ಅಪಾಯದ ಮಟ್ಟ ಮೀರಿ ಹರಿಯುತ್ತಿರೋ ನೀರು; ಕೃಷ್ಣಾ, ಭೀಮಾ ನದಿ ತೀರದಲ್ಲಿ ಪ್ರವಾಹದ ಆತಂಕ
ಮಹಾರಾಷ್ಟ್ರ ಹಾಗೂ ಕೃಷ್ಣ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆರಾಯ ಆರ್ಭಟ ಮುಂದೆವರೆದಿದೆ. ಇದೆ ಕಾರಣಕ್ಕೆ ಕೃಷ್ಣ ನದಿ ತೀರದಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಇದರ ಜೊತೆಗೆ ಈಗ ಭೀಮಾ ನದಿ ತೀರದಲ್ಲೂ ಪ್ರವಾಹದ ಆತಂಕ ಸೃಷ್ಟಿಯಾಗಿದೆ. ನದಿಗೆ ಅಪಾರ ಪ್ರಮಾಣ ನೀರು ಹರಿದು ಬರ್ತಾಯಿದ್ದ ಹಿನ್ನಲೆ ನದಿ ದಡದ ದೇವಸ್ಥಾನಗಳಿಗೂ ಜಲದಿಗ್ಬಂಧನ ಉಂಟಾಗಿದೆ. ಖಾಲಿ ಖಾಲಿಯಾಗಿದ್ದ ನದಿ ಭರ್ತಿಯಾಗಿದ್ದು, ರೈತರ ಮೊಗದಲ್ಲೂ ಮಂದಹಾಸ ಮೂಡಿದೆ.
ಯಾದಗಿರಿ, ಜು.25: ಕಳೆದ ಕೆಲ ದಿನಗಳಿಂದ ಕೃಷ್ಣಾ ನದಿ(Krishna River) ತೀರದಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷ್ಣಾ ನದಿಯ ಭೋರ್ಗರೆತ ದಿಂದ ಸಾಕಷ್ಟು ಸೇತುವೆಗಳು ಮುಳುಗಡೆಯಾಗಿವೆ. ಯಾದಗಿರಿ ಜಿಲ್ಲೆಯಲ್ಲಿರುವ ನಾರಾಣಪುರದ ಬಸವಸಾಗರ ಜಲಾಶಯದಿಂದ 2.5 ಲಕ್ಷ ಕ್ಯೂಸೆಕ್ ನೀರು ರಿಲೀಸ್ ಮಾಡಿದ್ದಕ್ಕೆ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಇದು ಒಂದು ಕಡೆಯಾದ್ರೆ, ಜಿಲ್ಲೆಯಲ್ಲಿ ಹರಿಯುವ ಭೀಮಾ ನದಿ(Bhima River) ತೀರದಲ್ಲೂ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ.
ದೇವಸ್ಥಾನಗಳಿಗೆ ಜಲದಿಗ್ಬಂಧನ
ನದಿಗೆ ಗುರುಸಣಗಿ ಬ್ಯಾರೇಜ್ನಿಂದ ಸುಮಾರು 5 ಸಾವಿರ ಕ್ಯೂಸೆಕ್ ನೀರು ಬಿಟ್ಟಿರುವ ಕಾರಣಕ್ಕೆ ಕಳೆದ ಒಂದು ತಿಂಗಳ ಹಿಂದೆಷ್ಟೇ ಖಾಲಿ ಖಾಲಿಯಾಗಿದ್ದ ನದಿ ಭರ್ತಿಯಾಗಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವ ಕಾರಣಕ್ಕೆ ಯಾದಗಿರಿ ನಗರದ ಹೊರ ಭಾಗದಲ್ಲಿರುವ ಭೀಮಾ ನದಿ ದಡದಲ್ಲಿನ ವೀರಾಂಜನೇಯ ಹಾಗೂ ಕಂಗಾಳೇಶ್ವರ ದೇವಸ್ಥಾನಗಳಿಗೆ ಜಲದಿಗ್ಬಂಧನ ಉಂಟಾಗಿದೆ.
ಇದನ್ನೂ ಓದಿ:ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ಜನರ ಹುಚ್ಚಾಟ; ಮೀನು ಹಿಡಿಯಲು ಹೋಗಿ ದುಸ್ಸಾಹಸ
ರೈತರ ಮೊಗದಲ್ಲಿ ಮೂಡಿದ ಸಂತಸ
ಇನ್ನು ಕಳೆದ ಒಂದು ತಿಂಗಳ ಹಿಂದೆಯಷ್ಟೇ ನದಿ ಸಂಪೂರ್ಣವಾಗಿ ಖಾಲಿಯಾಗಿತ್ತು. ನದಿಯಲ್ಲಿದ್ದ ಬೃಹತ್ ಗಾತ್ರದ ಕಲ್ಲು ಬಂಡೆಗಳು ತೇಲಿ ಬಂದಿದ್ದವು. ನದಿ ಖಾಲಿಯಾಗಿದ್ದಕ್ಕೆ ಕುಡಿಯುವ ನೀರಿನ ಸಮಸ್ಯೆ ಕೂಡ ಉಂಟಾಗಿತ್ತು. ಆದ್ರೆ, ಈಗ ನಾಲ್ಕೈದು ದಿನಗಳ ಅಂತರದಲ್ಲೇ ಖಾಲಿಯಾಗಿದ್ದ ನದಿ ಸಂಪೂರ್ಣವಾಗಿ ಭರ್ತಿಯಾಗಿದೆ. ಇನ್ನು ನದಿ ಸಂಪೂರ್ಣವಾಗಿ ಭರ್ತಿಯಾಗಿದ್ದರಿಂದ ಜಿಲ್ಲೆಯಲ್ಲಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮೂರು ಬ್ಯಾರೇಜ್ಗಳು ಸಹ ತುಂಬಿವೆ. ಹೀಗಾಗಿ ರೈತರಿಗೆ ಭತ್ತ ಬೆಳೆಯುವುದಕ್ಕೆ ಅನುಕೂಲವಾಗಿದೆ.
ನದಿಯಲ್ಲಿ ನೀರು ಇಲ್ಲದ ಕಾರಣಕ್ಕೆ ಒಂದು ತಿಂಗಳುಗಳ ಕಾಲ ಭತ್ತ ನಾಟಿ ಮಾಡುವುದು ತಡ ಮಾಡಿದ್ದರು. ಈಗ ನದಿಯಲ್ಲಿ ನೀರು ಬಂದಿದ್ದಕ್ಕೆ ಭತ್ತ ನಾಟಿ ಮಾಡಲು ಸಹ ಅನುಕೂಲವಾಗಿದೆ. ಇದರ ಜೊತೆಗೆ ರೈತರು ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೇರೆ ಬೇರೆ ಬೆಳೆಗಳನ್ನು ಸಹ ಬೆಳೆಯುತ್ತಾರೆ. ಕಳೆದ ವರ್ಷ ನದಿಯಲ್ಲಿ ನೀರು ಇಲ್ಲದ ಕಾರಣಕ್ಕೆ ಹಿಂಗಾರು ಬೆಳೆಯಾಗಿ ಭತ್ತದ ಬೆಳೆಯನ್ನ ಬೆಳೆದಿರಲಿಲ್ಲ. ಆದ್ರೆ, ಈ ಬಾರಿ ಎರಡು ಬೆಳೆಗಳು ಬೆಳೆಯೋಕೆ ರೈತರು ಸಿದ್ದರಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ