ಬೆಂಗಳೂರು, (ಡಿಸೆಂಬರ್ 17): ಕರ್ನಾಟಕ ಬಿಜೆಪಿಯಲ್ಲಿ ಕೆಲ ಮಹತ್ವದ ಬೆಳವಣಿಗೆಗಳು ನಡೆದಿವೆ. ಜನವರಿಯಲ್ಲಿ ರಾಜ್ಯ ಘಟಕದಲ್ಲಿ ಮೇಜರ್ ಸರ್ಜರಿಯಾಗುತ್ತೆ ಎನ್ನುವ ಚರ್ಚೆಗಳು ಜೋರಾಗಿವೆ. ಮತ್ತೊಂದೆಡೆ ಹೈಕಮಾಂಡ್ಗೆ ಸಂದೇಶ ರವಾನಿಸಲು ರಾಜ್ಯಾಧ್ಯಕ್ಷ ವಿಜಯೇಂದ್ರ ಬೆಂಬಲಿಗರು ಯಡಿಯೂರಪ್ಪ ಉತ್ಸವವನ್ನ ಮಾಡಲು ಮುಂದಾಗಿದ್ದಾರೆ. ನಿಮಗೆ ನೆನಪಿರಬಹುದು ವಿಪಕ್ಷದಲ್ಲಿದ್ದಾಗ ಸಿದ್ದರಾಮಯ್ಯ ತಮ್ಮ ಹುಟ್ಟುಹಬ್ಬವನ್ನ ಸಿದ್ದರಾಮೋತ್ಸವ ಎಂಬ ಹೆಸರಿನಡೆ ಆಚರಿಸಿ ಅಬ್ಬರಿಸಿದ್ದರು. ಈಗ ಯಡಿಯೂರಪ್ಪ ಬೆಂಬಲಿಗರ ಸರದಿ. ಸಿದ್ದರಾಮೋತ್ಸವ ಮಾದರಿಯಲ್ಲೇ ಯಡಿಯೂರಪ್ಪ ಹುಟ್ಟುಹಬ್ಬವನ್ನ ದಾವಣಗೆರೆಯಲ್ಲಿ ಆಚರಿಸುವುದಕ್ಕೆ ವಿಜಯೇಂದ್ರ ಬೆಂಬಲಿಗರು ಮುಂದಾಗಿದ್ದಾರೆ. ಸುಮಾರು 20 ಲಕ್ಷಕ್ಕೂ ಅಧಿಕ ಜನರನ್ನ ಸೇರಿಸಿ, ರಾಷ್ಟ್ರೀಯ ನಾಯಕರನ್ನು ಕರೆಸಲು ಪ್ಲ್ಯಾನ್ ಸಿದ್ಧವಾಗಿದೆ.
ರಾಜಕೀಯದಲ್ಲಿ ಶಕ್ತಿ ಪ್ರದರ್ಶನವು ಮುಖ್ಯ. ನೀವು ತಾಕತ್ ಇರುವ ವ್ಯಕ್ತಿ ಎಂಬುದನ್ನ ಆಗಾಗ ಪ್ರೂವ್ ಮಾಡಲೇಬೇಕು. ಹೀಗಾಗಿ ರಾಜ್ಯ ಬಿಜೆಪಿಯ ರಾಜಹುಲಿ ಟೈಗರ್ ಜಿಂದಾ ಹೇ ಎಂಬ ಮೆಸೇಜ್ ಅನ್ನ ಬೆಂಬಲಿಗರ ಮೂಲಕ ಪಾಸ್ ಮಾಡುತ್ತಿದೆ. ಬಿಜೆಪಿಯಲ್ಲಿ ಬಣ ಮತ್ತು ಬಣ್ಣ ಎರಡನ್ನು ಬದಲಾಯಿಸುವ ನಾಯಕರಿಗೆ ತಮ್ಮ ಮೇಲುಗೈ ತೋರಿಸುವ ಯತ್ನವನ್ನ ಬಿಎಸ್ ವೈ ಟೀಮ್ ಮಾಡುತ್ತಿದೆ.
ಇದನ್ನೂ ಓದಿ: ಮತ್ತೆ ಸೈಲೆಂಟ್, ವೈಲೆಂಟ್ ಆಟ ಮುಂದುವರಿಸಿದ ಯತ್ನಾಳ್ ಟೀಂ: ಬೆಳಗಾವಿಯಲ್ಲಿ ರೆಬೆಲ್ಸ್ ಮಹತ್ವದ ಸಭೆ
ದೆಹಲಿಯಲ್ಲಿ ಕೂತಿರುವ ಕೆಲ ನಾಯಕರೇ ಈಗ ರೆಬೆಲ್ ಟೀಮ್ ಗೆ ಕೀಲಿ ಕೊಟ್ಟು ಗೊಂಬೆ ಆಡಿಸುತ್ತಿದ್ದಾರೆ ಎಂಬ ಮಾತಿದೆ. ಹೀಗಾಗಿ ದೆಹಲಿ ಮೂಲೆಯಲ್ಲಿ ಕುಳಿತ ನಾಯಕರು ಸೇರಿದಂತೆ ಹೈಕಮಾಂಡ್ ನಾಯಕರಿಗೆ ನಿಜ ಶಕ್ತಿ ಪ್ರದರ್ಶನ ಮಾಡಲು ರೇಣುಕಾಚಾರ್ಯ ಗೆಳೆಯರ ಬಳಗ ಓಡಾಡುತ್ತಿದೆ. ಈಗಾಗಲೇ ಅನೇಕ ಕಾರ್ಯಕಾರ್ತರು ನಾಯಕರು ಬೇಲಿ ಮೇಲೆ ಕೂತೇ ಮುಂದಾಗುವ ಆಟವನ್ನ ನೋಡುತ್ತಿದ್ದಾರೆ.
ಮುಂಬರುವ ಚುನಾವಣೆಗೂ ಮುನ್ನ ಅಂತಹ ನಾಯಕರನ್ನ ತಮ್ಮತ್ತ ಸೆಳೆಯಲು ಈ ಟೀಮ್ ಪ್ರಯತ್ನಿಸುತ್ತಿದೆ. ಈ ಮೂಲಕ ಪಕ್ಷದ ಮೇಲೆ ಸ್ಪಷ್ಟ ಬಿಗಿ ಹಿಡಿತ ಸಾಧಿಸಲು ಮುಂದಾಗಿದೆ. ಈ ಹಿಂದೆ ಸಿದ್ದರಾಮೋತ್ಸವದ ಮೂಲಕ ರಾಜ್ಯದಲ್ಲಿ ಹೊಸದೊಂದು ರಾಜಕೀಯ ಅಲೆ ಸೃಷ್ಠಿಯಾಗಿತ್ತು. ಈಗ ಅದೇ ಮಾದರಿಯಲ್ಲಿ ರಾಜಕೀಯವಾಗಿ ಅಬ್ಬರಿಸಲು ವಿಜಯೇಂದ್ರ ಟೀಮ್ ರೆಡಿಯಾಗುತ್ತಿದೆ. ಹೀಗೆ ರಾಜಕೀಯ ಘರ್ಜನೆ ಮೂಲಕ ವಿಜಯೇಂದ್ರಗೆ ಇನ್ನಷ್ಟು ಶಕ್ತಿ ತುಂಬುವ ಪ್ಲಾನ್ ಇವರದ್ದಾಗಿದೆ. ಅಲ್ಲದೇ ಒಂದೇ ಏಟಲ್ಲಿ ಎರಡು ಹಕ್ಕಿ ಎಂಬಂತೆ ಯತ್ನಾಳ್ ಟೀಮ್ ಗೂ ಕೌಂಟರ್ ನೀಡಲು ರೆಡಿಯಾಗಿದ್ದಾರೆ.
ಇನ್ನು ಹಾಗಂತ ಯತ್ನಾಳ್ ತಂಡ ಸಹ ಸುಮ್ಮನೆ ಕೂತಿಲ್ಲ. ಅವರ ಸಹ ತಮ್ಮ ಬತ್ತಳಿಕೆಯಿಂದ ಪ್ರತ್ಯಾಸ್ತ್ರಗಳನ್ನ ಹೂಡುತ್ತಿದೆ. ನಮ್ಮಲ್ಲಿ ಯಾವುದೇ ಬರ್ತ್ ಡೇ ,ತಿಥಿ ಮಾಡೋ ಪದ್ದತಿ ಇಲ್ಲ ಎನ್ನುವ ಮೂಲಕ ಇದೆಲ್ಲ ಪಕ್ಷದಲ್ಲಿ ನಡೆಯುವುದಿಲ್ಲ ಅಂತಿದ್ದಾರೆ. ಅಷ್ಟೇ ಅಲ್ಲದೇ ಪಕ್ಷ ಕಟ್ಟಿದವರು ಯಡಿಯೂರಪ್ಪ ಒಬ್ಬರೇ ಅಲ್ಲ. ಅವರು ರಾಜ್ಯ ಸುತ್ತಿದ್ರೆ ಅವರ ಗಾಡಿಗೆ ಪೆಟ್ರೋಲ್ ಡೀಸೆಲ್ ಹಾಕಿಸಿದ್ದೇ ನಾವು ಎಂದು ಯತ್ನಾಳ್ ಗುಡುಗಿದ್ದಾರೆ.
ಇನ್ನು ಯಡಿಯೂರಪ್ಪ ಬಣಕ್ಕೆ ತಿರುಗೇಟು ನೀಡಲು ತನ್ನದೇ ಆದ ತಂತ್ರಗಾರಿಕೆಯನ್ನ ಹೆಣೆಯುತ್ತಿದೆ. ಅತ್ತ ಬಿಎಸ್ವೈ ಟೀಮ್, ಬರ್ತ್ ಡೇ , ಸಮಾವೇಶ ಅಂತಾ ಮಾಡ್ತಾ ಯತ್ನಾಳ್ ಬಣ ಮತ್ತೊಮ್ಮೆ ವಕ್ಫ್ ವಿಚಾರ ಮುಂದಿಟ್ಟು ರಾಜ್ಯ ಸುತ್ತಲು ರೆಡಿಯಾಗುತ್ತಿದೆ. ಬಳಿಕ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರ ಜತೆ ವಕ್ಫ್ ಜೆಪಿಸಿ ನಾಯಕರನ್ನು ಸಹ ಭೇಟಿ ಮಾಡುಲು ತೀರ್ಮಾನಿಸಿದೆ. ಅಲ್ಲದೇ ಅಗತ್ಯ ಬಿದ್ರೆ, ದೊಡ್ಡದೊಂದು ಸಮಾವೇಶ ಮಾಡಿ ಈ ಮೂಲಕ ಸಂದೇಶ ರವಾನಿಸಲು ಸಹ ಚಿಂತನೆ ನಡೆಸಿದೆ.
ಅಲ್ಲದೇ ಪಕ್ಷ ನಾಯಕತ್ವ ಬದಲಾವಣೆ ಜತೆ ಜತೆಗೆ ಪದಾಧಿಕರು ಬದಲಾವಣೆ ಆಗಲೇ ಬೇಕು ಎಂದು ಪಟ್ಟು ಹಿಡಿದಿದೆ. ಈಗಿರುವ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಈಗಾಗಲೇ ಗೃಹ ಇಲಾಖೆ, ಕಂದಾಯ ಇಲಾಖೆ ಅಂತಾ ಖಾತೆ ಹಂಚಿಕೆ ಮಾಡಿಕೊಂಡವರಂತೆ ವರ್ತಿಸುತ್ತಿದ್ದಾರೆ. ಎಲ್ಲರನ್ನು ಒಟ್ಟಾಗಿ ಕರೆದೊಯ್ಯುತ್ತಿಲ್ಲ. ಜತೆಗೆ ಅನುಭವಿಗಳಿಗಿಂತ ಎಳೆ ನಿಂಬೇಕಾಯಿಗಳೇ ಇರೋದು, ಮೂರು ಹೆತ್ತವಳು ಹದಿಮೂರು ಹೆತ್ತವಳಿಗೆ ಸಲಹೆ ಕೊಡುವಂತಾಗಿದೆ ಎಂಬುದು ಯತ್ನಾಳ್ ಬಣದ ಮಾತು.
ಇಷ್ಟೆಲ್ಲದರ ನಡುವೆಯೇ ಬಣ ಬಡಿದಾಟಕ್ಕೆ ಸಾಕ್ಷಿ ಎಂಬಂತೆ ಬೆಳವಣಿಗಳೂ ನಡೆದಿದೆ. ವಿಧಾನಸಭೆ ಮೊಗಸಾಲೆಯಲ್ಲಿ ಬಿಜೆಪಿ ಪ್ರತ್ಯೇಕ ಮಿತ್ರಕೂಟದ ಸದಸ್ಯರು ಒಟ್ಟಿಗೆ ಸೇರಿರೋದು ಅಚ್ಚರಿಗೆ ಕಾರಣವಾಯ್ತು, ವಿಪಕ್ಷ ನಾಯಕ ಆರ್. ಅಶೋಕ್ ಕೊಠಡಿಯಲ್ಲಿ ಯತ್ನಾಳ್ ಟೀಮ್ ಪ್ರತ್ಯಕ್ಷವಾಯ್ತು. ಇದೇ ವೇಳೆ ಎಲ್ಲಾ ಬೆಳವಣಿಗೆಯನ್ನ ತಿಳಿದು ಆರ್.ಅಶೋಕ್ ಕೊಠಡಿಗೆ ಬರ್ತಿದ್ದ ವಿಜಯೇಂದ್ರ ವಾಪಾಸ್ ಆಗಿದ್ದಾರೆ.
ಏನೇ ಆಗಲಿ , ವಿಪಕ್ಷವಾಗಿ ರಾಜ್ಯ ಸರ್ಕಾರದ ವಿರುದ್ದ ಹೋರಾಟ ನಡೆಸ ಬೇಕಿದ್ದು ಬಿಜೆಪಿ ದಾಯಾದಿ ಕಲಹದ ಬೇಯುತ್ತಿದೆ. ಅಂದು ಮೈ ಮೇಲೆ ಬಟ್ಟೆ ಇಲ್ಲದೇ ಇದ್ದರೂ ಕೈಯಲ್ಲಿ ಬಿಜೆಪಿ ಬಾವುಟ ಹಿಡಿದು ಬಿಜೆಪಿಯೇ ಪರಿಹಾರ ಎಂದಿದ್ದ ಸಾಮಾನ್ಯ ಕಾರ್ಯಕರ್ತ ಈಗ ಬಿಜೆಪಿಗೇನು ಪರಿಹಾರ ಅಂತಿದ್ದಾನೆ. ಕೆಸರಲ್ಲೇ ಕಮಲ ಅರಳೋದು ಎಂಬುದು ನಿಜವಾದರೂ ಅರಳಿದ ಕಮಲಕ್ಕೆ ಕೆಸರು ಸುರಿದರೆ ಯಾರು ತಾನೇ ರಕ್ಷಿಸಲು ಸಾಧ್ಯ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:09 pm, Tue, 17 December 24