ಚನ್ನಪಟ್ಟಣದಲ್ಲಿ ಸ್ಪರ್ಧಿಸಲು ನಿಖಿಲ್ ಹಿಂಜರಿಯುತ್ತಿರುವುದೇಕೆ?ಇಲ್ಲಿವೆ ಪ್ರಮುಖ ಕಾರಣಗಳು
ಚನ್ನಪಟ್ಟಣದ ಚದುರಂಗದಾಟ ಮತ್ತಷ್ಟು ರಂಗೇರಿದೆ. ಅದಕ್ಕೆ ಕಾರಣ ಟಿಕೆಟ್ಗಾಗಿ ಪಟ್ಟು ಹಿಡಿದಿದ್ದ ಸಿ.ಪಿ.ಯೋಗೇಶ್ವರ್ ಇದೀಗ ಬಿಜೆಪಿಯ ವಿಧಾಮಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಿಂದ ಮೂರು ಕ್ಷೇತ್ರಗಳ ಪೈಕಿ ಹೈವೋಲ್ಟೇಜ್ ಎನಿಸಿರುವ ಚನ್ನಪಟ್ಟಣದ ಕದನ ಮೆಗಾವೋಲ್ಟೇಜ್ಗೆ ತಿರುಗಿದೆ. ಸಿಪಿ ಯೋಗೇಶ್ವರ್ ರಾಜೀನಾಮೆ ನೀಡಿದ ಬೆನ್ನಲ್ಲೇ ಜೆಡಿಎಸ್ನಲ್ಲಿ ಮಹತ್ವದ ರಾಜಕೀಯ ಬೆಳವಣಿಗಳು ನಡೆದಿದ್ದು, ಅಂದರ್ ಬಾಹರ್ ಅಸಲಿ ಆಟ ಈಗ ಶುರುವಾಗಿದೆ.
ಬೆಂಗಳೂರು, (ಅಕ್ಟೋಬರ್ 21): ಚನ್ನಪಟ್ಟಣ ಉಪಚುನಾವಣೆ ರಣಕಣದಲ್ಲಿ ಅಸಲಿ ಅಂದರ್ ಬಾಹರ್ ಆಟ ಶುರುವಾಗಿದೆ. ಕಾರ್ಡ್ ನಮ್ ಕೈಯಲ್ಲೇ ಇದೆ ಹೇಗೆ ಬೇಕಾದ್ರೂ ಆಡಬಹುದು ಅಂತಿದ್ದವರ ಮುಂದೆ, ಚನ್ನಪಟ್ಟಣದ ಸೈನಿಕ ಎಕ್ಕಾ, ರಾಜಾ, ರಾಣಿ ಎಲೆ ಹಾಕೋ ಮೂಲಕ ಬಿಸಿ ಮುಟ್ಟಿಸಿದ್ದಾರೆ. ಜೆಡಿಎಸ್ ಚಿಹ್ನೆ ಅಡಿ ಚನ್ನಪಟ್ಟಣದಲ್ಲಿ ಸ್ಪರ್ಧೆಗೆ ಆಫರ್ ಕೊಟ್ಟಿದ್ದರೂ ಸಹ ನಿರಾಕರಿಸಿರುವ ಯೋಗೇಶ್ವರ್ ನಿಂತರೆ ಬಿಜೆಪಿ ಬಾವುಟ ಹಿಡಿದೇ ನಿಲ್ಲುತ್ತೇನೆ. ಇಲ್ಲದೇ ಇದ್ದರೆ ನಂದು ಸ್ವತಂತ್ರ ದಾರಿ ಎಂದು ಸಿಡಿದೆದ್ದಿದ್ದಾರೆ. ಅದಕ್ಕಾಗಿ ಇಂದು ನೇರವಾಗಿ ಹುಬ್ಬಳ್ಳಿಗೆ ಹೋಗಿ ತಮ್ಮ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಜೆಡಿಎಸ್ನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದರೆ, ಕಾಂಗ್ರೆಸ್ ತೆರೆದಿದೆ ಮನೆ ಬಾ ಅತಿಥಿ ಅಂತಿದೆ. ಇದರಿಂದ ಚನ್ನಪಟ್ಟಣದ ಕದನ ಕುತೂಹಲ ಘಟ್ಟಕ್ಕೆ ತಿರುಗಿದೆ.
ಯೋಗೇಶ್ವರ್ ರಾಜೀನಾಮೆ ಬೆನ್ನಲ್ಲೇ ಜೆಡಿಎಸ್ ಮಹತ್ವದ ಸಭೆ
ಜೆಡಿಎಸ್ನಿಂದ ಸ್ಪರ್ಧಿಸುವಂತೆ ಕುಮಾರಸ್ವಾಮಿ ನೀಡಿದ್ದ ಆಫರ್ ಅನ್ನು ಸಿಪಿ ಯೋಗೇಶ್ವರ್ ತಿರಸ್ಕರಿಸಿ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರ ನಿವಾಸದಲ್ಲಿ ದಿಢೀರ್ ಸಭೆ ನಡೆಸಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ , ನಿಖಿಲ್ ಸೇರಿ ಜೆಡಿಎಸ್ ಮುಖಂಡರು ಸಭೆ ಮಾಡಿದ್ದು, ಮುಂದಿನ ರಾಜಕೀಯ ತಂತ್ರಗಳ ಬಗ್ಗೆ ಚರ್ಚಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಬಿರುಕು: ಪರಿಷತ್ ಸ್ಥಾನಕ್ಕೆ ಸಿಪಿ ಯೋಗೇಶ್ವರ್ ರಾಜೀನಾಮೆ
ನಿಖಿಲ್ ಸ್ಪರ್ಧಿಸಲು ಹಿಂಜರಿಯುತ್ತಿರುವುದ್ಯಾಕೆ?
ನಿಖಿಲ್ ಕುಮಾರಸ್ವಾಮಿಯನ್ನು ಕಣಕ್ಕಿಳಿಸುವಂತೆ ಸಭೆಯಲ್ಲಿ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದ್ರೆ, ಸ್ಪರ್ಧಿಸುವ ಬಗ್ಗೆ ನಿಖಿಲ್ ಆಸಕ್ತಿ ತೋರುತ್ತಿಲ್ಲ ಎಂಬ ಮಾಹಿತಿ ಲಭಿಸಿದೆ. ಯೋಗೇಶ್ವರ್ ಅವರು ಬಿಜೆಪಿ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ, ಚುನಾವಣೆಗೆ ಸ್ಪರ್ಧಿಸುವುದು ಖಚಿತಪಡಿಸಿದ್ದಾರೆ. ಈ ಕಾರಣಕ್ಕೆ ತಾನು ಸ್ಪರ್ಧಿಸಿದರೆ ಹಿನ್ನಡೆಯಾಗಬಹುದು ಎಂಬ ಭಯ ನಿಖಿಲ್ ಅವರಿಗೆ ಕಾಡುತ್ತಿದೆಯಂತೆ. ಈಗಾಗಲೇ ನಿಖಿಲ್ ಎರಡು ಚುನಾವಣೆಗಳಲ್ಲಿ ಸೋತು ಸುಣ್ಣವಾಗಿದ್ದಾರೆ. ಹೀಗಾಗಿ ಈ ಬೈ ಎಲೆಕ್ಷನ್ನಲ್ಲಿ ಸ್ಪರ್ಧಿಸಲ್ಲ ಎಂದು ಹೇಳುತ್ತಿದ್ದಾರಂತೆ.
ಪ್ರಮುಖವಾಗಿ ಸಿಪಿ ಯೋಗೇಶ್ವರ್ ಕಣದಲ್ಲಿದ್ದರೆ ಬಿಜೆಪಿಯ ಮತಗಳು ಕೈಕೊಡಲಿವೆ ಎನ್ನುವ ಆತಂಕ ಇದೆ. ಯಾಕಂದ್ರೆ ಕೆಲ ಬಿಜೆಪಿ ನಾಯಕರಿಂದ ಹಿಡಿದು ಮುಖಂಡರು ಯೋಗೇಶ್ವರ್ಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ. ಹೀಗಾಗಿ ಯೋಗೇಶ್ವರ್ ವಿರುದ್ಧ ಸ್ಪರ್ಧಿಸಿದರೆ ಬಿಜೆಪಿಯ ಕೆಲ ನಾಯಕರು, ಮುಖಂಡರು ಬೆಂಬಲ ನೀಡಲ್ಲ ಎನ್ನುವ ಭಯ ಇದೆ. ಅಲ್ಲದೇ ಕುಮಾರಸ್ವಾಮಿ ಮೇಲಿನ ಸಿಟ್ಟಿಗಾದರೂ ಸಹ ಡಿಕೆ ಶಿವಕುಮಾರ್, ಕಾಂಗ್ರೆಸ್ನಿಂದ ಡಮ್ಮಿ ಅಭ್ಯರ್ಥಿ ಹಾಕಿಸಿ ಒಳಗಿಂದೊಳಗೆ ಯೋಗೇಶ್ವರ್ಗೆ ಬೆಂಬಲಿಸಬಹುದು ಎನ್ನುವ ಆತಂಖ ನಿಖಿಲ್ಗೆ ಇದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ನಿಖಿಲ್ ಕಾಂಗ್ರೆಸ್ ಒಳ ಏಟಿನಿಂದ ಸೋಲಬೇಕಾಯ್ತು. ಈಗ ಚನ್ನಪಟ್ಟಣದಲ್ಲಿ ಬಿಜೆಪಿ ಒಳ ಏಟು ಕೊಟ್ಟರೆ ಹೇಗೆ ಎನ್ನುವ ಆತಂಕವಿದೆ. ಹೀಗಾಗಿ ಸ್ಪರ್ಧೆ ಮಾಡಲು ಹಿಂಜರಿಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಜೆಡಿಎಸ್ಗೆ ಬಿಗ್ ಶಾಕ್: ಬಿಜೆಪಿಗೆ ರಾಜೀನಾಮೆ ನೀಡದೇ ಪಕ್ಷೇತರವಾಗಿ ಸ್ಪರ್ಧೆ ಎಂದ ಯೋಗೇಶ್ವರ್
ನಾಳೆ ಮತ್ತೆ ಸಭೆ ಕರೆದ ಕುಮಾರಸ್ವಾಮಿ
ಇನ್ನು ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಲು ಆಸಕ್ತಿ ತೋರಿಸದಿದ್ದರಿಂದ ಕುಮಾರಸ್ವಾಮಿ ದಿಢೀರ್ ಚನ್ನಪಟ್ಟಣದ ಜೆಡಿಎಸ್ ಮುಖಂಡರ ಸಭೆ ಕರೆದಿದ್ದಾರೆ. ಕ್ಷೇತ್ರದ ಮುಖಂಡರು, ಕಾರ್ಯಕರ್ತರ ಸಭೆ ಕರೆದು ಅಭ್ಯರ್ಥಿ ಅಂತಿಮಗೊಳಿಸುವಂತೆ ಕುಮಾರಸ್ವಾಮಿಗೆ ದೇವೇಗೌಡರು ಸಹ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ನಾಳೆ (ಅಕ್ಟೋಬರ್ 22) ಬೆಂಗಳೂರಿನ ಜೆಪಿ ಭವನಕ್ಕೆ ಬರುವಂತೆ ಚನ್ನಪಟ್ಟಣ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರಿಗೆ ಬುಲಾವ್ ನೀಡಿದ್ದು, ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಿದರೆ ಹೇಗೆ ಎನ್ನುವ ಬಗ್ಗೆಯೂ ಮುಖಂಡರ ಜೊತೆ ಸುದೀರ್ಘವಾಗಿ ಚರ್ಚೆ ನಡೆಸಲಿದ್ದಾರೆ. ಅಲ್ಲದೇ ಈ ಸಭೆಯಲ್ಲಿ ಅಭ್ಯರ್ಥಿ ಯಾರೆಂದು ಫೈನಲ್ ಮಾಡಲಿದ್ದಾರೆ.
ಒಟ್ಟಿನಲ್ಲಿ ಸಿಪಿ ಯೋಗೇಶ್ವರ್ ರಾಜೀನಾಮೆ ಬೆನ್ನಲ್ಲೇ ಜೆಡಿಎಸ್ ಮನೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಅಂತಿಮವಾಗಿ ಯಾರಿಗೆ ಮಣೆ ಹಾಕಲಾಗುತ್ತೆ ಎನ್ನುವುದು ಕುತೂಹಲ ಮೂಡಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:33 pm, Mon, 21 October 24