ಯಾದಗಿರಿಯಲ್ಲಿ ದಾಖಲೆಯ ಬಿಸಿಲು: ತಾಪ ಪ್ರತಾಪಕ್ಕೆ ಜನ ಕಂಗಾಲು, ಮಕ್ಕಳು ಆಸ್ಪತ್ರೆಗೆ ದಾಖಲು

|

Updated on: May 22, 2023 | 9:45 AM

ರಾಜ್ಯದಲ್ಲೇ ಯಾದಗಿರಿಯಲ್ಲಿ ಅತ್ಯಧಿಕ ಬಿಸಿಲು ದಾಖಲೆಯಾಗಿದೆ. ರಣಬಿಸಿಲಿಗೆ ಯಾದಗಿರಿ ಜನರು ಬೆಚ್ಚಿಬಿದ್ದಿದ್ದಾರೆ. ಬಿಸಿಲಿನ ಪ್ರಖರತೆಗೆ ನವಜಾತ ಶಿಶುಗಳು ಅಸ್ವಸ್ಥರಾಗಿದ್ದಾರೆ. ನಿರ್ಜಲೀಕರಣಕ್ಕೆ ಒಳಗಾಗಿ ನವಜಾತ ಶಿಶುಗಳನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ.

ಯಾದಗಿರಿಯಲ್ಲಿ ದಾಖಲೆಯ ಬಿಸಿಲು: ತಾಪ ಪ್ರತಾಪಕ್ಕೆ ಜನ ಕಂಗಾಲು, ಮಕ್ಕಳು ಆಸ್ಪತ್ರೆಗೆ ದಾಖಲು
ಸಾಂದರ್ಭಿಕ ಚಿತ್ರ
Follow us on

ಯಾದಗಿರಿ: ರಾಜ್ಯದಲ್ಲೇ ಯಾದಗಿರಿಯಲ್ಲಿ (Yadgiri) ಅತ್ಯಧಿಕ ಬಿಸಿಲು ದಾಖಲೆಯಾಗಿದೆ. ರಣಬಿಸಿಲಿಗೆ ಯಾದಗಿರಿ ಜನರು ಬೆಚ್ಚಿಬಿದ್ದಿದ್ದಾರೆ. ಕಳೆದೊಂದು ವಾರದಿಂದ 45.6 ಡಿಗ್ರಿ ಸೆಲ್ಸಿಯಸ್​​ನಷ್ಟು ಉಷ್ಣಾಂಶ ದಾಖಲಾಗಿದೆ. ಬಿಸಿಲಿನ ಪ್ರಖರತೆಗೆ ನವಜಾತ ಶಿಶುಗಳು ಅಸ್ವಸ್ಥರಾಗಿದ್ದಾರೆ. ನಿರ್ಜಲೀಕರಣಕ್ಕೆ (Dehydration) ಒಳಗಾಗಿ ನವಜಾತ ಶಿಶುಗಳನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ನಿತ್ಯವೂ ಯಾದಗಿರಿಯ ತಾಯಿ-ಮಕ್ಕಳ ಆಸ್ಪತ್ರೆಗೆ ಹತ್ತಾರು ಮಕ್ಕಳನ್ನು ದಾಖಲಿಸಲಾಗಿತ್ತಿದೆ. ಕಳೆದ 5-6 ದಿನದಿಂದ ಆಸ್ಪತ್ರೆಗೆ ದಾಖಲಾಗುತ್ತಿರುವ ಮಕ್ಕಳ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಬಿಸಿಲಿಗೆ ಮಕ್ಕಳ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತಿದೆ. ಮಾತ್ರವಲ್ಲ ನೀರಿನ ಅಂಶ ಕಡಿಮೆಯಾಗಿ ಮಕ್ಕಳಿಗೆ ಕಿಡ್ನಿ ವೈಫಲ್ಯವೂ ಆಗುತ್ತಿದೆ. 1 ವರ್ಷದಿಂದ 7 ವರ್ಷದೊಳಗಿನ ಮಕ್ಕಳ ಮೇಲೆ ನೇರ ಪರಿಣಾಮ ಬೀರುತ್ತಿದೆ.

ಆಸ್ಪತ್ರೆಯಲ್ಲಿ ಮಕ್ಕಳಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿಯವರೆಗೆ 26 ಕ್ಕೂ ಅಧಿಕ ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದರು. ಅದರಲ್ಲಿ 15 ಶಿಶುಗಳು ಗುಣಮುಖರಾಗಿದ್ದಾರೆ. ಇನ್ನು ಕೆಲವು ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಯಂದಿರು ಮಕ್ಕಳನ್ನು ವಿಶೇಷವಾಗಿ ಆರೈಸಿದರೇ ಬೇಗ ಗುಣಮುಖರಾಗುತ್ತಾರೆ ಎಂದು ವೈದ್ಯೆ‌ ಸಾವಿತ್ರಿ ಹೇಳಿದ್ದಾರೆ.

ಇದನ್ನೂ ಓದಿ: ಕೌಟುಂಬಿಕ ಕಲಹ ಹಿನ್ನಲೆ ಪತಿಯಿಂದಲೇ ಪತ್ನಿಯ ಕೊಲೆ; ಮದುವೆ ಮನೆಯಲ್ಲೀಗ ಸೂತಕದ ಛಾಯೆ

ಯಾದಗಿರಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ ಅಧಿಕ ಉಷ್ಣಾಂಶ ದಾಖಲಾಗುತ್ತಿದೆ. 40 ರಿಂದ 45 ಡಿಗ್ರಿ ಸೆಲ್ಸಿಯಸ್ ವರಗೆ ಉಷ್ಣಾಂಶ ದಾಖಲಾಗಿದೆ. ಬಿಸಿಲಿನ ತಾಪಕ್ಕೆ ಕಲ್ಯಾಣ ಕರ್ನಾಟಕ ಭಾಗ ಕುದಿಯುತ್ತಿದೆ. ಈಗಾಗಲೇ ಮಕ್ಕಳ ತಜ್ಞ ವೈದ್ಯರು ನವಜಾತ ಶಿಶುಗಳಿಗೆ ಹಾಗೂ ಮಕ್ಕಳಿಗೆ ಬಿಸಿಲಿನಿಂದ ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂದು ಪೋಷಕರಿಗೆ ಸಲಹೆ ನೀಡಿದ್ದಾರೆ. ಅದರಂತೆ ಮಕ್ಕಳನ್ನು ಬಿಸಿಲಿನಲ್ಲಿ ಮನೆಯಿಂದ ಹೊರಗಡೆ ಬಿಡಬಾರದು ಎಂದು ಸಲಹೆ ನೀಡಿದ್ದಾರೆ.

ಸೂರ್ಯನ ತಾಪದ ಜೊತೆ ಯಾದಗಿರಿಯಲ್ಲಿ ಬಿಸಿ ಗಾಳಿ ಹೆಚ್ಚಾಗಿದೆ‌. ಒಂದು ವಾರದಿಂದ ಬಿಸಿಲು ಹೆಚ್ಚಾದ ಹಿನ್ನೆಲೆ ಜನ-ಜೀವನದ ಮೇಲೆ ಪರಿಣಾಮ ಬಿರುತ್ತಿದೆ. ಮಧ್ಯಾಹ್ನ 12 ಗಂಟೆಯಿಂದ ಸಂಜೆ 5 ಗಂಟೆ ವರಗೆ ಜನರು ಹೆಚ್ಚಿನ ಪ್ರಮಾಣದಲ್ಲಿ ಮನೆಯಿಂದ ಹೊರ ಬರುತ್ತಿಲ್ಲ. ತಲೆ ಮೇಲೆ ಟವೆಲ್ ಹಾಕಿಕೊಂಡು ಓಡಾಡುತ್ತಿದ್ದಾರೆ.

ಇಡೀ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದ ಬಿಸಿಲು ಯಾದಗಿರಿ ಜಿಲ್ಲೆಯಲ್ಲೇ ದಾಖಲಾಗಿದ್ದು, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ದಾಖಲೆಯ ಪ್ರಮಾಣದಲ್ಲಿ ಬಿಸಿಲಿದೆ. ಕಳೆದ ವರ್ಷ 42 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಈ ಬಾರಿ 45.6 ಡಿಗ್ರಿ ಸೆಲ್ಸಿಯಸ್ ಉಷ್ಟಾಂಶ ದಾಖಲಾಗಿದೆ. ವಿಪರೀತ ಪ್ರಮಾಣದ ಬಿಸಿಲು, ಬಿಸಿಗಾಳಿನ ಝಳಕ್ಕೆ ಜನರು ಹೆದರಿ ಮನೆಯಿಂದ ಹೊರ ಬರಲು ಹಿಂಜರಿಯುತ್ತಿದ್ದಾರೆ. ವಾತಾವರಣವನ್ನು ಸಹಜ ಸ್ಥಿತಿಗೆ ತರಲು, ಬಿಸಿಲು ಹೆಚ್ಚಿ ರುವ ಮತ್ತು ಬಿಸಿಹವೆ ಬೀಸುತ್ತಿರುವ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ರಸ್ತೆಗಳ ಮೇಲೆ, ಪ್ರಮುಖ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರುಸಿಂಪಡಿಸಲಾಗುತ್ತಿದೆ.

ಇದೆ ವೇಳೆ, ಕಲ್ಯಾಣ ಕರ್ನಾಟಕದ ಕಲಬುರಗಿಯಲ್ಲಿ 41.8, ಕೊಪ್ಪಳದಲ್ಲಿ 41.4, ವಿಜಯಪುರದಲ್ಲಿ 41.1, ರಾಯಚೂರಿನಲ್ಲಿ 41.0 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಕಲ್ಯಾಣ ಕರ್ನಾಟಕದ ನಗರಗಳು ಧಗಧಗಿಸುತ್ತಿವೆ. ಈ ಭಾಗದಲ್ಲಿ ಬಿಸಿಲಿನಿಂದಾಗಿ ಮಧ್ಯಾಹ್ನದ ವೇಳೆ ಮನೆಯಿಂದ ಆಚೆ ಯಾರೂ ಬರುತ್ತಿಲ್ಲ. ರಸ್ತೆಗಳು ಬಿಕೋ ಎನ್ನುತ್ತಿವೆ. ಮಾರುಕಟ್ಟೆ ಸ್ತಬ್ಧವಾಗುತ್ತಿದೆ. ಕುಡಿಯುವ ನೀರು ಇಟ್ಟಲ್ಲಿಯೇ ಬಿಸಿಯಾಗುತ್ತಿದೆ.

ಅಮೀನ್ ಹೊಸುರ್ ಟಿವಿ9 ಯಾದಗಿರಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ