Disha Ravi | ಗ್ರೇಟಾ ಥನ್​ಬರ್ಗ್​ ಪೋಸ್ಟ್ ಮಾಡಿದ್ದ ಟೂಲ್​ಕಿಟ್​ನಲ್ಲಿ ಏನಿತ್ತು? ಅದನ್ನು ಹಂಚಿದ್ದ ದಿಶಾ ರವಿ ಯಾರು?

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 14, 2021 | 5:22 PM

ಜಾಗತಿಕ ಮಟ್ಟದಲ್ಲಿ ಹವಾಮಾನ ಬದಲಾವಣೆ ಕುರಿತು 2018ರಲ್ಲಿ ದೊಡ್ಡ ಹೋರಾಟವನ್ನು ಹುಟ್ಟು ಹಾಕಿತ್ತು ಫ್ರೈಡೇ ಫರ್ ಫ್ಯೂಚರ್ ಸಂಸ್ಥೆ. ದಿಶಾ ಈ ಸಂಸ್ಥೆಯ ಸಹ ಸಂಸ್ಥಾಪಕಿ.

Disha Ravi | ಗ್ರೇಟಾ ಥನ್​ಬರ್ಗ್​ ಪೋಸ್ಟ್ ಮಾಡಿದ್ದ ಟೂಲ್​ಕಿಟ್​ನಲ್ಲಿ ಏನಿತ್ತು? ಅದನ್ನು ಹಂಚಿದ್ದ ದಿಶಾ ರವಿ ಯಾರು?
ಗ್ರೇಟಾ ಥನ್ ಬರ್ಗ್ (ಎಡ) ದಿಶಾ ರವಿ (ಬಲ)
Follow us on

ರೈತರ ಹೋರಾಟಕ್ಕೆ ಸಂಬಂಧಿಸಿ ಪರಿಸರವಾದಿ ಗ್ರೇಟಾ​ ಥನ್​ಬರ್ಗ್​ ಹಂಚಿಕೊಂಡಿದ್ದ ಟೂಲ್​ಕಿಟ್​ ಪ್ರಕರಣವನ್ನು ದೆಹಲಿ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಪ್ರಕರಣದಲ್ಲಿ ನಂಟು ಹೊಂದಿರುವ ಬೆಂಗಳೂರು ಮೂಲದ ದಿಶಾ ರವಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಷ್ಟಕ್ಕೂ  ದಿಶಾ ರವಿ ಯಾರು? ಅವರಿಗೂ ಈ ಪ್ರಕರಣಕ್ಕೂ ಏನು ಸಂಬಂಧ? ಟೂಲ್​ಕಿಟ್ ಎಂದರೇನು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ದಿಶಾ ರವಿ ಅರೆಸ್ಟ್​
ಟೂಲ್​ ಕಿಟ್​ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಪೊಲೀಸರು ತನಿಖೆ ಆರಂಭಿಸಿದ್ದರು. ಈ ತನಿಖೆಯ ಬೆನ್ನು ಹತ್ತಿ ಹೊರಟಾಗ ಬೆಂಗಳೂರಿನ ದಿಶಾ ರವಿ ಹೆಸರು ಬೆಳಕಿಗೆ ಬಂದಿತ್ತು. ಇವರು ಟೂಲ್​ ಕಿಟ್​ ಪ್ರಸಾರದಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎನ್ನಲಾಗಿದೆ. ಹೀಗಾಗಿ ಇವರ ವಿರುದ್ಧ ಐಪಿಸಿ ಸೆಕ್ಷನ್ 124ಎ (ದೇಶದ್ರೋಹ), 153ಎ (ಎರಡು ಗುಂಪಿನ ನಡುವೆ ವೈರತ್ವ ಬೆಳೆಸುವುದು) ಅಡಿ ಎಫ್ಐಆರ್ ದಾಖಲಾಗಿದೆ. ಬೆಂಗಳೂರಿಗೆ ಬಂದ ದೆಹಲಿ ಪೊಲೀಸರು ಶನಿವಾರ ಸೋಲದೇವನಹಳ್ಳಿಯಲ್ಲಿರುವ ದಿಶಾ ರವಿ ಅವರ ಮನೆಗೆ ತೆರಳಿ ವಶಕ್ಕೆ ಪಡೆದಿದ್ದಾರೆ. ಈಗಾಗಲೇ ದೆಹಲಿ ಪಟಿಯಾಲ ಕೋರ್ಟ್​ ಮುಂದೆ ಅವರನ್ನು ಹಾಜರುಪಡಿಸಲಾಗಿದ್ದು, ಕೋರ್ಟ್​ ಐದು ದಿನ ಪೊಲೀಸ್​ ವಶಕ್ಕೆ ನೀಡಿದೆ.

ದಿಶಾ-ಗ್ರೇಟಾ ಥನ್ ಬರ್ಗ್ ಪರಿಚಯ ಹೇಗೆ?
ಜಾಗತಿಕ ಮಟ್ಟದಲ್ಲಿ ಹವಾಮಾನ ಬದಲಾವಣೆ ಕುರಿತು 2018ರಲ್ಲಿ ದೊಡ್ಡ ಹೋರಾಟವನ್ನು ಹುಟ್ಟು ಹಾಕಿತ್ತು ಫ್ರೈಡೇ ಫಾರ್ ಫ್ಯೂಚರ್ ಸಂಸ್ಥೆ. ದಿಶಾ ಈ ಸಂಸ್ಥೆಯ ಸಹ ಸಂಸ್ಥಾಪಕಿ. ಹವಾಮಾನ ವೈಪರಿತ್ಯದ ಕುರಿತ ಜಾಗೃತಿ ಕಾರ್ಯಕ್ರಮಕ್ಕೆ ಅಂದು ಬೆಂಗಳೂರಲ್ಲಿ ಚಾಲನೆ ನೀಡಿದ್ದು ಇದೇ ಗ್ರೇಟಾ ಥನ್​ಬರ್ಗ್. ಹೀಗಾಗಿ, ಇಬ್ಬರ ನಡುವೆ ನಿಕಟ ಸಂಪರ್ಕವಿದೆ. ಹೀಗಾಗಿ, ಗ್ರೇಟಾ ಹಂಚಿಕೊಂಡಿದ್ದ ಟೂಲ್​​ ಕಿಟ್​ ಅನ್ನು ದಿಶಾ ಎಲ್ಲರಿಗೂ ಪ್ರಸಾರ ಮಾಡಿದ್ದಾರೆ ಎನ್ನಲಾಗಿದೆ.

ಖಾಸಗಿ ಕಂಪೆನಿಯಲ್ಲಿ ಕೆಲಸ
ಮೌಂಟ್​ ಕಾರ್ಮಲ್​ ಕಾಲೇಜಿನಲ್ಲಿ ಬಿಬಿಎ ಪದವಿ ಪೂರೈಸಿದ್ದ ದಿಶಾ ರವಿ, ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೊರೊನಾ ಕಾರಣದಿಂದ ಮನೆಯಲ್ಲೇ ಅವರು ಕೆಲಸ ಮಾಡುತ್ತಿದ್ದರು. ಈ ವೇಳೆ ಬಂದು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಇವರ ತಂದೆ, ಅಥ್ಲೆಟಿಕ್​ ಕೋಚ್​ ಆಗಿದ್ದಾರೆ.

ಏನಿದು ಟೂಲ್​ ಕಿಟ್​?
ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸಂಬಂಧಿಸಿ ಟೂಲ್​ಕಿಟ್​ ಒಂದನ್ನು ಗ್ರೇಟಾ ಟ್ವಿಟ್​ರ್​ನಲ್ಲಿ ಹಂಚಿಕೊಂಡಿದ್ದರು. ಟೂಲ್​​ಕಿಟ್​ ಎಂದರೆ, ಒಂದು ಪ್ರತಿಭಟನೆ ಅಥವಾ ಒಂದು ಕಾರ್ಯಕ್ರಮದ ಸಂಪೂರ್ಣ ರೂಪುರೇಷೆ. ಪ್ರತಿಭಟನೆ/ಕಾರ್ಯಕ್ರಮ ಹೇಗೆ ನಡೆಯಬೇಕು ಎನ್ನುವ ಮಾಹಿತಿ ಇದರಲ್ಲಿ ಇರುತ್ತದೆ. ಗ್ರೇಟಾ ಹಂಚಿಕೊಂಡಿದ್ದ ಟೂಲ್​ಕಿಟ್​ನಲ್ಲಿ , ಪ್ರತಿಭಟನೆಯಲ್ಲಿ ರೈತರು ಭಾಗವಹಿಸಬೇಕು, ವಿದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿ ಎದುರು ಪ್ರತಿಭಟನೆ ಮಾಡಬೇಕು, ಸ್ಥಳೀಯ ಸರ್ಕಾರಿ ಕಚೇರಿ ಅಥವಾ ಅದಾನಿ-ಅಂಬಾನಿಯಂಥ ದೊಡ್ಡ ದೊಡ್ಡ ಉದ್ಯಮಿಗಳ ಕಚೇರಿ ಎದುರು ಪ್ರತಿಭಟನೆ ಮಾಡಬೇಕು, ಗಣರಾಜ್ಯೋತ್ಸವ ದಿನದಂದು ರೈತರು ಟ್ರ್ಯಾಕ್ಟರ್​ ಜಾಥಾದಲ್ಲಿ ಹೆಚ್ಚೆಚ್ಚು ಪಾಲ್ಗೊಳ್ಳಬೇಕು ಎನ್ನುವುದಕ್ಕೆ ಸ್ಫೂರ್ತಿದಾಯಕವಾಗಿತ್ತು ಈ ಟೂಲ್​ಕಿಟ್​. ಆದರೆ, ಈ ಪ್ರತಿಭಟನೆ ಹಿಂಸಾಚಾರದೊಂದಿಗೆ ಅಂತ್ಯವಾಗಿತ್ತು. ಗ್ರೇಟಾ ಹಂಚಿಕೊಂಡ ಟೂಲ್​ಕಿಟ್​ ಅನ್ನು ದಿಶಾ ಪ್ರಸಾರ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ, ದೆಹಲಿ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಇದನ್ನೂ ಓದಿ:  ಟೂಲ್​ ಕಿಟ್​ ಪ್ರಕರಣ; ಐದು ದಿನ ಪೊಲೀಸ್​ ಕಸ್ಟಡಿಗೆ ದಿಶಾ ರವಿ