ಮಲೆನಾಡಿನಲ್ಲಿ ಮತ್ತೆ ಮಂಗನಕಾಯಿಲೆ ಭೀತಿ: ಶಿವಮೊಗ್ಗದಲ್ಲಿ ಮೊದಲ ಬಲಿ, ಚಿಕ್ಕಮಗಳೂರಿನಲ್ಲಿ ಹೆಚ್ಚಿದ ಆತಂಕ
ಚಿಕ್ಕಮಗಳೂರಿನಲ್ಲಿ ಮಂಗನಕಾಯಿಲೆ (ಕೆಎಫ್‌ಡಿ) ಆತಂಕ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 9 ಪ್ರಕರಣಗಳು ದೃಢಪಟ್ಟಿದ್ದು, ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ರೋಗ ಹರಡದಂತೆ ತಡೆಯಲು ರಕ್ತ ಮಾದರಿ ಸಂಗ್ರಹಿಸಿ, ಕಾಡಂಚಿನ ಗ್ರಾಮಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಏತನ್ಮಧ್ಯೆ, ಶಿವಮೊಗ್ಗದಲ್ಲಿ ಈ ಕಾಯಿಲೆಯಿಂದ ಈ ವರ್ಷ ಮೊದಲ ಸಾವು ಸಂಭವಿಸಿದ್ದು, ಅತಂಕ ಹೆಚ್ಚಳಕ್ಕೆ ಕಾರಣವಾಗಿದೆ.

ಚಿಕ್ಕಮಗಳೂರು, ಜನವರಿ 30: ಮಲೆನಾಡು ಭಾಗದಲ್ಲಿ ಚಳಿ ಕಡಿಮೆಯಾಗುತ್ತಿದ್ದಂತೆಯೇ ಈ ಭಾಗದ ಜನರನ್ನು ಪ್ರತಿ ವರ್ಷ ಕಾಡುವ ಮಂಗನಕಾಯಿಲೆ (KFD – Kyasanur Forest Disease) ಮತ್ತೆ ಆತಂಕ ಸೃಷ್ಟಿಸಿದೆ. ರಾಜ್ಯದ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈ ರೋಗ ಪತ್ತೆಯಾಗಿದ್ದು, ಈಗಾಗಲೇ ಶಿವಮೊಗ್ಗದಲ್ಲಿ ವರ್ಷದ ಮೊದಲ ಬಲಿ ಸಂಭವಿಸಿರುವುದು ಸಾರ್ವಜನಿಕರಲ್ಲಿ ಭೀತಿ ಹೆಚ್ಚಿಸಿದೆ.
ಕಾಫಿನಾಡಿನಲ್ಲಿ 9 ಪ್ರಕರಣಗಳು ಪತ್ತೆ
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ತಾಲೂಕುಗಳಾದ ಎನ್.ಆರ್. ಪುರ, ಶೃಂಗೇರಿ, ಕೊಪ್ಪ ಮತ್ತು ಚಿಕ್ಕಮಗಳೂರು ತಾಲೂಕುಗಳಲ್ಲಿ ಕೆ.ಎಫ್.ಡಿ ಲಕ್ಷಣಗಳು ಕಾಣಿಸಿಕೊಂಡಿವೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 9 ಪ್ರಕರಣಗಳು ದೃಢಪಟ್ಟಿದ್ದು, ಈ ಪೈಕಿ 6 ಮಂದಿ ಗುಣಮುಖರಾಗಿದ್ದಾರೆ. ಉಳಿದಂತೆ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಬ್ಬರು ಕೊಪ್ಪ ಸರ್ಕಾರಿ ಆಸ್ಪತ್ರೆಯ ಕೆ.ಎಫ್.ಡಿ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಒಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಎನ್.ಆರ್. ಪುರ ತಾಲೂಕಿನ ಬಾಳೆಹೊನ್ನೂರು ಮತ್ತು ಕೊಪ್ಪದ ಅರಳಿಕೊಪ್ಪದಲ್ಲಿ ಪ್ರತ್ಯೇಕ ಪ್ರಕರಣಗಳು ವರದಿಯಾಗಿವೆ. ವಿಶೇಷವೆಂದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂವರು ಎನ್.ಆರ್. ಪುರ ತಾಲೂಕಿನ ಮೇಗರಮಕ್ಕಿ ಗ್ರಾಮದವರಾಗಿದ್ದಾರೆ.
ಆರೋಗ್ಯ ಇಲಾಖೆ ಕಟ್ಟೆಚ್ಚರ
ರೋಗ ಹರಡದಂತೆ ತಡೆಯಲು ಆರೋಗ್ಯ ಇಲಾಖೆ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಈಗಾಗಲೇ ಸುಮಾರು 595ಕ್ಕೂ ಹೆಚ್ಚು ಜನರ ರಕ್ತದ ಮಾದರಿಯನ್ನು ಸಂಗ್ರಹಿಸಿ ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಕಾಡಂಚಿನ ಗ್ರಾಮಗಳಲ್ಲಿ ಸಿಬ್ಬಂದಿಯನ್ನು ನಿಯೋಜಿಸಿ ಜಾಗೃತಿ ಮೂಡಿಸಲಾಗುತ್ತಿದೆ.
ಮಂಗನಕಾಯಿಲೆ ಲಕ್ಷಣಗಳೇನು? ಮುನ್ನೆಚ್ಚರಿಕೆ ಹೇಗೆ?
ಜ್ವರ ಅಥವಾ ವಿಪರೀತ ಮೈ ಕೈ ನೋವು ಪ್ರಮುಖ ಲಕ್ಷಣವಾಗಿದ್ದು, ಕಾಣಿಸಿಕೊಂಡರೆ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಬೇಕು ಎಂದು ಸಲಹೆ ನೀಡಲಾಗಿದೆ. ಅಲ್ಲದೆ, ಕಾಡು ಅಥವಾ ತೋಟಗಳಿಗೆ ತೆರಳುವ ಮುನ್ನ ಮೈ ಪೂರ್ತಿ ಮುಚ್ಚುವಂತಹ ಬಟ್ಟೆ ಧರಿಸಬೇಕು. ಅರಣ್ಯ ಇಲಾಖೆ ಸೂಚಿಸಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕು ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.
ಇದನ್ನೂ ಓದಿ: ಶಿವಮೊಗ್ಗ: ಮಲೆನಾಡಿನಲ್ಲಿ ಮತ್ತೆ ಶುರುವಾದ ಮಂಗನಕಾಯಿಲೆ ಆತಂಕ, ಕೆಎಫ್‌ಡಿ ವೈರಸ್ ಪತ್ತೆ
ಒಟ್ಟಿನಲ್ಲಿ, ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಕೆಎಫ್ಡಿಯಿಂದಾಗಿ ಸಾವು ಸಂಭವಿಸಿರುವುದು ನೆರೆಯ ಜಿಲ್ಲೆಯಾದ ಚಿಕ್ಕಮಗಳೂರಿನ ಜನರಲ್ಲಿ ಆತಂಕ ಇಮ್ಮಡಿಗೊಳಿಸಿದೆ. ಹೀಗಾಗಿ ತೋಟದ ಕೆಲಸಕ್ಕೆ ತೆರಳುವಾಗ ಕಾರ್ಮಿಕರು ಹೆಚ್ಚಿನ ಜಾಗ್ರತೆ ವಹಿಸುವುದು ಅನಿವಾರ್ಯವಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:18 am, Fri, 30 January 26
