ಯಾದಗಿರಿ, ನ.18: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದ ಎಫ್ಡಿಎ ಪರೀಕ್ಷೆಯಲ್ಲಿನ ಅಕ್ರಮ ಪ್ರಕರಣ ಸಂಬಂಧ ಪೊಲೀಸ್ ತನಿಖೆಯಲ್ಲಿ ಮತ್ತೊಂದು ವಾಟ್ಸಪ್ ಚಾಟ್ ಬಯಲಾಗಿದೆ. ವಾಟ್ಸ್ಆ್ಯಪ್ನಲ್ಲಿ ಕೋಡ್ವರ್ಡ್ ಮೂಲಕ ಪ್ರಶ್ನೆಗಳಿಗೆ ಉತ್ತರಗಳನ್ನು ಕಳುಹಿಸಿದ ಚಾಟ್ ಪ್ರತಿ ಟಿವಿ9ಗೆ ಲಭ್ಯವಾಗಿದೆ.
ಅಕ್ರಮದ ಪ್ರಮುಖ ಆರೋಪಿ ಸಿದ್ದರಾಮ ಅಲಿಯಸ್ ಪುಟ್ಟು ಮೊಬೈಲ್ನಿಂದ ಬಂದಿದ್ದ ಉತ್ತರಗಳ ಪ್ರತಿ ಇದಾಗಿದೆ. ಪರೀಕ್ಷೆ ನಡೆಯುತ್ತಿದ್ದ ಸಮಯದಲ್ಲೇ ಅಭ್ಯರ್ಥಿಗೆ ಪ್ರಶ್ನೆ ಪತ್ರಿಕೆಯಲ್ಲಿದ್ದ ಅಕ್ಷರಗಳ ಆಧಾರದಲ್ಲಿ ಉತ್ತರಗಳು ಬಂದಿವೆ.
ಇದನ್ನೂ ಓದಿ: ಬಗೆದಷ್ಟು ಬಯಲಾಗುತ್ತಿದೆ ಆರ್ಡಿ ಪಾಟೀಲ್ ಅಕ್ರಮ; ಕೆಇಎ ಪರೀಕ್ಷೆಯ ಮಾಸ್ಟರ್ ಪ್ಲಾನ್ ಹೇಗಿತ್ತು ಗೊತ್ತಾ?
ಏಳು ಅಕ್ಷರದ ಉತ್ತರವಿದ್ದರೆ ಏಳು ಅಂತ ಬರೆದು ವಾಟ್ಸ್ಆ್ಯಪ್ ಮೂಲಕ ಕಳುಹಿಸಲಾಗಿದೆ. ಸಾಮಾನ್ಯ ಜ್ಞಾನ, ಕನ್ನಡ ಹಾಗೂ ಕಂಪ್ಯೂಟರ್ ಮೂರು ವಿಷಯಗಳ ಉತ್ತರಗಳನ್ನು ಈ ಕೋಡ್ವರ್ಡ್ ಮೂಲಕ ರವಾನೆ ಮಾಡಿದ್ದಾರೆ. ಈ ಆರೋಪಿ ಪ್ರಕರಣದ ಕಿಂಗ್ಪಿನ್ ಆರ್ಡಿ ಪಾಟೀಲ್ ಗ್ಯಾಂಗ್ಗೆ ಸೇರಿದವ ಎನ್ನಲಾಗುತ್ತಿದೆ.
ಕೆಇಎ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದ ಕಿಂಗ್ಪಿನ್ ಆರ್ಡಿ ಪಾಟೀಲ್ಗೆ ಆನ್‌ಲೈನ್ ಗೇಮ್ಗಳಲ್ಲಿ ಹಣ ಹೂಡಿಕೆ ಮಾಡಿ ಆಟ ಆಡುವ ಚಾಳಿ ಹೊಂದಿದ್ದನು ಎಂದು ತಿಳಿದುಬಂದಿದೆ. ಆನ್ ಲೈನ್ನಲ್ಲಿ ಕ್ಯಾಸಿನೊದಲ್ಲಿ ಆರ್ ಡಿ ಪಾಟೀಲ್ ಗೇಮ್ ಆಡುತ್ತಿದ್ದನು. MPC 91 ನಲ್ಲಿ ನಿತ್ಯವು ಆಟವಾಡುತ್ತಿದ್ದ.
ಆನ್‌ಲೈನ್ ಗೇಮ್‌ಗಾಗಿ ಮೂರು ಮೊಬೈಲ್ ನಂಬರ್ ಅನ್ನು ಬಳಕೆ ಮಾಡಿಕೊಳ್ಳುತ್ತಿದ್ದನು. ಕೆಲವೇ ತಿಂಗಳಲ್ಲಿ 30 ಲಕ್ಷಕ್ಕೂ ಅಧಿಕ ಹಣವನ್ನು ಹೂಡಿಕೆ ಮಾಡಿದ್ದನು. ಆ ಮೂಲಕ ಮೂರು ಅಕೌಂಟ್ಗಳಲ್ಲಿನ ಅಕ್ರಮವಾಗಿ ಬಂದ ಹಣವನ್ನು ಬೇಕಾಬಿಟ್ಟಿಯಾಗಿ ಖರ್ಚು ಮಾಡುತ್ತಿದ್ದನು. ಈ ಎಲ್ಲಾ ವಿಚಾರಗಳು ಅಪಾರ್ಟ್ಮೆಂಟ್‌ನಲ್ಲಿ ಸಿಕ್ಕ ಮೊಬೈಲ್ ಪರಿಶೀಲನೆ ವೇಳೆ ಬಯಲಿಗೆ ಬಂದಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ