ಯಾದಗಿರಿ, ಆಗಸ್ಟ್ 31: ನಕಲಿ ಅಂಕಪಟ್ಟಿ ನೀಡಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ (Hospital) ಡಿ ಗ್ರೂಪ್ ಹುದ್ದೆ (D Group Post) ಪಡೆದ 14 ಜನರ ಬಗ್ಗೆ ಮಾಹಿತಿ ನೀಡುವಂತೆ ಡಿಹೆಚ್ಒಗೆ (DHO) ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕರ ಸೂಚನೆ ನೀಡಿದ್ದಾರೆ.
2015ರಲ್ಲಿ ಇಲಾಖೆಯ ಡಿ ಗ್ರೂಪ್ ಹುದ್ದೆಗೆ ನೇಮಕಾತಿ ನಡೆದಿತ್ತು. ಎಸ್ಎಸ್ಎಲ್ಸಿ ವಿದ್ಯಾರ್ಹತೆಯ ಮೇಲೆ ಗ್ರೂಪ್-ಡಿ ಹುದ್ದೆಗೆ ಕೌನ್ಸೆಲಿಂಗ್ ಮೂಲಕ ನೇರ ನೇಮಕಾತಿ ನಡೆದಿತ್ತು. ನೇಮಕಾತಿ ವೇಳೆ 14 ಮಂದಿ ನಕಲಿ ದಾಖಲೆ ನೀಡಿದ್ದಾರೆ. ನಕಲಿ ಅಂಕಪಟ್ಟಿ ನೀಡಿದವರ ಬಗ್ಗೆ 9 ವರ್ಷದ ಬಳಿಕ ಆರೋಗ್ಯ ಇಲಾಖೆಗೆ ದೂರು ನೀಡಲಾಗಿದೆ. ದೂರಿನ ಬೆನ್ನಲ್ಲೇ ಎಚ್ಚೆತ್ತ ಇಲಾಖೆ ಈ 14 ಜನರ ಬಗ್ಗೆ ಮಾಹಿತಿ ನೀಡುವಂತೆ ಯಾದಗಿರಿ ಡಿಹೆಚ್ಒಗೆ ಸೂಚನೆ ನೀಡಿದ್ದಾರೆ.
ನೌಕರರು ಸಲ್ಲಿಸಿರುವ ಎಸ್ಎಸ್ಎಲ್ಸಿ ಅಂಕಪಟ್ಟಿಯ ಮಾರ್ಕ್ಸ್ ಮತ್ತು ಕಚೇರಿಯ ಸಂಪುಟದಲ್ಲಿನ ಅಂಕಗಳಿಗೆ ತಾಳೆ ಹೊಂದುತ್ತಿಲ್ಲ. ನೌಕರರಿಗೆ ನೈಜತೆ ಪ್ರಮಾಣ ಪತ್ರ ನೀಡಿಲ್ಲ. 14 ನೌಕರರ ಜನ್ಮ ದಿನಾಂಕ, ನೌಕರರು ಸೇವೆಗೆ ಸೇರಿದ ದಿನಾಂಕ, ಆದೇಶ ಪ್ರತಿ ಸೇರಿದಂತೆ ನಿರ್ದೇಶನಾಲಯ ಒಟ್ಟು ಆರು ಮಾಹಿತಿ ಕೇಳಿದೆ.
ಇದನ್ನೂ ಓದಿ: ಬೇಲಿಯೇ ಎದ್ದು ಹೊಲ ಮೇಯ್ದಂತೆ: ಮಗನನ್ನು ಪಾಸ್ ಮಾಡಿಸಲು ಹೆಡ್ಮಾಸ್ಟರ್ನಿಂದಲೇ ಚೀಟಿಂಗ್
ನಿರ್ದೇಶನಾಲಯದ ಸೂಚನೆ ಮೇರೆಗೆ ಯಾದಗಿರಿ ಆರೋಗ್ಯ ಅಧಿಕಾರಿಗಳು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸ್ತಿರುವ ನೌಕರರ ಮಾಹಿತಿ ಸಂಗ್ರಹಿಸಿದ್ದಾರೆ. ಇನ್ನು, ಯಾದಗಿರಿಯಷ್ಟೇ ಅಲ್ಲದೆ ಹಲವು ಜಿಲ್ಲೆಗಳಿಗೆ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಮೈಸೂರು: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಹಲವರ ಬಳಿ ಲಕ್ಷ ಲಕ್ಷ ಹಣ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ವಂಚನೆ ಎಸಗಿದೆ ಇಬ್ಬರನ್ನು ಮೈಸೂರಿನ ಉದಯಗಿರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳು ಸರ್ಕಾರದ ನಕಲಿ ಆದೇಶ ಪತ್ರ, ನೇಮಕಕಾತಿ ಪತ್ರ, ನಡವಳಿ, ನಿರಾಕ್ಷೇಪಣಾ ಪ್ರಮಾಣಪತ್ರ, ಐಡಿ ಕಾರ್ಡ್ ಎಲ್ಲವನ್ನು ನೀಡಿ ಮೋಸ ಮಾಡಿದ್ದಾರೆ. ಆರೋಪಿಗಳು 3 ರಿಂದ 5 ಲಕ್ಷ ರೂ.ವರೆಗು ಹಣ ಪಡೆದು ಬರೊಬ್ಬರಿ 30 ಜನರಿಗೆ ವಂಚಿಸಿದ್ದಾರೆ.
ಮಂಡ್ಯದ ವೈದ್ಯಕೀಯ ವಿಜ್ಞಾನ ಸಂಸ್ಥೆ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿ ಮಂಡ್ಯ, ಆರೋಗ್ಯ ಕುಟುಂಬ ಕಲ್ಯಾಣ ಸೇವೆ ಆಯುಕ್ತಾಲಯ ಬೆಂಗಳೂರು ಕಚೇರಿಯಲ್ಲಿ ಗ್ರೂಪ್ ಡಿ ಹುದ್ದೆಗಳನ್ನು ಕೊಡಿಸುವುದಾಗಿ ಹೇಳಿದ್ದಾರೆ. ಹೀಗೆ 30 ಜನರಿಗೆ ಹೇಳಿ ಒಬ್ಬೊಬ್ಬರಿಂದ 3 ರಿಂದ 5 ಲಕ್ಷ ರೂ.ವರೆಗೆ ಹಣ ಪಡೆದಿದ್ದಾರೆ. ನಂತರ, ಸರ್ಕಾರದ ಖಜಾನೆಯಿಂದಲೇ ಚೆಲನ್ ರೆಫರೆನ್ಸ್ ನಂಬರಿನ ಮೆಸೆಜ್ ಬಂದಿರುವುದನ್ನು ನೋಡಿ ಉದ್ಯೋಗಾಕಾಂಕ್ಷಿಗಳು ಇವರನ್ನು ನಂಬಿದ್ದಾರೆ.
2020 ರಿಂದ 2023ರ ಆಗಸ್ಟ್ 17ರವರೆಗೂ ಆರೋಪಿಗಳು ಒಂದೊಂದು ಆದೇಶ ಪ್ರತಿಯನ್ನು ಉದ್ಯೋಗಾಕಾಂಕ್ಷಿಗಳಿಗೆ ನೀಡುತ್ತಾ ಬಂದಿದ್ದಾರೆ. ಆದರೆ, ಇದೀಗ ಆರೋಪಿಗಳು ತಮಗೆ ವಂಚಿಸಿರುವುದು ಉದ್ಯೋಗಾಕಾಂಕ್ಷಿಗಳಿಗೆ ತಿಳಿದಿದ್ದು, ದೂರು ದಾಖಲಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ