ಯಾದಗಿರಿ, ಜು.21: ನಗರದಲ್ಲಿ ಪೊಲೀಸ್ ಇಲಾಖೆಯಿಂದ ವಜಾಗೊಂಡ ಎಎಸ್ಐ(ASI)ವೊಬ್ಬ ಲೋಕಾಯುಕ್ತ(Lokayukta) ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳ ಬಳಿ ಹಣಕ್ಕೆ ಬೇಡಿಕೆಯಿಟ್ಟ ಆರೋಪ ಕೇಳಿಬಂದಿದೆ. ಲೋಕಾ ಅಧಿಕಾರಿಗಳ ಹೆಸರು ಹೇಳಿ ಬ್ಲ್ಯಾಕ್ ಮೇಲ್ ಮಾಡಿ ಹಣಕ್ಕೆ ಬೇಡಿಕೆಯಿಟ್ಟ ಆಡಿಯೋ ಸಂಭಾಷಣೆ ಲಭ್ಯವಾಗಿದೆ. ಮುರುಗಪ್ಪ ಎಂಬುವವನೇ ಲೋಕಾ ಹೆಸರಲ್ಲಿ ಹಣಕ್ಕೆ ಬೇಡಿಕೆ ಇಡುತ್ತಿರುವ ವಜಾಗೊಂಡ ಪೊಲೀಸ್ ಅಧಿಕಾರಿ. ಇನ್ನು ಇದೀಗ ಇತನ ವಿರುದ್ದ ಯಾದಗಿರಿ ಜೆಸ್ಕಾಂ ಇಇ ರಾಘವೇಂದ್ರ ಎಂಬುವವರು ಯಾದಗಿರಿ ನಗರ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.
ಹೌದು ಆರೋಪಿ ಮುರುಗಪ್ಪ, ಜೆಸ್ಕಾಂ ಇಇ ರಾಘವೇಂದ್ರ ಅವರಿಗೆ ಕರೆ ಮಾಡಿ, ನಾನು ಯಾದಗಿರಿ ಲೋಕಾಯುಕ್ತ ಡಿವೈಎಸ್ಪಿ ಅರುಣ ಕುಮಾರ್ ಎಂದು ಹೇಳಿ, ನಿಮ್ಮ ಮೇಲೆ ಲೋಕಾಯುಕ್ತ ಕಚೇರಿಯಲ್ಲಿ ಕೇಸ್ ದಾಖಲಾಗಿದ್ದು, ದಾಳಿ ನಡೆಸಲಾಗುವುದು. ಬೇಗ ತಲೆಮರೆಸಿಕೊಳ್ಳಿ ಎಂದು ಸಲಹೆ ನೀಡಿದ ಬಳಿಕ ಹಣ ಕೊಡಿಯೆಂದು ಬೇಡಿಕೆಯಿಡುತ್ತಿದ್ದನಂತೆ. ಅಷ್ಟೇ ಅಲ್ಲದೇ ಕಳೆದ ಐದು ತಿಂಗಳ ಹಿಂದೆ ಹಿರಿಯ ಜೆಸ್ಕಾಂ ಅಧಿಕಾರಿಯೋರ್ವರ ಬಳಿ 5 ಲಕ್ಷ ಹಣವನ್ನ ಕೂಡ ವಸೂಲಿ ಮಾಡಿರುವುದಾಗಿ ಯಾದಗಿರಿ ಜೆಸ್ಕಾಂ ಇಇ ರಾಘವೇಂದ್ರ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನ ಪ್ರತಿಷ್ಠಿತ ಮಠದ ಅರ್ಚಕನ ಜತೆ ಪರಿಚಯ; 1 ಕೋಟಿ ರೂ. ಅಧಿಕ ಹಣ ಪಡೆದು ವಂಚನೆ, ಆರೋಪಿ ಅರೆಸ್ಟ್
ಇನ್ನು ಆರೋಪಿ ಮುರುಗಪ್ಪ ಇದೇ ರೀತಿ ಲೋಕಾಯುಕ್ತ ಹೆಸರು ಹೇಳಿ ಗದಗ ಹಾಗೂ ರಾಯಚೂರಿನಲ್ಲಿ ವಂಚಿಸಿ ಜೈಲು ಸೇರಿದ್ದನಂತೆ. ಗದಗ ಜೈಲಿನಲ್ಲಿ ಸೆರೆವಾಸ ಅನುಭವಿಸಿ ಬಳಿಕ 6 ತಿಂಗಳ ಹಿಂದೆ ಬಿಡುಗಡೆಯಾಗಿದ್ದ. ಇದೀಗ ಮತ್ತೇ ತನ್ನ ಹಳೇ ಚಾಳಿ ಮುಂದುವರೆಸಿರುವ ಮುರುಗಪ್ಪ. ಬೇರೆಯವರ ಹೆಸರಿನಲ್ಲಿ ಖರೀದಿಸಿದ ಸಿಮ್ ಕಾರ್ಡ್ನಿಂದ ಕಾಲ್ ಮಾಡಿ ರಾಯಚೂರು, ಕಲ್ಬುರ್ಗಿ, ಯಾದಗಿರಿ ಜಿಲ್ಲೆಯ ವಿವಿಧ ಅಧಿಕಾರಿಗಳ ಬಳಿ ಹಣಕ್ಕೆ ಬೇಡಿಕೆಯಿಟ್ಟು, ಸದ್ಯ ತಲೆ ಮರೆಸಿಕೊಂಡಿದ್ದಾನೆ. ಇದೀಗ ಮುರುಗಪ್ಪನಿಗಾಗಿ ಯಾದಗಿರಿ ಪೋಲಿಸರು ಹುಡುಕಾಟ ನಡೆಸುತ್ತಿದ್ದಾರೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:07 pm, Fri, 21 July 23