್ಮ ಹಲವಾದರೂ ನಿಷ್ಠೆ ಒಂದೇ, ದೇವನೊಬ್ಬ ನಾಮ ಹಲವು’. ಹೀಗಾಗಿ ಗುರುಗಳು ಹಾಕಿಕೊಟ್ಟ ಧರ್ಮದ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕು ಎಂದು ಹೇಳಿದರು.
ರಂಭಾಪುರಿ ಮಠಕ್ಕೆ ದೊಡ್ಡ ಇತಿಹಾಸವಿದೆ, ಪರಂಪರೆ ಇದೆ. ಈ ಮಠದೊಂದಿಗೆ ನನಗೆ ಭಕ್ತನಿಗೂ- ಭಗವಂತನಿಗೂ ಇರುವ ಸಂಬಂಧವಿದೆ. ರಂಭಾಪುರಿ ಶ್ರೀಗಳು ನಮ್ಮೂರಿಗೆ ಬರುತ್ತಾರೆನ್ನುವುದೇ ನಮ್ಮ ಭಾಗ್ಯ. ನಿಮ್ಮೆಲ್ಲರ ಸೇವಕನಾಗಿ ಈ ಬೆಟ್ಟದ ಅಭಿವೃದ್ಧಿಗೆ ನಿಮ್ಮೆಲ್ಲರ ಜೊತೆ ನಾನೂ ನಿಲ್ಲುತ್ತೇನೆ ಎಂದು ಭರವಸೆ ನೀಡಿದರು.