ಹಿಟಾಚಿ ಅಬ್ಬರಕ್ಕೆ ಸಿಲುಕಿ ಕುಸಿತಿದೆ ಮಂಗಳಾದೇವಿ ನಗರದ ಬೃಹತ್ ಬೆಟ್ಟ; ಹತ್ತಾರು ಹಳ್ಳಿಗಳಿಗೆ ಕಾದಿದೆ ಆಪತ್ತು
ಟಿವಿ9 ಆತಂಕ ಕೊನೆಗೂ ನಿಜವಾಗಿದೆ. ಪಶ್ಚಿಮ ಘಟ್ಟದ ಅತೀಸೂಕ್ಷ್ಮ ಬೆಟ್ಟವನ್ನ ಬಗೆದರೆ ಏನಾಗುತ್ತದೆ ಎನ್ನೋದನ್ನ ವರ್ಷದ ಹಿಂದೆಯೇ ಟಿವಿ9 ಎಚ್ಚರಿಕೆ ನೀಡಿತ್ತು. ಅಭಿವೃದ್ಧಿಯ ಹೊಡೆತಕ್ಕೆ ಸಿಲುಕಿರುವ ಮಡಿಕೇರಿ ನಗರದ ಮಂಗಳಾದೇವಿ ನಗರದ ಬೆಟ್ಟ ಈಗ ಕುಸಿಯುತ್ತಿದೆ. ಈ ಕುರಿತು ಒಂದು ವರದಿ ಇಲ್ಲಿದೆ.
ಕೊಡಗು, ಆ.09: ಮಡಿಕೇರಿ ನಗರದ ಮಂಗಳಾದೇವಿ ನಗರ(Mangaladevi Nagar)ದಲ್ಲಿರುವ ಬೃಹತ್ ಬೆಟ್ಟ, ಜೆಸಿಬಿ, ಹಿಟಾಚಿ ಅಬ್ಬರಕ್ಕೆ ಸಿಲುಕಿ ಕುಸಿಯುತ್ತಿದೆ. ಮಾನವನ ದುರಾಸೆಯೇ ಇಂದು ಈ ಬೆಟ್ಟ ಕುಸಿಯುವಂತೆ ಮಾಡಿದೆ. ಆಂಧ್ರ ಮೂಲದ ರಿಯಲ್ ಎಸ್ಟೇಟ್ ಉದ್ಯಮಿಗಳು ಇಲ್ಲಿ ಕಳೆದ ವರ್ಷ 32 ಎಕರೆ ಬೆಟ್ಟದಲ್ಲಿ ಕಾಡನ್ನು ಕಡಿದು ಸರ್ವನಾಶ ಮಾಡಿ, ಬೆಟ್ಟವನ್ನ ಜೆಸಿಬಿ ತಂದು ಬಗೆದಿದ್ದರು. ಅಷ್ಟೇ ಅಲ್ಲ, ಬೆಟ್ಟವನ್ನ ಕೊರೆದು ಸೈಟ್, ವಿಲ್ಲಾಮಾಡಲು ಸಿದ್ಧತೆ ನಡೆಸಿದ್ದರು.
ಹತ್ತಾರು ಹಳ್ಳಿಗಳು ನಾಶವಾಗುವ ಆತಂಕ; ವರ್ಷದ ಹಿಂದೆಯೇ ಎಚ್ಚರಿಕೆ ನೀಡಿದ್ದ ಟಿವಿ9
ಬೆಟ್ಟ ಬಗೆದಿರುವುದರಿಂದ ಇದು ಮುಂದೊಂದು ದಿನ ಕುಸಿದೇ ಕುಸಿಯುತ್ತದೆ ಎಂದು ಟಿವಿ9 ಕಳೆದ ವರ್ಷವೇ ಸುದ್ದಿ ಮಾಡಿ ಎಚ್ಚರಿಕೆ ನೀಡಿತ್ತು. ಅದರಂತೆ ಇದೀಗ ಮಳೆ ಜೋರಾಗಿ ಬಂದು ಬೆಟ್ಟ ಕುಸಿಯುತ್ತಿದೆ. ಸೈಟ್ಗಳಿಗೆ ಮಾಡಿದ್ದ ದಾರಿಯೇ ಕುಸಿದು ಹೋಗಿದೆ. ಮಳೆ ಜಾಸ್ತಿಯಾದರೆ ಇಡೀ ಬೆಟ್ಟ ಕುಸಿದು, ವಯನಾಡು ಮಾದರಿಯಲ್ಲೆ ಕೆಳಭಾಗದ ಹತ್ತಾರು ಹಳ್ಳಿಗಳು ನಾಶವಾಗುವ ಆತಂಕವಿದೆ.
ಇದನ್ನೂ ಓದಿ:ವಿರೋಧದ ನಡುವೆಯೂ ಬೇಬಿಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ಗೆ ಮಂಡ್ಯ ಜಿಲ್ಲಾಡಳಿತ ಸಿದ್ಧ; ಏನೆಲ್ಲ ತೊಂದರೆಯಾಗಲಿದೆ ನೋಡಿ
ಖಾಸಗಿ ಜಾಗವಾದರೂ ಈ ರೀತಿ ಪರಿಸರ ನಾಶ ಮಾಡುವಂತಿಲ್ಲ. ಬೆಟ್ಟವನ್ನೇ ಕೊರೆಯಲೆಬಾರದು. ಬೆಟ್ಟ ಬಗೆದರೆ 2018 ರಲ್ಲಿ ಕೊಡಗಿನಲ್ಲಿ ಸಂಭವಿಸಿದ ದುರಂತ ಮರುಕಳಿಸುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದರೂ ಮನುಷ್ಯನ ದುರಾಸೆ ನಿಂತಿಲ್ಲ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೊಡಗು ಜಿಲ್ಲಾಡಳಿತ, ‘ಬೆಟ್ಟದ ಮೇಲೆ ಯಾವುದೇ ಕಾರಣಕ್ಕೂ ಯಾವುದೇ ಚಟುವಟಿಕೆ ನಡೆಸಲು ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ವಿಪರ್ಯಾಸವೆಂದರೆ ಇಷ್ಟೆಲ್ಲ ಪರಿಸರ ನಾಶವಾಗಿದ್ದರೂ, ಕೊಡಗು ಅರಣ್ಯ ಇಲಾಖೆ ಮಾತ್ರ ಜಾಗದ ಮಾಲೀಕರಿಗೆ ಕೇವಲ 10 ಸಾವಿರ ರೂ. ದಂಡ ವಿಧಿಸಿ ಕೈತೊಳೆದುಕೊಂಡಿದೆ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಆಗಿರುವ ಪ್ರಮಾದ ಸರಿಪಡಿಸುತ್ತಾ ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:22 pm, Fri, 9 August 24