AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿರುಗಾಳಿ ಮಳೆಗೆ ಧರೆಗುರುಳಿದ ಕರೆಂಟ್​ ಕಂಬಗಳು: ತಿಂಗಳಾದರೂ ವಿದ್ಯುತ್ ಸಂಪರ್ಕವಿಲ್ಲದೆ ರೈತರು ಕಂಗಾಲು

ಅವಧಿಗೂ ಮುನ್ನ ಯಾದಗಿರಿ ಜಿಲ್ಲೆಯಲ್ಲಿ ಮುಂಗಾರು ಅಬ್ಬರಿಸಿ ಬೊಬ್ಬಿರಿದಿತ್ತು. ಬರಿ ಮಳೆ ಅಲ್ಲದೆ ಬಿರುಗಾಳಿ ಸಹ ಅಬ್ಬರಿಸಿತ್ತು. ಇದರಿಂದ ನೂರಾರು ವಿದ್ಯುತ್ ಕಂಬಗಳು ಧರಾಶಾಯಿಯಾಗಿದ್ದವು. ನೆಲಕ್ಕೆ ಬಿದ್ದ ಕಂಬಗಳನ್ನ ಅಧಿಕಾರಿಗಳು ಮೇಲೆತ್ತಿ ದುರಸ್ತಿ ಮಾಡುವ ಕೆಲಸ ಮಾಡಿದ್ದಾರೆ. ಆದ್ರೆ, ಕಡಿತವಾಗಿರುವ ವಿದ್ಯುತ್ ಪೂರೈಕೆ ಮಾಡುವ ಕೆಲಸ ಮಾಡಿಲ್ಲ. ಇದೆ ಕಾರಣಕ್ಕೆ ಕಂಗಲಾಗಿರುವ ರೈತರು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬಿರುಗಾಳಿ ಮಳೆಗೆ ಧರೆಗುರುಳಿದ ಕರೆಂಟ್​ ಕಂಬಗಳು: ತಿಂಗಳಾದರೂ ವಿದ್ಯುತ್ ಸಂಪರ್ಕವಿಲ್ಲದೆ ರೈತರು ಕಂಗಾಲು
ವಿದ್ಯುತ್​ ಇಲ್ಲದೆ ರೈತರು ಕಂಗಾಲು
ಅಮೀನ್​ ಸಾಬ್​
| Edited By: |

Updated on: Jul 12, 2024 | 10:37 PM

Share

ಯಾದಗಿರಿ, ಜು.12: ಯಾದಗಿರಿ(Yadgiri) ಜಿಲ್ಲೆಯಾದ್ಯಂತ ಅವಧಿ ಮುನ್ನವೇ ಮುಂಗಾರು ಮಳೆ ಅಬ್ಬರಿಸಿದೆ. ನಿರಂತವಾಗಿ ಒಂದೆ ವಾರದಲ್ಲಿ ಮೂರು ಬಾರಿ ಬಿರುಗಾಳಿ ಸಹಿತ ಮಳೆ(Rain) ಅಬ್ಬರಿಸಿದೆ. ಇದೆ ಬಿರುಗಾಳಿಗೆ ಜಿಲ್ಲೆಯಾದ್ಯಂತ ಸುಮಾರು ಸಾವಿರಕ್ಕೂ ಅಧಿಕ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದವು. ಹೀಗಾಗಿ ಸಾಕಷ್ಟು ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಆದ್ರೆ, ನಿರಂತರವಾಗಿ ಕೆಲಸ ಮಾಡಿರುವ ಜೆಸ್ಕಾಂ ಅಧಿಕಾರಿಗಳು, ವಿದ್ಯುತ್ ಕಂಬಗಳನ್ನ ದುರಸ್ತಿ ಮಾಡಿ ವಿದ್ಯುತ್ ಪೂರೈಕೆ ಮಾಡುವ ಕೆಲಸ ಮಾಡಿದ್ದಾರೆ. ಆದ್ರೆ, ಮುದ್ನಾಳ್ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಮೂರು ಗ್ರಾಮಗಳಿಗೆ ವಿದ್ಯುತ್ ಪೂರೈಕೆ ಅಧಿಕಾರಿಗಳು ಮಾಡಿಲ್ಲ.

ಮುರಿದು ಬಿದ್ದ ಕಂಬಗಳನ್ನ ಅಳವಡಿಸಿದ್ದಾರೆ. ಆದ್ರೆ, ವಿದ್ಯುತ್ ಸಂಪರ್ಕ ಮಾತ್ರ ಕೊಟ್ಟಿಲ್ಲ. ಹೀಗಾಗಿ ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಯಾಕೆಂದ್ರೆ ಬೋರವೆಲ್ ನೀರು ಬಳಕೆ ಮಾಡಿಕೊಂಡು ಭತ್ತವನ್ನ ನಾಟಿ ಮಾಡಬೇಕಿತ್ತು. ಆದ್ರೆ, ಒಂದುವರೆ ತಿಂಗಳಿನಿಂದ ವಿದ್ಯುತ್ ಇಲ್ಲದ ಕಾರಣಕ್ಕೆ ಭತ್ತ ನಾಟಿ ಮಾಡಿಲ್ಲ. ಗದ್ದೆಗಳು ಹುಲ್ಲು ಬೆಳೆದು ಪಾಳು ಬಿದ್ದಂತಾಗಿವೆ. ಒಂದು ವೇಳೆ ವಿದ್ಯುತ್ ಪೂರೈಕೆ ಆಗಿದ್ರೆ, ರೈತರು ಬೋರವೆಲ್ ನೀರು ಬಳಕೆ ಮಾಡಿಕೊಂಡು ಭತ್ತ ಮಾಡ್ತಾಯಿದ್ರು. ಆದ್ರೆ, ಅಧಿಕಾರಿಗಳು ಇನ್ನುವರೆಗೆ ವಿದ್ಯುತ್ ಪೂರೈಕೆ ಮಾಡದ್ದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ:ಮಂಡ್ಯ ಮೈ ಶುಗರ್ ಕಾರ್ಖಾನೆಯ 25 ವರ್ಷದ ವಿದ್ಯುತ್ ಬಿಲ್ ಮನ್ನಾ: ಎಷ್ಟು ಕೋಟಿ ರೂ ಬಾಕಿ ಇತ್ತು ಗೊತ್ತಾ?

ಇನ್ನು ವಿದ್ಯುತ್ ಸಮಸ್ಯೆ ಒಂದು ಕಡೆಯಾದರೆ, ಇನ್ನೊಂದು ಕಡೆ ರೈತರ ಜೊತೆ ಮಳೆರಾಯ ಕೂಡ ಕಣ್ಣಾಮುಚ್ಚಾಲೇ ಆಟವಾಡುತ್ತಿದ್ದಾನೆ. ಅವಧಿಗೂ ಮುನ್ನ ಮಳೆರಾಯ ಅಬ್ಬರಿಸಿದ್ದರಿಂದ ರೈತರು ಮೊಗದಲ್ಲಿ ಮಂದಹಾಸ ಮೂಡಿ, ಮುಂಗಾರು ಬಿತ್ತನೆ ಚುರುಕುಗೊಳಿಸಿದ್ದರು. ಮಳೆ ಬಂದಿದ್ದಕ್ಕೆ ರೈತರು ಹೆಸರು, ಮತ್ತೆ ತೊಗರಿ ಬಿತ್ತನೆ ಮಾಡಿದ್ದಾರೆ. ಸದ್ಯ ಒಂದು ತಿಂಗಳ ಬೆಳೆಯಾಗಿವೆ. ಆದ್ರೆ, ಈ 20 ದಿನಗಳಿಂದ ಮೇಘರಾಜ ಮುನಿಸಿಕೊಂಡಿದ್ದಾನೆ. ಮಳೆ ಬಾರದ್ದಕ್ಕೆ ರೈತರ ಬೆಳೆಗಳು ಒಣಗುವ ಆತಂಕ ಎದುರಾಗಿದೆ.

ಕಳೆದ ವರ್ಷ ಬರಗಾಲ ಆವರಿಸಿಕೊಂಡಿದ್ದರಿಂದ ರೈತರಿಗೆ ಆಘಾತ ಉಂಟಾಗಿತ್ತು. ಬರಗಾಲದಿಂದ ಹೊರ ಬಂದ ರೈತರಿಗೆ ಮತ್ತೆ ಮುಂಗಾರು ಮಳೆ ಏಟು ಕೊಡುತ್ತಿದೆ. ಮಳೆ ಹೋದರೆ ಹೋಗಲಿ, ಒಣಗುವ ಹಂತಕ್ಕೆ ಬಂದಿರುವ ಬೆಳೆಯನ್ನ ಬೋರ್​ ವೆಲ್ ನೀರು ಬಳಸಿಕೊಂಡು ಬೆಳೆ ಉಳಿಸಿಕೊಳ್ಳೋಣಾ ಎಂದರೆ ಜೆಸ್ಕಾಂ ಅಧಿಕಾರಿಗಳು ವಿದ್ಯುತ್ ಪೂರೈಕೆ ಮಾಡುವ ಕೆಲಸ ಮಾಡುತ್ತಿಲ್ಲ. ಸಾಕಷ್ಟು ಬಾರಿ ನೂರಾರು ರೈತರು ಜೆಸ್ಕಾಂ ಕಚೇರಿಗೆ ಹೋಗಿ ಮನವಿ ಮಾಡಿಕೊಂಡ್ರು ಅಧಿಕಾರಿಗಳು ಸ್ಪಂಧಿಸಿಲ್ಲವಂತೆ. ಒಟ್ಟಿನಲ್ಲಿ ಮುಂಗಾರು ಮಳೆ ಕಣ್ಣಾಮುಚ್ಚಾಲೇ ಆಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲ ಶೂಲ ಮಾಡಿ ಬೆಳೆದ ಬೆಳೆ ಹಾಳಾಗುವ ಆತಂಕ ಅನ್ನದಾತರಿಗೆ ಕಾಡುತ್ತಿದೆ. ಹೀಗಾಗಿ ಕೂಡಲೇ ಜೆಸ್ಕಾಂ ಅಧಿಕಾರಿಗಳ ವಿದ್ಯುತ್ ಪೂರೈಕೆ ಮಾಡುವ ಕೆಲಸ ಮಾಡಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ