ಯಾದಗಿರಿ: ಬೇಡಿಕೊಂಡಿದ್ದನ್ನ ಈಡೇರಿಸಿದ ಮೈಲಾಪುರದ ಮೈಲಾರಲಿಂಗ. ಶಾಸಕರ ಸಮ್ಮುಖದಲ್ಲೇ 250 ಮೆಟ್ಟಿಲುಗಳನ್ನ ಮಂಡಿಯೂರಿ ಹತ್ತಿ ಹರಕೆ ಪೂರ್ಣಗೊಳಿಸಿದ ಮಹಿಳೆ. ಮೈಲಾರಲಿಂಗನಿಗೆ ಜೈಕಾರ ಹಾಕಿದ ಭಕ್ತರು. ಈ ದೃಶ್ಯಗಳು ಕಂಡು ಬಂದಿದ್ದು ಯಾದಗಿರಿ(Yadagiri) ತಾಲೂಕಿನ ಮೈಲಾಪುರ ಗ್ರಾಮದ ಮೈಲಾರಲಿಂಗನ ಸನ್ನಿಧಿಯಲ್ಲಿ. ಹೌದು ಕಳೆದ ತಿಂಗಳು ನಡೆದ ರಾಜ್ಯ ವಿಧಾನಸಭಾ ಚುನಾವಣೆ ವೇಳೆ ರಾಜ್ಯದ ನಾನಾ ಕಡೆ ತಮ್ಮ ತಮ್ಮ ಅಭ್ಯರ್ಥಿಗಳು ಗೆದ್ದು ಬರಲಿ ಎಂದು ದೇವರ ಮೊರೆ ಹೋಗಿದ್ರು, ನಾನಾ ರೀತಿಯ ಹರಕೆಯನ್ನ ಹೊತ್ತು ಗೆದ್ದ ಮೇಲೆ ಹರಕೆಯನ್ನ ತೀರಿಸುವ ಕೆಲಸವನ್ನ ಮಾಡಿದ್ದರು. ಅದೇ ರೀತಿ ಕಲಬುರ್ಗಿ ದಕ್ಷಿಣ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್ ಅಭ್ಯರ್ಥಿ ಅಲ್ಲಮಪ್ರಭು ಪಾಟೀಲ್ ಗೆದ್ದು ಬರಲಿ ಎಂದು ಮಹಿಳೆ ಹರಕೆಯನ್ನ ಹೊತ್ತಿದ್ದಳು. ಅದರಂತೆ ಅವರು ಗೆದ್ದು ಬೀಗಿದ್ದು, ಇವತ್ತು ಶಾಸಕರ ಜೊತೆಗೂಡಿ ಕಾಂಗ್ರೆಸ್ ಮುಖಂಡೆ ಅನಿತಾ ಅವರು ಹರಕೆ ತೀರಿಸಿದ್ದಾರೆ.
ಇಂದು ಬೆಳಗ್ಗೆ ಶಾಸಕ ಅಲ್ಲಮಪ್ರಭು ಜೊತೆಗೆ ದೇವಸ್ಥಾನಕ್ಕೆ ಬಂದಿದ್ದ ಅನಿತಾ ಅವರು ಮಂಡಿಯೂರಿ 250 ಮೆಟ್ಟಿಲುಗಳನ್ನ ಹತ್ತಿದ್ದಾರೆ. 50 ವರ್ಷ ವಯಸ್ಸಿನವರಾದ ಅನಿತಾ ಅವರು ಎಲ್ಲಿಯೂ ನಿಲ್ಲದೆ ಸ್ವಲ್ಪವೂ ವಿಶ್ರಾಂತಿಯನ್ನ ಪಡೆಯದೆ, 250 ಮೆಟ್ಟಿಲುಗಳನ್ನ ಹತ್ತಿ ಹರಕೆಯನ್ನ ತೀರಿಸಿದ್ದಾರೆ. ಇನ್ನು ಸಾಮಾನ್ಯವಾಗಿ ಕಾಲ್ನಡಿಗೆ ಮೂಲಕವೇ ಈ ಮೆಟ್ಟಿಲುಗಳನ್ನ ಹತ್ತೊದು ಕಷ್ಟದ ಕೆಲಸ ಆದ್ರೆ, ದೇವರಲ್ಲಿ ಬೇಡಿಕೊಂಡಿದ್ದ ಹರಕೆಯನ್ನ ತೀರಿಸಲೆಬೇಕೆಂದು ಮಂಡಿಯೂರಿ ಹರಕೆ ಮೆಟ್ಟಿಲುಗಳನ್ನ ಹತ್ತಿ ಮೈಲಾರಲಿಂಗನ ಗರ್ಭಗುಡಿವರೆಗೆ ಸಾಗಿದ್ರು. ಬಳಿಕ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನ ಸಲ್ಲಿಸಿದ್ದಾರೆ. ಜೊತೆಗೆ ಮನೆಯಿಂದಾನೆ ನೈವೇದ್ಯವನ್ನ ಮಾಡಿಕೊಂಡು ಕುಟುಂಬ ಸಮೇತರಾಗಿ ಬಂದಿದ್ದ ಮಹಿಳೆ, ದೇವರಿಗೆ ನೈವೇದ್ಯವನ್ನ ಅರ್ಪಿಸಿದ್ದಾರೆ.
ಇದನ್ನೂ ಓದಿ:ಚುನಾವಣೆಯಲ್ಲಿ ಸೋತರೂ ಉಚ್ಚಗೆಮ್ಮೆ ದೇವಿಗೆ ಚಿನ್ನದ ಮುಖವಾಡ ನೀಡಿ ಹರಕೆ ತೀರಿಸಿದ ಮಾಜಿ ಶಾಸಕ ಎಸ್ ವಿ ಆರ್
ಇನ್ನು ಇಂದು ಹುಣ್ಣಿಮೆ ದಿನವಾಗಿದ್ದರಿಂದ ಒಳ್ಳೆಯ ದಿನವೆಂದು ಅಂದುಕೊಂಡು ಬೇಡಿಕೊಂಡ ಹರಕೆಯನ್ನ ತೀರಿಸಿದ್ದಾರೆ. ಇದಕ್ಕೂ ಮೊದಲು ಬಿಜೆಪಿಯಲ್ಲಿದ್ದ ಅನಿತಾ ಅವರು 2018ರ ಚುನಾವಣೆಯಲ್ಲೂ ಹರಕೆಯನ್ನ ಹೊತ್ತಿದ್ರು. ಆಗ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ದತ್ತಾತ್ರೆಯ ಪಾಟೀಲ್ ರೇವೂರ್ ಗೆದ್ದು, ಬಂದ್ರೆ ಇದೆ ಮೈಲಾರಲಿಂಗ ದೇವರಿಗೆ ಮಂಡಿಯೂರಿ ಬಂದು ಹರಕೆ ತೀರಿಸುವುದಾಗಿ ಬೇಡಿಕೊಂಡಿದ್ರು. ಆಗ ಮೈಲಾರಲಿಂಗ ವರ ಕೊಟ್ಟಿದ್ದ. ಹೀಗಾಗಿ ಬಿಜೆಪಿ ಅಭ್ಯರ್ಥಿ ದತ್ತಾತ್ರೆಯ ಪಾಟೀಲ್ ರೇವೂರ್ ಇದೆ ಅಲ್ಲಮಪ್ರಭು ಪಾಟೀಲ್ ವಿರುದ್ಧ ಗೆದ್ದ ಬಂದಿದ್ರು. ಹೀಗಾಗಿ ಐದು ವರ್ಷಗಳ ಹಿಂದೆಯೂ ಸಹ ಮಂಡಿಯೂರಿ ಬಂದು ದೇವಸ್ಥಾನಕ್ಕೆ ಬಂದು ಹರಕೆ ತೀರಿಸಿದ್ರು. ಇವತ್ತು ಮತ್ತೆ ಹರಕೆ ಹೊತ್ತಿದ್ದ ಅನಿತಾ ಮಂಡಿಯೂರಿ 250 ಮೆಟ್ಟಿಲುಗಳನ್ನ ಹತ್ತಿ ಹರಕೆಯನ್ನ ತೀರಿಸಿದ್ದಾರೆ.
ಇನ್ನು ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ಮನೆ ದೇವರು ಆಗಿದ್ದರಿಂದ ಅವರು ಕೂಡ ದೇವಸ್ಥಾನಕ್ಕೆ ಬಂದು ದರ್ಶನ ಪಡೆದು ಹರಕೆ ತೀರಿಸಿದ ಮಹಿಳೆಯ ಸನ್ಮಾನಿಸಿದ್ರು, ಒಟ್ಟಿನಲ್ಲಿ ಮೈಲಾರಲಿಂಗೇಶ್ವರ ದೇವರು ಕಲ್ಯಾಣ ಕರ್ನಾಟಕ ಭಾಗದಲ್ಲೇ ಅತ್ಯಂತ ಶಕ್ತಿಯೂತ ದೇವರೆಂದು ಹೇಳುತ್ತಾರೆ. ಈ ದೇವರಲ್ಲಿ ಏನೇ ಬೇಡಿಕೊಂಡಿದ್ರು, ಅದು ನೀಜ ಆಗುತ್ತೆಂದು ಭಕ್ತರು ನಂಬಿದ್ದಾರೆ. ಹೀಗಾಗಿ ಇವತ್ತು ಅನಿತಾ ಅವರು ಕೂಡ ತಾವು ಬೇಡಿಕೊಂಡಿದ್ದನ್ನ ದೇವರು ಈಡೇರಿಸಿದ್ದಾನೆ ಅಂತ ಹರಕೆ ತೀರಿಸಿದ್ದಾರೆ.
ವರದಿ: ಅಮೀನ್ ಹೊಸುರ್ ಟಿವಿ9 ಯಾದಗಿರಿ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:01 pm, Sun, 4 June 23