ಮೈಸೂರು, (ಆಗಸ್ಟ್ .09): ಕರ್ನಾಟಕ ಬಿಜೆಪಿಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಬಣದ ಒಂದು ನಡೆಯಾದರೆ, ಇತ್ತ ಅವರ ವಿರೋಧಿ ಬಣದ ಮತ್ತೊಂದು ನಡೆಯಾಗಿದೆ. ಈ ಎರಡು ಬಣಗಳಲ್ಲಿ ಆಗಾಗಿ ಮುಸುಕಿನ ಗುದ್ದಾಟಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ಬಿಜೆಪಿ ಹಿರಿಯ ಶಾಸಕ ಬಸನಗೌಡ ಯತ್ನಾಳ್, ಬಿಎಸ್ವೈ ಕುಟುಂಬದ ವಿರುದ್ಧ ಬಹಿರಂಗವಾಗಿಯೇ ಟೀಕೆ ಮಾಡುತ್ತಲೇ ಬಂದಿದ್ದಾರೆ. ಹೀಗಾಗಿ ಯತ್ನಾಳ್ ಅವರನ್ನು ಇದುವರೆಗೂ ಏಕೆ ನಿಯಂತ್ರಿಸಲು ಆಗುತ್ತಿಲ್ಲ? ಏಕೆ ಶಿಸ್ತು ಸಮಿತಿ ನೋಟಿಸ್ ನೀಡುತ್ತಿಲ್ಲ? ಅವರ ಬೆನ್ನಿಗೆ ಹೈಕಮಾಂಡ್ ನಿಂತಿದ್ಯಾ? ಎನ್ನುವುದು ಇದುವರೆಗೂ ತಿಳಿದಿಲ್ಲ. ಪಕ್ಷದ ನಾಯಕರು, ಕಾರ್ಯಕರ್ತರಲ್ಲಿ ಇವರದ್ದೇ ಚರ್ಚೆ. ಇನ್ನು ಇದೀಗ ಮೊದಲ ಬಾರಿಗೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಪ್ರತಿಕ್ರಿಯಿಸಿದ್ದು, ಯತ್ನಾಳ್ ವಿರುದ್ಧ ಇದುವರೆಗೂ ಏಕೆ ಶಿಸ್ತುಕ್ರಮ ಕೈಗೊಳ್ಳಲಾಗುತ್ತಿಲ್ಲ ಎನ್ನುವುದರ ಬಗ್ಗೆ ಅಸಹಾಯಕತೆಯನ್ನು ಹೊರಹಾಕಿದ್ದು,ಯತ್ನಾಳ್ ವಿರುದ್ಧ ನಾವು ಕ್ರಮಕೈಗೊಳ್ಳಲು ಸಾಧ್ಯವಿಲ್ಲ ಎಂದು ಒಪ್ಪಿಕೊಂಡಿದ್ದಾರೆ.
ಮೈಸೂರಿನಲ್ಲಿಂದು ಮಾತನಾಡಿರುವ ಅಶೋಕ್, ಬಸನಗೌಡ ಯತ್ನಾಳ್ ಶಾಸಕರು, ಕೇಂದ್ರದಲ್ಲಿ ಮಂತ್ರಿಯಾಗಿದ್ದವರು. ಹೀಗಾಗಿ ಯತ್ನಾಳ್ ವಿರುದ್ಧ ನಾವು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಈಗಾಗಲೇ ಕೇಂದ್ರದವರು ಎರಡು ಬಾರಿ ಕರೆಸಿ ಮಾತನಾಡಿದ್ದಾರೆ. ಮುಂದಿನ ವಾರ ರಾಜ್ಯ ಬಿಜೆಪಿ ಉಸ್ತುವಾರಿಗಳು ಆಗಮಿಸುತ್ತಿದ್ದಾರೆ. ಆಗ ಶಾಸಕ ಯತ್ನಾಳ್ರನ್ನು ಕರೆಸಿ ಮಾತನಾಡುತ್ತಾರೆ. ನಂತರ ನಾವು ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಕರ್ನಾಟಕ ರಾಜ್ಯ ಬಿಜೆಪಿಯಿಂದ, ಯತ್ನಾಳ್ ವಿರುದ್ಧ ಯಾವುದೇ ಕ್ರಮಕೈಗೊಳ್ಳಲು ಸಾಧ್ಯವಿಲ್ಲ ಎನ್ನುವುದನ್ನು ಆರ್ ಅಶೋಕ್ ಒಪ್ಪಿಕೊಂಡಿದ್ದಾರೆ.
ಇದನ್ನು ಇದೇ ವೇಳೆ ಮಂಡ್ಯದಲ್ಲಿ ಪ್ರೀತಂಗೌಡ-JDS ಕಾರ್ಯಕರ್ತರ ಗಲಾಟೆ ಬಗ್ಗೆ ಮಾತನಾಡಿ, ಪ್ರೀತಂಗೌಡ ಕೂಡ ನಮ್ಮ ಪಕ್ಷದ ಕಾರ್ಯಕರ್ತನೇ. ಅದರಲ್ಲಿ ಯಾವುದೇ ಅನುಮಾನ ಇಲ್ಲ. ಬಿಜೆಪಿ-ಜೆಡಿಎಸ್ ಒಂದಾಗಿ ಹೋಗುತ್ತಿದ್ದೇವೆ. ಹೀಗಾಗಿ ಕೆಲವು ಸಣ್ಣಪುಟ್ಟ ಲೋಪದೋಷ ಆಗುವುದು ಸಹಜ. ಇದನ್ನೆಲ್ಲ ಸರಿಪಡಿಸಿಕೊಂಡು ಮುಂದೆ ಹೋಗುತ್ತೇವೆ ಎಂದು ಸ್ಪಷ್ಟಪಡಿಸಿದರು.
ಮುಡಾ ಹಗರಣ ಇಟ್ಟುಕೊಂಡು ಬೆಂಗಳೂರಿನಿಂದ ಮೈಸೂರಿನವರೆಗೂ ಸಿದ್ದರಾಮಯ್ಯ ಅವರ ರಾಜೀನಾಮಗೆ ಆಗ್ರಹಿಸಿ ಪಾದಯಾತ್ರೆ ನಡೆಸುತ್ತೇವೆ ಎಂದು ಘೋಷಿಸಿದ್ದಾಗ ವಿಜಯೇಂದ್ರ ನಡೆ ಬಗ್ಗೆ ಯತ್ನಾಳ್ ಅನುಮಾನ ವ್ಯಕ್ತಪಡಿಸಿ, ಸ್ಫೋಟಕ ಹೇಳಿಕೆ ನೀಡಿದ್ದರು. “ವಿಜಯೇಂದ್ರ ಪಕ್ಷದ ಹಿತಾಸಕ್ತಿಗಾಗಿ ಪಾದಯಾತ್ರೆ ಮಾಡುತ್ತಿಲ್ಲ. ಡಿ ಕೆ ಶಿವಕುಮಾರ್ ಅಣತಿ ಮೇರೆಗೆ ಸಿದ್ದರಾಮಯ್ಯ ಅವರನ್ನು ಸಿಎಂ ಖುರ್ಚಿಯಿಂದ ಕೆಳಗಿಳಿಸಲು ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ನೇರವಾಗಿ ವಿಜಯೇಂದ್ರ ವಿರುದ್ಧ ಆರೋಪಿಸಿದ್ದರು.
ವಿಧಾನಸಭೆಯ ಅಧಿವೇಶನದಲ್ಲಿ ಕೂಡ ಸ್ವಪಕ್ಷದ ನಾಯಕರಿಗೆ ಯತ್ನಾಳ್ ಮುಜುಗರ ಸೃಷ್ಟಿಸಿ ಮಾತನಾಡಿದ್ದರು. ವಾಲ್ಮೀಕಿ, ಮುಡಾ ಹಗರಣದಲ್ಲಿ ಬಿಜೆಪಿ ಪ್ರತಿಭಟನೆ ಏನೋ ಮಾಡುತ್ತಿದೆ. ಆದರೆ ಪ್ರತಿಭಟನೆ ನಂತರ ರಾತ್ರಿ ಅಶೋಕ್ ಸಿದ್ದರಾಮಯ್ಯಗೆ ಕರೆ ಮಾಡಿ, ‘ತಪ್ಪು ತಿಳ್ಕೋಬೇಡಿ ಸರ್, ಮೇಲಿನವರ ಒತ್ತಡ ಇತ್ತು’ ಅಂತಾರೆ. ಯಾವ ಅಪ್ಪ ಮಕ್ಕಳಿಗೂ ಯಾರೂ ಅಂಜಬಾರದು, ಯಾರಿಗೂ ಅಪ್ಪಾಜಿ ಅನ್ನಬಾರದು, ನಮ್ಮ ಅಪ್ಪನಿಗೆ ಮಾತ್ರ ಅಪ್ಪ ಅನ್ನಬೇಕು. ಈ ಅಪ್ಪಾಜಿ ಸಂಸ್ಕೃತಿ ನಮ್ಮ ರಾಜ್ಯದಿಂದ ಹೋಗಬೇಕು ಎಂದು ಯಡಿಯೂರಪ್ಪ ಹೆಸರು ಹೇಳದೇ ಕುಟುಕಿದ್ದರು.
ಹೀಗೆ ಬಿಎಸ್ವೈ ಮತ್ತು ವಿಜಯೇಂದ್ರ ನಡೆಗಳನ್ನು ಬಹಿರಂಗವಾಗಿಯೇ ಕಟುವಾಗಿ ಟೀಕಿಸುತ್ತಾ ಬಂದಿರುವ ಯತ್ನಾಳ್ಗೆ ಏಕೆ ಯಾರು ನೋಟಿಸ್ ನೀಡಲ್ಲ, ಬೆಕ್ಕಿ ಗಂಟೆ ಕಟ್ಟುವವರು ಯಾರು ಇಲ್ವಾ? ? ಅವರನ್ನು ಏಕೆ ಕಂಟ್ರೋಲ್ ಮಾಡಲಾಗುತ್ತಿಲ್ಲ ಎನ್ನುವುದೇ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಮಿಲಿಯನ್ ಡಾಲರ್ ಪ್ರಶ್ನೆಯಾಗಿತ್ತು. ಇದೀಗ ನಮ್ಮಿಂದ ಏನು ಕ್ರಮಕೈಗೊಳ್ಳಲು ಆಗುವುದಿಲ್ಲ ಎಂದು ಅಶೋಕ್ ಒಪ್ಪಿಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.