ಯಾದಗಿರಿಯಲ್ಲಿ‌ 2 ವಾರದ ಅಂತರದಲ್ಲಿ 3 ನವಜಾತ ಶಿಶುಗಳ ಸಾವು, 130ಕ್ಕೆ ಏರಿಕೆ

| Updated By: ವಿವೇಕ ಬಿರಾದಾರ

Updated on: Jan 09, 2025 | 12:31 PM

ಯಾದಗಿರಿ ಜಿಲ್ಲೆಯಲ್ಲಿ ನವಜಾತ ಶಿಶುಗಳ ಸಾವು ಹೆಚ್ಚಾಗುತ್ತಿದೆ. ಕಳೆದ ಆರು ತಿಂಗಳಲ್ಲಿ 130 ಶಿಶುಗಳು ಮೃತಪಟ್ಟಿವೆ. ಇತ್ತೀಚೆಗೆ ಮತ್ತೊಂದು ಶಿಶು ಗುರುಮಠಕಲ್​​ನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೃತಪಟ್ಟಿದೆ.ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದಾಗಿ ಈ ಸಾವು ಸಂಭವಿಸಿದೆ ಎಂದು ಆರೋಪಿಸಲಾಗಿದೆ. ಶಿಶು ಮರಣಕ್ಕೆ ಹಲವು ಕಾರಣಗಳಿವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಆದರೆ, ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ.

ಯಾದಗಿರಿಯಲ್ಲಿ‌ 2 ವಾರದ ಅಂತರದಲ್ಲಿ 3 ನವಜಾತ ಶಿಶುಗಳ ಸಾವು, 130ಕ್ಕೆ ಏರಿಕೆ
ಗುರುಮಠಕಲ್ ಸಮುದಾಯ ಆರೋಗ್ಯ ಕೇಂದ್ರ
Follow us on

ಯಾದಗಿರಿ, ಜನವರಿ 9: ಯಾದಗಿರಿ (Yadgiri) ಜಿಲ್ಲೆಯಲ್ಲಿ ನವಜಾತ ಶಿಶುಗಳ ಸಾವು ಮುಂದುವರೆದಿದೆ. ಎರಡು ವಾರಗಳ ಅಂತರದಲ್ಲಿ ಮೂರು ನವಜಾತ ಶಿಶುಗಳ (Newborn) ಮೃತಪಟ್ಟಿವೆ.  ಬುಧವಾರ ತಡರಾತ್ರಿ ಗುರುಮಠಕಲ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಂದು ಶಿಸು ಮೃತಪಟ್ಟಿದೆ. ಈ ಮೂಲಕ ಯಾದಗಿರಿ ಜಿಲ್ಲೆಯಲ್ಲಿ ಶಿಶುಗಳ ಸಾವಿನ ಸಂಖ್ಯೆ 130ಕ್ಕೆ ಏರಿಕೆಯಾಗಿದೆ. ಗುರುಮಠಕಲ್​ ಪಟ್ಟಣ ಪಕ್ಕದ ಅನಪೂರ ಗ್ರಾಮದ ಗರ್ಭಿಣಿ ಗಾಯತ್ರಿಯವರಿಗೆ ಬುಧವಾರ ತಡರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಸಂಬಂಧಿಕರು ಕೂಡಲೇ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದರು.

ಆಸ್ಪತ್ರೆಗೆ ದಾಖಲಾಗುವಷ್ಟರಲ್ಲಿ ಮಗುವಿನ ಅರ್ಧ ದೇಹ ಗರ್ಭದಿಂದ ಹೊರಗೆ ಬಂದಿತ್ತು. ಕೂಡಲೇ, ಯಾದಗಿರಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲು ತೀರ್ಮಾನಿಸಿತ್ತಾದರೂ, ಆ್ಯಂಬುಲೆನ್ಸ್​ ಸೇವೆ ಇಲ್ಲದ ಕಾರಣ ಸಿಬ್ಬಂದಿ ಸಮುದಾಯ ಕೇಂದ್ರದಲ್ಲೇ ಹೆರಿಗೆ ಮಾಡಿದರು. ಆದರೆ, ಹೆರಿಗೆಯಾದ ಕೆಲವೇ ಕ್ಷಣಗಳಲ್ಲಿ ನವಜಾತ ಶಿಶು ಮೃತಪಟ್ಟಿದೆ. ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಮಹೇಶ್ ಬಿರಾದಾರ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಗುರುಮಠಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಗುರುಮಠಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ ಯಾದಗಿರಿ ಮಕ್ಕಳಿಗೆ ಇದೆಂತಹ ಸ್ಥಿತಿ!

130 ಶಿಶು, 8 ಮಂದಿ ತಾಯಂದಿರ ಸಾವು

ಯಾದಗಿರಿ ಜಿಲ್ಲೆಯಲ್ಲಿ ಕಳೆದ ಆರು ತಿಂಗಳಲ್ಲಿ ಬೇರೊಬ್ಬರಿ 130 ಶಿಶುಗಳು ಮೃತಪಟ್ಟಿವೆ. ಈ ವಿಚಾರ ದಿಶಾ ಸಭೆಯಲ್ಲಿ ಚರ್ಚೆಯಾಗಿದ್ದು, ಜಿಲ್ಲಾ ಆರೋಗ್ಯಾಧಿಕಾರಿಗೆ ಶಾಸಕ‌ ಕಂದಕೂರ ತರಾಟೆಗೆ ತೆಗೆದುಕೊಂಡಿದ್ದರು. ವೈದ್ಯರ ನಿರ್ಲಕ್ಷ್ಯವೇ ಶಿಶು ಮರಣಕ್ಕೆ ಕಾರಣ ಅಂತ ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ‌ ಶರಣಗೌಡ ಕಂದಕೂರ ದಿಶಾ ಸಭೆಯಲ್ಲಿ ಅಧಿಕಾರಿಗಳಿಗೆ ತೀವ್ರ ತರಾಟೆಗೆ ತಗೆದುಕೊಂಡಿದ್ದರು. ಕೇವಲ ಆರು ತಿಂಗಳಲ್ಲಿ ಹೆಚ್ಚಾಗಿರುವ ಶಿಶು ಮರಣ ಪ್ರಮಾಣಕ್ಕೆ ಸೂಕ್ತ ಕಾರಣ ಕೊಡಿ ಎಂದು ಸಚಿವ, ಶಾಸಕ, ಸಂಸದರು ಪ್ರಶ್ನಿಸಿದ್ದರು.

ಶಿಶು ಮರಣದ ಬಗ್ಗೆ ಮಾದ್ಯಮಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದು, ಯಾದಗಿರಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಏಪ್ರಿಲ್​ನಿಂದ ಅಕ್ಟೋಬರ್​ವರೆಗೆ 13,875 ಹೆರಿಗೆಗಳಾಗಿವೆ. ಅದರಲ್ಲಿ 8 ಜನ ತಾಯಂದಿರ ಸಾವಾಗಿದೆ. 127 ಶಿಶುಗಳು ಮೃತಪಟ್ಟಿವೆ ಎಂದು ಮಾಹಿತಿ ನೀಡಿದ್ದರು.

ಶಿಶು‌ ಮರಣಕ್ಕೆ ಸಾಕಷ್ಟು ಕಾರಣಗಳಿವೆ. ಅವಧಿ ಪೂರ್ಣ ಹೆರಿಗೆ, ಮಕ್ಕಳಲ್ಲಿ ಹೃದಯ ಸಂಬಂಧಿ ಕಾಯಿಲೆ ಹಾಗೂ ಕಡಿಮೆ ತೂಕದ ಶಿಶುಗಳು ಜನಿಸಿದಾಗ ಮರಣ ಹೊಂದುತ್ತವೆ. ಇನ್ನೊಂದು ನೇರ ಕಾರಣ ಅಂದರೆ ಹೆರಿಗೆ ಸಮಯದಲ್ಲಿ ವಿಳಂಬ ಆದರೂ ಸಹ ಶಿಶು ಮರಣ ಆಗುವ ಸಾದ್ಯತೆಯಿದೆ. ಈಗಾಗಲೇ ನಾವು ಶಿಶು ಮರಣ ಪ್ರಮಾಣ ತಗ್ಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆಂದು ಡಿಹೆಚ್ಒ ಮಹೇಶ್ ಬಿರಾದಾರ ತಿಳಿಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:29 pm, Thu, 9 January 25