
ಬೆಂಗಳೂರು, ಮಾರ್ಚ್ 06: ನಗರದಲ್ಲಿ ಪ್ರಸ್ತುತ ಉದ್ಭವವಾಗಿರುವ ನೀರಿನ ಸಮಸ್ಯೆ ಕುರಿತು ಬುಧವಾರ ಬಿಡಬ್ಲ್ಯೂಎಸ್ಎಸ್ಬಿ ಚೇರ್ಮನ್ರನ್ನು ಭೇಟಿ ಮಾಡಿರುವ ಸಂಸದ ತೇಜಸ್ವಿ ಸೂರ್ಯ (Tejasvi Surya) ಚರ್ಚಿಸಿದ್ದಾರೆ. ಸಭೆ ಬಳಿಕ ಮಾತನಾಡಿದ ಅವರು, ನೀರಿನ ಅಭಾವ ಬರುತ್ತೆ ಎಂದು ಗೊತ್ತಿದ್ದರೂ ಸರ್ಕಾರ ಕ್ರಮ ಕೈಗೊಂಡಿಲ್ಲ. ಇನ್ನೊಂದು ವಾರದೊಳಗೆ ಸರ್ಕಾರ ತಾತ್ಕಾಲಿಕ ಪರಿಹಾರ ನೀಡಬೇಕು. ವಾರದೊಳಗೆ ಕ್ರಮಕೈಗೊಳ್ಳದಿದ್ದರೆ ವಿಧಾನಸೌಧದ ಎದುರು ಧರಣಿ ಮಾಡುತ್ತೇವೆ ಎಂದು ವಾಗ್ದಾಳಿ ಮಾಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ನಾಯಕರು, ಕಾರ್ಯಕರ್ತರು ಪ್ರತಿಭಟಿಸುತ್ತೇವೆ ಎಂದು ಹೇಳಿದ್ದಾರೆ.
ಈವರೆಗೂ ಸರ್ಕಾರ ಒಂದು ಏರಿಯಾಗೂ ಒಂದು ಹನಿ ನೀರು ಕೊಟ್ಟಿಲ್ಲ. ಸರ್ಕಾರ ಪರಿಹಾರ ಕೊಡುವ ಬದಲು ಜನರಿಗೆ ಸಮಸ್ಯೆ ಸೃಷ್ಟಿ ಮಾಡುತ್ತಿದೆ. ಈಗ ನೀರಿನ ಟ್ಯಾಂಕರ್ಗಳನ್ನ ಸುಪರ್ದಿಗೆ ತೆಗೆದುಕೊಳ್ಳುತ್ತೇವೆ ಅಂತಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಬೆಂಗಳೂರು ನಗರಕ್ಕೆ ನೀರಿನ ಸಮಸ್ಯೆ ಉದ್ಭವವಾಗಬಹುದು ಎಂಬ ಮುನ್ಸೂಚನೆಯ ಅರಿವು ಇದ್ದರೂ ಕೂಡ ರಾಜ್ಯ ಸರ್ಕಾರವು ಬೇಜವಾಬ್ದಾರಿತನದಿಂದ ವರ್ತಿಸಿರುವ ಪರಿಣಾಮ ಬೆಂಗಳೂರಿನ ಜನತೆ ಇಂದು ಸಂಕಟಪಡುವ ಸ್ಥಿತಿ ಬಂದಿದೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: Bangalore Water Crisis: ಬೆಂಗಳೂರಿನ ಹೌಸಿಂಗ್ ಸೊಸೈಟಿಯಲ್ಲಿ ನೀರು ದುರ್ಬಳಕೆ ತಡೆಯಲು ಭದ್ರತಾ ಸಿಬ್ಬಂದಿ, 5000 ರೂ. ದಂಡ!
ಬೆಂಗಳೂರು ನಗರದ ಬಹುತೇಕ ಭಾಗಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಸರ್ಕಾರ ಅವೈಜ್ಞಾನಿಕ ತೀರ್ಮಾನ ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕಿದೆ ಎಂದು ಹೇಳಿದ್ದಾರೆ.
ಇವೆಲ್ಲ ಪರಿಹಾರಗಳನ್ನು ಒಂದು ವಾರದಲ್ಲಿ ಬಗೆಹರಿಸಲು ಮನವಿ ಸಲ್ಲಿಸಲಾಗಿದ್ದು, ಇಲ್ಲದಿದ್ದಲ್ಲಿ ವಿಧಾನಸೌಧದ ಮುಂದೆ ಬೆಂಗಳೂರಿನ ಜನತೆಯ ಪರವಾಗಿ ಧರಣಿ ನಡೆಸುವುದಾಗಿ ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:00 pm, Wed, 6 March 24