ಮೈಲಾರಲಿಂಗನಿಗೆ ಬಲಿ ಕೊಡಲು ತಂದಿದ್ದ ಕುರಿಮರಿಗಳನ್ನ ವಶಕ್ಕೆ ಪಡೆದು ಮಾರಾಟ ಮಾಡಿದ ಅಧಿಕಾರಿಗಳು

ಯಾದಗಿರಿ ಮೈಲಾಪುರದ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಕುರಿಮರಿಗಳನ್ನು ಪಲ್ಲಕ್ಕಿಗೆ ಎಸೆಯುವ ಸಂಪ್ರದಾಯ ನಿಷೇಧಿಸಲಾಗಿದೆ. ಹೀಗಿದ್ದರು ಕೆಲ ಭಕ್ತರು ತಂದಿದ್ದ 778 ಕುರಿಮರಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಸದ್ಯ ವಶಕ್ಕೆ ಪಡೆದುಕೊಂಡಿದ್ದ ಕುರಿಮರಿಗಳನ್ನು ಟೆಂಡರ್ ಮೂಲಕ ಮಾರಾಟ ಮಾಡಲಾಗಿದೆ. ಆ ಮೂಲಕ ದೇವಸ್ಥಾನಕ್ಕೆ 23 ಲಕ್ಷಕ್ಕೂ ಹೆಚ್ಚು ಆದಾಯ ಹರಿದು ಬಂದಿದೆ.

ಮೈಲಾರಲಿಂಗನಿಗೆ ಬಲಿ ಕೊಡಲು ತಂದಿದ್ದ ಕುರಿಮರಿಗಳನ್ನ ವಶಕ್ಕೆ ಪಡೆದು ಮಾರಾಟ ಮಾಡಿದ ಅಧಿಕಾರಿಗಳು
ಮೈಲಾರಲಿಂಗನ ಜಾತ್ರೆಗೆ ಭಕ್ತರು ತಂದಿದ್ದ ಕುರಿಮರಿಗಳು
Edited By:

Updated on: Jan 16, 2026 | 9:38 PM

ಯಾದಗಿರಿ, ಜನವರಿ 16: ಕಲ್ಯಾಣ ಕರ್ನಾಟಕ ಭಾಗದಲ್ಲೇ ಅತ್ಯಂತ ಪ್ರಸಿದ್ಧ ಮೈಲಾರಲಿಂಗನ ಜಾತ್ರೆ (mailaralingeshwara jatre) ಅದ್ಧೂರಿಯಾಗಿ ನಡೆದಿದೆ. ಜಾತ್ರೆಯಲ್ಲಿ ಮೈಲಾರನ ಪಲ್ಲಕ್ಕಿ ಮೇಲೆ ಭಕ್ತರು ಕುರಿಮರಿಗಳನ್ನ ಎಸೆಯಲು ತೆಗೆದುಕೊಂಡು ಬರುತ್ತಾರೆ. ಆದರೆ ಈ ಪದ್ದತಿಗೆ ಬ್ರೇಕ್ ಬಿದ್ದಿರುವ ಕಾರಣಕ್ಕೆ ಭಕ್ತರು (Devotees) ತಂದಿದ್ದ ಕುರಿಮರಿಗಳನ್ನ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಇದೀಗ ಅದೇ ಕುರಿಮರಿಗಳನ್ನ ಟೆಂಡರ್ ಮೂಲಕ ರೈತರಿಗೆ ಮಾರಾಟ ಮಾಡಿದ್ದರಿಂದ ದೇವಸ್ಥಾನಕ್ಕೆ ಕಾಣಿಕೆ ರೂಪದಲ್ಲಿ ಲಕ್ಷ ಲಕ್ಷ ಆದಾಯ ಹರಿದು ಬಂದಿದೆ.

ಯಾದಗಿರಿ ತಾಲೂಕಿನ ಮೈಲಾಪುರ ಗ್ರಾಮದ ಮೈಲಾರಲಿಂಗೇಶ್ವರ ಜಾತ್ರೆ ಪ್ರತಿವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ನಡೆದಿದೆ. ವಿವಿಧ ಜಿಲ್ಲೆ ಮತ್ತು ರಾಜ್ಯಗಳಿಂದ ಲಕ್ಷಾಂತರ ಭಕ್ತರ ದಂಡೆ ಜಾತ್ರೆಗೆ ಹರಿದು ಬಂದಿತ್ತು. ಈ ಜಾತ್ರೆಯಲ್ಲಿ ಮೈಲಾರಲಿಂಗನನ್ನ ಪಲ್ಲಕ್ಕಿಯಲ್ಲಿ ಕುರಿಸಿಕೊಂಡು ಸಂಕ್ರಮಣದ ದಿನದಂದು ಹೊನ್ನ ಕೆರೆಗೆ ಗಂಗಾ ಸ್ನಾನ ಮಾಡಿಸಲು ಮೆರವಣಿಗೆ ಮೂಲಕ ಕರೆದುಕೊಂಡು ಹೋಗಲಾಗುತ್ತೆ. ಈ ವೇಳೆ ಪಲ್ಲಕ್ಕಿ ಮೇಲೆ ಕುರಿಮರಿಗಳ ಎಸೆದು ಹರಕೆ ತೀರಿಸುವುದು ಇಲ್ಲಿನ ವಾಡಿಕೆ ಆಗಿತ್ತು.

ಭಕ್ತರು ತಂದಿದ್ದ 778 ಕುರಿಮರಿಗಳ ಜಪ್ತಿ

ಪ್ರಾಣಿ ಹಿಂಸೆ ಮಾಡಬಾರದು ಎನ್ನುವ ಕಾರಣಕ್ಕೆ ಈ ಸಂಪ್ರದಾಯಕ್ಕೆ ಕಳೆದ ಕೆಲ ವರ್ಷಗಳಿಂದ ಬ್ರೇಕ್ ಹಾಕಲಾಗಿದೆ. ಆದರೂ ಭಕ್ತರು ನೂರಾರು ಕುರಿಮರಿಗಳನ್ನ ಪಲ್ಲಕ್ಕಿ ಮೇಲೆ ಎಸೆಯಲು ತೆಗೆದುಕೊಂಡು ಬರುತ್ತಾರೆ. ಇದ್ದನ್ನ ತಡೆಯೋಕೆ ಜಿಲ್ಲಾಡಳಿತ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಲ್ಲಿ ಚೆಕ್ ಪೋಸ್ಟ್​​ಗಳನ್ನು ನಿರ್ಮಿಸಿತ್ತು. ಹೀಗಾಗಿ ಭಕ್ತರು ಆಗಮಿಸುತ್ತಿದ್ದಂತೆ ಪೊಲೀಸರು ವಾಹನಗಳನ್ನ ಪರಿಶೀಲನೆ ನಡೆಸಿ ಭಕ್ತರು ತಂದಿದ್ದ ಕುರಿಮರಿಗಳನ್ನ ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ: ಯಾದಗಿರಿ ಮೈಲಾರಲಿಂಗ ಜಾತ್ರೆಯಲ್ಲಿ ಹಳದಿ ಮಾರುತ: ಭಂಡಾರದೋಕುಳಿಯಲ್ಲಿ ಮುಂದೆದ್ದ ಭಕ್ತರು

ಈ ವರ್ಷ ಭಕ್ತರು ತಂದಿದ್ದ 778 ಕುರಿಮರಿಗಳನ್ನ ಜಪ್ತಿ ಮಾಡಿದ್ದಾರೆ. ಅಧಿಕಾರಿಗಳು ಮತ್ತು ಪೊಲೀಸರು ಜಪ್ತಿ ಮಾಡಿದ ಕುರಿಮರಿಗಳನ್ನು ಪಶು ಇಲಾಖೆಯಿಂದ ನಿರ್ಮಾಣ ಮಾಡಲಾಗಿದ್ದ ಶೆಡ್​ನಲ್ಲಿ ಇಡಲಾಗಿತ್ತು. ಇದೇ ಕುರಿಮರಿಗಳಿಂದ ಇದೀಗ ದೇವಸ್ಥಾನಕ್ಕೆ ಲಕ್ಷಾಂತರ ರೂ. ಆದಾಯ ಹರಿದು ಬಂದಿದೆ.

ಪ್ರತಿ ವರ್ಷ ಜಾತ್ರೆಯಲ್ಲಿ ವಶ ಪಡಿಸಿಕೊಂಡ ಕುರಿಮರಿಗಳನ್ನ ಯಾದಗಿರಿ ನಗರದಲ್ಲಿರುವ ಪಶು ಆಸ್ಪತ್ರೆಗೆ ತರಲಾಗುತ್ತೆ. ಇಲ್ಲಿ ಶೆಡ್​ಗಳನ್ನ ಮಾಡಿ ಕುರಿಗಳನ್ನ ಇರಿಸಲಾಗುತ್ತಿತ್ತು. ಬಳಿಕ ಹರಾಜ್ ಮೂಲಕ ತಲಾ 20 ಕುರಿಗಳನ್ನ ರೈತರಿಗೆ ಹಾಗೂ ವ್ಯಾಪರಸ್ಥರಿಗೆ ಮಾರಾಟ ಮಾಡಲಾಗುತ್ತಿತ್ತು. ಆದರೆ ಪಶು ಆಸ್ಪತ್ರೆಯಲ್ಲಿ ಎರಡು ದಿನಗಳ ಕಾಲ ಇಡುವುದರಿಂದ ಕೆಲ ಕುರಿಮರಿಗಳು ಸಾವನ್ನಪ್ಪುತ್ತಿದ್ದವು. ಇದೆ ಕಾರಣಕ್ಕೆ ಕಳೆದ ನಾಲ್ಕು ವರ್ಷಗಳಿಂದ ಜಾತ್ರೆಗೂ ಮುನ್ನವೆ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಆಸಕ್ತ ರೈತರು ಮತ್ತು ವ್ಯಾಪರಸ್ಥರಿಗೆ ಕರೆದು ಟೆಂಡರ್ ಮಾಡಲಾಗುತ್ತಿದೆ.

ಯಾರೇ ಕುರಿಮರಿಗಳನ್ನ ಖರೀದಿ ಮಾಡಿದರೂ ಕನಿಷ್ಟ 100 ಕುರಿಗಳನ್ನ ಖರೀದಿ ಮಾಡಬೇಕಾಗಿತ್ತು. ಪ್ರತಿ ಕುರಿಮರಿಗೆ ಅಧಿಕಾರಿಗಳು 1700 ರೂ ದರ ನಿಗದಿ ಮಾಡಿದ್ದರು. ಇದರ ಮೇಲೆ ಟೆಂಡರ್​ನಲ್ಲಿ ಭಾಗವಹಿಸಿದವರು ಬೆಲೆ ಏರಿಸಿ ಟೆಂಡರ್ ಪಡೆಯಬಹುದಾಗಿತ್ತು. ಒಟ್ಟು ಈ ಬಾರಿ ಟೆಂಡರ್ ಪ್ರಕ್ರಿಯೆಯಲ್ಲಿ 15 ಜನರು ಭಾಗವಹಿಸಿದ್ದರು. ಪ್ರತಿಯೊಂದು ಕುರಿಗೆ 2800 ರೂ ಯಿಂದ ಹಿಡಿದು 3211 ರೂ. ತನಕ ಬೆಲೆಯನ್ನ ಏರಿಕೆ ಮಾಡಿ ಟೆಂಡರ್ ಪಡೆದಿದ್ದರು. ಸುಮಾರು 8 ಜನರಿಗೆ ಮಾತ್ರ ಕುರಿಗಳನ್ನ ಖರೀದಿ ಮಾಡುವುದ್ದಕ್ಕೆ ಅವಕಾಶ ಸಿಕ್ಕಿದೆ.

23 ಲಕ್ಷಕ್ಕೂ ಅಧಿಕ ಆದಾಯ

ಮೈಲಾರಪುರ ಹತ್ತಿರ ಹಾಕಿದ್ದ ಶೆಡ್ ಬಳಿಯ ಟೆಂಡರ್ ಪಡೆದವರು 100 ಕುರಿಮರಿಗಳ ಜಮಾ ಆಗುತ್ತಿದ್ದ ಹಾಗೆ ವಾಹನ ತಂದು ತೆಗೆದುಕೊಂಡು ಹೋಗಿದ್ದಾರೆ. ಇದರಿಂದ ಸುಮಾರು ದೇವಸ್ಥಾನಕ್ಕೆ 23 ಲಕ್ಷಕ್ಕೂ ಅಧಿಕ ಆದಾಯ ಹರಿದು ಬಂದಿದೆ. ಕಳೆದ ಬಾರಿ 760 ಕುರಿಗಳನ್ನ ವಶಕ್ಕೆ ಪಡೆಯಲಾಗಿದ್ದು, ಸುಮಾರು 19 ಲಕ್ಷ ರೂ ಆದಾಯ ಬಂದಿತ್ತು. ಆದರೆ ಈ ಬಾರಿ ಟೆಂಡರ್​ನಿಂದ ಹೆಚ್ಚಿನ ಆದಾಯ ದೇವಸ್ಥಾನಕ್ಕೆ ಹರಿದು ಬಂದಿದೆ. ಇನ್ನು ಕುರಿಮರಿಗಳ ಟೆಂಡರ್​ನಿಂದ ಹರಿದು ಬಂದ ಹಣದಿಂದ ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ಬಳಕೆ ಮಾಡಲಾಗುವುದು.

ಇದನ್ನೂ ಓದಿ: ಲಕ್ಕುಂಡಿಯಲ್ಲಿ ಮೊದಲ ದಿನದ ಉತ್ಖನನ ಅಂತ್ಯ: ಏನು ಸಿಕ್ತು? ಮುಂದೇನು? ಅಧಿಕಾರಿ ಹೇಳಿದ್ದಿಷ್ಟು

ಪಲ್ಲಕ್ಕಿ ಮೇಲೆ ಕುರಿ ಮರಿಗಳನ್ನ ಎಸೆಯುವ ಪದ್ಧತಿಗೆ ಬ್ರೇಕ್ ಬಿದ್ದಿರುವ ಕಾರಣಕ್ಕೆ ಭಕ್ತರು ತಂದಿದ್ದ ಕುರಿಮರಿಗಳಿಂದ ದೇವಸ್ಥಾನಕ್ಕೆ ಭರ್ಜರಿ ಆದಾಯ ಹರಿದು ಬಂದಿದೆ. ಹೀಗಾಗಿ ಕುರಿಮರಿಗಳಿಂದ ಬಂದ ಹಣದಿಂದ ದೇವಸ್ಥಾನದಲ್ಲಿ ಭಕ್ತರಿಗಾಗಿ ಮೂಲಭೂತ ಸೌಕರ್ಯಗಳನ್ನ ಒದಗಿಸುವ ಕೆಲಸ ಕೂಡ ಆಗಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:34 pm, Fri, 16 January 26