ಬೆಂಗಳೂರು, (ಅಕ್ಟೋಬರ್ 28): ವಕ್ಫ್ ಕಾಯಿದೆಯಿಂದ ವಿಜಯಪುರ ಜಿಲ್ಲೆಯ ರೈತರಿಗೆ ತೊಂದರೆ ಉಂಟಾಗಿರುವ ಬಗ್ಗೆಆರೋಪ ಕೇಳಿಬಂದಿದೆ. ವಕ್ಫ್ ಬೋರ್ಡ್ ಕಡೆಯಿಂದ ರೈತರಿಗೆ ನೊಟೀಸ್ ಜಾರಿಯಾಗಿದೆ ಎನ್ನಲಾಗಿದೆ. ಈ ಸಂಬಂಧ ದೊಡ್ಡ ಚರ್ಚೆಯಾಗುತ್ತಿದ್ದು, ಇದರ ಪರಿಶೀಲನೆಗೆಂದು ರಾಜ್ಯ ಬಿಜೆಪಿ ತಂಡವನ್ನು ರಚನೆ ಮಾಡಿದೆ. ಆದ್ರೆ, ವಿಜಯಪುರದಲ್ಲಿ ವಕ್ಫ್ ವಿರುದ್ಧ ಧ್ವನಿ ಎತ್ತಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನೇ ತಂಡದಿಂದ ದೂರ ಇಡಲಾಗಿತ್ತು. ಬಳಿಕ ಯತ್ನಾಳ್ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಇಂದು(ಅಕ್ಟೋಬರ್ 28) ತಂಡವನ್ನು ಪುನಾರಚನೆ ಮಾಡಿದ್ದು, ಈ ತಂಡದಲ್ಲಿ ಯತ್ನಾಳ್ ಅವರನ್ನು ಸೇರಿಸಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಆಸ್ತಿ ನೋಂದಣಿ ವಿವಾದ ಹಿನ್ನೆಲೆಯಲ್ಲಿ ವಿಜಯೇಂದ್ರ ಅವರು ಬಿಜೆಪಿ ಪರಿಶೀಲನಾ ತಂಡವನ್ನು ರಚನೆ ಮಾಡಿದ್ದರು. ಆದ್ರೆ, ಯತ್ನಾಳ್ ತಂಡದಲ್ಲಿರಲಿಲ್ಲ. ಬಳಿಕ ಯತ್ನಾಳ್, ಬಿಜೆಪಿ ತಂಡ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದರು. ಇದಕ್ಕೆ ಮಣಿದ ವಿಜಯೇಂದ್ರ , ವಿಜಯಪುರ ಪ್ರವಾಸಕ್ಕೆ ಒಂದು ದಿನ ಬಾಕಿ ಇರುವಾಗಲೇ ಬಿಜೆಪಿ ಪರಿಶೀಲನಾ ತಂಡವನ್ನು ಪುನಾರಚನೆ ಮಾಡಿದ್ದಾರೆ. ನಾಳೆ ವಿಜಯಪುರ ಜಿಲ್ಲೆಗೆ ತೆರಳುವ ಕಾರಜೋಳ ನೇತೃತ್ವದ ತಂಡಕ್ಕೆ ಇಂದು ಹೊಸದಾಗಿ ರಮೇಶ್ ಜಿಗಜಿಣಗಿ, ಶಾಸಕ ಯತ್ನಾಳ್ ಹಾಗೂ ಮಾಜಿ ಜಿಲ್ಲಾಧ್ಯಕ್ಷ ಎಂ.ಬಿ.ಜಿರಲಿ ಅವರನ್ನು ಸೇರ್ಪಡೆ ಮಾಡಿದ್ದಾರೆ.
ಇದನ್ನೂ ಓದಿ: ವಿಜಯಪುರದಲ್ಲಿ ವಕ್ಫ್ನ ಒಟ್ಟು ಆಸ್ತಿಪಾಸ್ತಿ ಎಷ್ಟಿದೆ? ಎಳೆ ಎಳೆಯಾಗಿ ಬಿಚ್ಚಿಟ್ಟ ಕಂದಾಯ ಸಚಿವ
ನಿನ್ನೆ ಸಂಸದ ಕಾರಜೋಳ ನೇತೃತ್ವದಲ್ಲಿ ಶಾಸಕರಾದ ಹರೀಶ್ ಪೂಂಜಾ, ಮಹೇಶ್ ಟೆಂಗಿನಕಾಯಿ, ಮಾಜಿ ಎಂಎಲ್ಸಿ ಅರುಣ್ ಶಹಾಪುರ, ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ ಅವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.
ವಿಜಯಪುರ ಜಿಲ್ಲೆಯ ರೈತರ ಅಹವಾಲು ಆಲಿಸಿ ಸಮಸ್ಯೆಯ ಕುರಿತ ಸಮಗ್ರ ವರದಿ ನೀಡುವಂತೆ ವಿಜಯೇಂದ್ರ ಸೂಚಿಸಿದ್ದಾರೆ. ಅದರಂತೆ ಈ ಮುಖಂಡರ ತಂಡ ಮಂಗಳವಾರ(ಅ.29) ವಿಜಯಪುರ ಜಿಲ್ಲೆಗೆ ಭೇಟಿ ನೀಡಲಿದೆ. ಆದ್ರೆ, ಒಂದು ದಿನ ಬಾಕಿ ಇರುವಾಗಲಷ್ಟೇ ತಮ್ಮ ಹೆಸರು ಸೇರಿಸಿದ್ದಕ್ಕೆ ಯತ್ನಾಳ್, ತಂಡದ ಜೊತೆ ಹೆಜ್ಜೆ ಹಾಕುತ್ತಾರಾ ? ಅಥವಾ ಬಂಡಾಯದ ಬಾವುಟ ಹಾರಿಸುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:15 pm, Mon, 28 October 24