
ಯಾದಗಿರಿ, ನವೆಂಬರ್ 02: ಕಲಬುರಗಿಯ ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥಸಂಚಲನ ವಿಚಾರ ರಾಜ್ಯಾದ್ಯಂತ ಸದ್ದು ಮಾಡಿದ್ದು, ವಿಷಯ ಕೋರ್ಟ್ ಕಟಕಟೆಯಲ್ಲಿದೆ. ಈ ನಡುವೆ ಇತ್ತ ಯಾiದಗಿರಿಯಲ್ಲೂ RSS ಮತ್ತು DSS (ದಲಿತ ಸಂಘರ್ಷ ಸಮಿತಿ) ನಡುವೆ ಪಥಸಂಚಲನ ಫೈಟ್ ಶುರುವಾಗಿದೆ. ಕೆಂಭಾವಿಯಲ್ಲಿ ನ.4 ರಂದು ಪಥಸಂಚಲನ ನಡೆಸಲು ಅನುಮತಿ ಕೋರಿ ಎರಡೂ ಸಂಘಟನೆಗಳು ಅರ್ಜಿ ಸಲ್ಲಿಸಿದ್ದು, ತಾಲೂಕಾಡಳಿತದ ಸಂಧಾನ ಸಭೆಯೂ ವಿಫಲವಾಗಿದೆ.
RSS ಗಣವೇಶದ ಭಾಗವಾದ ದಂಡಕ್ಕೆ(ದೊಣ್ಣೆ) DSS ತಕರಾರು ತೆಗೆದಿದ್ದು, ನೋಂದಣಿ ಇಲ್ಲದ RSS ನವರು ದಂಡ ಹಿಡಿದು ಪಥ ಸಂಚಲನ ನಡೆಸಲು ಅನುಮತಿ ನೀಡಬಾರದು ಎಂದು ಡಿಎಸ್ಎಸ್ ಆಗ್ರಹಿಸಿದೆ. ಆದರೆ ಸ್ವಯಂಸೇವಕರು ಪಥಸಂಚಲನದಲ್ಲಿ ಪೂರ್ಣ ಗಣವೇಷ ಧರಿಸುವುದು RSS ಅನುಶಾಸನ. ಪೂರ್ಣ ಗಣವೇಶದಲ್ಲಿ ಸುಮಾರು ಏಳು ಭಾಗಗಳಿರುತ್ತವೆ. ಕಪ್ಪು ಟೋಪಿ, ದಂಡ(ದೊಣ್ಣೆ), ಬಿಳಿ ಅಂಗಿ, ಕಂದು ಬಣ್ಣದ ಬೆಲ್ಟ್, ಖಾಕಿ ಬಣ್ಣದ ಪ್ಯಾಂಟ್, ಕಾಲುಚೀಲ(ಸಾಕ್ಸ್), ಲೇಸ್ ಇರುವ ಕಪ್ಪು ಬಣ್ಣದ ಬೂಟು ಧರಿಸಿಯೇ ಮಾತನಾಡದೆ ಪಥಸಂಚಲನ ಮಾಡಬೇಕು. ಹೀಗಾಗಿ ದಂಡ ಇಲ್ಲದ ಪಥಸಂಚಲನ ಅಪೂರ್ಣ ಎಂಬುದು ಆರೆಸ್ಸೆಸ್ ವಾದ.
ಇದನ್ನೂ ಓದಿ: ಕಲಬುರಗಿ ಹೈಕೋರ್ಟ್ ಮಹತ್ವದ ಸೂಚನೆ: ನ. 2ರಂದು ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಮುಂದಾಗಿದ್ದ RSSಗೆ ಹಿನ್ನಡೆ
ಇನ್ನು ಇದೇ ವಿಚಾರವಾಗಿ ತಾಲೂಕು ಆಡಳಿತ ನಡೆಸಿದ್ದ ಸಂಧಾನ ಸಭೆಯೂ ವಿಫಲವಾಗಿದೆ. ದಂಡ ಇಲ್ಲದೆ ಆರೆಸ್ಸೆಸ್ನವರು ಪಥಸಂಚಲನ ನಡೆಸಲಿ ಎಂದು ಡಿಎಸ್ಎಸ್ ಆಗ್ರಹಿಸಿದ ಕಾರಣ ಸಭೆಯಲ್ಲಿ ಯಾವುದೇ ಅಂತಿಮ ನಿರ್ಧಾರವನ್ನು ಕೈಗೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಈ ಬಗ್ಗೆ ಜಿಲ್ಲಾಡಳಿತಕ್ಕೆ ವರದಿ ನೀಡಲು ತಾಲೂಕಾಡಳಿತ ಮುಂದಾಗಿದೆ.
ಇತ್ತ ಚಿತ್ತಾಪುರ ಆರ್ಎಸ್ಎಸ್ ಪಥಸಂಚಲನ ಜಟಾಪಟಿಯೂ ಮುಂದುವರೆದಿದೆ. ಶಾಂತಿ ಸಭೆ ಅಶಾಂತಿಯಲ್ಲಿ ಅಂತ್ಯಗೊಂಡಿದ್ದ ಬಗ್ಗೆ ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೆ, ನ. 5ರಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಅಡ್ವೊಕೇಟ್ ಜನರಲ್ ಕಚೇರಿಯಲ್ಲಿಯೇ ಶಾಂತಿ ಸಭೆ ನಡೆಸಲು ಸೂಚಿಸಿ ವಿಚಾರಣೆಯನ್ನು ನವೆಂಬರ್ 7ಕ್ಕೆ ಮುಂದೂಡಿತ್ತು. ಹೀಗಾಗಿ ಇಂದು (ನ.2) ಕಲಬುರಗಿಯ ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ತಯಾರಿ ನಡೆಸಿದ್ದ RSSಗೆ ಹಿನ್ನಡೆ ಆಗಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:00 pm, Sun, 2 November 25