ಯಾದಗಿರಿ: ಕಲುಷಿತ ನೀರು ಸೇವಿಸಿ ಮೂವರ ಸಾವು, 6 ಜನರ ಸ್ಥಿತಿ ಗಂಭೀರ
ಯಾದಗಿರಿ ಜಿಲ್ಲೆಯ ಸುರಾಪುರ ತಾಲೂಕಿನ ತಿಪ್ಪನಟಗಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಮೂವರು ಮೃತಪಟ್ಟಿದ್ದಾರೆ. 10 ದಿನಗಳ ಹಿಂದೆ ಕಲುಷಿತ ನೀರು ಸೇವಿಸಿದ್ದ ಗ್ರಾಮಸ್ಥರು ವಾಂತಿ-ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾದವರಲ್ಲಿ ಆರು ಜನರ ಸ್ಥಿತಿ ಗಂಭೀರವಾಗಿದ್ದು, 20 ಜನ ಅಸ್ವಸ್ಥರಾಗಿದ್ದಾರೆ. ತಾಲೂಕು ಆರೋಗ್ಯಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಯಾದಗಿರಿ, ಜುಲೈ 07: ಯಾದಗಿರಿ (Yadgiri) ಜಿಲ್ಲೆಯ ಸುರಪುರ (Surapura) ತಾಲೂಕಿನ ತಿಪ್ಪನಟಗಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಮೂವರು ಮೃತಪಟ್ಟುದ್ದಾರೆ. ದೇವಿಕೆಮ್ಮ ಹೊಟ್ಟಿ (48), ವೆಂಕಮ್ಮ (60), ರಾಮಣ್ಣ ಪೂಜಾರಿ (50) ಮೃತ ದುರ್ದೈವಿಗಳು. 10 ದಿನಗಳ ಹಿಂದೆ ಕಲುಷಿತ ನೀರು ಸೇವಿಸಿ ತಿಪ್ಪನಟಗಿ ಗ್ರಾಮಸ್ಥರು ವಾಂತಿ-ಭೇದಿಯಿಂದ ಬಳಲಿ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ದುರಾದೃಷ್ಟವಶಾತ್ ಸೋಮವಾರ (ಜು. 07) ಚಿಕಿತ್ಸೆ ಫಲಿಸದೆ ಗ್ರಾಮದ ಮೂವರು ಮೃತಪಟ್ಟಿದ್ದಾರೆ. ಆರು ಜನರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಇನ್ನೂ 20 ಜನ ಅಸ್ವಸ್ಥ ಸ್ಥಿತಿಯಲ್ಲಿದ್ದಾರೆ.
ತಿಪ್ಪನಟಗಿ ಗ್ರಾಮಕ್ಕೆ ಸುರಪುರ ತಾಲೂಕು ಆರೋಗ್ಯ ಅಧಿಕಾರಿ ರಾಜಾ ವೆಂಕಟಪ್ಪ ನಾಯಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಾಂತಿ ಭೇದಿ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ನೀಡುವಂತೆ ಜಿಲ್ಲಾ ಆರೋಗ್ಯ ಅಧಿಕಾರಿ ಮಹೇಶ ಬಿರಾದಾರ ಸೂಚನೆ ಆದೇಶಿಸಿದ್ದಾರೆ. ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.