ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣ: ಮೂವರ ಬಂಧನ; ಘಟನೆ ಸಮರ್ಥಿಸಿಕೊಂಡ ಭಗವಂತ್ ಖೂಬಾ

| Updated By: ganapathi bhat

Updated on: Aug 18, 2021 | 6:45 PM

Bhagawanth Khuba: ಅದು ನಾಡ ಬಂದೂಕಲ್ಲ. ಇಲ್ಲಿ ಪಟಾಕಿ ಮದ್ದು ಹಾಕಿ ಶಬ್ದ ಮಾಡುವ ಪದ್ಧತಿ ಇದೆ. ಅದೊಂದು ವಾಡಿಕೆ. ಇತಿಹಾಸವನ್ನ ತೆಗೆದು ಒಮ್ಮೆ ನೋಡಿ ಎಂದು ಯಾದಗಿರಿಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಪ್ರತಿಕ್ರಿಯೆ ನೀಡಿದ್ದಾರೆ.

ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣ: ಮೂವರ ಬಂಧನ; ಘಟನೆ ಸಮರ್ಥಿಸಿಕೊಂಡ ಭಗವಂತ್ ಖೂಬಾ
ಗಾಳಿಯಲ್ಲಿ ಗುಂಡು
Follow us on

ಯಾದಗಿರಿ: ಬಿಜೆಪಿ ಜನಾಶೀರ್ವಾದ ಯಾತ್ರೆಯಲ್ಲಿ ಗಾಳಿಯಲ್ಲಿ ಗುಂಡುಹಾರಿಸಿ ಕೇಂದ್ರ ಸಚಿವ ಭಗವಂತ ಖೂಬಾಗೆ ಸ್ವಾಗತ ಕೋರಿದ್ದ ಘಟನೆಯನ್ನು ಖೂಬಾ ಸಮರ್ಥಿಸಿಕೊಂಡಿದ್ದಾರೆ. ಅಲ್ಲಿ ನಡೆದದ್ದನ್ನು ನಾನು ನೋಡಿಲ್ಲ. ಅದು ನಾಡ ಬಂದೂಕಲ್ಲ. ಇಲ್ಲಿ ಪಟಾಕಿ ಮದ್ದು ಹಾಕಿ ಶಬ್ದ ಮಾಡುವ ಪದ್ಧತಿ ಇದೆ. ಅದೊಂದು ವಾಡಿಕೆ. ಇತಿಹಾಸವನ್ನ ತೆಗೆದು ಒಮ್ಮೆ ನೋಡಿ. ದೇವರ ದಯೆಯಿಂದ ಯಾವುದೇ ಅವಘಡ ನಡೆದಿಲ್ಲ. ಇದು ಕರ್ನಾಟಕ, ನಮ್ಮ ಜನ‌ರು ಶಾಂತಿ‌ಪ್ರಿಯರು. ತಪ್ಪು‌ ಮಾಡಿದವರ ವಿರುದ್ಧ ಸರ್ಕಾರ ಕ್ರಮಕೈಗೊಳ್ಳುತ್ತೆ ಎಂದು ಯಾದಗಿರಿಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಪ್ರತಿಕ್ರಿಯೆ ನೀಡಿದ್ದಾರೆ.

ಗಾಳಿಯಲ್ಲಿ ಗುಂಡುಹಾರಿಸಿ ಕೇಂದ್ರ ಸಚಿವ ಖೂಬಾಗೆ ಸ್ವಾಗತ ಕೋರಿದ ಪ್ರಕರಣ ಸಂಬಂಧಿಸಿ ನಾಡ ಬಂದೂಕಿನಿಂದ ಗುಂಡು ಹಾರಿಸಿದ್ದ ಮೂವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಅಮಾಯಕರನ್ನು ಸಿಲುಕಿಸಿ ನಾಯಕರು ಎಸ್ಕೇಪ್ ಆಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ. ಪೊಲೀಸರ ವಿಚಾರಣೆ ವೇಳೆ ಅಮಾಯಕರ ಅಸಹಾಯಕ ಮಾತು ಕೇಳಿಬಂದಿದೆ. ಬಾಬುರಾವ್ ಚಿಂಚನಸೂರ್, ವೆಂಕಟರೆಡ್ಡಿ ಮುದ್ನಾಳ್ ನಮ್ಮನ್ನು ಕರೆಸಿದ್ದರು. ನಾಡಬಂದೂಕು ತರುವಂತೆ ಅವರೇ ನಮ್ಮನ್ನು ಕರೆಸಿದ್ದರು. ಅವರ ಸೂಚನೆಯಂತೆ ಬಂದೂಕು ತೆಗೆದುಕೊಂಡು ಹೋಗಿದ್ದೆವು. ಬಿಜೆಪಿ ನಾಯಕರು ಹೇಳಿದ್ದಕ್ಕೆ ನಾವು ಫೈರಿಂಗ್ ಮಾಡಿದ್ದೇವೆ ಎಂದು ಯಾದಗಿರಿ ಪೊಲೀಸರ ಮುಂದೆ ಬಂಧಿತರು ಸತ್ಯ ಬಾಯಿಬಿಟ್ಟಿದ್ದಾರೆ.

ಇತ್ತ, ಬಿಜೆಪಿ ಜನಾಶೀರ್ವಾದ ಯಾತ್ರೆಯಲ್ಲಿ ತಮ್ಮ ನಾಯಕನ ಹೆಸರು ಕೂಗಿಲ್ಲವೆಂದು ಬೆಂಬಲಿಗರು ಆಕ್ರೋಶ ಹೊರಹಾಕಿದ್ದಾರೆ. ರಾಜುಗೌಡ, ಬಾಬುರಾವ್ ಚಿಂಚನಸೂರು ಬೆಂಬಲಿಗರಿಂದ ಆಕ್ರೋಶ ವ್ಯಕ್ತವಾಗಿದೆ. ಯಾದಗಿರಿಯಲ್ಲಿ ನಡೆಯುತ್ತಿರುವ ಬಿಜೆಪಿ ಜನಾಶೀರ್ವಾದ ಯಾತ್ರೆಯಲ್ಲಿ ಹಿಂದುಳಿದ ನಾಯಕರನ್ನು ಅವಮಾನಿಸಿದ್ದಾರೆಂದು ಆಕ್ರೋಶ ಕೇಳಿಬಂದಿದೆ. ಹೀಗಾಗಿ, ಇಬ್ಬರು ನಾಯಕರ ಬೆಂಬಲಿಗರು ಕಾರ್ಯಕ್ರಮದಿಂದ ಹೊರ‌ನಡೆದಿದ್ದಾರೆ.

ಘಟನೆ ಹಿನ್ನೆಲೆ ಏನು?
ನಗರದಲ್ಲಿ ಬುಧವಾರ (ಆಗಸ್ಟ್ 18) ನಡೆದ ಬಿಜೆಪಿ ಜನಾಶೀರ್ವಾದ ಯಾತ್ರೆಯಲ್ಲಿ ಗಾಳಿಯಲ್ಲಿ ಗುಂಡುಹಾರಿಸಿ ಕೇಂದ್ರ ಸಚಿವ ಭಗವಂತ ಖೂಬಾಗೆ ಸ್ವಾಗತ ಕೋರಲಾಗಿತ್ತು. ಯಾದಗಿರಿ ತಾಲೂಕಿನ ಯರಗೋಳ ಗ್ರಾಮದ ಬಳಿ ಫೈರಿಂಗ್​ ಮಾಡಲಾಗಿತ್ತು. ಘಟನೆ ಸಂಬಂಧ ಎಫ್​ಐಆರ್​ ದಾಖಲಿಸುವಂತೆ ಯಾದಗಿರಿ ಎಸ್​ಪಿ ವೇದಮೂರ್ತಿ ಸೂಚನೆ ನೀಡಿದ್ದರು. ಸಚಿವರ ಸ್ವಾಗತಕ್ಕೆ ಗಾಳಿಯಲ್ಲಿ ಗುಂಡು ಹಾರಿಸಿರುವ ಕಾರಣ ಎಫ್​ಐಆರ್ ದಾಖಲಿಸಲಾಗಿತ್ತು. ಯಾದಗಿರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಗಾಳಿಯಲ್ಲಿ ಗುಂಡು ಹಾರಿಸಲು ನಾಡ ಬಂದೂಕು ವ್ಯವಸ್ಥೆಯನ್ನು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಮಾಡಿದ್ದಾರೆ ಎಂದು ತಿಳಿದುಬಂದಿತ್ತು. ಗುರುಮಠಕಲ್​ ಕ್ಷೇತ್ರ ವ್ಯಾಪ್ತಿಯ ಯರಗೋಳ ಗ್ರಾಮದಲ್ಲಿ ಚಿಂಚನಸೂರು ಸ್ವತಃ ತಾವೇ ಕೈಯಲ್ಲಿ ಬಂದೂಕು ಹಿಡಿದಿದ್ದರು ಎಂದು ಮಾಹಿತಿ ಲಭ್ಯವಾಗಿತ್ತು. ಗಾಳಿಯಲ್ಲಿ ಗುಂಡುಹಾರಿಸುವಂತೆ ಚಿಂಚನಸೂರು ಹೇಳಿದ್ದರು ಎಂದು ತಿಳಿದುಬಂದಿತ್ತು. ಬಳಿಕ, ಘಟನೆ ಸಂಬಂಧ ಎಫ್​ಐಆರ್ ದಾಖಲಾದ ಹಿನ್ನೆಲೆಯಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ವರದಿ ಆಗುತ್ತಿದ್ದಂತೆ ಬಾಬುರಾವ್ ಚಿಂಚನಸೂರ್ ಜನಾಶೀರ್ವಾದ ಯಾತ್ರೆಗೆ ಗೈರಾಗಿದ್ದರು.

ಇದನ್ನೂ ಓದಿ: ಬಿಜೆಪಿ ಜನಾಶೀರ್ವಾದ ಯಾತ್ರೆ: ಗಾಳಿಯಲ್ಲಿ ಗುಂಡು ಹಾರಿಸಿ ಭಗವಂತ ಖೂಬಾಗೆ ಸ್ವಾಗತ; ಘಟನೆ ವಿರುದ್ಧ ಎಫ್​ಐಆರ್ ದಾಖಲು

ಪ್ರಧಾನಿ ಮೋದಿ ದಿನದ 18 ಗಂಟೆ ಕೆಲಸ ಮಾಡುತ್ತಾರೆ; ಒಂದು ಸೂಟ್​ಕೇಸ್ ಬಟ್ಟೆ ಮಾತ್ರ ಅವರ ಆಸ್ತಿ: ಶೋಭಾ ಕರಂದ್ಲಾಜೆ

Published On - 6:26 pm, Wed, 18 August 21