ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಕರ್ನಾಟಕ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಮಂಡ್ಯ, ಹಾವೇರಿ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಹಾಸನ, ವಿಜಯಪುರ, ತುಮಕೂರು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆಯಾಗಿದೆ. ಈ ಪೈಕಿ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿರುವ ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವೆಂಕಟರಾಮೇಗೌಡ (ಸ್ಟಾರ್ ಚಂದ್ರು) (Venkataramane Gowda aliya Star Chandru ) ಸಿಕ್ಕಿದೆ. ಇನ್ನು ಮೈತ್ರಿ ಪಕ್ಷಗಳಾದ ಜೆಡಿಎಸ್-ಬಿಜೆಪಿ ನಡುವೆ ಮಂಡ್ಯ ಕ್ಷೇತ್ರಕ್ಕೆ ಪೈಪೋಟಿ ನಡೆದಿದೆ. ಮೂಲಗಳ ಪ್ರಕಾರ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡಲು ಬಿಜೆಪಿ ಒಪ್ಪಿಕೊಂಡಿದೆ ಎನ್ನಲಾಗಿದೆ. ಆದ್ರೆ, ಜೆಡಿಎಸ್ನಿಂದ ಯಾರು ಸ್ಪರ್ಧೆ ಮಾಡುತ್ತಾರೆ ಎನ್ನುವ ಕುತೂಹಲ ಮೂಡಿಸಿದೆ. ಇನ್ನು ಭಾರೀ ಸದ್ದು ಮಾಡುತ್ತಿರುವ ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸುತ್ತಿರುವ ವೆಂಕಟರಾಮೇಗೌಡ (ಸ್ಟಾರ್ ಚಂದ್ರು) ಯಾರು ಎನ್ನುವುದನ್ನು ನೋಡುವುದಾರೆ ಸ್ಟಾರ್ ಚಂದ್ರು ಒಬ್ಬ ಉದ್ಯಮಿಯಾಗಿದ್ದಾರೆ. ಇವರು ಮೂಲತಃ ಮಂಡ್ಯ ಜಿಲ್ಲೆಯ ನಾಗಮಂಗಲದವರು. ಇನ್ನು ಬಚ್ಚೇಗೌಡ್ರ ಕುಟುಂಬಕ್ಕೆ ಬೀಗರು ಸಹ ಹೌದು.
ಸ್ಟಾರ್ ಬಿಲ್ಡರ್ಸ್ ಎಂಬ ಕಂಪನಿ ಇವರ ಒಡೆತನದಲ್ಲಿದ್ದು, ದೊಡ್ಡ ದೊಡ್ಡ ಮಟ್ಟದ ಕಾಮಗಾರಿಗಳನ್ನು ಇವರು ನಡೆಸುತ್ತಾರೆ. ಸದ್ಯ ನಡೆಯುತ್ತಿರುವ ವಿಸಿ ನಾಲೆ ಆಧುನೀಕರಣ ಕಾಮಗಾರಿ ಸಹ ಇವರ ಕಂಪನಿಯಿಂದಲೇ ಆಗುತ್ತಿದೆ. ಅಲ್ಲದೆ, ಇವರು ಸಚಿವ ಎನ್. ಚಲುವರಾಯ ಸ್ವಾಮಿ ಅವರ ಆಪ್ತರಾಗಿದ್ದಾರೆ. ಇನ್ನು ಸ್ಟಾರ್ ಚಂದ್ರು ಅವರಿಗೆ ಟಿಕೆಟ್ ಸಿಗಲು ಡಿಸಿಎಂ ಡಿಕೆ ಶಿವಕುಮಾರ್ ಕಾರಣ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಲೋಕಸಭಾ ಚುನಾವಣೆ: ಕರ್ನಾಟಕ ಸೇರಿದಂತೆ 39 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್
ಸ್ಟಾರ್ ಚಂದ್ರು ಅವರು ಗೌರಿಬಿದನೂರಿನ ಪಕ್ಷೇತರ ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಅವರ ಸಹೋದರ. ಪುಟ್ಟಸ್ವಾಮಿ ಗೌಡ್ರ ಮಗಳು ಪ್ರತಿಭಾ ಶರತ್ ಅವರು ಚಿಕ್ಕಬಳ್ಳಾಪುರದ ಹಾಲಿ ಸಂಸದ ಬಿ.ಎನ್.ಬಚ್ಚೇಗೌಡ್ರ ಮಗ ಶಾಸಕ ಶರತ್ ಬಚ್ಚೇಗೌಡರ ಪತ್ನಿ. ಹೀಗಾಗಿ ಸ್ಟಾರ್ ಚಂದ್ರು ಅವರು ಬಚ್ಚೇಗೌಡ ಕುಟುಂಬದ ಬೀಗರು ಎಂದು ತಿಳಿದುಬಂದಿದೆ.
ಸ್ಟಾರ್ ಚಂದ್ರು ಅವರು 1965ರ ಜೂನ್ 24ರಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕು, ಬೆಳ್ಳೂರು ಹೋಬಳಿಗೆ ಸೇರಿದ ಕನ್ನಾಘಟ್ಟ ಗ್ರಾಮದ ರೈತ ಕುಟುಂಬದಲ್ಲಿ ಅವರು ಜನಿಸಿದ್ದಾರೆ. ಅವರ ತಂದೆ ದಿವಂಗತ ಹೊನ್ನೇಗೌಡ ಮತ್ತು ತಾಯಿ ಶ್ರೀಮತಿ ಗಂಗಮ್ಮ. ದಂಪತಿಯ ಮೂವರು ಗಂಡು ಮಕ್ಕಳಲ್ಲಿ ಮೊದಲನೆಯವರು ಕೆ.ಎಚ್.ಪುಟ್ಟಸ್ವಾಮಿಗೌಡ. ಎರಡನೆಯವರು ಕೆ.ಎಚ್. ವೆಂಕಟೇಶ್ ಹಾಗೂ ಮೂರನೆಯವರು ವೆಂಕಟರಮಣೇಗೌಡ ಅಂದರೆ ’ಸ್ಟಾರ್ ಚಂದ್ರು’. ಇವರ ಜೊತೆಗೆ ನಾಲ್ವರು ಸೋದರಿಯರಿದ್ದ ದೊಡ್ಡ ಕುಟುಂಬದಲ್ಲಿ ಬೆಳೆದ ಸ್ಟಾರ್ ಚಂದ್ರು ಅವರಿಗೆ ಪತ್ನಿ ಕುಸುಮ ಮತ್ತು ಇಬ್ಬರು ಮಕ್ಕಳೂ ಇದ್ದಾರೆ.
ಆದಿಚುಂಚನಗಿರಿ ತಪೋಭೂಮಿಯ ಪರಿಸರದಲ್ಲಿ ಚಂದ್ರು ಅವರ ಬಾಲ್ಯ ಕಳೆದಿದ್ದಾರೆ. ಬೆಳ್ಳೂರು ಹೋಬಳಿಯ ಅಗಚಹಳ್ಳಿ ಮತ್ತು ಬೆಳ್ಳೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಮುಗಿಸಿ, ಆದಿಚುಂಚನಗಿರಿಯಲ್ಲಿ ಪಿಯುಸಿ ಶಿಕ್ಷಣ ಪಡೆದು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದರು. ಅವರು ವಿವೇಕಾನಂದ ಕಾಲೇಜಿನಲ್ಲಿ ವ್ಯಾಸಂಗ ಮುಂದುವರೆಸಿ ಬಿ.ಎಸ್‌ಸಿ ಪದವಿ ಪಡೆದಿದ್ದಾರೆ.
ನಾಗಮಂಗಲ ತಾಲ್ಲೂಕಿನ ಕನ್ನಾಘಟ್ಟದ ಹೊನ್ನೇಗೌಡರ ಮಗ ವೆಂಕಟರಮಣೇಗೌಡ ಅವರು ಉದ್ಯಮಿಯಾಗಿ ’ಸ್ಟಾರ್ ಚಂದ್ರು’ ಎಂದು ಗುರುತಿಸಿಕೊಂಡಿದ್ದಾರೆ. ಅವರ ಉದ್ಯಮ ಜೀವನವು ಪ್ರಾಮಾಣಿಕ ವ್ಯಕ್ತಿಯ, ಶ್ರಮಜೀವಿಯ ಸಾಹಸಗಾಥೆ. ಪದವಿ ಶಿಕ್ಷಣ ಪಡೆದ ನಂತರ ಸರ್ಕಾರಿ ಉದ್ಯೋಗ ಕೈಬೀಸಿ ಕರೆದರೂ ಅದನ್ನು ಒಪ್ಪದ ಅವರು, ಆರಂಭದಲ್ಲಿ ತಮ್ಮ ಹಿರಿಯಣ್ಣ ಕೆ.ಎಚ್.ಪುಟ್ಟಸ್ವಾಮಿಗೌಡ ಅವರು ಆರಂಭಿಸಿದ್ದ ಉದ್ದಿಮೆಯಲ್ಲಿ ಕೈಜೋಡಿಸಿದರು. ಪ್ರಾಮಾಣಿಕತೆ, ಸಜ್ಜನಿಕೆ ಮತ್ತು ಶ್ರಮದ ಆಧಾರದಿಂದ ಉದ್ದಿಮೆಗಳನ್ನು ಬೆಳೆಸಿ, ಯಶಸ್ಸು ಕಂಡ ವೆಂಕಟರಮಣೇಗೌಡ ಅವರು ತಮ್ಮ ಅನುಭವಗಳನ್ನೇ ಬಂಡವಾಳ ಮಾಡಿಕೊಂಡು ತಮ್ಮದೇ ಸ್ವತಂತ್ರ ಉದ್ದಿಮೆ ’ಸ್ಟಾರ್ ಇನ್ಫ್ರಾಟೆಕ್’ ಎಂಬ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿದರು. ಅದನ್ನು ಯಶಸ್ವಿಯಾಗಿ ಮುನ್ನಡೆಸಿ ’ಸ್ಟಾರ್ ಚಂದ್ರು’ ಎಂಬ ಹೆಸರಿನಿಂದ ಉದ್ಯಮ ಕ್ಷೇತ್ರದಲ್ಲಿ ಮನೆಮಾತಾದರು.
ತಮ್ಮ ಧೈರ್ಯ, ಮುನ್ನೋಟ ಮತ್ತು ಶ್ರಮದಿಂದ ಬೆಳೆಸಿದ ’ಸ್ಟಾರ್ ಇನ್ಫ್ರಾಟೆಕ್’ ಸಂಸ್ಥೆಯು ಈಗ ಬೆಂಗಳೂರಿನಲ್ಲಿ ಸುಮಾರು ನಾಲ್ಕು ಸಾವಿರ ಮಂದಿಗೆ ಉದ್ಯೋಗ ನೀಡಿದೆ. ಅವರು ಈಗ ಚಂದ್ರಣ್ಣ ಮಾತ್ರವಾಗಿ ಉಳಿದಿಲ್ಲ. ’ಸ್ಟಾರ್ ಚಂದ್ರು’ ಎಂದೇ ಖ್ಯಾತಿಯಾಗಿದ್ದಾರೆ.
ಈಗಾಗಲೇ ತನಗೇ ಟಿಕೆಟ್ ಸಿಗುತ್ತದೆ ಎಂಬ ನಂಬಿಕೆಯಲ್ಲಿ ಸ್ಟಾರ್ ಚಂದ್ರು ಅವರು ಮಂಡ್ಯ ಲೋಕಸಭಾ ಕ್ಷೇತ್ರ ಸಂಚಾರ ನಡೆಸಿದ್ದಾರೆ. ಸ್ಥಳೀಯ ನಾಯಕರನ್ನು ಮಾತನಾಡಿಸುವ ಕೆಲಸ ಆರಂಭಿಸಿದ್ದು, ತಾಲೂಕು ಮಟ್ಟದ, ಗ್ರಾಮ ಮಟ್ಟದ ಮುಖಂಡರ ಭೇಟಿ ಮಾಡಿ ವಿಶ್ವಾಸ ಗಳಿಸುವ ಪ್ರಯತ್ನ ನಡೆಸಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳಿಂದ ಸದ್ದಿಲ್ಲದೆ ಪ್ರಚಾರದಲ್ಲಿ ತೊಡಗಿದ್ದರು. ಈಗ ಅಧಿಕೃತವಾಗಿ ಪ್ರಚಾರವನ್ನು ಆರಂಭಿಸಲು ಸನ್ನದ್ಧರಾಗಿದ್ದಾರೆ.
ಇನ್ನು ಮಂಡ್ಯ ಕಾಂಗ್ರೆಸ್ ಟಿಕೆಟ್ ಸಿಗುವುದು ಪಕ್ಕಾ ಆಗುತ್ತಿದ್ದಂತೆಯೇ ಸ್ಟಾರ್ ಚಂದ್ರು ಅವರು ಸರ್ಕಾರಿ ಕಾರ್ಯಕ್ರಮಗಳಲ್ಲಿ ಗುರಿಸಿಕೊಳ್ಳುತ್ತಿದ್ದರು. ಖುದ್ದು ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಶಾಸಕರು, ಸಚಿವರು ಆದಿಯಾಗಿ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರು ಸ್ಟಾರ್ ಚಂದ್ರು ಅವರನ್ನು ಸರ್ಕಾರಿ ಕಾರ್ಯಕ್ರಮಗಳಿಗೆ ಆಹ್ವಾನಿಸಿ ಜನರಿಗೆ ಪರಿಚಯ ಮಾಡಿಕೊಡುವ ಕೆಲಸ ಮಾಡಿದ್ದರು. ಇತ್ತೀಚೆಗೆ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ನಡೆದಿದ್ದ ಗ್ಯಾರಂಟಿ ಯೋಜನೆಯ ಸರ್ಕಾರದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಸ್ಟಾರ್ ಚಂದ್ರು ಸಹ ವೇದಿಕೆ ಹಂಚಿಕೊಂಡಿದ್ದರು.