ಮನೆಯಿಂದಲೇ ಮತದಾನದ ವೇಳೆ ಬಿಜೆಪಿ ಏಜೆಂಟ್ ಇದ್ದರೇ? ಕಾಂಗ್ರೆಸ್ ದೂರಿನ ಬಗ್ಗೆ ಆಯೋಗ ಹೇಳಿದ್ದಿಷ್ಟು

|

Updated on: Apr 15, 2024 | 7:05 AM

ಲೋಕಸಭೆ ಚುನಾವಣೆಗೆ ಮನೆಯಿಂದಲೇ ಮತದಾನ ಪ್ರಕ್ರಿಯೆ ಕರ್ನಾಟಕದಲ್ಲಿ ಈಗಾಗಲೇ ಆರಂಭವಾಗಿದೆ. ಈ ವೇಳೆ, ರಾಜಾಜಿನಗರದ ಮನೆಯೊಂದರಲ್ಲಿ ಚುನಾವಣಾ ಅಧಿಕಾರಿಗಳ ಜತೆ ಬಿಜೆಪಿ ಏಜೆಂಟ್ ಇದ್ದರು ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಚುನಾವಣಾ ಆಯೋಗ ಸ್ಪಷ್ಟನೆಯನ್ನೂ ನೀಡಿದೆ. ಆಯೋಗ ಹೇಳಿದ್ದೇನು ಎಂಬ ಮಾಹಿತಿ ಇಲ್ಲಿದೆ.

ಮನೆಯಿಂದಲೇ ಮತದಾನದ ವೇಳೆ ಬಿಜೆಪಿ ಏಜೆಂಟ್ ಇದ್ದರೇ? ಕಾಂಗ್ರೆಸ್ ದೂರಿನ ಬಗ್ಗೆ ಆಯೋಗ ಹೇಳಿದ್ದಿಷ್ಟು
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಏಪ್ರಿಲ್ 15: ಬೆಂಗಳೂರು ಸೆಂಟ್ರಲ್ ಕ್ಷೇತ್ರದ ವ್ಯಾಪ್ತಿಯ ರಾಜಾಜಿನಗರದ (Rajajinagar) ಮನೆಯೊಂದರಲ್ಲಿ ಹಿರಿಯ ನಾಗರಿಕರ ಮತದಾನದ ವೇಳೆ (Vote From Home) ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪವನ್ನು ಚುನಾವಣಾ ಅಧಿಕಾರಿಗಳು ಅಲ್ಲಗಳೆದಿದ್ದಾರೆ. ಹಿರಿಯ ನಾಗರಿಕರು ಮತ ಹಾಕಲು ವ್ಯವಸ್ಥೆ ಮಾಡಲಾಗಿದ್ದ ಮನೆಯಲ್ಲಿ ಬಿಜೆಪಿ ಏಜೆಂಟರು ಚುನಾವಣಾಧಿಕಾರಿಗಳ ಜೊತೆಗಿದ್ದರು ಎಂದು ಆರೋಪಿಸಿದ್ದ ಕಾಂಗ್ರೆಸ್, ಆ ಬಗ್ಗೆ ದೂರು ದಾಖಲಿಸಿತ್ತು.

ಹಿರಿಯ ಮತದಾರರೊಬ್ಬರ ಮನೆಯಲ್ಲಿ ಮತದಾನದ ವೇಳೆ ಬಿಜೆಪಿ ಕಾರ್ಯಕರ್ತನ ಉಪಸ್ಥಿತಿಯ ಬಗ್ಗೆ ಕಾಂಗ್ರೆಸ್ ಮತ್ತು ಎಎಪಿಯಿಂದ ದೂರು ಸ್ವೀಕರಿಸಿದ್ದೇವೆ ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ. ಆ ಬಗ್ಗೆ ವಿಚಾರಣೆ ನಡೆಸಿರುವುದಾಗಿಯೂ ಅದು ಸುಳ್ಳು ಆರೋಪ ಎಂಬುದು ತಿಳಿದು ಬಂದಿದೆ ಎಂಬುದಾಗಿಯೂ ನಂತರ ಅವರು ಹೇಳಿದ್ದಾರೆ.

ದೂರಿನ ಬಗ್ಗೆ ವಿಚಾರಣೆ ನಡೆಸಿದ್ದೇವೆ. ಹಿರಿಯರು ಮತ ಹಾಕುವ ವೇಳೆ ಬಿಜೆಪಿಗೆ ಸೇರಿದವರು ಇರಲಿಲ್ಲ. ನಾವು ಅಧಿಕಾರಿಗಳ ವರದಿಯನ್ನು ಪರಿಶೀಲಿಸಿದ್ದೇವೆ ಮತ್ತು ವೀಡಿಯೊವನ್ನು ಸಹ ಪರಿಶೀಲಿಸಿದ್ದೇವೆ. ಮತದ ಗೋಪ್ಯತೆಗೆ ಧಕ್ಕೆಯಾಗಿಲ್ಲ. ಬಿಜೆಪಿಯ ವ್ಯಕ್ತಿಯೊಬ್ಬರು ಮನೆಯ ಆಸುಪಾಸಿನಲ್ಲಿದ್ದಿರಬಹುದೇ ವಿನಃ ಮನೆಯೊಳಗೆ ಅಲ್ಲ ಎಂದು ಅವರು ತಿಳಿಸಿದ್ದಾರೆ.

ವಶ ಪಡೆದಿದ್ದ ನಗದು, ಚಿನ್ನ ಏನಾಯ್ತು?

2023 ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ವಶಪಡಿಸಿಕೊಂಡಿದ್ದ 384 ಕೋಟಿ ರೂಪಾಯಿ ನಗದು ಮತ್ತು ಬೆಲೆಬಾಳುವ ವಸ್ತುಗಳ ಪೈಕಿ ಶೇಕಡಾ 49 ರಷ್ಟನ್ನು ಆಯೋಗವು ಬಿಡುಗಡೆ ಮಾಡಿದೆ ಎಂದು ಮೀನಾ ಮಾಹಿತಿ ನೀಡಿದ್ದಾರೆ. ವಿಜಿಲೆನ್ಸ್ ಸಮಿತಿಯು ಸಲ್ಲಿಸಿದ ದಾಖಲೆಗಳ ಆಧಾರದ ಮೇಲೆ ಹಕ್ಕುಗಳ ಬಗ್ಗೆ ಮನವರಿಕೆಯಾದಾಗ ಮೊತ್ತವನ್ನು ಬಿಡುಗಡೆ ಮಾಡುತ್ತದೆ. ಉಳಿದ ಮೊತ್ತಕ್ಕೆ ಪ್ರಕರಣಗಳು ದಾಖಲಾಗಿದ್ದು, ಇದೀಗ ನ್ಯಾಯಾಲಯದ ಆಸ್ತಿಯಾಗಿದೆ. 10 ಲಕ್ಷಕ್ಕಿಂತ ಹೆಚ್ಚಿನ ಹಣ ಆದಾಯ ತೆರಿಗೆ ಇಲಾಖೆ ವ್ಯಾಪ್ತಿಯಲ್ಲಿ ಇರುತ್ತದೆ. ಉಚಿತವಾಗಿ ಹಂಚಲು ಕೊಂಡೊಯ್ಯುತ್ತಿದ್ದ ಮತ್ತು ಬೆಲೆಬಾಳುವ ವಸ್ತುಗಳು ಪೊಲೀಸರ ಬಳಿ ಇವೆ. ನ್ಯಾಯಾಲಯದ ಆದೇಶದ ಮೇರೆಗೆ ಅವುಗಳನ್ನು ವಿಲೇವಾರಿ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಉತ್ತರದಲ್ಲಿ ಶೋಭಾ ಕರಂದ್ಲಾಜೆ ಗೆಲುವು ಸುಲಭವೇ? ಕೈ, ಕಮಲ ಬಲಾಬಲ ಹೀಗಿದೆ

ಶೇ 90ರಷ್ಟು ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಹೆಚ್ಚಿನ ಪ್ರಕರಣಗಳಲ್ಲಿ, ವಿಚಾರಣೆಗಳು ನಡೆಯುತ್ತಿವೆ ಮತ್ತು ಶೇ 40 ರಷ್ಟು ಆರೋಪಿಗಳಿಗೆ ಶಿಕ್ಷೆಯಾಗಿದೆ. ಸಾಮಾನ್ಯವಾಗಿ ಇಂಥ ಪ್ರಕರಣಗಳಲ್ಲಿ ಜೈಲು ಶಿಕ್ಷೆಯ ಬದಲು ದಂಡ ವಿಧಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ