‘ಹರಿ ಹರ ವೀರ ಮಲ್ಲು’ ಟ್ರೈಲರ್ ಬಿಡುಗಡೆ: ಧರ್ಮದ ಯುದ್ಧದಲ್ಲಿ ಪವನ್
Pawan Kalyan: ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ಪ್ರಸ್ತುತ ದಕ್ಷಿಣ ಭಾರತದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಹಲವು ಬಾರಿ ಬಿಡುಗಡೆ ಮುಂದೂಡಿದ ಬಳಿಕ ಈ ತಿಂಗಳ ಅಂತ್ಯಕ್ಕೆ ಸಿನಿಮಾ ಬಿಡುಗಡೆ ಆಗಲಿದ್ದು, ಇದೀಗ ಸಿನಿಮಾದ ಟ್ರೈಲರ್ ಅನ್ನು ಇಂದು (ಜುಲೈ 3) ಬಿಡುಗಡೆ ಮಾಡಲಾಗಿದೆ. ಸುಮಾರು ಮೂರು ನಿಮಿಷಗಳ ಟ್ರೈಲರ್ನಲ್ಲಿ ಪವನ್ ಕಲ್ಯಾಣ್ ಮಿಂಚಿದ್ದಾರೆ.

ಪವನ್ ಕಲ್ಯಾಣ್ (Pawan Kalyan) ನಟನೆಯ ಬಹು ನಿರೀಕ್ಷಿತ ಸಿನಿಮಾ ‘ಹರಿ ಹರ ವೀರ ಮಲ್ಲು’ ಟ್ರೈಲರ್ ಇಂದು ಬಿಡುಗಡೆ ಆಗಿದೆ. ಐದು ವರ್ಷಗಳಿಂದ ಚಿತ್ರೀಕರಣಗೊಂಡು, ನಾನಾ ಕಾರಣಗಳಿಂದಾಗಿ ಬಿಡುಗಡೆ ತಡವಾಗುತ್ತಲೇ ಬಂದ ಸಿನಿಮಾ, ಕೊನೆಗೂ ಈಗ ಬಿಡುಗಡೆಗೆ ಸಜ್ಜಾಗಿದ್ದು, ಇಂದು (ಜುಲೈ 3) ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಐತಿಹಾಸಿಕ ಕತೆಯನ್ನು ಒಳಗೊಂಡ ಸಿನಿಮಾ ‘ಹರಿ ಹರ ವೀರ ಮಲ್ಲು’ ಆಗಿದ್ದು, ಸಿನಿಮಾದ ಟ್ರೈಲರ್ನಲ್ಲಿ ಪವನ್ ಕಲ್ಯಾಣ್ ವಿವಿಧ ಶೇಡ್ಗಳಲ್ಲಿ ಮಿಂಚಿದ್ದಾರೆ. ಇದು ಪವನ್ ಅಭಿಮಾನಿಗಳಿಗೆ ಹಬ್ಬದಂತಾ ಸಿನಿಮಾ ಎಂಬುದು ಟ್ರೈಲರ್ ಸಾರಿ ಹೇಳುತ್ತಿದೆ.
ಸಿನಿಮಾದ ಟ್ರೈಲರ್ ಪ್ರಾರಂಭ ಆಗುವುದೇ, ‘ಹಿಂದೂಗಳಾಗಿ ಬದುಕಲು ತೆರಿಗೆ ಕಟ್ಟಬೇಕಾದ ಪರಿಸ್ಥಿತಿ ಇದ್ದ ಸಮಯವದು’ ಎನ್ನುವ ಹಿನ್ನೆಲೆ ದನಿಯ ಮೂಲಕ. ಔರಂಗಾಜೇಬನ ಕಾಲದಲ್ಲಿ ನಡೆದಿದೆ ಎನ್ನಲಾದ ಹಿಂದೂಗಳ ಮೇಲಿನ ದೌರ್ಜನ್ಯ ಮತ್ತು ಅದನ್ನು ಎದುರಿಸುವ ವೀರಮಲ್ಲು ಎಂಬ ಯೋಧನ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾದಲ್ಲಿ ಬಲು ಅದ್ಧೂರಿ ಆಕ್ಷನ್ ಇದ್ದು, ಟ್ರೈಲರ್ನಲ್ಲಿ ಆಕ್ಷನ್ನ ಹಲವು ಝಲಕ್ಗಳು ನೋಡಲು ಸಿಗುತ್ತವೆ.
ಸಿನಿಮಾನಲ್ಲಿ ಪವನ್ ಕಲ್ಯಾಣ್, ಹಿಂದೂ ಧರ್ಮದ ಪರ ಹೋರಾಡುವ ವ್ಯಕ್ತಿಯಾಗಿ, ಜನ ನಾಯಕನಾಗಿ, ಬೋಧಕನಾಗಿ, ಮಾನವೀಯ ವ್ಯಕ್ತಿಯಾಗಿ ಹೀಗೆ ಹಲವು ಗುಣಸಂಪನ್ನನ ರೀತಿಯಲ್ಲಿ ಕಾಣಿಸಿಕೊಂಡಿದ್ದು, ಅವುಗಳ ಸಣ್ಣ ಝಲಕ್ ಟ್ರೈಲರ್ನಲ್ಲಿಯೂ ಇದೆ. ಪವನ್ ಕಲ್ಯಾಣ್ರ ಈಗಿನ ರಾಜಕೀಯ ಇಮೇಜಿಗೆ ಅಗತ್ಯವಾದ ಸನ್ನಿವೇಶಗಳು, ಸಂಭಾಷಣೆಗಳು ಸಿನಿಮಾನಲ್ಲಿ ಇರುವುದನ್ನು ಟ್ರೈಲರ್ ಖಾತ್ರಿ ಪಡಿಸುತ್ತಿದೆ.
ಈಗ ಬಿಡುಗಡೆ ಆಗಿರುವ ಟ್ರೈಲರ್ನಲ್ಲಿ ಬಹುತೇಕ ಪವನ್ ಕಲ್ಯಾಣ್ ಅವರೇ ತುಂಬಿಕೊಂಡಿದ್ದಾರೆ. ಅವರ ಜೊತೆಗೆ ಒಂದೆರಡು ದೃಶ್ಯಗಳಲ್ಲಿ ನಿಧಿ ಅಗರ್ವಾಲ್ ಕಂಡು ಮರೆಯಾಗುತ್ತಾರೆ. ಹಾಸ್ಯನಟ ಸುನಿಲ್, ಕಟ್ಟಪ್ಪ ಖ್ಯಾತಿಯ ಸತ್ಯರಾಜ್, ನಾಸರ್, ತನಿಕೇಲ ಭರಣಿ ಅವರುಗಳು ಕಾಣಿಸಿಕೊಂಡಿದ್ದಾರೆ. ನಿಧಿ ಅಗರ್ವಾಲ್ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಸಿನಿಮಾದ ವಿಲನ್ ಪಾತ್ರದಲ್ಲಿ ಬಾಲಿವುಡ್ ನಟ ಬಾಬಿ ಡಿಯೋಲ್ ನಟಿಸಿದ್ದಾರೆ. ಔರಂಗಾಜೇಬನ ಪಾತ್ರದಲ್ಲಿ ಅವರು ಖಡಕ್ ಅಭಿನಯ ನೀಡಿರುವುದು ಟ್ರೈಲರ್ನಿಂದಲೇ ಗೊತ್ತಾಗುತ್ತಿದೆ.
‘ಹರಿ ಹರ ವೀರ ಮಲ್ಲು’ ಸಿನಿಮಾದ ಟ್ರೈಲರ್ ಅನ್ನು ತೆಲುಗು ರಾಜ್ಯಗಳ ಕೆಲ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ಟ್ರೈಲರ್ ನೋಡಲು ಸಾವಿರಾರು ಪವನ್ ಅಭಿಮಾನಿಗಳು ಚಿತ್ರಮಂದಿರಗಳಿಗೆ ನುಗ್ಗಿದ್ದರು. ಪವನ್ ಅವರ ಅಭಿಮಾನಿಗಳ ಆರ್ಭಟದ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
‘ಹರಿ ಹರ ವೀರ ಮಲ್ಲು’ ಸಿನಿಮಾ ಅನ್ನು ಕೃಷ್ ಮತ್ತು ಎಎಂ ಜ್ಯೋತಿ ಕೃಷ್ಣ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ಮೆಗಾ ಸೂರ್ಯ ಪ್ರೊಡಕ್ಷನ್, ಸಿನಿಮಾಕ್ಕೆ ಎಂಎಂ ಕೀರವಾಣಿ ಸಂಗೀತ ನೀಡಿದ್ದಾರೆ. ಸಿನಿಮಾ ಜುಲೈ 24ಕ್ಕೆ ಬಿಡುಗಡೆ ಆಗಲಿದೆ.




