ರಾಜ್ಯದಲ್ಲಿ ಸದ್ಯಕ್ಕೆ ಬಸ್ ಟಿಕೆಟ್ ದರ ಹೆಚ್ಚಳ ಮಾಡಲ್ಲ: ಸಿದ್ದರಾಮಯ್ಯ
ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿ ನಡೆಸಿ ನಾವು ಪೆಟ್ರೋಲ್ ಹಾಗೂ ಡಿಸೇಲ್ ಮೇಲೆ ಮೂರು ರೂಪಾಯಿ ಹೆಚ್ಚಿಸಿದ್ದೇವೆ. ಆದರೆ, ಬಿಜೆಪಿ ಸರ್ಕಾರ ಆಡಳಿತ ಇರುವ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ತೈಲ ಬೆಲೆ ಕಡಿಮೆ ಇದೆ. ಎಂದು ಹೇಳಿದರು.
ಬೆಂಗಳೂರು, ಜೂನ್ 17: ರಾಜ್ಯದಲ್ಲಿ ಸದ್ಯಕ್ಕೆ ಸರ್ಕಾರಿ ಬಸ್ ಟಿಕೆಟ್ ದರ ಹೆಚ್ಚಳ ಮಾಡಲ್ಲ. ಇಲಾಖೆಯೊಂದಿಗೆ ಚರ್ಚೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು. ಗೃಹಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಗ್ಯಾರೆಂಟಿ ಯೋಜನೆಗಳಿಗೆ ಹಣ ನೀಡಲು ತೈಲ ಬೆಲೆ ಏರಿಕೆ ಮಾಡಿಲ್ಲ. ಬದಲಿಗೆ, ಆರ್ಥಿಕ ಮೂಲಗಳಾದ ಮದ್ಯ ಮತ್ತು ತೈಲದಿಂದ ಹೆಚ್ಚಿನ ಆದಾಯ ಬಂದರೆ, ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ ಅಂತ ತೈಲ ಬೆಲೆ ಏರಿಕೆ ಮಾಡಿದ್ದೇವೆ ಎಂದು ಹೇಳಿದರು.
ನಾವು ಪೆಟ್ರೋಲ್ ಹಾಗೂ ಡಿಸೇಲ್ ಮೇಲೆ ಮೂರು ರೂಪಾಯಿ ಹೆಚ್ಚಿಸಿದ್ದೇವೆ. ಆದರೆ, ಬಿಜೆಪಿ ಸರ್ಕಾರ ಆಡಳಿತ ಇರುವ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ತೈಲ ಬೆಲೆ ಕಡಿಮೆ ಇದೆ. ನಮ್ಮ ಅಕ್ಕ-ಪಕ್ಕದ ರಾಜ್ಯದಲ್ಲಿ ತೈಲ ಬೆಲೆ ಹೆಚ್ಚಿದೆ, ನಮ್ಮಲ್ಲಿ ಅಲ್ಲಿಗಿಂತ ದರ ಕಡಿಮೆ ಇದೆ. ಬಿಜೆಪಿ ಆಡಳಿತ ಇರುವ ಮಹಾರಾಷ್ಟ್ರ, ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳಲ್ಲಿ ತೈಲ ಬೆಲೆ ಇಲ್ಲಿಗಿಂತ ಅಧಿಕವಾಗಿದೆ. ಆದರೂ, ಬಿಜೆಪಿ ನಾಯಕರು ಇಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಬಿಜೆಪಿಯವರು ಕೇಂದ್ರದ ವಿರುದ್ಧ ಧರಣಿ ಮಾಡಬೇಕು ಎಂದರು.
ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಗ್ಯಾಸ್, ತೈಲ ದರ ಹೆಚ್ಚಿಸಿದ ಸಮಯದಲ್ಲಿ ಅಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದರೆ ಇವೆಲ್ಲದರ ಬೆಲೆ ಇಳಿಸುತ್ತೇವೆ ಎಂದು ಹೇಳಿದ್ದರು. ಆದರೆ, ಇದೀಗ ಪ್ರಧಾನಿ ಮೋದಿ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದರು.
ನರೇಂದ್ರ ಮೋದಿಯವರು ಪ್ರಧಾನಿಯಾದ ಸಂದರ್ಭದಲ್ಲಿ ಪೆಟ್ರೋಲ್ ದರ 72.26 ರೂ. ಇತ್ತು. ಆದರೆ ಈಗ 104 ರೂ. ಆಗಿದೆ. ಡೀಸೆಲ್ ಬೆಲೆ 67.28 ಇತ್ತು, ಇದೀಗ 91 ರೂ. ಆಗಿದೆ. ಈಗ ಕ್ರೂಡ್ ಆಯಿಲ್ ಬೆಲೆ 84 ರೂಪಾಯಿ ಇದೆ. 2015ರಲ್ಲಿ ಕಚ್ಚಾ ತೈಲ ದರ 50 ರೂ. ಇತ್ತು. ಹಾಗಾದರೆ ಯಾರ ವಿರುದ್ಧ ನೀವು ಪ್ರತಿಭಟನೆ ಮಾಡಬೇಕು ಎಂದು ರಾಜ್ಯ ಬಿಜೆಪಿ ನಾಯಕರನ್ನು ಪ್ರಶ್ನಿಸಿದರು.
ಇದನ್ನೂ ಓದಿ: ಕರ್ನಾಟಕದಲ್ಲಿ ಇಂಧನ ಬೆಲೆ ಏರಿಕೆ, ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹರ್ದೀಪ್ ಸಿಂಗ್ ಪುರಿ
ಬಡವರು, ಜನಸಾಮಾನ್ಯರ ಬಗ್ಗೆ ಕಾಳಜಿ ಇದ್ದರೆ ಬೆಲೆ ಕಡಿಮೆ ಮಾಡಬೇಕಿತ್ತು. ಕೇಂದ್ರ ಸರ್ಕಾರ ಜಿಎಸ್ಟಿ ತಂದ ಮೇಲೆ ರಾಜ್ಯ ಸರ್ಕಾರಕ್ಕೆ ಬರುವ ತೆರಿಗೆ ಪಾಲು ಕಡಿಮೆ ಆಯಿತು. ಸ್ಟ್ಯಾಂಪ್ ಡ್ಯೂಟಿ, ಮೋಟರ್ ತೆರಿಗೆ ಬಿಟ್ಟು ಎಲ್ಲ ಕೇಂದ್ರ ಸರ್ಕಾರ ನಿರ್ಧಾರ ಮಾಡುತ್ತೆ. ಕರ್ನಾಟಕಕ್ಕೆ 18,6000 ಕೋಟಿ ರೂ. ನಷ್ಟವಾಗಿದೆ. ಕರ್ನಾಟಕಕ್ಕೆ ಬರುವ ತರಿಗೆ ಕಡಿಮೆಯಾದರೂ, ರಾಜ್ಯದ ಪರ ಬಿಜೆಪಿಯವರು ಒಂದು ದಿನವೂ ಮಾತನಾಡಿಲ್ಲ ಎಂದರು.
ರಿಂಗ್ ರೋಡ್ ನಿರ್ಮಾಣಕ್ಕೆ ಹಣ ನೀಡುತ್ತೇವೆ ಹಾಗೂ ಕೆರೆ ಅಭಿವೃದ್ಧಿ, ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಬಿಜೆಪಿಯವರು ಮಾತನಾಡುತ್ತಿಲ್ಲ. ಇದಷ್ಟೆ ಅಲ್ಲದೇ ಯಾವುದರ ಬಗ್ಗೆಯೂ ಬಿಜೆಪಿಯವರು ಮಾತನಾಡಿಲ್ಲ. ಈಗ ನಮ್ಮ ಸರ್ಕಾರಕ್ಕೆ ಪಾಪರ್ ಆಗಿದೆ ಅಂತ ಹೇಳುತ್ತಿದ್ದಾರೆ. ನಾವೇನು ನೌಕರ ಸಂಬಳ ನಿಲ್ಲಿಸಿದ್ದೇವಾ? ಬಡವರು, ರೈತರು ಬಗ್ಗೆ ಬಿಜೆಪಿವರಿಗೆ ಕಾಳಜಿ ಇದೆಯಾ? ಎಂದು ಪ್ರಶ್ನಿಸಿದರು.
ನಾವು ಗ್ಯಾರಂಟಿ ಕೊಟ್ಟಿರೋದು ಎಲ್ಲ ವರ್ಗದ ಜನರಿಗೆ. ಬಸ್ನಲ್ಲಿ ಓಡಾಡಿದರೆ ಆರ್ಥಿಕವಾಗಿ ಶಕ್ತಿ ಬರುತ್ತೆ. ಎರಡು ಸಾವಿರ ಹಣ, ಫ್ರೀ ಕರೆಂಟ್ ಕೊಟ್ಟರೆ ಸಹಾಯವಾಗುತ್ತಿದೆ. ಈ ಬಗ್ಗೆ ಬಿಜೆಪಿಯವರು ಯಾರೂ ಮಾತನಾಡುವುದಿಲ್ಲ ಎಂದು ಹೇಳಿದರು.
ಬಿಜೆಪಿಗೆ ವಿಷಯ ಇಲ್ಲ, ಹೀಗಾಗಿ ಹೋರಾಟ ಮಾಡುತ್ತಿದ್ದಾರೆ. ‘ನಮ್ಮ ತೆರಿಗೆ ನಮ್ಮ ಹಕ್ಕು’ ಹೋರಾಟದಲ್ಲಿ ಸಾಥ್ ಕೊಟ್ಟಿಲ್ಲ. ಕೇಂದ್ರದ ಮಂತ್ರಿಯಾಗಿ ದಂಗೆ ಏಳಿ ಎಂದು ಹೆಚ್ಡಿ ಕುಮಾರಸ್ವಾಮಿ ಅವರು ಹೇಳುತ್ತಿದ್ದಾರೆ. ಮೈತ್ರಿ ಮಾಡಿಕೊಂಡಿದ್ದಾರೆ, ಅದಕ್ಕೂ ಮುನ್ನ ಮಾತಾಡಿದರಾ? ಕೇಂದ್ರ ಸರ್ಕಾರ ರೈತರ ಸಾಲಮನ್ನಾ ಮಾಡಿ ಅಂದ್ರೆ ಮಾಡಲಿಲ್ಲ. ಬಿಜೆಪಿವರಿಗೆ ನೈತಿಕತೆ ಇಲ್ಲ, ಕರ್ನಾಟಕದ ಬಗ್ಗೆ ಕಾಳಜಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ