ಬಿಎಸ್ ಯಡಿಯೂರಪ್ಪ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ: ದೂರುದಾರೆ ಸಾವು

| Updated By: ಗಣಪತಿ ಶರ್ಮ

Updated on: May 27, 2024 | 12:51 PM

ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ ಎಸಗಿದ ಆರೋಪದಡಿ ಯಡಿಯೂರಪ್ಪ ವಿರುದ್ಧ ಎಫ್​ಐಆರ್ ದಾಖಲಾಗಿತ್ತು. ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ದಾಖಲಾಗಿದ್ದ ಈ ಪ್ರಕರಣದಲ್ಲಿ ಯಡಿಯೂರಪ್ಪ ವಿರುದ್ಧ ದೂರು ನೀಡಿದ್ದ ಮಹಿಳೆ ಇದೀಗ ಮೃತಪಟ್ಟಿದ್ದಾರೆ. ಅವರ ಸಾವಿಗೆ ಕಾರಣವೇನು? ಪ್ರಕರಣದ ಹಿನ್ನೆಲೆ ಏನು ಎಂಬ ಮಾಹಿತಿ ಇಲ್ಲಿದೆ.

ಬಿಎಸ್ ಯಡಿಯೂರಪ್ಪ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ: ದೂರುದಾರೆ ಸಾವು
ಯಡಿಯೂರಪ್ಪ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ: ದೂರುದಾರೆ ಸಾವು
Follow us on

ಬೆಂಗಳೂರು, ಮೇ 27: ಬಿಜೆಪಿ (BJP) ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ (BS Yediyurappa) ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದ ದೂರುದಾರೆ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಇವರು ಯಡಿಯೂರಪ್ಪ ವಿರುದ್ಧ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಮಾಡಿ ಇತ್ತೀಚೆಗೆ ದೂರು ನೀಡಿದ್ದರು. ಅದರಂತೆ, ಯಡಿಯೂರಪ್ಪ ವಿರುದ್ಧ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಎಫ್​ಐಆರ್ ದಾಖಲಿಸಿದ್ದರು.

ದೂರುದಾರೆಯು ಕಳೆದ ಕೆಲವು ವರ್ಷಗಳಿಂದ ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿದ್ದರು. ಬನ್ನೇರುಘಟ್ಟ ರಸ್ತೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಚುನಾವಣೆ ಹೊಸ್ತಿಲಲ್ಲೇ ಬಂದಿತ್ತು ಬಿಎಸ್​ವೈ ವಿರುದ್ಧ ಆರೋಪ

ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ ಎಸಗಿದ ಆರೋಪದಡಿ, ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ಯಡಿಯೂರಪ್ಪ ವಿರುದ್ಧ ಎಫ್​ಐಆರ್ ದಾಖಲಾಗಿತ್ತು. ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಯಡಿಯೂರಪ್ಪ ವಿರುದ್ಧ ಪೋಕ್ಸೋ ಹಾಗೂ 354 (A) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದು ಕೆಲವು ದಿನಗಳ ಮಟ್ಟಿಗೆ ರಾಜಕೀಯವಾಗಿಯೂ ಸದ್ದು ಮಾಡಿತ್ತು.

ಯಡಿಯೂರಪ್ಪ ವಿರುದ್ಧ ಮಾಡಿದ್ದ ಆರೋಪವೇನು?

ಫೆಬ್ರವರಿ 2 ರಂದು ಸಹಾಯ ಕೇಳಲು ಹೋಗಿದ್ದಾಗ ತನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ಸಂತ್ರಸ್ತೆಯು ದೂರಿನಲ್ಲಿ ಉಲ್ಲೇಖಿಸಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು, ಉದ್ಯಮಿಗಳು ಸೇರಿದಂತೆ ಒಟ್ಟು 53 ಮಂದಿ ವಿರುದ್ಧ ಸದಾಶಿವನಗರ ಠಾಣೆಗೆ ದೂರು ನೀಡಲಾಗಿತ್ತು.

ಇದನ್ನೂ ಓದಿ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಎಫ್​ಐಆರ್

ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ್ದ ಯಡಿಯೂರಪ್ಪ, ನ್ಯಾಯ ಕೊಡಿಸಿ ಎಂದು ತಾಯಿ-ಮಗಳು ಹಲವು ಸಲ ನನ್ನ ಬಳಿ ಬಂದಿದ್ದರು. ಅನ್ಯಾಯ ಆಗಿದೆ ಎಂದು ನನ್ನ ಬಳಿ ಬಂದಿದ್ದರು. ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದರು. ಅದಾದ ಮೇಲೆ ನನ್ನ ವಿರುದ್ಧ ಏನೇನೋ ಆರೋಪ ಮಾಡಿದರು. ಬಳಿಕ ಅವರನ್ನು ಪೊಲೀಸ್ ಕಮಿಷನರ್​ ಬಳಿ ಕಳಿಸಿಕೊಟ್ಟಿದ್ದೆ ಎಂದು ಹೇಳಿದ್ದರು. ನಂತರ ಪ್ರಕರಣದ ಕಾವು ತುಸು ತಣ್ಣಗಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ