ಯಾದಗಿರಿ, ಆಗಸ್ಟ್ 27: ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸುವ ಶಕ್ತಿ ಯೋಜನೆ ಜಾರಿ ಮಾಡಿದ ನಂತರ ಶಾಲಾ ಕಾಲೇಜು ಮಕ್ಕಳು ಸರಿಯಾಗಿ ತರಗತಿಗಳಿಗೆ ಹಾಜರಾಗಲು ಪರದಾಟ ನಡೆಸುತ್ತಿದ್ದಾರೆ. ಆದರೆ, ಕೆಲವೊಂದು ಗ್ರಾಮಗಳಿಗೆ ಸಾರಿಗೆ ಬಸ್ ಸಂಪರ್ಕ ಇಲ್ಲದೆಯೂ ಹೆಣಗಾಡುತ್ತಿದ್ದಾರೆ. ಈ ಪೈಕಿ ಯಾದಗಿರಿ (Yadgir) ಜಿಲ್ಲೆಯ ಗುರುಮಠಕಲ್ ತಾಲೂಕಿನ ಆಶಾಪುರ ತಾಂಡಾ ಕೂಡ ಒಂದು.
ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಆಶಾಪುರ ತಾಂಡದ ಮಕ್ಕಳ ದುಸ್ಥಿತಿ ಕೇಳುವವರು ಯಾರು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಮಕ್ಕಳು ಮನೆಯಿಂದ ಎಲ್ಹೇರಿ ಗ್ರಾಮದ ಪ್ರೌಢ ಶಾಲೆಗೆ ಹೋಗಲು 8 ಕಿ.ಮೀ, ನಡೆದರೆ, ಶಾಲೆಯಿಂದ ಮನೆಗೆ 8 ಕಿ.ಮೀ ನಡೆಯಬೇಕು.
ಇದನ್ನೂ ಓದಿ: ಯಾದಗಿರಿ: 21 ವರ್ಷದ ಬಳಿಕ ಶಾಲೆಗೆ ಬಿಸಿಯೂಟದ ಭಾಗ್ಯ!
ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಒಂದಷ್ಟು ಮಕ್ಕಳು ಮಾರ್ಗ ಮಧ್ಯದಲ್ಲಿ ಸಿಗುವ ಟ್ರ್ಯಾಕ್ಟರ್ ಮೇಲೆ ಹತ್ತಿ ಶಾಲೆಗೆ ಹೋಗುತ್ತಿದ್ದಾರೆ. ಟ್ರ್ಯಾಕ್ಟರ್ ಟ್ರಾಲಿಯಲ್ಲಿ, ಟ್ರಾಕ್ಟರ್ನ ಇಂಜಿನ ಮೇಲೆ ಜೊತೆಗೆ ಇಂಜಿನ್ ಟಾಪ್ ಮೇಲೆ ಕುಳಿತು ಮಕ್ಕಳು ಪ್ರಯಾಣಿಸುತ್ತಿದ್ದಾರೆ. 70 ಕ್ಕೂ ಅಧಿಕ ಮಕ್ಕಳು ನಿತ್ಯ ಇದೆ ಸಂಕಷ್ಟವನ್ನ ಎದುರಿಸುತ್ತಿದ್ದಾರೆ.
ತಾಂಡಾದ ಮಕ್ಕಳು ಜೀವ ಹಂಗು ತೋರೆದು ವಿದ್ಯೆ ಕಲಿಯಲು ಹೋಗುತ್ತಿದ್ದಾರೆ. ಸ್ವಲ್ಪ ಯಾಮಾರಿದರೂ ಪುಟಾಣಿ ಮಕ್ಕಳ ಪ್ರಾಣ ಪಕ್ಷಿ ಹೋಗುವುದು ಗ್ಯಾರಂಟಿ. ಸರ್ಕಾರಿ ಬಸ್ ಬಿಡುವಂತೆ ಹತ್ತಾರು ಬಾರಿ ಮನವಿ ಮಾಡಿಕೊಂಡರೂ ತಾಂಡಾ ಕಡೆಗೆ ಸರ್ಕಾರಿ ಬಸ್ ಬಿಡುತ್ತಿಲ್ಲ. ಅಪರೂಪಕ್ಕೆ ಒಂದೊಂದು ಬಾರಿ ಬಸ್ ಬರುತ್ತದೆ. ಅದು ಕೂಡ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಇನ್ನಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತು ಗ್ರಾಮಕ್ಕೆ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:38 pm, Sun, 27 August 23