
ಬೆಂಗಳೂರು, ಜನವರಿ 30: ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕಿರುವ ಖಾಸಗಿ ಶಾಲೆಗಳು (Private Schools) ಶುಲ್ಕದ ಹೆಸರಲ್ಲಿ ಪೋಷಕರ ಕನಸುಗಳನ್ನು ನುಚ್ಚುನೂರು ಮಾಡುತ್ತಿವೆ ಎಂಬ ಆರೋಪ ಬಲವಾಗಿ ಕೇಳಿಬಂದಿದ್ದು, ಮನಸ್ಸಿಗೆ ಬಂದಂತೆ ಶುಲ್ಕ ಹೆಚ್ಚಿಸುತ್ತಿರುವ ಖಾಸಗಿ ಶಾಲೆಗಳಿಗೆ ಮೂಗುದಾರ ಹಾಕಲು ಸರ್ಕಾರಕ್ಕೆ ಆಗ್ರಹಿಸಲಾಗಿದೆ. ರಾಜ್ಯದಲ್ಲಿ ಶಾಲಾ ಶುಲ್ಕ ನಿಯಂತ್ರಣ ಕಮಿಟಿ ಜಾರಿ ಮಾಡುವಂತೆ ಪೋಷಕರು ದಶಕಗಳಿಂದ ಒತ್ತಾಯಿಸುತ್ತಿದ್ದಾರೆ. ಶಿಕ್ಷಣ ಇಲಾಖೆಯು ಈ ಖಾಸಗಿ ಶಾಲೆಗಳ ಅನಿಯಂತ್ರಿತ ಶುಲ್ಕಕ್ಕೆ ಬ್ರೇಕ್ ಹಾಕುವಲ್ಲಿ ವಿಫಲವಾಗಿದೆ ಎಂದು ಹೇಳಲಾಗಿದೆ.
ಈ ಮನವಿಗೆ ಪ್ರಸ್ತುತ ಸಚಿವ ಮಧು ಬಂಗಾರಪ್ಪ ಅವರು ಸ್ಪಂದಿಸುತ್ತಾರೆ ಎಂಬ ನಿರೀಕ್ಷೆಯಿದೆ ಎಂದು ಪೋಷಕರು ತಿಳಿಸಿದ್ದಾರೆ. ತಮಿಳುನಾಡು ಸರ್ಕಾರವು ಇತ್ತೀಚೆಗೆ ಶಾಲೆಗಳ ಶುಲ್ಕ ಸಂಗ್ರಹ ನಿಯಂತ್ರಣ ತಿದ್ದುಪಡಿ ಕಾಯ್ದೆಯನ್ನು ಅಂಗೀಕರಿಸಿದ್ದು, ಖಾಸಗಿ ಶಾಲೆಗಳ ಅನಿಯಂತ್ರಿತ ಶುಲ್ಕ ಹೆಚ್ಚಳ ತಡೆಯಲು ಮತ್ತು ಪೋಷಕರಿಗೆ ಪರಿಹಾರ ನೀಡಲು ಈ ಕಾಯ್ದೆಯನ್ನು ಜಾರಿಗೊಳಿಸಿದೆ. ಇದೇ ಮಾದರಿಯನ್ನು ಕರ್ನಾಟಕದಲ್ಲಿಯೂ ಜಾರಿಗೆ ತರುವಂತೆ ಕೂಗು ಎದ್ದಿದೆ.
ತಮಿಳುನಾಡಿನ ಕಾಯ್ದೆಯ ಪ್ರಕಾರ, ಸರ್ಕಾರವೇ ಖಾಸಗಿ ಶಾಲೆಗಳ ಶುಲ್ಕ ಮಿತಿಯನ್ನು ನಿಗದಿಪಡಿಸುತ್ತದೆ. ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಏಳು ಜನರ ಸಮಿತಿ ರಚನೆಯಾಗಲಿದ್ದು, ಈ ಸಮಿತಿ ನಿಗದಿಪಡಿಸಿದ ಶುಲ್ಕವೇ ಎಲ್ಲಾ ಖಾಸಗಿ ಶಾಲೆಗಳಿಗೂ ಮೂರು ಶೈಕ್ಷಣಿಕ ವರ್ಷಗಳ ಅವಧಿಗೆ ಕಡ್ಡಾಯವಾಗಲಿದೆ.
ತಮಿಳುನಾಡು ಮಾದರಿ ಕಾಯ್ದೆಗೆ ಖಾಸಗಿ ಶಾಲೆಗಳ ಒಕ್ಕೂಟದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ರಾಜ್ಯದಲ್ಲೂ ಇದನ್ನು ಜಾರಿಗೆ ತಂದರೆ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡುವುದಾಗಿ ಅವರು ಹೇಳಿಕೊಂಡಿದ್ದಾರೆ. ಕೆಲವು ಖಾಸಗಿ ಶಾಲೆಗಳ ಪ್ರತಿನಿಧಿಗಳ ಪ್ರಕಾರ, ತಮಿಳುನಾಡು ಮಾದರಿ ಎಂದು ಕೆಲವರು ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆ. ಈ ಕಾಯ್ದೆಯು ಕಾನೂನು ವಿರುದ್ಧವಾಗಿದ್ದು, ಸಂವಿಧಾನಾತ್ಮಕವಾಗಿಲ್ಲ ಎಂದು ಅವರು ವಾದಿಸಿದ್ದಾರೆ.
ತಮಿಳುನಾಡಿನಲ್ಲಿಯೂ ‘ತ್ರೀ ಮ್ಯಾನ್ ಕಮಿಟಿ’ ರಚನೆಯಾಗಿ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಆ ಕಾಯ್ದೆಗೆ ನ್ಯಾಯಾಲಯದಿಂದ ಸ್ಟೇ (ತಡೆಯಾಜ್ಞೆ) ಕೂಡ ಇದ್ದು, ಅದು ಚಾಲ್ತಿಯಲ್ಲಿ ಇಲ್ಲ ಎಂದು ಹೇಳಲಾಗಿದೆ. ಖಾಸಗಿ ಶಾಲೆಗಳ ಒಕ್ಕೂಟವು ಈ ಕಾಯ್ದೆಗೆ ತಮ್ಮ ವಿರೋಧವಿದೆ ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ನೀಟ್ ಯುಜಿ ಪಾಸಾಗದೆಯೂ ನೀವು ವೈದ್ಯರಾಗಬಹುದು; ವಿವಿಧ ಕೋರ್ಸ್‌ಗಳ ವಿವರ ಇಲ್ಲಿದೆ
ಪೋಷಕರ ಹಿತಾಸಕ್ತಿ ಮತ್ತು ಖಾಸಗಿ ಶಾಲೆಗಳ ಹಿತಾಸಕ್ತಿಯ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಸರ್ಕಾರದ ಮುಂದಿರುವ ದೊಡ್ಡ ಸವಾಲಾಗಿದೆ. ನಮ್ಮ ರಾಜ್ಯ ಸರ್ಕಾರ ಈ ಕುರಿತು ಯಾವ ನಿರ್ಧಾರಕ್ಕೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
Published On - 7:49 am, Fri, 30 January 26