ಯಾದಗಿರಿ: ಶಿಥಿಲಾವಸ್ಥೆಗೆ ತಲುಪಿದೆ ಶಾಲೆ, ಯೋಗ್ಯವಿಲ್ಲದ ಕೊಠಡಿ; 6-9ನೇ ತರಗತಿ ವಿದ್ಯಾರ್ಥಿಗಳಿಗೆ ಅನಧಿಕೃತ ರಜೆ ಘೋಷಣೆ
ಯಾದಗಿರಿ ಜಿಲ್ಲೆಯ ಸುರಪುರ ನಗರದ ತಿಮ್ಮಾಪುರ ಬಡಾವಣೆಯಲ್ಲಿರುವ ಸರ್ಕಾರಿ ಶಾಲೆಯ ಕೊಠಡಿಗಳು ಮಕ್ಕಳು ಕುಳಿತು ಓದುವ ಸ್ಥಿತಿಯಲ್ಲಿಲ್ಲ. ಒಮ್ಮೆ ಜೋರು ಮಳೆ ಬಂದರೆ ಕ್ಷಣದಲ್ಲೇ ಬಿದ್ದು ಹೋಗುವಂತಿದೆ ಶಾಲೆ ಕಟ್ಟಡ. ಹೀಗಾಗಿ ಶಿಕ್ಷಕರು ವಿದ್ಯಾರ್ಥಿಗಳಿಗೆ ರಜೆ ಘೋಷಿಸಿ ದಿನಕ್ಕೆ ಒಂದು ತರಗತಿ ಎಂಬಂತೆ ಪಾಠ ಮಾಡುತ್ತಿದ್ದಾರೆ.
ಯಾದಗಿರಿ, ಜೂನ್.13: ಶೈಕ್ಷಣಿಕ ವರ್ಷದ ತರಗತಿ ಆರಂಭವಾದರೂ ಮಕ್ಕಳಿಗಿಲ್ಲ ಪಾಠ ಕೇಳುವ ಭಾಗ್ಯ (Government School). ಶೈಕ್ಷಣಿಕ ವರ್ಷದ ತರಗತಿ ಆರಂಭವಾಗಿ ಹದಿನೈದು ದಿನಗಳು ಕಳೆದಿವೆ. ಆದರೆ ಇಲ್ಲೊಂದು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅನಧಿಕೃತ ರಜೆ (Holiday) ಘೋಷಣೆ ಮಾಡಲಾಗಿದೆ. ಕೊಠಡಿಗಳು ಇಲ್ಲದಿರುವ ಕಾರಣಕ್ಕೆ 6 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಅನಧಿಕೃತ ರಜೆ ಘೋಷಣೆ ಮಾಡಲಾಗಿದೆ.
ಯಾದಗಿರಿ ಜಿಲ್ಲೆಯ ಸುರಪುರ ನಗರದ ತಿಮ್ಮಾಪುರ ಬಡಾವಣೆಯಲ್ಲಿರುವ ಸರ್ಕಾರಿ ಶಾಲೆಯ ಪರಿಸ್ಥಿತಿ ಹೇಳತೀರದ್ದು ಅಲ್ಪಸಂಖ್ಯಾತರ ಇಲಾಖೆಗೆ ಒಳಪಡುವ ಮೌಲಾನಾ ಆಜಾದ್ ಮಾದರಿ ಶಾಲೆ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ಈ ಸರ್ಕಾರಿ ಶಾಲೆಯ ಕೊಠಡಿಗಳಂತೋ ಅವಘಡದ ಮುನ್ಸೂಚನೆಯಂತೆ ತೋರುತ್ತಿವೆ. ಈ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಕೂರಿಸಿ ಪಾಠ ಮಾಡಲು ಕೊಠಡಿಗಳ ಕೊರತೆ ಹೆಚ್ಚಿದೆ. ಹೀಗಾಗಿ 6 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಅನಧಿಕೃತ ರಜೆ ಘೋಷಣೆ ಮಾಡಲಾಗಿದೆ. 10ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಪಾಠ ಬೋಧನೆ ಮಾಡಲಾಗುತ್ತಿದೆ.
ನೂರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಈ ಶಾಲೆಯಲ್ಲಿ ಒಬ್ಬರೇ ಒಬ್ಬರು ಖಾಯಂ ಶಿಕ್ಷಕರು ಮಾತ್ರ ಇದ್ದಾರೆ. ಶಿಥಿಲಾವಸ್ಥೆಗೆ ತಲುಪಿದ ಕಟ್ಟಡದಲ್ಲೇ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಾಗುತ್ತಿದೆ. ಅಥಿತಿ ಶಿಕ್ಷಕರು ಒಂದೇ ಕೊಠಡಿಯಲ್ಲಿ ಪಾಠ ಮಾಡ್ತಿದ್ದಾರೆ. ಉಳಿದೆಲ್ಲಾ ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿವೆ. ಸ್ವಲ್ಪ ಮಳೆಯಾದರೂ ಶಾಲೆಗೆ ಬೀಗ ಹಾಕಿ ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. 9ನೇ ತರಗತಿ ವಿದ್ಯಾರ್ಥಿಗಳು ಕ್ಲಾಸ್ ಗೆ ಹಾಜರಾದ್ದರೇ, ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ರಜೆ ನೀಡಲಾಗುತ್ತಿದೆ. 10ನೇ ತರಗತಿ ವಿದ್ಯಾರ್ಥಿಗಳು ಕ್ಲಾಸ್ಗೆ ಬಂದರೆ 9ನೇ ತರಗತಿ ವಿದ್ಯಾರ್ಥಿಗಳಿಗೆ ರಜೆ ನೀಡಲಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ವಿರುದ್ಧ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ