ಮೈಸೂರು, ಜನವರಿ 02: ಅಯೋಧ್ಯೆಯಲ್ಲಿ (Ayodhya) ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿದ್ದು, ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ನಿರ್ಮಿಸಿರುವ ವಿಗ್ರಹ ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೆ ಆಯ್ಕೆಯಾಗಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ‘ಪ್ರಾಣ ಪ್ರತಿಷ್ಠೆ’ಗೆ ಅಂತಿಮಗೊಳಿಸಿರುವ ಭಗವಾನ್ ರಾಮನ ವಿಗ್ರಹದ ಚಿತ್ರವನ್ನು ಬಹಿರಂಗಪಡಿಸಿದ್ದಾರೆ. ಇದೇ ವೇಳೆ, ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಬಗ್ಗೆಯೂ ಎಲ್ಲೆಡೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.
‘ಎಲ್ಲಿ ರಾಮನೋ ಅಲ್ಲಿ ಹನುಮನು. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ಕೆ ವಿಗ್ರಹ ಆಯ್ಕೆ ಅಂತಿಮಗೊಂಡಿದೆ. ನಮ್ಮ ನಾಡಿನ ಹೆಸರಾಂತ ಶಿಲ್ಪಿ ನಮ್ಮ ಹೆಮ್ಮೆಯ ಅರುಣ್ ಯೋಗಿರಾಜ್ ಅವರು ಕೆತ್ತಿರುವ ಶ್ರೀರಾಮನ ವಿಗ್ರಹ ಪುಣ್ಯಭೂಮಿ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ. ರಾಮ ಹನುಮರ ಅವಿನಾಭಾವ ಸಂಬಂಧಕ್ಕೆ ಇದು ಮತ್ತೊಂದು ನಿದರ್ಶನ. ಹನುಮನ ನಾಡು ಕರ್ನಾಟಕದಿಂದ ರಾಮಲಲ್ಲಾನಿಗೆ ಇದೊಂದು ಮಹತ್ವಪೂರ್ಣ ಸೇವೆ ಎಂದರೆ ತಪ್ಪಾಗಲಾರದು’ ಎಂದು ಪ್ರಲ್ಹಾದ್ ಜೋಶಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿದ್ದಾರೆ.
“ಎಲ್ಲಿ ರಾಮನೋ ಅಲ್ಲಿ ಹನುಮನು”
ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ಕೆ ವಿಗ್ರಹ ಆಯ್ಕೆ ಅಂತಿಮಗೊಂಡಿದೆ. ನಮ್ಮ ನಾಡಿನ ಹೆಸರಾಂತ ಶಿಲ್ಪಿ ನಮ್ಮ ಹೆಮ್ಮೆಯ ಶ್ರೀ @yogiraj_arun ಅವರು ಕೆತ್ತಿರುವ ಶ್ರೀರಾಮನ ವಿಗ್ರಹ ಪುಣ್ಯಭೂಮಿ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ. ರಾಮ ಹನುಮರ ಅವಿನಾಭಾವ ಸಂಬಂಧಕ್ಕೆ ಇದು… pic.twitter.com/VQdxAbQw3Q
— Pralhad Joshi (@JoshiPralhad) January 1, 2024
ಅರುಣ್ ಯೋಗಿರಾಜ್ ಮೈಸೂರು ಮಣ್ಣಿನ ಅಪ್ಪಟ ಪ್ರತಿಭೆ. ಅರುಣ್ ಯೋಗಿರಾಜ್ ಅವರ ಕುಟುಂಬ ಕಲ್ಲಿನ ವಿಗ್ರಹ ಶಿಲ್ಪದಲ್ಲಿ 200 ವರ್ಷಗಳ ಪರಂಪರೆ ಹೊಂದಿದೆ. ಯೋಗಿರಾಜ್ ಅವರ ತಂದೆ, ತಾತ, ಮುತ್ತಾತ, ಅವರ ತಂದೆ ಹಾಗೂ ತಾತ, ಅಂದರೆ ಬರೋಬ್ಬರಿ ಐದು ತಲೆ ಮಾರಿನಿಂದ ಕಲ್ಲಿನ ಶಿಲ್ಪ ಕಲೆಯಲ್ಲಿ ಇವರ ವಂಶಸ್ಥರು ತೊಡಗಿಕೊಂಡಿದ್ದಾರೆ. ಅರುಣ್ ತಂದೆ ಯೋಗಿರಾಜ್ ಕೂಡ ನುರಿತ ಶಿಲ್ಪಿ.
ಅರುಣ್ ಯೋಗಿರಾಜ್ ಅವರ ಅಜ್ಜ ಬಸವಣ್ಣ ಶಿಲ್ಪಿ ಮೈಸೂರು ರಾಜರ ಆಸ್ತಾನದಲ್ಲಿದ್ದರು. ತಾತ ಮುತ್ತಾತ ಕೂಡ ಶಿಲ್ಪಿಗಳಾಗಿದ್ದರು. ಸುಮಾರು 200 ವರ್ಷದ ಹಿಂದಿನವರ ಕಲೆ ಅರುಣ್ ಅವರಿಗೆ ಸಿದ್ಧಿಸಿದೆ. ಅರುಣ್ ಯೋಗಿರಾಜ್ ಅವರು ಬಾಲ್ಯದಿಂದಲೂ ಕೆತ್ತನೆಯಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಎಂಬಿಎ ಮುಗಿಸಿದ ಬಳಿಕ ಖಾಸಗಿ ಕಂಪನಿಯಲ್ಲಿ ಕೆಲಕಾಲ ಕೆಲಸ ಮಾಡಿದ್ದಾರೆ. ಆದರೆ ಅವರಿಗೆ ಆ ಕೆಲದ ತೃಪ್ತಿ ನೀಡಲಿಲ್ಲ. ಆಗ ಅವರಿಗೆ, ತಮ್ಮ ಪೂರ್ವಜರ ಕಲೆಯನ್ನು ಮುಂದುವರಿಸಬೇಕು ಎಂದು ಅನಿಸಿದೆ. ಬಳಿಕ ವಾಪಸ್ಸು ಕಲೆಯ ಕಡೆಗೆ ಬಂದರು. ತಂದೆಗೆ ವಿಚಾರ ತಿಳಿಸಿದರು. ಮೊದ ಮೊದಲು ತಂದೆ ಇದಕ್ಕೆ ಒಪ್ಪದಿದ್ದರೂ ಮಗನ ಆಸಕ್ತಿ ಮುಂದೆ ಅವರು ಸೋಲಲೇಬೇಕಾಯಿತು.
ವಾಪಸ್ ಕಲೆ ಕೆಲಸಕ್ಕೆ ಮರಳಲು ಅರುಣ್ ಅವರಿಗೆ ಅವರ ತಂದೆ ಒಂದು ಷರತ್ತನ್ನು ಹಾಕಿ ಅನುಮತಿ ನೀಡಿದರು. ನೀನು ಎಂಬಿಎ ಪದವೀಧರ. ಮಾರ್ಕೆಟಿಂಗ್ ನಿನ್ನ ತಲೆಯಲ್ಲಿ ಹಾಸು ಹೊಕ್ಕಿರುತ್ತದೆ. ಆದರೆ ಇದು ಶ್ರದ್ಧಾ ಭಕ್ತಿಯ ಕೆಲಸ. ಇಲ್ಲಿ ನೀನು ಮಾರ್ಕೆಟಿಂಗ್ ಮಾಡುವುದಾದರೆ ಸುತಾರಾಂ ನೀನು ಬರಬೇಡ. ಕಲ್ಲಿನ ವಿಗ್ರಹಗಳ ಖರೀದಿ ಮಾರಾಟಕ್ಕೆ ಇಲ್ಲಿ ಅವಕಾಶವಿಲ್ಲ. ಇಲ್ಲೇನಿದ್ದರೂ ಕಲಾಸೇವೆ ಅಷ್ಟೇ ಎಂದು ಕಡ್ಡಿ ತುಂಡಾದ ರೀತಿ ಷರತ್ತು ವಿಧಿಸಿದ್ದರು. ಅದಕ್ಕೆ ಒಪ್ಪಿದ ಅರುಣ್ ಯೋಗಿರಾಜ್ 2008ರಿಂದ ಮತ್ತೆ ಶಿಲ್ಪ ಕೆತ್ತನೆ ವೃತ್ತಿ ಮುಂದುವರಿಸಿದರು.
ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ: ಮೈಸೂರಿನ ಶಿಲ್ಪಿ ಕೆತ್ತಿರುವ ರಾಮಲಲ್ಲಾ ವಿಗ್ರಹ ಆಯ್ಕೆ
ದೆಹಲಿಯ ಇಂಡಿಯಾ ಗೇಟ್ ಬಳಿಯ ಅಮರ್ ಜವಾನ್ ಜ್ಯೋತಿಯ ಹಿಂದೆ ಸ್ಥಾಪಿಸಲಾಗಿರುವ ಸುಭಾಷ್ ಚಂದ್ರ ಬೋಸ್ ಅವರ 30-ಅಡಿ ಪ್ರತಿಮೆಯನ್ನು ನಿರ್ಮಾಣ ಮಾಡಿರುವುದೂ ಸೇರಿದಂತೆ ಹಲವು ಪ್ರಮುಖ ಪ್ರತಿಮೆ ನಿರ್ಮಾಣಗಳಲ್ಲಿ ಅರುಣ್ ಅವರ ಶ್ರಮವಿದೆ.
ಕೇದಾರನಾಥದ 12 ಅಡಿ ಎತ್ತರದ ಆದಿ ಶಂಕರಾಚಾರ್ಯರ ಶಿಲ್ಪ ಮತ್ತು ಮೈಸೂರಿನ 21 ಅಡಿ ಎತ್ತರದ ಹನುಮಾನ್ ಪ್ರತಿಮೆ ಕೂಡ ಅರುಣ್ ಯೋಗಿರಾಜ್ ಕೆತ್ತನೆಯಲ್ಲಿ ಮೂಡಿಬಂದಿರುವುದು ಗಮನಾರ್ಹ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ