ಪರೀಕ್ಷೆ ಬರೆಯುವಾಗ ಸುಸ್ತು, ಶಿಕ್ಷಕರ ನಿರ್ಲಕ್ಷ್ಯಕ್ಕೆ ಶಾಲೆಯಲ್ಲೇ ಪ್ರಾಣಬಿಟ್ಟ ವಿದ್ಯಾರ್ಥಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 18, 2024 | 6:54 PM

ಶಹಾಪುರ‌ ನಗರದ ಖಾಸಗಿ ವಸತಿ ಶಾಲೆಯ ಶಿಕ್ಷಕರ ನಿರ್ಲಕ್ಷ್ಯದಿಂದ ವಿದ್ಯಾರ್ಥಿಯೋರ್ವ ಶಾಲೆಯಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ 16 ವರ್ಷದ ಚೇತನ್ ಮೃತ ರ್ದುದೈವಿ. ಈ ಕುರಿತು ಶಹಾಪುರ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪರೀಕ್ಷೆ ಬರೆಯುವಾಗ ಸುಸ್ತು, ಶಿಕ್ಷಕರ ನಿರ್ಲಕ್ಷ್ಯಕ್ಕೆ ಶಾಲೆಯಲ್ಲೇ ಪ್ರಾಣಬಿಟ್ಟ ವಿದ್ಯಾರ್ಥಿ
ಮೃತ ವಿದ್ಯಾರ್ಥಿ
Follow us on

ಯಾದಗಿರಿ, ಸೆ.18: ಜಿಲ್ಲೆಯ ಶಹಾಪುರ‌ ನಗರದ ಖಾಸಗಿ ವಸತಿ ಶಾಲೆಯ ಶಿಕ್ಷಕರ ನಿರ್ಲಕ್ಷ್ಯದಿಂದ ವಿದ್ಯಾರ್ಥಿಯೋರ್ವ ಶಾಲೆಯಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಶಾಲಾ ವಿದ್ಯಾರ್ಥಿ ಚೇತನ್ (16) ಮೃತ ರ್ದುದೈವಿ. ಶಹಾಪುರ‌ದ ಡಿಡಿಯು ಖಾಸಗಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಚೇತನ್ ಓದುತ್ತಿದ್ದ. ಅನಾರೋಗ್ಯ ಹಿನ್ನಲೆ ಕಳೆದ ಎರಡು ದಿನಗಳ ಹಿಂದೆ ಪೋಷಕರು, ವಿದ್ಯಾರ್ಥಿಯನ್ನು ಶಾಲೆಯ ವಸತಿ ನಿಲಯದಿಂದ ಮನೆಗೆ ಕರೆದುಕೊಂಡು ಹೋಗಿದ್ದರು.

ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದ ಪೋಷಕರು

ಹೌದು, ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪೋಷಕರು ಚೇತನ್​ಗೆ ಚಿಕಿತ್ಸೆ ಕೊಡಿಸಿದ್ದರು. ಆದ್ರೆ, ಇವತ್ತು ಶಾಲೆಯಲ್ಲಿ ಕಿರು ಪರೀಕ್ಷೆ ಇದೆ ಎಂದು ಶಾಲೆಗೆ ಬಂದಿದ್ದ ವಿದ್ಯಾರ್ಥಿ. ಪರೀಕ್ಷೆ ಬರೆಯುವಾಗ ಸುಸ್ತಾಗಿ ವಾಂತಿ ಮಾಡಿಕೊಂಡಿದ್ದ. ಆದರೂ ಶಾಲೆಯಲ್ಲೇ ವಿಶ್ರಾಂತಿ ಪಡೆಯುವಂತೆ ಶಿಕ್ಷಕರು ಹೇಳಿದ್ದರು. ಇನ್ನು ಇದೆ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ಚೇತನ್ ಸಹೋದರಿ ಪವಿತ್ರಾಗೆ ಕರೆದು, ನನಗೆ ಹುಷಾರಿಲ್ಲದ ವಿಷಯವನ್ನು ಕರೆ ಮಾಡಿ ಪೋಷಕರಿಗೆ ತಿಳಿಸು ಎಂದಿದ್ದಾನೆ.

ಇದನ್ನೂ ಓದಿ: ಹಾಸ್ಟೆಲ್ ಮಹಡಿಯಿಂದ ಬಿದ್ದು ವಿದ್ಯಾರ್ಥಿ ಸಾವು, 4 ತಿಂಗಳಲ್ಲಿ ಇದು ಮೂರನೇ ವಿದ್ಯಾರ್ಥಿ ಬಲಿ

ಆದರೆ, ಮುಖ್ಯ ಶಿಕ್ಷಕರ ಅನುಮತಿ ಇಲ್ಲದೆ ಫೋನ್ ಕೊಡಲ್ಲ ಎಂದು ಹೇಳಿ ಶಿಕ್ಷಕರು ನಿರ್ಲಕ್ಷ್ಯ ತೋರಿದ್ದಾರೆ. ಇತ್ತ ಚೇತನ್​ ನಿತ್ರಾಣಕ್ಕೆ ಬಂದು ಶಾಲೆಯಲ್ಲೇ ಕೊನೆಯುಸಿರೆಳೆದಿದ್ದಾನೆ. ಮೃತಪಟ್ಟ ಬಳಿಕ ಬೈಕ್ ಮೇಲೆ ಸಹ ವಿದ್ಯಾರ್ಥಿಗಳು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ‌. ಶಾಲೆಯ ಶಿಕ್ಷಕರ ನಿರ್ಲಕ್ಷ್ಯದಿಂದಲೇ ಚೇತನ್ ಸಾವಾಗಿದೆ ಎಂದು ಇದೀಗ ಪೋಷಕರು ಆರೋಪ ಮಾಡುತ್ತಿದ್ದು, ಈ ಕುರಿತು ಶಹಾಪುರ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ