ವಯನಾಡ್ ಸಂತ್ರಸ್ತರ ಕಹಾನಿ: ನಮಗೇನೂ ಮಾಡಬೇಡಪ್ಪ ಎಂದೆ; ಆ ರಾತ್ರಿಯಿಡೀ ಬೆಟ್ಟದಲ್ಲಿ ನಮಗೆ ಕಾವಲಾಗಿ ನಿಂತಿತ್ತು ಕಾಡಾನೆ

ವಯನಾಡಿನ ಚೂರಲ್​​ಮಲ ಮತ್ತು ಮುಂಡಕೈ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಿಂದ ಪಾರಾದವರು ಈಗ ಸಂತ್ರಸ್ತರ ಶಿಬಿರದಲ್ಲಿದ್ದಾರೆ. ತಮ್ಮ ಒಡಹುಟ್ಟಿದವರು, ಕುಟುಂಬದ ಸದಸ್ಯರನ್ನು ಕಳೆದುಕೊಂಡು ಇವರು ಕಣ್ಣೀರು ಹಾಕುತ್ತಿದ್ದಾರೆ. ಭೂಕುಸಿತ ಸಂಭವಿಸಿದ ಆ ರಾತ್ರಿ ಪ್ರಾಣಾಪಾಯದಿಂದ ಪಾರಾದವರಿದ್ದಾರೆ. ಹಾಗೆ ಪಾರಾದ ಸುಜಾತಾ ಮತ್ತು ಅವರ ಕುಟುಂಬಕ್ಕೆ ಕಾಡಾನೆಯೊಂದು ಬೆಟ್ಟದಲ್ಲಿ ಕಾವಲಾಗಿ ನಿಂತಿತ್ತು. ಇಲ್ಲಿದೆ ಸಂತ್ರಸ್ತರ ಕಹಾನಿ...

ವಯನಾಡ್ ಸಂತ್ರಸ್ತರ ಕಹಾನಿ: ನಮಗೇನೂ ಮಾಡಬೇಡಪ್ಪ ಎಂದೆ; ಆ ರಾತ್ರಿಯಿಡೀ ಬೆಟ್ಟದಲ್ಲಿ ನಮಗೆ ಕಾವಲಾಗಿ ನಿಂತಿತ್ತು ಕಾಡಾನೆ
ಮೊಮ್ಮಗಳೊಂದಿಗೆ ಸುಜಾತಾImage Credit source: ಮಲಯಾಳ ಮನೋರಮಾ
Follow us
|

Updated on:Aug 02, 2024 | 6:17 PM

ಮೇಪ್ಪಾಡಿ ಆಗಸ್ಟ್ 02: ಕೇರಳದ (Kerala) ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಿಂದ (Wayanad landslides) ಪಾರಾದವರು ಈಗ ಸಂತ್ರಸ್ತರ ಶಿಬಿರದಲ್ಲಿ ಇದ್ದಾರೆ. ಆ ರಾತ್ರಿಯಲ್ಲಿ ಸಂಭವಿಸಿದ ಘಟನೆಯನ್ನು ಇವರ್ಯಾರೂ ಜೀವನವಿಡೀ ಮರೆಯಲಾರರು. ಮನೆ, ಕುಟುಂಬ ಎಲ್ಲವೂ ಹೋಯ್ತು, ಬದುಕುಳಿದಿದ್ದೇ ಪುಣ್ಯ ಎಂದು ಹಲವರು ಕಣ್ಣೀರು ಹಾಕುತ್ತಾರೆ. ಚೂರಲ್​​ಮಲ(Chooralmala )ಮತ್ತು ಮುಂಡಕೈ ಪ್ರದೇಶದಲ್ಲಿ ಜುಲೈ 30ರಂದು ಸಂಭವಿಸಿದ ಭೀಕರ ಭೂಕುಸಿತದಿಂದ ಬದುಕುಳಿದವರು, ದುರಂತದಿಂದ ಪಾರಾದವರು ಹೇಗೆ ಅಲ್ಲಿಂದ ಬಚಾವಾದರು ಎಂದು ಹೇಳುವಾಗ ಮೈಜುಂ ಅನ್ನಿಸಿದೇ ಇರದು. ಭೂಕುಸಿತ ಸಂಭವಿಸಿದಾಗ ಮನೆಯಿಂದ ಹೊರಗೆ ಓಡಿ ಪಾರಾದವರು ಸುಮಾರು ಜನ ಇದ್ದಾರೆ. ಇದರಲ್ಲಿ ಚೂರಲ್​​ಮಲ ಅಂಜಿಶಾಚಿಲಯಿಲ್ ಪ್ರದೇಶದ ಸುಜಾತಾ ಅವರು ಪಾರಾಗಿದ್ದು ಪವಾಡ ಎಂದೇ ಹೇಳಬಹುದು. ಇದೀಗ ಮೇಪ್ಪಾಡಿ ಜಿಎಚ್‌ಎಸ್‌ಎಸ್‌ನಲ್ಲಿರುವ ಸಂತ್ರಸ್ತರ ಶಿಬಿರದಲ್ಲಿರುವ ಸುಜಾತಾ ಅವರು ಏಷ್ಯಾನೆಟ್ ನ್ಯೂಸ್ ಜತೆ ಹಂಚಿಕೊಂಡ ಅನುಭವದ ಕತೆ ಕೇಳಿದರೆ ಕಣ್ಣೊದ್ದೆಯಾಗದೇ ಇರದು.

ಈ ಅನುಭವ ಕಥನವನ್ನು ಸುಜಾತಾ ಅವರ ಮಾತುಗಳಲ್ಲೇ ಓದಿ..

ಮಂಗಳವಾರ ಮುಂಜಾನೆ ಭೂಕುಸಿತದಿಂದ ನಮ್ಮ ಮನೆ ನೆಲಸಮವಾಯಿತು. ನಾನು ಮತ್ತು ನನ್ನ ಕುಟುಂಬದ ನಾಲ್ವರು ಸದಸ್ಯರು ಅಲ್ಲಿ ಸಿಕ್ಕಿ ಬಿದ್ದೆವು. ಅಲ್ಲಿದ್ದದ್ದು  ನಾನು, ನನ್ನ ಮಗ ಗಿಗೀಶ್, ಅವನ ಪತ್ನಿ ಸುಜಿತಾ ಮತ್ತು ಅವರ ಮಕ್ಕಳಾದ ಸೂರಜ್ ಮತ್ತು ಮೃದುಲಾ. ನೀರು ನುಗ್ಗಿದ ಹೊತ್ತಲ್ಲಿ ನಾವೆಲ್ಲ ನಿದ್ದೆಯಲ್ಲಿದ್ದೆವು. ಮಗ ಗಿಗೀಶ್ ಪ್ರತಿಯೊಬ್ಬ ಸದಸ್ಯರನ್ನು ಹೊರಗೆ ತರುವುದರಲ್ಲಿ ಯಶಸ್ವಿಯಾದ. ಸುಜಿತಾಳ ಬೆನ್ನುಮೂಳೆಗೆ ಗಂಭೀರ ಪೆಟ್ಟಾಗಿದೆ. ಸೂರಜ್‌ ಎದೆಗೆ ಪೆಟ್ಟು ಬಿದ್ದಿದೆ. ಗಿಗೀಶನ ತಲೆಗೆ ಮರ ತಾಗಿ ಗಾಯವಾಗಿದೆ.

ಸೋಮವಾರ ರಾತ್ರಿ 4 ಗಂಟೆಯಿಂದ ಭಾರೀ ಮಳೆಯಾಗುತ್ತಿದ್ದರಿಂದ, ಮಧ್ಯರಾತ್ರಿ 1.15 ಕ್ಕೆ ಎಚ್ಚರವಾಯಿತು. ದೊಡ್ಡ ಶಬ್ದ ಕೇಳಿಸಿದ ಬೆನ್ನಲ್ಲೇ ನಮ್ಮ ಮನೆಗೆ ನೀರು ನುಗ್ಗಿತು. ನಾವೆಲ್ಲರೂ ಹಾಸಿಗೆಯ ಮೇಲೆ ಕುಳಿತೆವು . ಆಗ ನಮ್ಮ ನೆರೆಹೊರೆಯವರ ಮನೆಗಳ ಅವಶೇಷಗಳ ಜೊತೆಗೆ ದೊಡ್ಡ ಮರದ ದಿಮ್ಮಿಗಳು ಮನೆಯ ಮೇಲೆ ಬಡಿಯುತ್ತಿದ್ದವು. ನಮ್ಮ ಮನೆಯ ಮೇಲ್ಛಾವಣಿ ನಮ್ಮ ಮೇಲೆ ಕುಸಿದು ಬಿದ್ದಿದ್ದು, ನನ್ನ ಮಗಳು ಗಂಭೀರವಾಗಿ ಗಾಯಗೊಂಡಿದ್ದಾಳೆ. ಗುಡ್ಡ ಜರಿದು ಮನೆ ಉರುಳಿ ಬಿದ್ದಾಗ ಮನೆಯ ಚಿಮಿಣಿಯಲ್ಲಿ ಸ್ವಲ್ಪ ಜಾಗ ಕಾಣಿಸಿತು. ನಾನು ಇಟ್ಟಿಗೆ ರಾಶಿಯನ್ನು ಸರಿಸಿ ಜಾಗ ಮಾಡಿಕೊಂಡೆ. ಆಗ ಮೊಮ್ಮಗಳು ಅಮ್ಮಮ್ಮಾ..ನಾನು ಇಲ್ಲಿದ್ದೀನಿ ಅಂತ ಹೇಳಿದಳು. ಮಗುವಿನ ಬೆರಳು ಸಿಕ್ಕಿತು. ಆಕೆಯನ್ನು ಅಲ್ಲಿಂದ ಹಿಡಿದೆತ್ತಿ ಹೊರಗೆ ಬಂದೆ. ಕಟ್ಟಡಗಳೆಲ್ಲ ಕಣ್ಮುಂದೆ ಉರುಳಿ ಬಿದ್ದಿವೆ. ನಾನು ಮೊಮ್ಮಗಳನ್ನು ಹಿಡಿದುಕೊಂಡು ನಮ್ಮ ನೆರೆಮನೆಗೆ ಹೋದೆ. ಅವರ ಮನೆ ಹೊಸತು. ಅಲ್ಲಿಗೆ ಹೋದಾಗಲೂ ಗುಡ್ಡೆ ಕುಸಿಯುತ್ತಿತ್ತು. ನನ್ನ ಅಳಿಯ ,ನನ್ನ ಮಗಳು, ಮಕ್ಕಳನ್ನು ಎಲ್ಲ ಹೊರಗೆ ತಂದಿದ್ದ.

ಸುತ್ತಲೂ ನೀರು, ನಾವು ಹೇಗೋ ಈಜುತ್ತಾ, ಬೀಳುತ್ತಾ ಒಂದು ಬೆಟ್ಟದ ಬಳಿ ಬಂದೆವು. ಕೈಕಾಲುಗಳಿಗೆ ಗಾಯವಾಗಿದ್ದರೂ ನಾವು ಹೇಗೋ ಒದ್ದಾಡಿ ಬೆಟ್ಟದ ಬಳಿಗೆ ಬಂದಾಗ ಅಲ್ಲಿ ಎದುರಾಗಿದ್ದು ದೊಡ್ಡ ಕಾಡಾನೆ. ನಾವು ಒಂದು ದೊಡ್ಡ ದುರಂತದಿಂದ ತಪ್ಪಿಸಿಕೊಂಡು ಬಂದಿದ್ದೀವಿ. ನೀನು ನಮಗೇನೂ ಮಾಡಬೇಡಪ್ಪಾ ಎಂದು ನಾನು ಆನೆಯ ಮುಂದೆ ನಿಂತು ಕಣ್ಣೀರು ಹಾಕಿದೆ. ಆನೆಯ ಕಣ್ಣಿನಿಂದಲೂ ನೀರು ಬಂತು. ರಾತ್ರಿ ಬೆಳಗಾಗುವವರೆಗೆ ನಾವು ಆನೆಯ ಕಾಲ ಹತ್ತಿರವೇ ಸಮಯ ಕಳೆದೆವು. ರಾತ್ರಿ ಪೂರ್ತಿ ಮಳೆ, ಸರಿಯಾಗಿ ನಿಂತುಕೊಳ್ಳಲೂ ಸಾಧ್ಯವಾಗುತ್ತಿರಲಿಲ್ಲ. ಬೆಳಗ್ಗೆ 6 ಗಂಟೆಯಾದಾಗ ಎಲ್ಲಿಂದಲೋ ಜನರು ಬಂದರು. ನಮ್ಮನ್ನು ಕಾಪಾಡಲು ನಮ್ಮ ಊರಿನವರು ಯಾರೂ ಬದುಕುಳಿದಿರಲಿಲ್ಲ. ಆಮೇಲೆ ದೂರದೂರಿನಿಂದ ಬಂದ ಜನರು ನಮ್ಮನ್ನು ಕಾಪಾಡಿ ಸುರಕ್ಷಿತ ಜಾಗಕ್ಕೆ ತಲುಪಿಸಿದ್ದು.

ಮೂರು ಆನೆ ಆ ಬೆಟ್ಟದಲ್ಲಿತ್ತು. ನಮ್ಮ ಬಳಿ ನಿಂತಿದ್ದು ಗಂಡಾನೆ. ಆ ಆನೆಯಲ್ಲೇ ನಾನು ಹೇಳಿದ್ದು, ತುಂಬಾ ಕಷ್ಟದಲ್ಲಿದ್ದೇವೆ. ಬೆಳಕು ಇಲ್ಲ, ಪೂರಾ ಕತ್ತಲೆ. ನಮ್ಮನ್ನು ಏನೂ ಮಾಡಬೇಡಪ್ಪಾ ಎಂದು ಹೇಳಿದಾಗ ಆನೆ ಕಣ್ಣೀರು ಹಾಕುತ್ತಾ ಬೆಳಗಾಗುವವರೆಗೆ ನಮ್ಮ ಜತೆ ನಿಂತಿತು. ಅಲ್ಲಿದ್ದದ್ದು ನಾನು ಮತ್ತು ಮೊಮ್ಮಗಳು ಮಾತ್ರ. ಮಗ ಗಾಯವಾಗಿ ಕಾಫಿ ತೋಟದಲ್ಲಿ ಮಲಗಿದ್ದ. ಅಳಿಯ ಬಾಕಿ ಉಳಿದವರನ್ನು ಕಾಪಾಡಲು ಓಡುತ್ತಿದ್ದ. ಬಾಗಿಲುಗಳನ್ನು  ಒಡೆದು ತೆಗೆದ ಕಾರಣ ಕೈ ಕಾಲುಗಳಲ್ಲಿ ಗಾಯವಾಗಿತ್ತು. ಪ್ರಾಣಾಪಾಯವೇನೂ ಸಂಭವಿಸಿಲ್ಲ. ನನ್ನ ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ  ಓದಿ: Wayanad Landslide: ವಯನಾಡಿನಲ್ಲಿ ಕಾಂಗ್ರೆಸ್​ನಿಂದ 100ಕ್ಕೂ ಹೆಚ್ಚು ಮನೆಗಳ ನಿರ್ಮಾಣ; ರಾಹುಲ್ ಗಾಂಧಿ ಭರವಸೆ

ನನ್ನ ಮೊಮ್ಮಗಳು ಮನೆಯ ಅವಶೇಷದಲ್ಲಿ ಸಿಕ್ಕಿಬಿದ್ದಾಗ ಒಂದು ಬಟ್ಟೆಯಲ್ಲಿ ಸುತ್ತಿ ಆಕೆಯನ್ನು ಹೊರಗೆ ಎಳೆದಿದ್ದೆ. ಪ್ರವಾಹದಲ್ಲಿ ಜನರು ಕೊಚ್ಚಿ ಹೋಗುತ್ತಿರುವಾಗ ಕಾಪಾಡಿ ಕಾಪಾಡಿ ಎಂದು ಅಳುತ್ತಿದ್ದರು. ಕಟ್ಟಡಗಳ ಜತೆ ಅವರು ನಮ್ಮ ಕಣ್ಣೆದುರೇ ಕೊಚ್ಚಿ ಹೋಗುತ್ತಿದ್ದರು. ಕಾಪಾಡಿ ಕಾಪಾಡಿ ಎಂದು ಯಾರು ಕೂಗಾಡಿದರೂ ಕಾಪಾಡಲು ಅಲ್ಲಿ ಯಾರೂ ಇಲ್ಲ, ಸುತ್ತಲೂ ನೀರು… ಕಡಲಿನಂತಾಗಿತ್ತು. ನಮ್ಮನ್ನು ಕಾಪಾಡಿದವರು ಬೇರೆ ಯಾವುದೋ ಮನೆಗೆ ಕರೆ ತಂದರು. ಕೆಸರಿನಲ್ಲಿ ಮುಳುಗಿದ್ದ ನಮಗೆ ಬಟ್ಟೆ ಬದಲಿಸಲು ಕೊಟ್ಟು ವಾಹನದಲ್ಲಿ ಈ ಶಿಬಿರಕ್ಕೆ ಕರೆ ತಂದಿದ್ದಾರೆ. ಅಲ್ಲೀಗ ನಮ್ಮ ಮನೆ ನೆಲಸಮವಾಗಿದೆ, ನಮ್ಮದು ಅಂತ ಹೇಳುವ ಯಾವುದೇ ಕುರುಹು ಅಲ್ಲಿಲ್ಲ ಎಂದು ಸುಜಾತಾ ಹೇಳಿದ್ದಾರೆ.

ಸುಜಾತಾ ಅವರು 18 ವರ್ಷಗಳಿಂದ ಮುಂಡಕೈನಲ್ಲಿರುವ ಹ್ಯಾರಿಸನ್ಸ್ ಮಲಯಾಳಂ ಟೀ ಎಸ್ಟೇಟ್‌ನಲ್ಲಿ ಚಹಾ ಎಲೆ ಕೊಯ್ಯುವ ಕೆಲಸ ಮಾಡುತ್ತಿದ್ದಾರೆ.ಅವರ ಮನೆಯಲ್ಲಿ ಮಗಳು ಸುಜಿತಾ, ಪತಿ ಕುಟ್ಟನ್ ಮತ್ತು ಮೊಮ್ಮಕ್ಕಳಾದ ಸೂರಜ್ (18) ಮತ್ತು ಮೃದುಲಾ (12) ಅವರೊಂದಿಗೆ ವಾಸಿಸುತ್ತಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:13 pm, Fri, 2 August 24