Yadagiri News: ಯಾದಗಿರಿ ದೊಡ್ಡ ತಾಂಡದ ಸರ್ಕಾರಿ ಶಾಲೆಯಲ್ಲಿ ರಾತ್ರಿ ವೇಳೆ ಶಿಕ್ಷಕರೇ ಮಕ್ಕಳ ಜೊತೆ ವಾಸ್ತವ್ಯ ಹೂಡುತ್ತಾರೆ! ಯಾಕೆ ಗೊತ್ತಾ?

Big Tanda government school: ಪ್ರತಿ ವರ್ಷ ಪೋಷಕರು ಕೂಲಿ ಕೆಲಸಕ್ಕೆ ದೂರದ ಊರಿಗೆ ಮಕ್ಕಳಿಗೆ ಇಲ್ಲಿಯೇ ಬಿಟ್ಟು ಹೋಗುತ್ತಿದ್ದಾರೆ‌. ಬಿಟ್ಟು ಹೋದ ಮಕ್ಕಳ ಪಾಲಿಗೆ ನಾಲ್ಕು ತಿಂಗಳ ಕಾಲ ಶಿಕ್ಷಕರೇ ಪೋಷಕರಾಗುತ್ತಿದ್ದಾರೆ. ಪ್ರತಿ ರಾತ್ರಿಯೂ ಒಬ್ಬ ಶಿಕ್ಷಕರು ಇಲ್ಲಿಯೇ ಮಕ್ಕಳ ಜೊತೆ ವಾಸ್ತವ್ಯ ಹೂಡಿ ಮಕ್ಕಳ ದೇಖರೇಖಿ ನೋಡಿಕೊಳ್ಳುತ್ತಾರೆ.

Yadagiri News: ಯಾದಗಿರಿ ದೊಡ್ಡ ತಾಂಡದ ಸರ್ಕಾರಿ ಶಾಲೆಯಲ್ಲಿ ರಾತ್ರಿ ವೇಳೆ ಶಿಕ್ಷಕರೇ ಮಕ್ಕಳ ಜೊತೆ ವಾಸ್ತವ್ಯ ಹೂಡುತ್ತಾರೆ! ಯಾಕೆ ಗೊತ್ತಾ?
ಯಾದಗಿರಿ ದೊಡ್ಡ ತಾಂಡದ ಸರ್ಕಾರಿ ಶಾಲೆ
Follow us
ಅಮೀನ್​ ಸಾಬ್​
| Updated By: ಸಾಧು ಶ್ರೀನಾಥ್​

Updated on: Jul 22, 2023 | 3:04 PM

ಸರ್ಕಾರಿ ಶಾಲೆ ಅಂದ್ರೆ ಸಾಕು ಮೂಗು ಮುರಿಯುವವರ ಸಂಖ್ಯೆಯೇ ಜಾಸ್ತಿಯಿದೆ. ತಮ್ಮ ಮಕ್ಕಳನ್ನು ದೊಡ್ಡ ದೊಡ್ಡ ಖಾಸಗಿ ಶಾಲೆಗಳಲ್ಲಿ ಓದಿಸಬೇಕೆನ್ನೋದು ಪೋಷಕರ ಆಸೆಯಾಗಿರುತ್ತೆ. ಆದ್ರೆ ಆ ಕುಗ್ರಾಮದಲ್ಲಿರುವ ಶಾಲೆ ನೋಡಿದ್ರೆ ಸಾಕು ಎಂತಹವರಿಗೂ ಸಹ ಬಿಟ್ಟು ಬರೋಕೆ ಮನಸ್ಸೇ ಆಗಲ್ಲ. ಮಕ್ಕಳಿಗೆ ವಿದ್ಯೆ ನೀಡುವುದರ ಜೊತೆಗೆ ಪರಿಸರದ ಬಗ್ಗೆಯೂ ತಿಳಿವಳಿಕೆ ಮೂಡಿಸಲು ಅಲ್ಲಿನ ಶಿಕ್ಷಕರು ಕಾಳಜಿ ವಹಿಸಿದ್ದಾರೆ. ದುಡಿಯಲು ದೂರದ ಊರುಗಳಿಗೆ ಪೋಷಕರು ಹೋಗುತ್ತಿದ್ದು ಮಕ್ಕಳಿಗೆ ಶಿಕ್ಷಕರೇ ಪೋಷಕರಾಗುತ್ತಿದ್ದಾರೆ. ಅಷ್ಟಕ್ಕೂ ಆ ಶಾಲೆಯಾದ್ರು ಯಾವುದು ಅಂತೀರಾ ಈ ಸ್ಟೋರಿ ನೋಡಿ.. ತಾಂಡದಲ್ಲಿದೆ ಆ ಅದ್ಬುತ ಶಾಲೆ, ಶಾಲೆ ತುಂಬಾ ಮಕ್ಕಳೇ ಮಕ್ಕಳು.. ಮಕ್ಕಳಿಗೆ ವಿದ್ಯೆ ನೀಡುವ ಜೊತೆಗೆ ಪರಿಸರದ ಬಗ್ಗೆಯೂ ಕಾಳಜಿ ವಹಿಸುತ್ತಿರುವ ಶಿಕ್ಷಕರು (teachers). ಶಾಲೆಯ ಆವರಣದಲ್ಲಿ ಕಾಲಿಟ್ಟರೆ ಸಾಕು ವಾಪಸ್ ಬರೋಕೆ ಮನಸ್ಸೆ ಆಗಲ್ಲ. ಯಸ್! ಈ ದೃಶ್ಯಗಳು ಕಂಡು ಬಂದಿದ್ದು ಯಾದಗಿರಿ (Yadagiri) ಜಿಲ್ಲೆಯ ಹುಣಸಗಿ ತಾಲೂಕಿನ ಜುಮಾಲಪುರ ದೊಡ್ಡ ತಾಂಡದಲ್ಲಿ (Dodda Tanda government school).

ಹೌದು ತಾಂಡಗಳು ಅಂದ್ರೆ ಸಾಕು ಪ್ರತಿಯೊಂದರಲ್ಲಿ ಹಿಂದುಳಿದಿರುತ್ತವೆ.. ಮಕ್ಕಳಿಗೆ ಶಿಕ್ಷಣ ಪಡೆಯೋಕೆ ಸರಿಯಾಗಿ ಶಾಲೆಗಳು ಇರೋದಿಲ್ಲ. ಆದ್ರೆ ಈ ತಾಂಡ ಮಾತ್ರ ತದ್ವಿರುದ್ಧವಾಗಿದೆ. ಯಾಕೆಂದ್ರೆ ಈ ತಾಂಡದ ಶಾಲೆಗೆ ಒಮ್ಮೆ ಭೇಟಿ ಕೊಟ್ಟರೆ ಸಾಕು ವಾಪಸ್ ಹೋಗುವುದ್ದಕ್ಕೆ ಮನಸ್ಸೆ ಆಗೋದಿಲ್ಲ. ಅಷ್ಟಕ್ಕೂ 1 ರಿಂದ 7 ನೇ ತರಗತಿ ವರೆಗೆ ಇರುವ ಈ ಶಾಲೆಯಲ್ಲಿ ಸುಮಾರು‌ 560 ಮಕ್ಕಳು ದಾಖಲಾತಿಯನ್ನ ಪಡೆದಿದ್ದಾರೆ.

ಪಕ್ಕದ ಜುಮಾಲಪುರ ಸಣ್ಣ ತಾಂಡ ಹಾಗೂ ಜುಮಾಲಪುರ ಗ್ರಾಮದಲ್ಲಿ ಕೇವಲ ಐದನೇ ತರಗತಿ ವರೆಗೆ ಮಾತ್ರ ಶಾಲೆ ಇರೋದರಿಂದ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮಕ್ಕಳು ಈ ದೊಡ್ಡ ತಾಂಡದ ಶಾಲೆಗೆ ಬರ್ತಾರೆ. ಎಂಟು ಜನ ಖಾಯಂ ಶಿಕ್ಷಕರಿದ್ದು ಉಳಿದವರು ಅಥಿತಿ ಶಿಕ್ಷಕರಿದ್ದಾರೆ. ಮಕ್ಕಳಿಗೆ ಕುಳಿತುಕೊಳ್ಳುವುದಕ್ಕೆ ಸಾಕಾಗುವಷ್ಟು ಕೋಣೆಗಳಿದ್ದು, ಯಾವುದೇ ಸಮಸ್ಯೆ ಇಲ್ಲ. ಅದರಲ್ಲೂ ಇದು ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕೂಡ ಹೌದು.

ಈ ಶಾಲೆಯ ವಿಶೇಷತೆಯೆಂದರೆ ಶಾಲೆಯ ಆವರಣದಲ್ಲಿ ಸೃಷ್ಟಿಸಿರುವ ಹಚ್ಚ ಹಸಿರಿನ ವಾತಾವರಣ. ಶಾಲಾ ಶಿಕ್ಷಕರು ಹಾಗೂ ತಾಂಡದ ನಿವಾಸಿಗಳ ಕಾಳಜಿಯಿಂದ ಮಕ್ಕಳೊಂದಿಗೆ ಸೇರಿ ಶಾಲೆಯ ಆವರಣದಲ್ಲಿ ನೂರಾರು ಗಿಡಿಗಳನ್ನ ಬೆಳೆಸಿದ್ದಾರೆ. ಶಾಲಾ ಆವರಣದಲ್ಲಿ ಕಾಲಿಟ್ಟರೆ ಸಾಕು ಯಾವುದೋ ಉದ್ಯಾನವನಕ್ಕೆ ಬಂದ ರೀತಿಯಲ್ಲಿ ಭಾಸವಾಗುತ್ತೆ. ಅಷ್ಟರ ಮಟ್ಟಿಗೆ ಪರಿಸರವನ್ನ ಬೆಳೆಸಿದ್ದಾರೆ. ಮಕ್ಕಳು ಬೆಳಗ್ಗೆ ಶಾಲೆಗೆ ಬಂದ ಕೂಡಲೇ ಗಿಡಗಳಿಗೆ ಪಾಳಿಯ ಪ್ರಕಾರ ನೀರು ಹಾಕುತ್ತಾರೆ. ಇದರ‌ ಜೊತೆಗೆ ಶಾಲೆಯ ಕೋಣೆಯಲ್ಲಿ ಚಿಕ್ಕ ಜಾಗ ಕೂಡ ಬಿಡದಂತೆ ನಾನಾ ರೀತಿಯ ಚಿತ್ರಗಳನ್ನ ಬಿಡಿಸಲಾಗಿದೆ. ಸಾಧಕರು, ಸಾಹಿತಿಗಳು ಹಾಗೂ ಪ್ರಾಣಿಗಳ ಜೊತೆಗೆ ಪರಿಸರದ ಕಾಳಜಿ ಬಗ್ಗೆ ಚಿತ್ರಗಳನ್ನ ಬಿಡಿಸಲಾಗಿದ್ದು ಮಕ್ಕಳ ಜ್ಞಾನ ವೃದ್ದಿಗೆ ಸಹಕಾರವಾಗಿದೆ.

ಶಾಲೆಯಲ್ಲಿ ಮಕ್ಕಳು ಬಿಸಿಯೂಟವನ್ನ ನೆಲದ ಮೇಲೆ ಅಥವಾ ಶಾಲೆಯ ಆವರಣದಲ್ಲಿ ಕುಳಿತುಕೊಂಡು ಮಾಡುತ್ತಾರೆ. ಆದ್ರೆ ಈ ಶಾಲೆಯಲ್ಲಿ ಮಾತ್ರ ಮಕ್ಕಳು ಮಧ್ಯಾಹ್ನ ಬಿಸಿಯೂಟ ಸೇವಿಸೋದ್ದಕ್ಕೆ ಕಲ್ಲಿನಿಂದ ಬೆಂಚ್ ಗಳನ್ನ ಮಾಡಲಾಗಿದೆ. ಮಧ್ಯಾಹ್ನ ಶಾಲಾ ಗಂಟೆ ಹೊಡೆದ ಕೂಡ್ಲೆ ಮಕ್ಕಳು ಸಾಲಾಗಿ ಬಂದು ಪ್ಲೇಟ್ ತೆಗೆದುಕೊಂಡು ಊಟಕ್ಕೆ ಕುಳಿತುಕೊಳ್ಳುತ್ತಾರೆ.

ಶಾಲೆಯ ಶಿಕ್ಷಕರು ಹಾಗೂ ತಾಂಡದ ನಿವಾಸಿಗಳು ಹಣ ಸಂಗ್ರಯ ಮಾಡಿ ಶಾಲೆಯ ಮುಖ್ಯ ದ್ವಾರದ ಬಳಿಯೇ ತಾಯಿ ಶಾರದೆಯ ಮೂರ್ತಿಯನ್ನ ಸ್ಥಾಪಿಸಿದ್ದಾರೆ. ಮಕ್ಕಳು ಶಾಲೆಯೊಳಕ್ಕೆ ಎಂಟ್ರಿ ಕೊಡುವಾಗ ತಾಯಿ ಶಾರದೆಗೆ ನಮಿಸಿ, ವಿದ್ಯೆ ಬುದ್ಧಿ ಕೊಡುವಂತೆ ಬೇಡಿಕೊಂಡು ಒಳಗೆ ಬರುತ್ತಾರೆ. ಶಾಲೆಯಲ್ಲಿ ಮಕ್ಕಳಿಗೆ ಕಲಿಯೋಕೆ ಅನುಕೂಲ ಆಗಲಿ ಎನ್ನುವ ಉದ್ದೇಶದಿಂದ ಪ್ರೊಜೆಕ್ಟರ್ ಕೂಡ ಅಳವಡಿಸಿದ್ದು ತಂತ್ರಜ್ಞಾನ ಬಳಸಿ ಮಕ್ಕಳಿಗೆ ಶಿಕ್ಷಕರು ಪಾಠ ಮಾಡುತ್ತಾರೆ.

ಇನ್ನೊಂದು ವಿಶೇಷ ಅಂದ್ರೆ ಈ ತಾಂಡದ ಜನ ಪ್ರತಿ ವರ್ಷ ಅಕ್ಟೋಬರ್ ತಿಂಗಳಲ್ಲಿ ಮಹಾರಾಷ್ಟ್ರಕ್ಕೆ ಕಬ್ಬು ಕಟಾವ್ ಮಾಡಲು ಹೋಗುತ್ತಾರೆ. ಈ ಹಿಂದೆ ಮಕ್ಕಳಿಗೆ ಶಾಲೆಯನ್ನ ಬಿಡಿಸಿ ತಮ್ಮೊಂದಿಗೆ ಕರೆದುಕೊಂಡು ಹೋಗುತ್ತಿದ್ರು. ಮಕ್ಕಳನ್ನ ಜೊತೆಗೆ ಕರೆದುಕೊಂಡು ಹೋಗುವುದರಿಂದ ಶಾಲೆ ಖಾಲಿಯಾಗುತ್ತಿತ್ತು. ಇದೇ ಕಾರಣಕ್ಕೆ ಇಲ್ಲಿನ ಶಿಕ್ಷಕರು ಧೈರ್ಯ ಮಾಡಿ ಮಕ್ಕಳನ್ನ ಇಲ್ಲಿಯೇ ಬಿಟ್ಟು ಹೋಗಿ ಎಂದು ಮನವಿ ಮಾಡಕೊಂಡಿದ್ದಾರೆ.

ಪ್ರತಿ ವರ್ಷ ಪೋಷಕರು ಕೂಲಿ ಕೆಲಸಕ್ಕೆ ದೂರದ ಊರಿಗೆ ಮಕ್ಕಳಿಗೆ ಇಲ್ಲಿಯೇ ಬಿಟ್ಟು ಹೋಗುತ್ತಿದ್ದಾರೆ‌. ಬಿಟ್ಟು ಹೋದ ಮಕ್ಕಳ ಪಾಲಿಗೆ ನಾಲ್ಕು ತಿಂಗಳ ಕಾಲ ಶಿಕ್ಷಕರೇ ಪೋಷಕರಾಗುತ್ತಿದ್ದಾರೆ. ರಾತ್ರಿ ವೇಳೆ ಶಾಲೆಯಲ್ಲಿಯೇ ಮಕ್ಕಳಿಗೆ ಊಟ ಹಾಗೂ ವಸತಿ ವ್ಯವಸ್ಥೆಯನ್ನ ಮಾಡುತ್ತಾರೆ. ಪೋಷಕರು ಹೋಗುವಾಗ ರೊಟ್ಟಿಯನ್ನ ಕೊಟ್ಟು ಹೋದ್ರೆ ಶಿಕ್ಷಕರು ಕೈಯಿಂದ ದುಡ್ಡು ಹಾಕಿ ಮಕ್ಕಳಿಗೆ ನಾಲ್ಕು ತಿಂಗಳ ಕಾಲ ರಾತ್ರಿ ಹಾಗೂ ಬೆಳಗ್ಗೆ ಊಟವನ್ನ ಹಾಕುತ್ತಾರೆ‌. ಪ್ರತಿ ರಾತ್ರಿಯೂ ಒಬ್ಬ ಶಿಕ್ಷಕರು ಇಲ್ಲಿಯೇ ಮಕ್ಕಳ ಜೊತೆ ವಾಸ್ತವ್ಯ ಹೂಡಿ ಮಕ್ಕಳ ದೇಖರೇಖಿ ನೋಡಿಕೊಳ್ಳುತ್ತಾರೆ. ಇದೆ ಕಾರಣಕ್ಕೆ ಸುತ್ತಮುತ್ತಲಿನ ಗ್ರಾಮದ ಮಕ್ಕಳಿಗೆ ಖಾಸಗಿ ಶಾಲೆಗೆ ಕಳುಹಿಸುವ ಬದಲಿಗೆ ಇದೇ ಶಾಲೆಗೆ ಕಳುಹಿಸುತ್ತಿದ್ದಾರೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಸುಖದೇಪ್ ಪಾಟೀಲ್, ಶಾಲೆಯ ಮುಖ್ಯ ಶಿಕ್ಷಕ.

ಒಟ್ನಲ್ಲಿ ಶೈಕ್ಷಣಿಕವಾಗಿ ತೀರಾ ಹಿಂದುಳಿದ ಜಿಲ್ಲೆ ಎಂದು ಹಣೆಪಟ್ಟಿ ಕಟ್ಟಿಕೊಂಡ ಯಾದಗಿರಿ ಜಿಲ್ಲೆಗೆ ಈ ಶಾಲೆ ಮಾದರಿಯಾಗಿದೆ. ಈ ಶಾಲೆಯ ಶಿಕ್ಷಕರು ಮಕ್ಕಳ ಮೇಲೆ ತೋರುವ ಕಾಳಜಿ ನಿಜಕ್ಕೂ ಎಂದ್ರೆ ತಪ್ಪಾಗಲಾರದು.

ಯಾದಗಿರಿ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ