ಯಾದಗಿರಿ: ಮೀಟರ್ ಬಡ್ಡಿ ದಂಧೆಗೆ ಯುವಕ ಬಲಿ!

| Updated By: ವಿವೇಕ ಬಿರಾದಾರ

Updated on: Jan 24, 2025 | 1:59 PM

ಯಾದಗಿರಿಯಲ್ಲಿ ಮೀಟರ್ ಬಡ್ಡಿಯ ಸಾಲ ಮರುಪಾವತಿಯ ವಿಳಂಬದಿಂದಾಗಿ ಭೀಕರ ಘಟನೆ ನಡೆದಿದೆ. ಯಾಸೀನ್ ಎಂಬಾತ ಖಾಸೀಂ ಎಂಬ ವ್ಯಕ್ತಿಯಿಂದ 35,000 ರೂಪಾಯಿ ಸಾಲ ಪಡೆದಿದ್ದನು. ಸಾಲ ತೀರಿಸದ ಕಾರಣ ಯಾಸೀನ್ ಖಾಸೀಂ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದು, ಗಾಯಗೊಂಡ ಖಾಸೀಂ ಕಲಬುರಗಿಯಲ್ಲಿ ಮೃತಪಟ್ಟಿದ್ದಾನೆ. ಯಾಸೀನ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಾದಗಿರಿ: ಮೀಟರ್ ಬಡ್ಡಿ ದಂಧೆಗೆ ಯುವಕ ಬಲಿ!
ಖಾಸೀಂ ಮೃತ ವ್ಯಕ್ತಿ, ಯಾಸೀನ್ ಹತ್ಯೆಗೈದ ಆರೋಪಿ
Follow us on

ಯಾದಗಿರಿ, ಜನವರಿ 24: ಮೀಟರ್ ಬಡ್ಡಿ ಸಾಲ ಮರು ಪಾವತಿಸದಕ್ಕೆ ಮಾರಣಾಂತಿಕವಾಗಿ ಹಲ್ಲೆ ಮಾಡಿ, ಹತ್ಯೆಗೈದಿರುವ ಘಟನೆ ಯಾದಗಿರಿ (Yadagiri) ನಗರದ ಲಾಡೇಜಗಲ್ಲಿಯಲ್ಲಿ ನಡೆದಿದೆ. ಖಾಸೀಂ ಮೃತ ವ್ಯಕ್ತಿ. ಯಾಸೀನ್ ಹತ್ಯೆಗೈದ ಆರೋಪಿ. ಮೃತ ಖಾಸೀಂ ಆರೋಪಿ ಯಾಸೀನ್​ ಬಳಿ ಸಾಲ ಪಡೆದಿದ್ದನು. ಜನವರಿ 19ರಂದು 35 ಸಾವಿರ ರೂಪಾಯಿ ಸಾಲ ಮರು ಪಾವತಿಸಬೇಕಿತ್ತು.

ಆದರೆ, ಸಾಲ ಮರು ಪಾವತಿಸುವಲ್ಲಿ ತಡವಾಗಿದ್ದಕ್ಕೆ ಯಾಸೀನ್ ಬಾರುಕೋಲ್, ಮೊಣಕಾಲಿನಿಂದ ಒದ್ದು ಖಾಸಿಂ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದನು. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಖಾಸೀಂನನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ಕುಟುಂಬಸ್ಥರು ದಾಖಲಿಸಿದ್ದರು. ವೈದ್ಯರ ಸಲಹೆ ಮೇರೆಗೆ ಕುಟುಂಬಸ್ಥರು ಖಾಸಿಂನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಖಾಸೀಂ ಕಲಬುರಗಿ ಸರ್ಕಾರಿ ಆಸ್ಪತ್ರೆಯಲ್ಲಿ ಉಸಿರು ಚೆಲ್ಲಿದ್ದಾನೆ. ಯಾಸೀನ್ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ದೂರು ಸ್ವೀಕರಿಸದಿದ್ದರೆ ಎದುರಾಳಿಯನ್ನು ಕೊಲ್ಲುವೆ: ಪೊಲೀಸ್​ ಮಹಾನಿರ್ದೇಶಕರನ್ನೇ ಟ್ಯಾಗ್​ ಮಾಡಿ ವ್ಯಕ್ತಿ ಟ್ವೀಟ್

ಯಕ್ಷಗಾನ ಕಲಾವಿದರ ನಡುವೆ ಬಡ್ಡಿ ಹಣಕ್ಕಾಗಿ ಜಗಳ

ಬಡ್ಡಿ ಹಣದ ವಿಚಾರವಾಗಿ ಇಬ್ಬರು ಯಕ್ಷಗಾನ ಕಲಾವಿದರು ಜಗಳವಾಡಿಕೊಂಡಿದ್ದಾರೆ. ಸಸಿಹಿತ್ಲು ಯಕ್ಷಗಾನ ಮೇಳದ ಕಲಾವಿದ ಪಡುಬಿದ್ರೆ ನಿವಾಸಿ ನಿತಿನ್ ಎಂಬುವರು ಐದು ವರ್ಷಗಳ ಹಿಂದೆ ಯಕ್ಷಗಾನ ಕಲಾವಿದ ಸಚಿನ್ ಎಂಬವರಿಂದ 20 ಪರ್ಸೆಂಟ್ ಬಡ್ಡಿಯಲ್ಲಿ 1,80,000 ರೂ. ಸಾಲ ಪಡೆದಿದ್ದರು. ಐದು ವರ್ಷದಿಂದ ನಿತಿನ್ ಸರಿಯಾಗಿ ಬಡ್ಡಿ ನೀಡುತ್ತಿದರೂ, ನೀಡುತ್ತಿಲ್ಲ ಎಂದು ಯಕ್ಷಗಾನ ಕಲಾವಿದ ಸಚಿನ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ.

ಅಲ್ಲದೇ, ಇವರಿಬ್ಬರೂ ಸ್ನೇಹಿತರೂ ಆಗಿದ್ದು, ವಿವಿಧ ರೀತಿಯ ವ್ಯವಹಾರ ಮಾಡುತ್ತಿದ್ದರು. ಸಾಲ ವ್ಯವಹಾರದಲ್ಲಿ ಭಿನ್ನಮತ ಮೂಡಿದ ಹಿನ್ನಲೆಯಲ್ಲಿ ಗಲಾಟೆ ಆರಂಭವಾಗಿದೆ. ಕಲಾವಿದ ಸಚಿನ್ ಮತ್ತು ಅವರ ತಂದೆ ಕುಶಾಲ್ ಎಂಬವರು ನಿತಿನ್ ಅವರನ್ನು ಕಾರಿನಲ್ಲಿ ಉದ್ಯಾವರಕ್ಕೆ ಕರೆದೊಯ್ದು, ಕೋಣೆಯಲ್ಲಿ ಕೂಡಿಹಾಕಿ ಕಂಬಳದ ಬಾರ್ಕೋಲ್​ನಲ್ಲಿ ಬಾಸುಂಡೆ ಬರುವಂತೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಲ್ಲೆ ನಡೆದ ದಿನವೂ ನಿತಿನ್ ಮೇಳ ಸೇರಿಕೊಂಡು ಯಕ್ಷಗಾನದಲ್ಲಿ ಪಾತ್ರವಹಿಸಿದ್ದರು.

ಸದ್ಯ ನಿತಿನ್​ ಪಡುಬಿದ್ರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವಿಶ್ವಕರ್ಮ ಸಂಘಟನೆಗಳು ಒತ್ತಾಯಿಸಿವೆ. ಸದ್ಯ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:58 pm, Fri, 24 January 25