ಉಡುಪಿ: ಉದರ ನಿಮಿತ್ತಂ ಬಹುಕೃತ ವೇಷಂ ಎಂಬ ಮಾತಿದೆ. ಲಾಕ್ಡೌನ್ ಕಲಿಸಿದ ಜೀವನಪಾಠ ಏನಪ್ಪಾ ಅಂದರೆ, ಯಾವುದೇ ಉದ್ಯೋಗವಾದರೂ ಸರಿ, ದುಡಿಮೆಯೇ ದೇವರು, ಅನ್ನ ಸಂಪಾಂದನೆಗೆ ಹಿಂದೆ ಮುಂದೆ ನೋಡದೆ ಸಿಕ್ಕ ಉದ್ಯೋಗ ಮಾಡುವ ಸ್ಥಿತಿಗೆ ಈಗ ಜನ ಬಂದಿದ್ದಾರೆ. ಅದರಂತೆ ಉಡುಪಿಯ ಬ್ರಹ್ಮಗಿರಿಯಲ್ಲಿ ಮಹಿಳೆಯೊಬ್ಬರು ಮೀನು ವ್ಯಾಪಾರ ಮಾಡಲು ಮುಂದಾಗಿದ್ದಾರೆ. ಪುಟ್ಟದೊಂದು ಶೆಡ್ ಹಾಕಿಕೊಂಡು, ಪ್ರತಿದಿನ ಲಾಕ್ಡೌನ್ನ ಸೀಮಿತ ಅವಕಾಶದಲ್ಲಿ ಮೀನು ವ್ಯಾಪಾರ ನಡೆಸುತ್ತಿದ್ದಾರೆ. ಆದರೆ ಪ್ರತಿಷ್ಟಿತರ ಈ ಬಡವಾಣೆಯಲ್ಲಿ ಮೀನು ವ್ಯಾಪಾರ ನಡೆಸುವುದಕ್ಕೆ ಕೆಲ ಪ್ರಭಾವಿಗಳು ಅಡ್ಡಿಪಡಿಸಿದ್ದಾರೆ ಎಂಬ ಆರೋಪ ಈಗ ಕೇಳಿ ಬಂದಿದೆ.
ಮೀನು ವ್ಯಾಪಾರ ಮಾಡಲು ಹಾಕಿಕೊಂಡ ಈ ಶೆಡ್ಗೆ ಪರವಾನಿಗೆ ಇಲ್ಲ ಎನ್ನುವುದು ನಗರಸಭೆಯ ವಾದ, ಆದರೆ ಈ ಪರಿಸರದಲ್ಲಿ ಇರುವ ಯಾವುದೇ ಗೂಡಂಗಡಿಗೆ ಪರವಾನಿಗೆ ಇಲ್ಲ, ದುಡಿದು ತಿನ್ನಬಾರದು ಎನ್ನುವ ಕಾರಣಕ್ಕೆ ಅಡ್ಡಿ ಮಾಡುತ್ತಿದ್ದಾರೆ ಎಂದು ಮೀನು ಮಾರಾಟಕ್ಕೆ ಮುಂದಾದ ಮಹಿಳೆ ರಾಧ ಬೇಸರ ವ್ಯಕ್ತಪಡಿಸಿದ್ದಾರೆ.
ಪತಿ ಕಲಾವಿದ, ಲಾಕ್ಡೌನ್ ನಂತರ ಕಲಾವಿದರಿಗೆ ಎಲ್ಲೂ ಅವಕಾಶ ಸಿಗುತ್ತಿಲ್ಲ. ಹಾಗಾಗಿ ಪತ್ನಿ ಸಾಲ ತೀರಿಸಲು ಮೀನು ವ್ಯಾಪಾರಕ್ಕೆ ಇಳಿದಿದ್ದಾರೆ. ವಾಸ್ತವದಲ್ಲಿ ಮಾರುಕಟ್ಟೆಗೆ ಹೋಗಿ ಮಹಿಳೆಯರು ಮೀನು ಮಾರುವುದು ಮಾಮೂಲು. ಆದರೆ ಮೀನು ಮಾರುಕಟ್ಟೆಯಲ್ಲಿ ಮೊಗವೀರ ಮಸುದಾಯದ್ದೇ ಪಾರಮ್ಯ ಇದೆ. ಹೀಗಾಗಿ ಇಲ್ಲಿ ಬೇರೆಯವರು ಮೀನು ಮಾರಾಟ ಮಾಡಲು ಬಿಡುವುದಿಲ್ಲ ಎಂದು ದಲಿತ ಮುಖಂಡ ಸುಂದರ ಮಾಸ್ತರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕ ರಘುಪತಿ ಭಟ್ ಹಾಗೂ ಮೊಗವೀರ ಮುಖಂಡ ಯಶಪಾಲ ಸುವರ್ಣ ಮಾನವೀಯ ನೆಲೆಯಲ್ಲಿ ವ್ಯಾಪಾರ ನಡೆಸಲು ಅವಕಾಶ ನೀಡುವಂತೆ ನಗರಸಭೆಗೆ ಸೂಚನೆ ನೀಡಿದ್ದಾರೆ. ಅಲ್ಲದೆ ಲಾಕ್ಡೌನ್ ಮುಗಿಯುತ್ತಾ ಬಂತು, ಉದ್ಯೋಗ ಭದ್ರತೆ ಇಲ್ಲದ ಅನೇಕ ಜನ ನಾನಾ ಸ್ವಂತ ಉದ್ಯೋಗಗಳತ್ತ ಹೊರಳೋದು ಮಾಮೂಲು. ನಾನಾ ಪರವಾನಿಗೆಗಳ ನೆಪವೊಡ್ಡಿ ಕಿರುಕುಳ ನೀಡುವುದರ ಬದಲಿಗೆ, ದುಡಿದು ತಿನ್ನುವವರಿಗೆ ಅವಕಾಶ ನೀಡಿ ಎಂದು ದಲಿತ ಮುಖಂಡರು ಸದ್ಯ ಒತ್ತಾಯಿಸಿದ್ದಾರೆ.
ಇದನ್ನೂ ಓದಿ:
ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿದ ಮೀನುಗಾರರು; ಮೀನು ವ್ಯಾಪರಕ್ಕೆ ಅವಕಾಶ ನೀಡುವಂತೆ ಒತ್ತಾಯ
ಜೂನ್ 1 ರಿಂದ ಎರಡು ತಿಂಗಳುಗಳ ಕಾಲ ಮೀನುಗಾರಿಕೆ ಸ್ಥಗಿತ; ಮೀನುಗಾರರ ನೆರವಿಗೆ ಧಾವಿಸುವಂತೆ ಸರ್ಕಾರಕ್ಕೆ ಮನವಿ
Published On - 11:27 am, Fri, 11 June 21