ಶಿವಮೊಗ್ಗ: ಮಲೆನಾಡಿನಲ್ಲಿ ಮತ್ತೆ ಶುರುವಾದ ಮಂಗನಕಾಯಿಲೆ ಆತಂಕ, ಕೆಎಫ್‌ಡಿ ವೈರಸ್ ಪತ್ತೆ
ಕಳೆದ ಬೇಸಿಗೆಯಲ್ಲಿ ಶಿವಮೊಗ್ಗ ಸೇರಿದಂತೆ ಮಲೆನಾಡಿನ ವಿವಿಧೆಡೆ ಮಂಗನಕಾಯಿಲೆ ಜನರನ್ನು ಆತಂಕಕ್ಕೀಡುಮಾಡಿತ್ತು. ಇದೀಗ ಈ ವರ್ಷ ಬೇಸಿಗೆ ಆರಂಭದ ಮೊದಲೇ ಮಲೆನಾಡಿನ ಜನರಿಗೆ ಭಯ ಶುರುವಗಿದೆ. ತೀರ್ಥಹಳ್ಳಿ ತಾಲ್ಲೂಕಿನ ಬೆಟ್ಟಬಸವಾನಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಉಣುಗುವಿನಲ್ಲಿ ಕೆಎಫ್‌ಡಿ ವೈರಸ್ ಕಂಡು ಬಂದಿದ್ದು, ಮತ್ತಷ್ಟು ಆತಂಕಕ್ಕೆ ಎಡೆಮಾಡಿದೆ.
ಶಿವಮೊಗ್ಗ, ಡಿಸೆಂಬರ್ 28: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಬೆಟ್ಟಬಸವಾನಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಜಗ್ಗಿನಗದ್ದೆ ಬಳಿ ಉಣುಗುಗಳಲ್ಲಿ ಕೆಎಫ್‌ಡಿ ವೈರಸ್ ಕಾಣಿಸಿಕೊಂಡಿದೆ. ಸದ್ಯ ಐದು ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯನ್ನು ಹಾಟ್‌ಸ್ಪಾಟ್ ಎಂದು ಗುರುತಿಸಲಾಗಿದೆ. ಕಳೆದ ಬಾರಿ ಜನರಿಗೆ ಸಿಂಹಸ್ವಪ್ನದಂತೆ ಕಾಡಿ ಅನೇಕು ಸಾವು ನೋವುಗಳಿಗೆ ಕಾರಣವಾಗಿದ್ದ ಕೆಎಫ್‌ಡಿ (ಕ್ಯಾಸನೂರು ಅರಣ್ಯ ಕಾಯಿಲೆ) ವೈರಸ್ (ಮಂಗನ ಕಾಯಿಲೆ) ಈ ಬಾರಿ ಮಳೆ ಹೊರತಾಗಿಯೂ ತನ್ನ ಇರುವಿಕೆಯನ್ನು ಋಜುವಾತುಪಡಿಸಿದೆ.
ಬೆಟ್ಟಬಸವಾನಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಉಣುಗುಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ವೈರಸ್ ಇರುವುದು ದೃಢಪಟ್ಟಿದೆ. ಈ ಭಾಗದ ಜನರು ಹೆಚ್ಚು ಜಾಗ್ರತೆ ವಹಿಸಬೇಕಿದೆ. ಈಗ ಎಲ್ಲಿ ನೋಡಿದರೂ ಅಡಕೆ ಕೊಯ್ಲು, ತೋಟಕ್ಕೆ ಗೊಬ್ಬರ ಹಾಕುವುದು, ಶುಂಠಿ ಬೆಳೆಯುವವರು ಕಾಡಿನಲ್ಲಿ ತರಗು (ಒಣಗಿದ ಎಲೆ) ಸಂಗ್ರಹಿಸುವುದು ನಡೆಯುತ್ತಿದೆ. ಕಳೆದ ಬಾರಿ ಕೆಎಫ್‌ಡಿ ಪಾಸಿಟಿವ್ ಬಂದಿದ್ದ ಬಹಳಷ್ಟು ಮಂದಿ ತೋಟಗಳಿಗೆ ಕೆಲಸಕ್ಕೆ ಹೋದವರಾಗಿದ್ದು, ಈ ಬಗ್ಗೆ ಇನ್ನೂ ಹೆಚ್ಚಿನ ಜಾಗೃತಿ ಬೇಕಿದೆ.
ಅಡಕೆ ತೋಟದ ಕೆಲಸಕ್ಕಾಗಿ ಶಿವಮೊಗ್ಗ ಅಷ್ಟೇ ಅಲ್ಲದೇ, ಹಾವೇರಿ, ದಾವಣಗೆರೆ, ಚಿತ್ರದುರ್ಗ ಭಾಗದ ಕೂಲಿ ಕಾರ್ಮಿಕರು ಸಹ ಆಗಮಿಸುತ್ತಿದ್ದು ಅವರಿಗೆ ಇಲ್ಲಿನ ಉಣುಗು, ಕೆಎಫ್‌ಡಿ ವೈರಸ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆರೋಗ್ಯ ಇಲಾಖೆ ಈ ಎಲ್ಲ ಕೂಲಿ ಕಾರ್ಮಿಕರಿಗೆ ಡೆಫಾ ಆಯಿಲ್ ಕೊಡುವುದು, ಉಣುಗುಗಳಿಂದ ರಕ್ಷಣೆ ಪಡೆಯುವುದು ಹೇಗೆ ಎಂಬುದನ್ನು ತಿಳಿಸಬೇಕಿದೆ. ಅಡಕೆ ತೋಟದ ಮಾಲೀಕರು, ಮೇಸ್ತ್ರಿಗಳು ಕೂಲಿ ಕಾಮರ್ಮಿಕರಿಗೆ ತಿಳಿವಳಿಕೆ ಹೇಳಬೇಕಿದೆ ಎಂದು ಸ್ಥಳೀಯರಾದ ರಮೇಶ್ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾಡಳಿತ ಮೌನ: ಹೆಚ್ಚಿದ ಆತಂಕ
ಈಗಾಗಲೇ ಅಂತರ ಇಲಾಖೆಗಳ ಜತೆ ಸಮನ್ವಯ ಸಭೆ ನಡೆಸಿ ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡಬೇಕಿದ್ದ ಜಿಲ್ಲಾಡಳಿತ ಮೌನವಾಗಿದೆ. ಆರೋಗ್ಯ ಸಚಿವರು ಬಂದು ಹೋದ ನಂತರ ಅಂತರ ಇಲಾಖೆಗಳ ಸಭೆ ನಡೆಯಲಿದೆ ಎಂದು ಮಾಹಿತಿ ನೀಡಲಾಗಿತ್ತಾದರೂ ಅದು ಇನ್ನೂ ನಡೆದಿಲ್ಲ.
ಕೆಎಫ್‌ಡಿ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಅಷ್ಟೇ ಅಲ್ಲದೆ ಗ್ರಾಮ ಪಂಚಾಯಿತಿ, ಪಶು ವೈದ್ಯಕೀಯ, ಅರಣ್ಯ ಇಲಾಖೆ ಪಾತ್ರ ತುಂಬಾ ದೊಡ್ಡದಿದೆ. ಪ್ರತಿ ವರ್ಷ ಕೆಎಫ್‌ಡಿ ಅವಧಿ ಆರಂಭವಾಗುವ ಮೊದಲೇ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಈ ಸಭೆ ನಡೆಸಿ ಅಧಿಕಾರಿಗಳಿಗೆ ಸಲಹೆ, ಮಾರ್ಗದರ್ಶನ ನೀಡಲಾಗುತಿತ್ತು. ಈ ಬಾರಿ ಅದಿನ್ನೂ ನಡೆದಿಲ್ಲ.
ಜ್ವರ ಕಾಣಿಸಿಕೊಂಡರೆ ನಿರ್ಲಕ್ಷ್ಯ ಬೇಡ
ಮಲೆನಾಡು ಭಾಗದಲ್ಲಿ ಯಾರಿಗೆ ಜ್ವರ ಕಾಣಿಸಿಕೊಂಡರೂ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡುವುದು ಒಳಿತು. ಜ್ವರ ಮೂರು ದಿನವಾದರೂ ಕಡಿಮೆಯಾಗದಿದ್ದರೆ ನಿರ್ಲಕ್ಯ ವಹಿಸದೆ ವೈದ್ಯರ ಬಳಿ ತೋರಿಸಬೇಕಿದೆ. ಮೊದಲ ಹಂತದ ಜ್ವರ ನಿರ್ಲಕ್ಷ್ಯ ಮಾಡಿದವರೇ ಹೆಚ್ಚು ಜೀವಹಾನಿ ಮಾಡಿಕೊಂಡಿರುವುದು ಹಿಂದಿನ ಎಲ್ಲ ಸೀಸನ್‌ಗಳಲ್ಲೂ ಖುಜುವಾತಾಗಿದೆ.
ಈ ಗ್ರಾಮಗಳ ಜನರು ಕಾಡಿನ ಸಂಪರ್ಕ ಕಡಿಮೆ ಮಾಡಿ: ವೈದ್ಯಾಧಿಕಾರಿ ಸಲಹೆ
ಬೆಟ್ಟಬಸವಾನಿ, ತೀರ್ಥಹಳ್ಳಿ ತಾಲೂಕಿನ ಕನ್ನಂಗಿ, ಗುತ್ತಿಎಡೆಹಳ್ಳಿ, ಮಾಳೂರು, ಕೋಣಂದೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿ ಹಾಟ್‌ಸ್ಪಾಟ್ ಆಗಿರುವುದರಿಂದ ಈ ವ್ಯಾಪ್ತಿಯ ಗ್ರಾಮಗಳ ಜನರು ಕಾಡಿನ ಸಂಪರ್ಕವನ್ನು ಕಡಿಮೆಗೊಳಿಸಬೇಕಿದೆ. ಕಾಡಿಗೆ ಹೋಗಿ ಬಂದರೂ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕಿದೆ. ಕಾಡಿನ ಸಂಪರ್ಕ ಹೊಂದಿರುವ ದನಕರುಗಳು ಸಹ ಪಾಸಿಟಿವ್ ಇರುವ ಉಣುಗುಗಳನ್ನು ಹೊತ್ತು ತರುವ ಸಾಧ್ಯತೆ ಇರುತ್ತದೆ. ಇದರ ಬಗ್ಗೆ ಗಮನಹರಿಸಬೇಕಿದೆ. ಈ ಐದು ಪಿಎಚ್‌ಸಿಗಳ ವ್ಯಾಪ್ತಿಯಲ್ಲಿ ಡೆಫಾ ಆಯಿಲ್, ಜಾಗೃತಿ ಕರಪತ್ರಗಳನ್ನು ಆರೋಗ್ಯ ಇಲಾಖೆ, ಗ್ರಾಮ ಪಂಚಾಯಿತಿ ಮನೆ ಮನೆಗೆ ತಲುಪಿಸಿದರೆ ಸಾವು ನೋವುಗಳನ್ನು ತಡೆಗಟ್ಟಬಹುದಾಗಿದೆ ಎಂದು ಪರಿಮಾಣುಕ್ರಿಮಿ ಸಂಶೋಧನಾ ಪ್ರಯೋಗ ಶಾಲೆಯ ಉಪ ಮುಖ್ಯ ವೈದ್ಯಾಧಿಕಾರಿ ಡಾ. ಹರ್ಷವರ್ದನ್ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಮಲೆನಾಡಿನಲ್ಲಿ ಮಂಗನ ಕಾಯಿಲೆ; ಮಂಕಿಪಾಕ್ಸ್ ಲಕ್ಷಣಗಳಿವು
ಈ ಬಾರಿ ಅವಧಿಗೂ ಮೊದಲೇ ಕೆಎಫ್‌ಡಿ ವೈರಸ್ ಪತ್ತೆಯಾಗಿದ್ದು ಮಲೆನಾಡು ಭಾಗದ ಜನರಲ್ಲಿ ಆತಂಕ ಹೆಚ್ಚಿಸಿದೆ. ಆರೋಗ್ಯ ಇಲಾಖೆ ಕೂಡಲೇ ಎಚ್ಚೆತ್ತಕೊಂಡು ಮಂಗನ ಕಾಯಿಲೆ ಕಾಣಿಸಿಕೊಳ್ಳುವ ಮೊದಲೇ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಿದೆ.